ಭಾನುವಾರ, ಡಿಸೆಂಬರ್ 8, 2019
24 °C

‘ರನ್‌ ಯಂತ್ರ’ ಮಂದಾನ

Published:
Updated:
‘ರನ್‌ ಯಂತ್ರ’ ಮಂದಾನ

‘ಭಾರತ ತಂಡಕ್ಕೆ ಒಬ್ಬ ಉತ್ತಮ ಆರಂಭಿಕ ಆಟಗಾರ್ತಿ ಸಿಕ್ಕಿದ್ದಾರೆ. ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ತಂಡವನ್ನು ಸಂಕಷ್ಟದಿಂದ ಪಾರುಮಾಡುವಷ್ಟು ಪ್ರಬುದ್ಧತೆ ಅವರಲ್ಲಿದೆ’ ಎಂದು ಎರಡು ವರ್ಷಗಳ ಹಿಂದೆ  ಕ್ರಿಕೆಟ್ ವಿಶ್ಲೇಷಕಿ ಇಶಾ ಗುಹಾ ಅವರು ಸ್ಮೃತಿ ಮಂದಾನ ಕುರಿತು ಹೇಳಿದ್ದ ಮಾತುಗಳು ಇಂದಿಗೂ ಪ್ರಸ್ತುತ.

ಭಾರತದ ಮಹಿಳಾ ಕ್ರಿಕೆಟ್‌ನ ‘ರನ್ ಯಂತ್ರ’ ಎಂದೇ ಕರೆಸಿಕೊಳ್ಳುವ ಸ್ಮೃತಿ ಈಗ ದಕ್ಷಿಣ ಆಫ್ರಿಕಾ ನೆಲದಲ್ಲಿ ಅಬ್ಬರಿಸುತ್ತಿದ್ದಾರೆ. ಎಡಗೈ ಬ್ಯಾಟ್ಸ್‌ವುಮನ್ ಸ್ಮೃತಿ ಟೂರ್ನಿಯ ಎರಡನೇ ಏಕದಿನ ಪಂದ್ಯದಲ್ಲಿ ಹೊಡೆದ ಶತಕದ ಅಂದ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚೊತ್ತಿದೆ. ಭಾರತಕ್ಕಿಂತಲೂ ಬಲಿಷ್ಠವಾದ ದಕ್ಷಿಣ ಆಫ್ರಿಕಾ ಎದುರು ಜಯಸಾಧಿಸಲು ಅವರ ಶತಕ ನೆರವಾಗಿತ್ತು.

ಕಿರಿಯ ವಯಸ್ಸಿನಲ್ಲಿ ಕ್ರಿಕೆಟ್ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಮುಡಿಗೇರಿಸಿಕೊಂಡಿರುವ ಅವರು ಕಡಿಮೆ ಪಂದ್ಯಗಳಲ್ಲಿ (34 ಪಂದ್ಯ) ಏಕದಿನ ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್ ಪೂರೈಸಿದ ಶ್ರೇಯಕ್ಕೆ ಪಾತ್ರರಾದರು. ಸುದೀರ್ಘ ಕಾಲ ಕಾಡಿದ ಗಾಯ, ಫಾರ್ಮ್‌ ಕೊರತೆಗಳನ್ನು ಮೀರಿ ನಿಂತು ಈ ಸಾಧನೆ ಮಾಡಿದ್ದಾರೆ. ಬಾಲ್ಯದಿಂದಲೂ ಕಂಡ ಕನಸಿನ ಹಾದಿಯಲ್ಲಿ ದೃಢ ಹೆಜ್ಜೆ ಇಟ್ಟಿದ್ದಾರೆ.

ಸ್ಮೃತಿ ಎರಡು ವರ್ಷದವರಿದ್ದಾಗ ಅವರ ಕುಟುಂಬ ಸಾಂಗ್ಲಿಯಲ್ಲಿ ನೆಲೆಸಿತು. ತನ್ನ ಓರಗೆಯ ಸ್ನೇಹಿತೆಯರೆಲ್ಲ ಓದಿನತ್ತ ಗಮನ ಕೊಟ್ಟಾಗ ಸ್ಮೃತಿ ಕ್ರಿಕೆಟ್ ಧ್ಯಾನದಲ್ಲಿರುತ್ತಿದ್ದರು.

ಸ್ಮೃತಿ ಅವರ ತಂದೆ ಶ್ರೀನಿವಾಸ್ ಕೂಡ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕ್ರಿಕೆಟ್ ಆಡಿದ್ದರು. ಸಹೋದರ ಶ್ರವಣ್ ಮಹಾರಾಷ್ಟ್ರದ 16 ವರ್ಷದೊಳಗಿನವರ ತಂಡದಲ್ಲಿ ಆಡುತ್ತಿದ್ದರು. ಇದರ ಪ್ರಭಾವ ಸ್ಮೃತಿ ಮೇಲೆ ಬಿತ್ತು. ಹುಡುಗರೊಂದಿಗೆ ಕ್ರಿಕೆಟ್ ಆಡುತ್ತಲೇ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದರು.

ತನ್ನ ಒಂಬತ್ತನೇ ವಯಸ್ಸಿನಲ್ಲಿ ಮಹಾರಾಷ್ಟ್ರದ 15 ವರ್ಷದೊಳಗಿನ ತಂಡಕ್ಕೆ ಮತ್ತು 11ನೇ ವಯಸ್ಸಿನಲ್ಲಿ 19 ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾಗಿದ್ದು, ಸ್ಮೃತಿ ಪ್ರತಿಭೆಗೆ ಸಾಕ್ಷಿ.

ಸಾಂಗ್ಲಿಯ ಚಿಂತಮನ್ ರಾವ್ ವಾಣಿಜ್ಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವೇಳೆ ತಾವು ಕೂಡಿಟ್ಟಿದ ಹಣದಿಂದ ಕಾಲೇಜಿನಲ್ಲಿ ಸಿಮೆಂಟ್ ಪಿಚ್ ನಿರ್ಮಿಸಿಕೊಂಡಿದ್ದರು. ಮಳೆಗಾಲದಲ್ಲಿ ಇದರಲ್ಲಿ ಅಭ್ಯಾಸ ಮಾಡುತ್ತಿದ್ದರು. ಕಾಲೇಜಿನಲ್ಲಿ ಇಲ್ಲ ಎಂದರೆ ಅವರು ಕಾಣಿಸುತ್ತಿದ್ದುದು ಶಿವಾಜಿ ಸ್ಟೇಡಿಯಂನ ಟರ್ಫ್ ಪಿಚ್‌ನಲ್ಲಿ. ಅಲ್ಲಿ ವೃತ್ತಿಪರ ಬೌಲರ್‌ಗಳೊಂದಿಗೆ ಅಭ್ಯಾಸ ಮಾಡುತ್ತಿದ್ದರು. ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಕೋಚ್ ಅನಂತ್ ತಾಂಬ್ವೇಕರ್ ಪಾತ್ರವೂ ಹಿರಿದು. ತಮ್ಮ 16ನೇ ವರ್ಷದಲ್ಲಿಯೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

ಮೊದಲ ಬಾರಿಗೆ ಮಂದಾನ ಅವರ ಪ್ರತಿಭೆಯ ಪರಿಚಯವಾಗಿದ್ದು 2013ರಲ್ಲಿ. ಪಶ್ಚಿಮ ವಲಯದ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಸೌರಾಷ್ಟ್ರ ವಿರುದ್ಧ ಅವರು ಸಿಡಿಸಿದ ದ್ವಿಶತಕ (224ರನ್‌) ಎಲ್ಲರ ಹುಬ್ಬೇರುವಂತೆ ಮಾಡಿತು. ಮಂದಾನ 2014ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಕ್ರಮವಾಗಿ 22 ಮತ್ತು 51 ರನ್‌ಗಳ ಕಾಣಿಗೆ ನೀಡಿ ತಂಡವು ಎಂಟು ವರ್ಷಗಳ ನಂತರ ಟೆಸ್ಟ್ ಪಂದ್ಯ ಗೆಲ್ಲಲು ಕಾರಣರಾದರು.

2016ರಲ್ಲಿ ಮಹಿಳಾ ಬಿಗ್ ಬಾಷ್ ಲೀಗ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ನಂತರ ಆಡಿದ ದೇಶದ ಎರಡನೇ ಆಟಗಾರ್ತಿ ಎಂಬ ಕೀರ್ತಿಯೂ ಅವರಿಗೆ ಸಲ್ಲುತ್ತದೆ.  ಅದೇ ವರ್ಷ ಚಾಲೆಂಜರ್‌ ಟ್ರೋಫಿಯಲ್ಲಿ ಅತಿ ಹೆಚ್ಚು (192) ರನ್ ಗಳಿಸಿದ ಸಾಧನೆ ಮಾಡಿದ್ದರು. ಅದರಲ್ಲಿ ಮೂರು ಅರ್ಧಶತಕಗಳು ಸೇರಿದ್ದವು.

ಮಹಿಳಾ ಬಿಗ್ ಬಾಷ್ ಲೀಗ್‌ನಲ್ಲಿ ಆಡುತ್ತಿದ್ದಾಗ ಗಾಯಗೊಂಡಿದ್ದರಿಂದ ಐದು ತಿಂಗಳು ಆಟದಿಂದ ಹೊರಗುಳಿಯಬೇಕಾಯಿತು. ಅದರ ನಂತರ ಆಡಿದ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 90 ರನ್‌ ಮತ್ತು ನಂತರದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಿಡಿಸಿದ ಶತಕವನ್ನು ಅಭಿಮಾನಿಗಳು ಇನ್ನೂ ಮರೆತಿಲ್ಲ. 

ಪಂದ್ಯಗಳು ಇನಿಂಗ್ಸ್‌ ರನ್‌ ಗರಿಷ್ಠ ಸ್ಟ್ರೈಕ್‌ರೇಟ್ 100 50

ಟೆಸ್ಟ್‌: 2, 3, 81, 51, 43.54, 0, 1,

ಏಕದಿನ: 34, 34, 1,152, 145, 79.77, 3, 7,

ಟ್ವೆಂಟಿ– 20: 27, 27, 424, 96.58, 0, 1,

ಪ್ರತಿಕ್ರಿಯಿಸಿ (+)