ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಿ ಅಂಗಡಿಯಲ್ಲಿ ವೈದ್ಯಕೀಯ ತ್ಯಾಜ್ಯ: ಲ್ಯಾಬ್‌ ಜಪ್ತಿ

ಜಿಲ್ಲಾ ಆರೋಗ್ಯ ಅಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ
Last Updated 3 ಜುಲೈ 2018, 17:17 IST
ಅಕ್ಷರ ಗಾತ್ರ

ದಾವಣಗೆರೆ: ಗುಜರಿ ಅಂಗಡಿಯಲ್ಲಿ ವೈದ್ಯಕೀಯ ತ್ಯಾಜ್ಯ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ನೇತೃತ್ವದ ತಂಡ ಮಂಗಳವಾರ ವಿವಿಧ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿತು. ಎರಡು ಆಸ್ಪತ್ರೆಗಳನ್ನು ಜಪ್ತಿ ಮಾಡಿದ್ದು, ಉಳಿದವುಗಳಿಗೆ ಗಡುವು ನೀಡಲಾಗಿದೆ.

ನಗರದ ಗಾಂಧಿನಗರದ ಹಿಂದೂ ರುದ್ರಭೂಮಿ ಸಮೀಪದ ಗುಜರಿ ಅಂಗಡಿಯೊಂದರಲ್ಲಿ 10 ದಿನಗಳ ಹಿಂದೆ ವೈದ್ಯಕೀಯ ತ್ಯಾಜ್ಯ ಪತ್ತೆಯಾಗಿ ನಾಗರಿಕರಲ್ಲಿ ಆತಂಕ ಮೂಡಿಸಿತ್ತು. ಈ ತ್ಯಾಜ್ಯ ಯಾವ ಆಸ್ಪತ್ರೆಗಳಿಂದ ಬಂದಿದೆ ಎಂಬುದನ್ನು ಪತ್ತೆ ಹಚ್ಚಲು ಡಿಎಚ್‌ಒ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಸೂಚಿಸಿದ್ದರು. ಅದರಂತೆ ಡಿಎಚ್‌ಒ ತ್ರಿಪುಲಾಂಬಾ, ಜಿಲ್ಲಾ ಆಯುಷ್‌ ಅಧಿಕಾರಿ ಸಿದ್ದೇಶಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಗಂಗಾಧರಪ್ಪ, ಐಎಂಎ ಅಧ್ಯಕ್ಷ ಡಾ. ನಾಗಪ್ರಕಾಶ್‌, ಕೆಪಿಎಂಇ ಸತ್ಯನಾರಾಯಣ, ಆರ್‌ಟಿಐ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್‌, ನರ್ಸಿಂಗ್‌ ಹೋಮ್‌ ಅಸೋಸಿಯೇಶನ್‌ ಅಧ್ಯಕ್ಷರು, ಆರೋಗ್ಯ ಅಧಿಕಾರಿಗಳು ಸೇರಿದ ತಂಡ ರಚಿಸಲಾಗಿತ್ತು. ಯಾವ ಆಸ್ಪತ್ರೆಯಲ್ಲಿ ಬಯೊಮೆಡಿಕಲ್‌ ತ್ಯಾಜ್ಯ ನೀಡುತ್ತಿಲ್ಲ ಎಂಬ ಮಾಹಿತಿಯನ್ನು ವೈದ್ಯಕೀಯ ತ್ಯಾಜ್ಯ ವಿಲೇವಾರಿ ಏಜೆನ್ಸಿ ‘ಸುಶಾಂತ್‌’ ಸಂಸ್ಥೆಯಿಂದ ಪಡೆದು ಈ ತಂಡವು ದಾಳಿ ನಡೆಸಿದೆ.

ಪಿ.ಜೆ. ಬಡಾವಣೆಯ ಗೋಕುಲ್‌ ಲ್ಯಾಬ್‌, ಅಪೂರ್ವ ಆಸ್ಪತ್ರೆ, ಗುರುಶ್ರೀ ನರ್ಸಿಂಗ್‌ ಹೋಂ, ಆರ್‌.ಎಲ್‌. ಡಯಗ್ನೊಸ್ಟಿಕ್‌, ಎಂಸಿಸಿ ‘ಎ’ ಬ್ಲಾಕ್‌ನ ನವೋದಯ ಆಸ್ಪತ್ರೆ, ಎಂ.ಕೆ. ಮೆಮೋರಿಯಲ್‌ ಹಾಸ್ಪಿಟಲ್‌, ವಿನಾಯಕ ಆಸ್ಪತ್ರೆಗಳ ಮೇಲೆ ದಾಳಿ ಮಾಡಲಾಯಿತು. ಒಂದಕ್ಕೆ ಅನುಮತಿ ಪಡೆದು ಎರಡು ಲ್ಯಾಬ್‌ ನಡೆಸುತ್ತಿದ್ದ ಲ್ಯಾಬ್‌, ಅನುಮತಿ ಇಲ್ಲದೆ ರಕ್ತ ಪರೀಕ್ಷೆ ಮಾಡುತ್ತಿದ್ದ ಇನ್ನೊಂದು ಲ್ಯಾಬ್‌ ಅನ್ನು ಜಪ್ತಿ ಮಾಡಲಾಯಿತು.

ಇದರ ಜೊತೆಗೆ ಅಲ್ಲಿ ವೈದ್ಯಕೀಯ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳದೆ ಇರುವುದೂ ಪತ್ತೆಯಾಗಿದೆ. ಈಗ ಇರುವ ರೋಗಿಗಳಿಗೆ ಔಷಧ ನೀಡಿ ಮೂರು ದಿನಗಳಲ್ಲಿ ಬಿಡುಗಡೆ ಮಾಡಬೇಕು. ಆನಂತರ ವಿಲೇವಾರಿ ವ್ಯವಸ್ಥೆ ಸರಿ ಮಾಡಬೇಕು. ಆ ಬಳಿಕವೇ ಮತ್ತೆ ತೆರೆಯಲು ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಂಡ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT