ಶುಕ್ರವಾರ, ಡಿಸೆಂಬರ್ 6, 2019
25 °C

ಅಂಧರ ಚೆಸ್‌ನ ‘ಅಜೇಯ ಸಾಧಕ’

Published:
Updated:
ಅಂಧರ ಚೆಸ್‌ನ ‘ಅಜೇಯ ಸಾಧಕ’

ಭಾರತದಲ್ಲಿ ದೃಷ್ಟಿದೋಷವುಳ್ಳ ಪ್ರತಿಭಾವಂತ ಚೆಸ್‌ ಆಟಗಾರರಿಗೆ ಕೊರತೆಯೇನಿಲ್ಲ. ದೈಹಿಕ ಇತಿಮಿತಿ, ಪ್ರೋತ್ಸಾಹದ ಕೊರತೆಯಿದ್ದರೂ ಉತ್ಸಾಹದಲ್ಲಿ ಒಂದಿಷ್ಟೂ ಕಡಿಮೆಯಿಲ್ಲದಂತೆ ಆಡುವವರು ಇವರು. ದೃಷ್ಟಿದೋಷವುಳ್ಳವರ ರಾಷ್ಟ್ರೀಯ ‘ಎ’ ಚೆಸ್‌ ಚಾಂಪಿಯನ್‌ಷಿಪ್‌ ದೇಶದಲ್ಲಿ ಪ್ರತಿ ವರ್ಷ ನಡೆಯುತ್ತದೆ. ಮುಂಬೈನಲ್ಲಿ ಈ ತಿಂಗಳ ಆರಂಭದಲ್ಲಿ ನಡೆದ 13ನೇ ವರ್ಷದ ಚಾಂಪಿಯನ್‌ಷಿಪ್‌ನಲ್ಲೂ ಆಟಗಾರರು ಖುಷಿಯಿಂದಲೇ ಆಡಿದರು.

ಅದಕ್ಕೆ ಕಾರಣವೂ ಇತ್ತು. ಪಂದ್ಯಾವಳಿಯ ಒಂದು ದಿನ ಚೆಸ್ ದಿಗ್ಗಜ ವಿಶ್ವನಾಥನ್‌ ಆನಂದ್‌ ಭೇಟಿ ನೀಡಿ, ಆಟಗಾರರ ಬೆನ್ನು ತಟ್ಟಿದರು. ಈ ಆಟಗಾರರ ಸ್ಮರಣಶಕ್ತಿಯ ಬಗೆಗೆ ಒಳ್ಳೆಯ ಮಾತುಗಳನ್ನಾಡಿದರು. ಕಿವಿಮಾತುಗಳನ್ನೂ ಹೇಳಿದರು. ಮಹಾರಾಷ್ಟ್ರದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಅಭಿಜಿತ್‌ ಕುಂಟೆ, ವಿದಿತ್‌ ಸಂತೋಷ್‌ ಗುಜರಾತಿ ಕೂಡ ಪ್ರೋತ್ಸಾಹದ ಮಾತುಗಳನ್ನಾಡಿದರು. ವಿದಿತ್‌, ಅಖಿಲ ಭಾರತ ಚೆಸ್‌ ಅಂಧರ ಚೆಸ್ ಫೆಡರೇಷನ್‌ನ (ಎಐಸಿಎಫ್‌ಬಿ) ಪ್ರಚಾರ ರಾಯಭಾರಿ ಕೂಡ.

ಕರ್ನಾಟಕದ ಕಿಶನ್‌ ಗಂಗೊಳ್ಳಿ ಅಂಧೇರಿ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ನಡೆದ ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲೂ ‘ರಾಜ’ನಾಗಿ ಮೆರೆದರು. ಅವರು 2013ರಿಂದ 2018ರವರೆಗೆ ಐದು ಬಾರಿ ಚಾಂಪಿಯನ್‌ ಆಗಿದ್ದಾರೆ. 2015ರಲ್ಲಿ ಈ ಚಾಂಪಿಯನ್‌ಷಿಪ್‌ ನಡೆದಿರಲಿಲ್ಲ. ನಾಲ್ಕು ವರ್ಷಗಳಿಂದ ಮುಂಬೈ ಈ ಕೂಟದ ಆತಿಥ್ಯ ವಹಿಸುತ್ತಿದೆ. ಶಿವಮೊಗ್ಗದ ಕಿಶನ್‌ ಈ ಕ್ಷೇತ್ರದಲ್ಲಿ ಕಳೆದ ಐದಾರು ವರ್ಷಗಳಿಂದ ದೇಶದ ಅಗ್ರಮಾನ್ಯ ಆಟಗಾರನಾಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರ ಅವರು.

ದೇಶದ ನಾಲ್ಕು ವಲಯಗಳಲ್ಲಿ ತಲಾ 20 ಆಟಗಾರರನ್ನು ಆಯ್ಕೆ ಮಾಡಿ ದೃಷ್ಟಿದೋಷವುಳ್ಳವರ ರಾಷ್ಟ್ರೀಯ ‘ಬಿ’ ಚಾಂಪಿಯನ್‌ಷಿಪ್‌ ನಡೆಸಲಾಗುತ್ತದೆ. ಇದರಲ್ಲಿ ಮೊದಲ 14 ಸ್ಥಾನ ಪಡೆದವರು ರಾಷ್ಟ್ರೀಯ ‘ಎ’ ಚಾಂಪಿಯನ್‌ಷಿಪ್‌ನಲ್ಲಿ ಆಡುವ ಅರ್ಹತೆ ಪಡೆಯುತ್ತಾರೆ. ಇದರಲ್ಲಿ ಮೊದಲ ಐದು ಸ್ಥಾನ ಪಡೆದವರು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಅರ್ಹತೆ ಪಡೆಯುತ್ತಾರೆ.

‘ಈ ವರ್ಷ ಕೊನೆಗಳಿಗೆಯಲ್ಲಿ ಪಂದ್ಯಾವಳಿ ನಿರ್ಧಾರವಾಯಿತು. ಹೀಗಾಗಿ ಹೆಚ್ಚು ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಆಡುವುದು ಎಂದಿಗಿಂತ ಸ್ವಲ್ಪ ಕಷ್ಟವಾಯಿತು. ಈಗ ಪ್ರತಿಭಾವಂತ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ’ ಎಂದು ಕಿಶನ್‌ ಅಭಿಪ್ರಾಯಪಡುತ್ತಾರೆ.

ಈ ಚಾಂಪಿಯನ್‌ಷಿಪ್‌ಗೂ ನಿಯಮಾವಳಿಗಳಿರುತ್ತವೆ. ಶೇ 40ಕ್ಕಿಂತ ಹೆಚ್ಚು ಅಂಧತ್ವ ಇರುವವರು ಮಾತ್ರ ಭಾಗವಹಿಸಬಹುದು. ಇದಕ್ಕೆ ಪ್ರಮಾಣಪತ್ರವೂ ಇರಬೇಕು. ಒಂದು ಕಣ್ಣು ಪೂರ್ಣವಾಗಿ ಕಾಣುವಂತಿದ್ದರೂ ಆಡುವ ಹಾಗಿಲ್ಲ. ಆಡುವ ಕಾಯಿಗಳನ್ನು ಗುರುತಿಸಲು ಸಾಧ್ಯವಾಗುವಂತೆ ಅವುಗಳಲ್ಲಿ ಸೂಕ್ಷ್ಮ ವ್ಯತ್ಯಾಸ ಮಾಡಲಾಗುತ್ತದೆ. ಉಳಿದಂತೆ ನಿಯಮಗಳಲ್ಲಿ ಬದಲಾವಣೆ ಇರುವುದಿಲ್ಲ. ರೇಟಿಂಗ್‌, ಬಿರುದು (ಐಎಂ, ಜಿಎಂ) ನೀಡುವಾಗಲೂ ರಿಯಾಯಿತಿ ಇರುವುದಿಲ್ಲ ಎನ್ನುತ್ತಾರೆ ಇಂಥ ಪಂದ್ಯಾವಳಿಗಳನ್ನು ನಿರ್ವಹಿಸಿರುವ ಅನುಭವಿ ಆರ್ಬಿಟರ್ (ತೀರ್ಪುಗಾರ), ಶಿವಮೊಗ್ಗದ ಮಂಜುನಾಥ್. ಹುಟ್ಟಿನಿಂದಲೇ ದೃಷ್ಟಿ ಸಮಸ್ಯೆ ಹೊಂದಿದ್ದ ಕಿಶನ್‌ ಅವರಿಗೆ ಶೇ 75ರಷ್ಟು ಅಂಧತ್ವ ಇದೆ.

ಏಷ್ಯನ್‌ ಚಾಂಪಿಯನ್‌

26 ವರ್ಷ ವಯಸ್ಸಿನ ಕಿಶನ್‌ ಹಾಲಿ ಏಷ್ಯನ್‌ ಚಾಂಪಿಯನ್‌ ಕೂಡ. ಮಣಿಪಾಲದಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಅವರು ವಿಜೇತರಾಗಿದ್ದರು. ಆ ಚಾಂಪಿಯಷಿಪ್‌ನ ಮೊದಲ ಮೂರೂ ಸ್ಥಾನಗಳನ್ನು ಭಾರತದ ಆಟಗಾರರೇ ಗೆದ್ದುಕೊಂಡಿದ್ದು ವಿಶೇಷವಾಗಿತ್ತು.

ಅಂಧರ ಚೆಸ್ ಒಲಿಂಪಿಯಾಡ್‌ನಲ್ಲಿ ಬೆನ್ನುಬೆನ್ನಿಗೆ ಪದಕಗಳನ್ನು ಗೆದ್ದುಕೊಂಡ ಭಾರತದ ಮೊದಲ ಆಟಗಾರ ಎನ್ನುವ ಶ್ರೇಯಸ್ಸು ಕೂಡ ಅವರದು. ಗ್ರೀಸ್‌ ದೇಶದಲ್ಲಿ ನಡೆದ 2012ರ ಒಲಿಂಪಿಯಾಡ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದುಕೊಂಡಿದ್ದ ಕಿಶನ್‌, ನಾಲ್ಕು ವರ್ಷಗಳ ನಂತರ ಮ್ಯಾಸಿಡೋನಿಯಾದಲ್ಲಿ ನಡೆದ 15ನೇ ಆವೃತ್ತಿಯಲ್ಲಿ ಕಂಚಿನ ಪದಕ ಕೊರಳಿಗೇರಿಸಿಕೊಂಡಿದ್ದರು. ಈ ಒಲಿಂಪಿಯಾಡ್‌ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತಿದೆ.

ಆರನೇ ತರಗತಿಯಲ್ಲಿದ್ದಾಗ ಸೋದರಮಾವ ಸಂತೋಷ್‌ ಅವರಿಂದ ಚೆಸ್ ಪಾಠ ಕಲಿತಿದ್ದ ಕಿಶನ್‌ ನಂತರ ಶಿವಮೊಗ್ಗದ ನಳಂದ ಚೆಸ್‌ ಅಕಾಡೆಮಿಯಲ್ಲಿ ಆಟ ಬೆಳೆಸಿಕೊಂಡರು. ಅಲ್ಲಿನ ಚೆಸ್‌ ಗುರುವಾಗಿದ್ದ ಶ್ರೀಕೃಷ್ಣ ಉಡುಪ ಕೂಡ ದೃಷ್ಟಿದೋಷವುಳ್ಳವರು. ಅವರೂ ಮಾಜಿ ರಾಷ್ಟ್ರೀಯ ‘ಎ’ ಚಾಂಪಿಯನ್‌. ಹಲವು ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮುಖಾಮುಖಿಯಾಗಿದ್ದೂ ಇದೆ.

‘ನನಗೆ ಶಿವಮೊಗ್ಗದವರೇ ಆದ ಐಎಂ ಜಿ.ಎ.ಸ್ಟ್ಯಾನಿ ಸಿದ್ಧತೆಯಲ್ಲಿ ನೆರವಾಗುತ್ತಾರೆ. ಒಟ್ಟಿಗೆ ಅಭ್ಯಾಸ ನಡೆಸುತ್ತೇವೆ. ಚೆಸ್‌ ಪುಸ್ತಕ ಓದಿ ಹೇಳುತ್ತಾರೆ. ಅವರ ಸಹಕಾರ ಮರೆಯುವಂತಿಲ್ಲ. ನಾನು ಚೆಸ್‌ ಆಡಲು ಹೊರ ಊರುಗಳಿಗೆ ಹೋಗುವಾಗ ಸ್ನೇಹಿತರಲ್ಲಿ ಯಾರಾದರೂ ಬರುತ್ತಾರೆ. ವಿಶೇಷವಾಗಿ ತೀರ್ಪುಗಾರ ಮಂಜುನಾಥ್ ಅವರೂ ನನ್ನ ಜೊತೆಯಲ್ಲೇ ಪ್ರಯಾಣಿಸಿ ಸಹಾಯ ಮಾಡಿದ್ದಿದೆ’ ಎನ್ನುತ್ತಾರೆ ಅವರು.

ಅಂಧರ ಚೆಸ್‌ ಮಾತ್ರವಲ್ಲ, ರಾಜ್ಯಮಟ್ಟದಲ್ಲಿ ಓಪನ್‌ ಟೂರ್ನಿಗಳಲ್ಲೂ ಕಿಶನ್‌ ಗಂಗೊಳ್ಳಿ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ತಮಗಿಂತ ಮೇಲಿನ ರೇಟೆಡ್‌ ಆಟಗಾರರನ್ನು ಉತ್ತಮ ನಡೆಗಳಿಂದ ಕಾಡಿದ್ದಾರೆ.

ದೃಷ್ಟಿದೋಷವುಳ್ಳ ಆಟಗಾರರಿಗೆ ಸಮಸ್ಯೆಗಳೂ ಇವೆ. ದೃಷ್ಟಿಯ ಇತಿಮಿತಿಯಿಂದ ಟೂರ್ನಿಗಳಿಗೆ ಹೋಗಲು ಆಟಗಾರರಿಗೆ ಸಹಾಯಕರು ಬೇಕಾಗುತ್ತಾರೆ. ಅದರಲ್ಲೂ ದೂರ ಪ್ರಯಾಣದ ವೇಳೆ ಇದು ಅನಿವಾರ್ಯ. ಇತರ ಆಟಗಾರರಂತೆ ಅಭ್ಯಾಸ ನಡೆಸಲು ಸುಲಭದಲ್ಲಿ ಆಗುವುದಿಲ್ಲ. ಕೆಲವನ್ನು ಬಿಟ್ಟರೆ ಮೊಬೈಲ್‌ನಲ್ಲಿ ಸಿಗುವ ಎಲ್ಲ ಚೆಸ್‌ ಆ್ಯಪ್‌ಗಳು ಇವರಿಗೆ ಲಭ್ಯ ಇರುವುದಿಲ್ಲ.

‘ಚೆಸ್‌ ಬಿಟ್ಟುಬಿಡುತ್ತೇನೆ’

‘ಐದು ವರ್ಷಗಳಿಂದ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದೇನೆ. ದೇಶ–ವಿದೇಶಗಳಲ್ಲಿ ಪದಕಗಳನ್ನು ಗೆದ್ದರೂ ಉಪಯೋಗವಾಗುತ್ತಿಲ್ಲ. ಉದ್ಯೋಗವೂ ಸಿಗುತ್ತಿಲ್ಲ. ನನ್ನ ತಾಯಿ ಶಿವಮೊಗ್ಗ ನಗರದಲ್ಲಿ ಸಣ್ಣದೊಂದು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ. ಎಷ್ಟು ದಿನ ಎಂದು ಅವರನ್ನು ಅವಲಂಬಿಸಬೇಕು? ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆಯಲ್ಲಿ ತೊಡಗಲು ನಿರ್ಧರಿಸಿದ್ದೇನೆ’ ಎಂದು ಕಿಶನ್‌ ಅಳಲು ತೋಡಿಕೊಂಡರು.

‘ಇಷ್ಟೆಲ್ಲಾ ಸಾಧಿಸಿದರೂ ಸರ್ಕಾರ ನಮ್ಮನ್ನು ಗುರುತಿಸುತ್ತಿಲ್ಲ. ಇನ್ನೇನು ಮಾಡಬೇಕೊ ಅರ್ಥವಾಗುತ್ತಿಲ್ಲ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ಸಂಪರ್ಕಿಸಿದರೂ ಹಣಕಾಸು ನೆರವು ಸಿಕ್ಕಿಲ್ಲ. ಇಷ್ಟು ವರ್ಷಗಳಲ್ಲಿ ಪ್ರೋತ್ಸಾಹ ರೂಪವಾಗಿ ಚಿಕ್ಕಾಸೂ ಬಂದಿಲ್ಲ. ಗೆಲ್ಲುವ ಅಂಧ ಕ್ರಿಕೆಟ್‌ ಆಟಗಾರರಿಗೆ, ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ವಿಜೇತರಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ. ನಮಗೇಕೆ ಹೀಗೆ’ ಎನ್ನುವ ಕೊರಗು ಅವರದು.

‘ಚೆಸ್‌ನಿಂದ ಏನೂ ಸಿಗುವುದಿಲ್ಲವೆಂದರೆ ಆಡಿ ಪ್ರಯೋಜನವಾದರೂ ಏನು? ಮುಂಬೈನಲ್ಲಿ ಗೆದ್ದ ಕಾರಣ ಬಲ್ಗೇರಿಯಾದಲ್ಲಿ ಬರುವ ಜುಲೈನಲ್ಲಿ ವಿಶ್ವ ಟೀಮ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಆಡುವ ಅವಕಾಶ ಒದಗಿದೆ. ಹೋಗಬೇಕೇ ಬೇಡವೇ ಎಂಬ ಗೊಂದಲದಲ್ಲಿದ್ದೇನೆ’ ಎಂದು ಕಿಶನ್‌ ಹೇಳುತ್ತಾರೆ. ಓದಿನಲ್ಲೂ ಮುಂದಿದ್ದ ಕುವೆಂಪು ವಿಶ್ವವಿದ್ಯಾಲಯ ಅರ್ಥಶಾಸ್ತ್ರದಲ್ಲಿ ಅವರು ಎರಡನೇ ರ‍್ಯಾಂಕ್ ಪಡೆದಿದ್ದಾರೆ.

‘ಆನಂದ್‌ ಹೊಗಳಿದ್ದು ಅಪೂರ್ವ ಕ್ಷಣ’

ಮುಂಬೈನ ಚಾಂಪಿಯನ್‌ಷಿಪ್‌ ವೇಳೆ ಒಂದು ದಿನ ಚೆಸ್‌ ತಾರೆ ವಿಶ್ವನಾಥನ್‌ ಆನಂದ್‌ ಭೇಟಿ ನೀಡಿ ಪ್ರೋತ್ಸಾಹದ ಮಾತುಗಳನ್ನಾಡಿದ್ದರು. ನನ್ನ ಜೊತೆ ಮಾತನಾಡುತ್ತ ‘ನಿನ್ನ ಬಗ್ಗೆ ತುಂಬಾ ಕೇಳಿದ್ದೇನೆ’ ಎಂದು ಬೆನ್ನು ತಟ್ಟಿದರು. ಅಂಥ ದೊಡ್ಡ ವ್ಯಕ್ತಿ ಹತ್ತಿರ ಬಂದು ಮೆಚ್ಚುಗೆ ಸೂಚಿಸಿದ್ದು ನನ್ನ ಪಾಲಿಗೆ ಮರೆಯಲಾಗದ ಕ್ಷಣ. ಅಂಥ ದೊಡ್ಡ ವ್ಯಕ್ತಿಯಾದರೂ ಅವರ ಚೆಸ್‌ ಪ್ರೀತಿ ದೊಡ್ಡದು ಎನ್ನುತ್ತಾರೆ ಕಿಶನ್‌.

ಪ್ರತಿಕ್ರಿಯಿಸಿ (+)