ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಸಾವು ಪ್ರಕರಣ ಮತ್ತಷ್ಟು ನಿಗೂಢ

Last Updated 3 ಜುಲೈ 2018, 20:18 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಬುರಾರಿ ಪ್ರದೇಶದಲ್ಲಿ ನಡೆದ ಕುಟುಂಬದ 11 ಮಂದಿಯ ನಿಗೂಢ ಸಾವು ಪ್ರಕರಣ ದಿನೇ ದಿನೇ ಮತ್ತಷ್ಟು ನಿಗೂಢವಾಗುತ್ತಿದೆ. ಇದು ಆತ್ಮಹತ್ಯೆಯಲ್ಲ, ಅವರೆಲ್ಲರನ್ನೂ ಕೊಲೆ ಮಾಡಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಮೃತರ ಪೈಕಿ ಪ್ರಿಯಾಂಕಾ ಎಂಬುವವರ ವಿವಾಹ ನಿಶ್ಚಯವಾಗಿದ್ದು, ಕುಟುಂಬದ ಸದಸ್ಯರು ಮದುವೆ ತಯಾರಿಯಲ್ಲಿ ತೊಡಗಿದ್ದರು ಎಂದು ಹೇಳಿದ್ದಾರೆ.

‘ದಿನ ಬಿಟ್ಟು ದಿನ ನಾನು ಅಮ್ಮನೊಂದಿಗೆ ಮಾತನಾಡುತ್ತಿದ್ದೆ. ಕುಟುಂಬದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ನಮ್ಮದು ಸುಶಿಕ್ಷಿತ ಕುಟುಂಬವಾಗಿದ್ದು, ಯಾವುದೇ ಬಾಬಾನ ಮೇಲೆ ನಂಬಿಕೆ ಹೊಂದಿರಲಿಲ್ಲ. ಇದು ಆತ್ಮಹತ್ಯೆ ಪ್ರಕರಣವಲ್ಲ. ಆದರೆ, ಮಾಧ್ಯಮಗಳು ಆ ರೀತಿ ಊಹಾಪೋಹದ ವರದಿಗಳನ್ನು ಪ್ರಕಟಿಸುತ್ತಿವೆ’ ಎಂದು ಮೃತ ನಾರಾಯಣ ದೇವಿ ಅವರ ಪುತ್ರಿ ಸುಜಾತಾ ನಾಗಪಾಲ್‌ ದೂರಿದ್ದಾರೆ.

‘ಸಾಮಾನ್ಯ ಕುಟುಂಬಗಳಂತೆ ಅವರೂ ಧಾರ್ಮಿಕ ನಂಬಿಕೆ ಹೊಂದಿದ್ದರು. ಕೆಲವು ಪ್ರಕರಣಗಳಲ್ಲಿ ಬಾಬಾಗಳ ಹೆಸರು ಕೇಳಿಬಂದ ನಂತರದಲ್ಲಿ ಅವರ ಬಗ್ಗೆ ನಂಬಿಕೆ ಕಳೆದುಕೊಂಡಿದ್ದರು. ಕುಟುಂಬದ ವ್ಯವಹಾರವೂ ಚೆನ್ನಾಗಿ ನಡೆಯುತ್ತಿತ್ತು. ಯಾರ ಮಧ್ಯೆಯೂ ಜಗಳವಿರಲಿಲ್ಲ.
ಎಲ್ಲರೂ ಸಂತೋಷದಿಂದ ಇದ್ದರು. ಹೀಗಿರುವಾಗ ಅವರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ? ಈ ಸಾವುಗಳ ಹಿಂದೆ ಹೊರಗಿನವರ ಕೈವಾಡವಿದೆ’ ಎಂದು ನಾರಾಯಣ ದೇವಿ ಅವರ ಸಂಬಂಧಿ ಗೀತಾ ಥಕ್ರಾಲ್‌ ಹೇಳಿದ್ದಾರೆ.

‘ಕುಟುಂಬದವರ ಸಾವಿನಿಂದ ಆಘಾತವಾಗಿದೆ. ಇದು ಖಂಡಿತಾ ಆತ್ಮಹತ್ಯೆಯಂತೂ ಅಲ್ಲ’ ಎಂದು ಮತ್ತೊಬ್ಬ ಸಂಬಂಧಿ ಮನೋಜ್‌ ಭಾಟಿಯಾ ಹೇಳಿದ್ದಾರೆ.

‘ಮೃತರಲ್ಲಿ 8 ಜನರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅವರು ಸಾಯುವ ವೇಳೆ ನರಳಾಡಿಲ್ಲ, ನೇಣಿನಿಂದಾಗಿಯೇ ಸಾವು ಸಂಭವಿಸಿರುವುದಾಗಿ ತಿಳಿದುಬಂದಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಸೋಮವಾರ ತಿಳಿಸಿದ್ದರು.

‘ಮನೆಯಲ್ಲಿ ಪತ್ತೆಯಾದ ಕೈಬರಹದ ಪತ್ರಗಳಿಂದ, ಕುಟುಂಬವು ಅಧ್ಯಾತ್ಮದ ಬಗ್ಗೆ ಒಲವು ಹೊಂದಿತ್ತು ಎಂಬ ಅಂಶ ತಿಳಿದುಬಂದಿದೆ. ಈ ದೃಷ್ಟಿಕೋನದಿಂದಲೂ ತನಿಖೆ ನಡೆಸಲಾಗುತ್ತಿದೆ. ಮಾನವ ಜನ್ಮ ಶಾಶ್ವತವಲ್ಲ. ಕಣ್ಣು ಮತ್ತು ಬಾಯಿ ಮುಚ್ಚಿಕೊಳ್ಳುವ ಮೂಲಕ ನಮ್ಮಲ್ಲಿರುವ ಭಯವನ್ನು ಹೋಗಲಾಡಿಸಬಹುದು ಎಂದು ಪತ್ರದಲ್ಲಿ ಬರೆಯಲಾಗಿದೆ’ ಎಂದು ಮಾಹಿತಿ ನೀಡಿದ್ದರು.

ನಾರಾಯಣ ದೇವಿ (75) ಹಾಗೂ ಅವರ ಇಬ್ಬರು ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳ ಮೃತದೇಹಗಳು ಕೈಕಾಲು ಕಟ್ಟಿ, ಬಾಯಿ ಮುಚ್ಚಿದ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಭಾನುವಾರ ಪತ್ತೆಯಾಗಿದ್ದವು.

**

ಗೋಡೆಯಲ್ಲಿ 11 ಪೈಪ್‌ಗಳು!

ದುರಂತ ಅಂತ್ಯ ಕಂಡ ಕುಟುಂಬವು ವಾಸಿಸುತ್ತಿದ್ದ ಮನೆಯ ಗೋಡೆಯಲ್ಲಿ 11 ಪೈಪ್‌ಗಳು ಕಂಡುಬಂದಿದ್ದು, ಇದಕ್ಕೂ 11 ಮಂದಿಯ ಸಾವಿಗೂ ಏನಾದರೂ ಸಂಬಂಧವಿದೆಯೇ ಎಂದು ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.

ಮೃತರ ಆತ್ಮಗಳು ಮುಕ್ತವಾಗಿ ಹೊರಹೋಗಲು ಅನುವಾಗುವಂತೆ ಈ ಪೈಪ್‌ಗಳನ್ನು ಅಳವಡಿಸಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.

ಕುಟುಂಬವು ಪ್ಲೈವುಡ್‌ ವ್ಯವಹಾರ ನಡೆಸುತ್ತಿತ್ತು. ಕೆಲಸದ ವೇಳೆ ಬಿಡುಗಡೆಯಾಗುವ ವಿಷಾನಿಲವನ್ನು ಹೊರಕ್ಕೆ ಕಳುಹಿಸುವ ಉದ್ದೇಶದಿಂದ ಪೈಪುಗಳನ್ನು ಅಳವಡಿಸಿರಬಹುದು ಎಂದು ನೆರೆಮನೆಯವರೊಬ್ಬರು ತಿಳಿಸಿದ್ದಾರೆ.

**

ಮಾನಸಿಕ ಅಸ್ವಸ್ಥತೆ: ಪೊಲೀಸರ ಶಂಕೆ

ನವದೆಹಲಿ: ನಿಗೂಢವಾಗಿ ಸಾವಿಗೀಡಾಗಿರುವ ಭಾಟಿಯಾ ಕುಟುಂಬದ 11 ಮಂದಿಯು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

‘ಇದು ಒಂದು ರೀತಿಯ ಮಾನಸಿಕ ಕಾಯಿಲೆಯಾಗಿದ್ದು (ಷೇರ್ಡ್‌ ಸೈಕೊಸಿಸ್)ಭ್ರಮೆಯ ನಂಬಿಕೆಗಳು ಒಬ್ಬರಿಂದ ಮತ್ತೊಬ್ಬರಿಗೆ ಹಂಚಿಕೆಯಾಗುತ್ತವೆ. ಮೃತರಲ್ಲಿ ಒಬ್ಬರಾದ ಕುಟುಂಬದ ಯಜಮಾನ ಲಲಿತ್ ಭಾಟಿಯಾ ಅವರು ತಮ್ಮ ತಂದೆಯಿಂದ ವರ್ಗಾವಣೆಯಾದ ಭ್ರಮೆಯನ್ನು ತಾವು ಸ್ವೀಕರಿಸಿದ್ದರು. ಕುಟುಂಬದ ಇತರರೂ ಈ ಕಲ್ಪನೆಯನ್ನು ಒಪ್ಪಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

‘ಭಾಟಿಯಾ ಕುಟುಂಬದವರು ನೆರೆಹೊರೆಯವರಿಗೆ ಸಹಾಯ ಮಾಡುತ್ತಿದ್ದರು. ಆದರೆ ಎಂದಿಗೂ ತಮ್ಮ ಕುಟುಂಬದ ವಿಷಯದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿರಲಿಲ್ಲ ಮತ್ತು ಇತರರನ್ನು ತಮ್ಮ ಮನೆಗೆ ಆಹ್ವಾನಿಸುತ್ತಿರಲಿಲ್ಲ’ ಎಂದುನೆರೆಮನೆಯವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT