ಸೋಮವಾರ, ಡಿಸೆಂಬರ್ 9, 2019
17 °C

ಪಂಜಾಕುಸ್ತಿಯಲ್ಲಿ ರಾಜು ಮಿಂಚು...

Published:
Updated:
ಪಂಜಾಕುಸ್ತಿಯಲ್ಲಿ ರಾಜು ಮಿಂಚು...

ಮೈಸೂರಿನಲ್ಲಿ ಕುಸ್ತಿ ಎಷ್ಟೊಂದು ಪ್ರಸಿದ್ಧಿ ಪಡೆದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕುಸ್ತಿ ಮೇಲಿನ ಪ್ರೀತಿ, ಪೈಲ್ವಾನರಿಗೆ ನೀಡುವ ಗೌರವ ಅದ್ಭುತ. ಈಗ ಆ ಸಾಲಿಗೆ ಪಂಜಾಕುಸ್ತಿ (ಆರ್ಮ್‌ ರೆಸ್ಲಿಂಗ್‌) ಕೂಡ ಸೇರುತ್ತಿದೆ. ಮೈಸೂರಿನ ಪಂಜಾಕುಸ್ತಿ ಸ್ಪರ್ಧಿಗಳು ದೇಶದ ವಿವಿಧೆಡೆ ಮಿಂಚುತ್ತಿದ್ದಾರೆ.

ಅವರಲ್ಲಿ ಎಂ.ರಾಜು ಕೂಡ ಒಬ್ಬರು. ಮೈಸೂರಿನ ಅಗ್ರಹಾರದ ಇವರು ಪಂಜಾಕುಸ್ತಿ ಕ್ಷೇತ್ರದಲ್ಲಿ ಮನೆಮಾತು. ಶ್ರವಣ ದೋಷ ಹೊಂದಿರುವ ಇವರು ಸಾಧನೆ ಮಾಡಬೇಕೆಂಬ ಹುಮ್ಮಸ್ಸಿನಿಂದ ಆಯ್ಕೆ ಮಾಡಿಕೊಂಡ ಕ್ರೀಡೆ ಇದು. ಅವರು ಈಗಾಗಲೇ ರಾಷ್ಟ್ರಮಟ್ಟದಲ್ಲಿ ಎರಡು ಬಾರಿ ಚಾಂಪಿಯನ್‌ ಆಗಿದ್ದಾರೆ. ರಾಜ್ಯ ಚಾಂಪಿಯನ್‌ಷಿಪ್‌ಗಳಲ್ಲಿ ಹಲವು ವರ್ಷಗಳಿಂದ ಇವರದ್ದೇ ಪಾರಮ್ಯ.

ಈಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಪಂಜಾಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ‘ಕರ್ನಾಟಕ ಭೀಮ–2018’, ‘ಕರ್ನಾಟಕ ಕರ್ಣ–2018’ ಹಾಗೂ ಸಮಗ್ರ ಪ್ರಶಸ್ತಿ ಜಯಿಸಿ ಈ ಕ್ಷೇತ್ರದಲ್ಲಿ ಮತ್ತೊಮ್ಮೆ ತಮ್ಮ ತಾಕತ್ತು ತೋರಿಸಿದ್ದಾರೆ. ಈ ಚಾಂಪಿಯನ್‌ಷಿಪ್‌ನಲ್ಲಿ ಸುಮಾರು 150 ಸ್ಪರ್ಧಿಗಳು ತಮ್ಮ ತೋಳ್ಬಲ ಪ್ರದರ್ಶಿಸಿದರು. 30 ವರ್ಷ ವಯಸ್ಸಿನ ರಾಜು ಐದು ವರ್ಷಗಳಿಂದ ಈ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಐದು ಬಾರಿ ರಾಜ್ಯ ಚಾಂಪಿಯನ್‌ ಆಗಿದ್ದಾರೆ.

‘ಮೊದಲು ನಾನು ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆ. ಆಮೇಲೆ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಕೂಡ ಜಯಿಸಿದ್ದೆ. ಬಳಿಕ ಪಂಜಾಕುಸ್ತಿ ಮೇಲೆ ಆಸಕ್ತಿ ಮೂಡಿತು. ವಿಶ್ವನಾಥ್‌ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ರಾಜು ನುಡಿಯುತ್ತಾರೆ.

ದಸರಾ ಕ್ರೀಡಾಕೂಟದಲ್ಲೂ ಕಳೆದ ವರ್ಷ ಪಂಜಾಕುಸ್ತಿ ಸ್ಪರ್ಧೆ ನಡೆಯಿತು. ಆಗ ರಾಜ್ಯದ ವಿವಿಧೆಡೆಯಿಂದ 200ಕ್ಕೂ ಅಧಿಕ ಸ್ಪರ್ಧಿಗಳು ಬಂದಿದ್ದರು. ಈ ಸ್ಪರ್ಧೆಯಲ್ಲಿ ರಾಜು ಎರಡನೇ ಸ್ಥಾನ ಪಡೆದಿದ್ದರು. ಮಹಿಳೆಯರೂ ಈ ಕ್ರೀಡೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ದಸರಾ ಸ್ಪರ್ಧೆಯಲ್ಲಿ ಮೈಸೂರಿನವರೇ ಆದ ರೀಟಾ ಚಾಂಪಿಯನ್‌ ಆಗಿದ್ದರು. ಬೆಂಗಳೂರು, ಹಾಸನ, ದಾವಣಗೆರೆಯಲ್ಲೂ ಈ ಕ್ರೀಡೆ ನಿಧಾನವಾಗಿ ಪ್ರಸಿದ್ಧಿಗೆ ಬರುತ್ತಿದೆ.

‘ಯೂಟ್ಯೂಬ್‌ನಲ್ಲಿ ಪಂಜಾಕುಸ್ತಿ ಸ್ಪರ್ಧೆಗಳನ್ನು ವೀಕ್ಷಿಸುತ್ತಿದ್ದ ನನಗೆ ಈ ಕ್ರೀಡೆ ಮೇಲೆ ಆಸಕ್ತಿ ಬಂತು. ಸ್ಪರ್ಧೆಗಳಲ್ಲಿ ಭಾಗವಹಿಸಲು ವಿದೇಶಗಳಿಂದಲೂ ಆಹ್ವಾನ ಬಂದಿತ್ತು. ಆದರೆ, ಹಣಕಾಸಿನ ತೊಂದರೆಯಿಂದ ಆ ಆಸೆ ಈಡೇರಲಿಲ್ಲ. ಈ ಕ್ರೀಡೆಗೆ ಸರ್ಕಾರ ಸೇರಿದಂತೆ ಯಾರೂ ಪ್ರೋತ್ಸಾಹ ನೀಡುತ್ತಿಲ್ಲ’ ಎಂದು ರಾಜು ಬೇಸರದಿಂದ ಹೇಳುತ್ತಾರೆ. ಅವರು ನಿತ್ಯ ಎರಡು ಗಂಟೆ ಜಿಮ್‌ನಲ್ಲಿ ದೈಹಿಕ ಕಸರತ್ತು ನಡೆಸುತ್ತಾರೆ. ಎರಡು ಗಂಟೆ ತಾಲೀಮಿಗೆ ಮೀಸಲಿಡುತ್ತಾರೆ.

ಏನಿದು ಪಂಜಾಕುಸ್ತಿ?

ಕುಸ್ತಿಯಷ್ಟೇ ಆಕರ್ಷಿತವಾಗಿರುವ ಪಂಜಾಕುಸ್ತಿಯಲ್ಲಿ ಇಬ್ಬರು ಸ್ಪರ್ಧಿಗಳು ಎದುರು ಬದುರು ಕುಳಿತು ಒಂದು ಬೆಂಚಿನ ಮೇಲೆ ಪರಸ್ಪರರ ಕೈಹಿಡಿದು ಸ್ಪರ್ಧೆ ಆರಂಭಿಸುತ್ತಾರೆ. ಯಾರು ಮೊದಲು ಎದುರಾಳಿಯ ಕೈಯನ್ನು ನೆಲಕ್ಕೆ ತಾಗಿಸುತ್ತಾರೆಯೋ ಅವರು ಗೆದ್ದಂತೆ.

ಈಗಾಗಲೇ ವಿದೇಶದಲ್ಲಿ ಈ ಕ್ರೀಡೆ ಪ್ರಸಿದ್ಧಿ ಪಡೆದಿದೆ. ಸುಮಾರು 80 ದೇಶಗಳು ಪಂಜಾಕುಸ್ತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಪ್ರತಿ ವರ್ಷ ವಿಶ್ವ ಪಂಜಾಕುಸ್ತಿ ಚಾಂಪಿಯನ್‌ಷಿಪ್‌ ನಡೆಯುತ್ತಲೇ ಇರುತ್ತದೆ. ವಿಶ್ವ ಪಂಜಾಕುಸ್ತಿ ಫೆಡರೇಷನ್‌ ಕೂಡ ಇದೆ. ಆದರೆ, ಅಧಿಕೃತ ಕ್ರೀಡೆಗಳ ಪಟ್ಟಿಗೆ ಇನ್ನೂ ಸೇರಿಲ್ಲ.

ಭಾರತೀಯ ಪಂಜಾಕುಸ್ತಿ ಸಂಸ್ಥೆಯಡಿ ದೇಶದಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ಈ ಸಂಸ್ಥೆಯ ಮಾನ್ಯತೆಯನ್ನು ಕರ್ನಾಟಕ ಪಂಜಾಕುಸ್ತಿ ಸಂಘ ಹೊಂದಿದೆ. ಮೈಸೂರಿನಲ್ಲಿ ಪಂಜಾಕುಸ್ತಿ ತರಬೇತಿ ಕೂಡ ನೀಡಲಾಗುತ್ತಿದೆ.

ಪ್ರತಿಕ್ರಿಯಿಸಿ (+)