ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ ಮತ್ತು ಮಕ್ಕಳ ಮನೋವಿಜ್ಞಾನ

Last Updated 18 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಸುನೀತಾ ಮಲ್ಲಿಕಾರ್ಜುನಸ್ವಾಮಿ

ಇನ್ನೇನು ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಶಾಲಾ-ಕಾಲೇಜುಗಳ ತರಗತಿಗಳಲ್ಲಿ ವರ್ಷಪೂರ್ತಿ ಕಲಿತಿದ್ದನ್ನು ಒರೆಗೆ ಹಚ್ಚುವ ಸಮಯವಿದು. ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ನೆರವಾಗುವ ಸೇತುವೆ ಎಂದರೆ ಪರೀಕ್ಷೆ. ಪರೀಕ್ಷೆಯೆಂದಾಕ್ಷಣ ಶೇ 80ರಷ್ಟು ವಿದ್ಯಾರ್ಥಿಗಳು ಭಯಪಡುತ್ತಾರೆ. ಪರೀಕ್ಷೆಯ ಭಯದಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ಇದರಿಂದಾಗಿಯೇ ಕೆಲವು ವಿದ್ಯಾರ್ಥಿಗಳು ಹೇಳುವಂತೆ ಪರೀಕ್ಷಾ ಕೊಠಡಿ ಪ್ರವೇಶಿಸುತ್ತಿದ್ದಂತೆಯೆ ಮನಸ್ಸು ಖಾಲಿಯಾಗಿ ಪ್ರಶ್ನೆಗಳಿಗೆ ಉತ್ತರಗಳು ಗೊತ್ತಿದ್ದು ಬರೆಯಲಾಗುವುದಿಲ್ಲ. ಅಥವಾ ಯಾವ ಪ್ರಶ್ನೆಗೆ ಯಾವ ಉತ್ತರ ಸರಿಯೆನ್ನುವುದು ಅರಿವಾಗದೇ ಇರಬಹುದು. ಪರೀಕ್ಷಾ ಫಲಿತಾಂಶವನ್ನು ಯೋಚಿಸುತ್ತಾ ಪರೀಕ್ಷೆಯ ಅಧ್ಯಯನಕ್ಕೆ ತೊಡಗದೆ ಇರುವುದು ವಿದ್ಯಾರ್ಥಿಗಳಿಗೆ ನಷ್ಟ ತಂದೊಡ್ಡುತ್ತದೆ. ನಾನು ಓದಿದ್ದು ಪರೀಕ್ಷೆಯಲ್ಲಿ ಬರದೇ ಹೋದರೆ? ನನ್ನ ಸಂಬಂಧಿ/ನನ್ನ ಸ್ನೇಹಿತರಿಗಿಂತ ಹೆಚ್ಚು ಅಂಕ ಪಡೆಯದೇ ಹೋದರೆ? ಎಂಬ ಆತಂಕ ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿರುತ್ತದೆ.

ಭಯ ನಿವಾರಣೆಯ ಬಗ್ಗೆ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ನೆರವಾಗಬೇಕು. ಪರೀಕ್ಷೆ ಹತ್ತಿರವಾಗಿರುವಾಗ ಪಾಲಕರ ವರ್ತನೆ ಮಕ್ಕಳೊಂದಿಗೆ ಮತ್ತಷ್ಟು ಆತ್ಮೀಯವಾಗಿರಬೇಕು. ಮಕ್ಕಳ ಸಾಧನೆಯೇ ಪೋಷಕರ ಪ್ರೀತಿಗೆ ಕಾರಣವಾಗಿರಬಾರದು. ಮಕ್ಕಳು ಓದಿಗೆ ಸಂಬಂಧಿಸಿದಂತೆ ಏನಾದರು ತೊಂದರೆ ಹೇಳಿಕೊಂಡರೆ ತಾಳ್ಮೆಯಿಂದ ಕೇಳಿ ಪರಿಹರಿಸಲು ಪ್ರಯತ್ನಿಸಿ. ಮಕ್ಕಳು ನೆಪ ಹೇಳುತ್ತಿರುವರೆಂದು ಭಾವಿಸಿ ಬಯ್ಯುವುದು ಸರ್ವಥಾ ಸರಿಯಲ್ಲ. ತಂದೆ ತಾಯಿಗಳ ಪ್ರೀತಿ, ಗಮನ ಮತ್ತು ಸಮಯಕ್ಕೆ ತಕ್ಕ ಕಾಳಜಿ ಮಕ್ಕಳನ್ನು ಚೈತನ್ಯಗೊಳಿಸುತ್ತದೆ. ಮಕ್ಕಳನ್ನು ಮೂದಲಿಸುವುದನ್ನು ಬಿಟ್ಟು, ಸಕಾರಾತ್ಮಕವಾಗಿ ನಡೆದುಕೊಳ್ಳುವುದರ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸಲು ನೆರವಾಗಬೇಕಾಗುತ್ತದೆ. ಹೆಣ್ಣುಮಕ್ಕಳು ಪರೀಕ್ಷೆ ಸಮಯದಲ್ಲಿ ಮುಟ್ಟಿನ ಬಗ್ಗೆ ಕಳವಳಗೊಳ್ಳುವುದರಿಂದ ಇದರ ಬಗ್ಗೆ ಪಾಲಕರು/ಶಿಕ್ಷಕಿಯರು ಸೂಕ್ತ ಮಾರ್ಗದರ್ಶನ ನೀಡಬೇಕು.

ಪರೀಕ್ಷೆಗೆ ಇನ್ನು ಕೆಲವೇ ದಿನಗಳಿರುವುದರಿಂದ ವಿದ್ಯಾರ್ಥಿಗಳು ಈ ಒಂದು ತಿಂಗಳು ನಾನು-ನನ್ನ ಓದು ಇಷ್ಟೇ ಪ್ರಪಂಚ ಎಂಬ ದೃಢಸಂಕಲ್ಪವನ್ನು ಮಾಡಿಕೊಳ್ಳಿ. ಆಸಕ್ತಿಯಿಲ್ಲದೆ ಏನನ್ನು ಮಾಡಲು ಸಾಧ್ಯವಿಲ್ಲ. ನಿಮ್ಮ ಮನಸ್ಸಿನಲ್ಲಿ ತಲೆಯೆತ್ತುವ ವ್ಯತಿರಿಕ್ತ ಭಾವಗಳನ್ನು ದೂರಮಾಡಿಕೊಳ್ಳಿ. ಒಂದು ತಿಂಗಳ ಕಾಲ ಟಿ.ವಿ, ಮೊಬೈಲ್ ಬಳಕೆಯನ್ನು ತ್ಯಜಿಸಿ. ಯಾವುದೇ ಕಾರಣಕ್ಕೂ ಅಧ್ಯಯನವನ್ನು ಮುಂದೂಡಬೇಡಿ. ಏಕಾಗ್ರತೆಯನ್ನು ಸಾಧಿಸಿ. ಏಕಾಗ್ರತೆಯ ಕೊರತೆ, ಜ್ಞಾಪಕಶಕ್ತಿಯ ಕೊರತೆ ಎನ್ನುವ ಕಾಯಿಲೆಗಳಾವೂ ಇಲ್ಲದಿರುವುದರಿಂದ (ಮೆದುಳಿಗೆ ಪೆಟ್ಟು ಬಿದ್ದ ಸಂದರ್ಭ ಹೊರತುಪಡಿಸಿ) ಅಂತಹ ನೆಪಗಳಿಂದ ದೂರವಿರಿ. ಆಸಕ್ತಿಯೊಂದಿದ್ದರೆ ಏಕಾಗ್ರತೆ, ಜ್ಞಾಪಕಶಕ್ತಿ ಎಲ್ಲವೂ ಹೆಚ್ಚಾಗುತ್ತದೆ.

* ನಿಮ್ಮದೇ ಆದ ವೇಳಾಪಟ್ಟಿಯನ್ನು ಮಾಡಿಕೊಂಡು ಅದರ ಪ್ರಕಾರ ವಿಂಗಡಿಸಿಕೊಂಡು ಓದಿ.

* ಮೊದಲು ನಿಮಗೆ ಆಸಕ್ತಿಯಿರುವ (ಸುಲಭವಾದ) ವಿಷಯವನ್ನು ಅಧ್ಯಯನ ಮಾಡಿ. ನಂತರ ಕಷ್ಟವಾಗಿರುವ ವಿಷಯಗಳನ್ನು ಅಧ್ಯಯನ ಮಾಡಲು ಆಸಕ್ತಿ ಮೂಡುತ್ತದೆ.

* ಮೂಲ ಪರಿಕಲ್ಪನೆಗೆ ಆದ್ಯತೆ ನೀಡಿ. 

* ನೀವು ಓದಿದ ವಿಷಯವನ್ನು ನಿಮಗೆ ಗೊತ್ತಿರುವ ವಿಷಯದೊಂದಿಗೆ ಲಿಂಕ್ ಮಾಡಿ.

* ನೆನಪಿನಲ್ಲಿ ಉಳಿಯದಂತಹ ವಿಷಯಗಳನ್ನು ಬರೆದಿಡುವಂತಹ ಕಾರ್ಯ ಯೋಜನೆಗಳನ್ನು ರೂಪಿಸಿ. ಒಂದು ಸಾರಿ ಬರೆಯುವುದು ಹತ್ತು ಸಾರಿ ಓದಿದಂತೆ.

* ನೀವು ಓದಿದ್ದು ಅರ್ಥವಾಗಿದೆಯೇ ಇಲ್ಲವೇ ತೀರ್ಮಾನಿಸಿಕೊಳ್ಳಿ. ನಂತರ ನೀವು ಓದಿದ್ದನ್ನು ನಿಮ್ಮ ಸ್ನೇಹಿತರಿಗೆ ವಿವರಿಸಿ/ಚರ್ಚಿಸಿ.

* ಯಾವುದೇ ವಿಷಯವನ್ನು ಬಾಯಿಪಾಠ ಮಾಡಬೇಡಿ. ಹೀಗೆ ಮಾಡಿದರೆ ಪರೀಕ್ಷೆ ಬರೆಯುವಾಗ ಒಂದು ವಾಕ್ಯ ತಪ್ಪಾದರೂ ಎಲ್ಲಾ ತಪ್ಪಾಗುತ್ತದೆ. ಪಠ್ಯ ದೊಡ್ಡದಿದ್ದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಭಾಗ ಮಾಡಿಕೊಳ್ಳಿ.

* ಹಳೆಯ ಪ್ರಶ್ನಪತ್ರಿಕೆಗಳನ್ನು ಗಮನಿಸಿ. ಇದರಿಂದ ಪರೀಕ್ಷೆಯಲ್ಲಿ ಯಾವ ರೀತಿ ಪ್ರಶ್ನೆಗಳನ್ನು ಕೇಳಬಹುದು ಎಂಬುದನ್ನು ಊಹಿಸಬಹುದು.

* ಇಂತಿಷ್ಟು ವಿಷಯವನ್ನು ಈ ಅವಧಿಯಲ್ಲಿ ಓದಿಯೇ ತೀರುತ್ತೇನೆ ಎಂದು ನಿಬಂಧನೆ ಹಾಕಿಕೊಳ್ಳಿ.

* ಅಧ್ಯಯನ ಅವಧಿಯಲ್ಲಿ ಉಂಟಾಗುವ ಸಂದೇಹಗಳನ್ನು ಅಧ್ಯಾಪಕರುಗಳಿಂದ ಕೇಳಿ ಬಗೆಹರಿಸಿಕೊಳ್ಳಿ.

* ಗಂಟೆಗಟ್ಟಲೇ ಓದುವುದು ತಪ್ಪು. ಪ್ರತಿ ನಲವತೈದು ನಿಮಿಷದ ನಂತರ ಐದು ಅಥವಾ ಹತ್ತು ನಿಮಿಷದ ವಿಶ್ರಾಂತಿ ಪಡೆಯಿರಿ.

* ಬಿಡುವಿನ ಸಮಯದಲ್ಲಿ ಅಂದರೆ ಸ್ನಾನ ಮಾಡುವಾಗ, ಊಟ ಮಾಡುವಾಗ ಓದಿದ ಅಂಶಗಳನ್ನು ಮನಸ್ಸಿನಲ್ಲಿಯೇ ಮನನ ಮಾಡಿಕೊಳ್ಳುವ ರೂಢಿ ಬಹಳ ಅತ್ಯುತ್ತಮವಾದುದು. ಇದನ್ನು ಅನುಸರಿಸುವುದರಿಂದ ಶೇ 80 ರಿಂದ 90 ರಷ್ಟು ಅಂಶಗಳನ್ನು ನೆನಪಿಟ್ಟುಕೊಳ್ಳಲು ಸಹಾಯವಾಗುತ್ತದೆ.

* ಪರೀಕ್ಷಾ ಸಮಯದಲ್ಲಿ ನಿದ್ದೆಗೆಟ್ಟು ಓದುವುದು ಸರಿಯಲ್ಲ. ಕನಿಷ್ಠ ಐದಾರು ಗಂಟೆಗಳ ನಿದ್ರೆ ಅವಶ್ಯಕ. ನಿದ್ದೆಗೆಟ್ಟು ಓದುವುದರಿಂದ ಆರೋಗ್ಯ ಕ್ಷೀಣಿಸುವುದರೊಂದಿಗೆ ಮನಸ್ಸು ಮೆದುಳಿನ ನಡುವೆ ಸಮತೋಲನ ತಪ್ಪುವ ಸಾಧ್ಯತೆ ಜಾಸ್ತಿ.

* ಪರೀಕ್ಷಾ ದಿನದಂದು ಸೇವಿಸುವ ಆಹಾರ ಲಘುವಾಗಿರಬೇಕು.

* ಪರೀಕ್ಷೆಗೆ ಅಗತ್ಯವಿರುವ ವಸ್ತುಗಳನ್ನೆಲ್ಲ ತೆಗೆದುಕೊಂಡಿರುವೆನೇ ಎಂದು ಪರೀಕ್ಷೆಗೆ ಹೊರಡುವ ಮುನ್ನ ಪರೀಕ್ಷಿಸಿಕೊಳ್ಳಿ.

* ಪ್ರಶ್ನಪತ್ರಿಕೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಸೂಚನೆಗಳನ್ನು ಅರ್ಥ ಮಾಡಿಕೊಳ್ಳಿ.

* ಪ್ರಶ್ನೆಯನ್ನು ಅರ್ಥೈಸಿಕೊಳ್ಳದೇ ಉತ್ತರಿಸಬೇಡಿ.

* ಪ್ರಾರಂಭದಲ್ಲಿ ಬರೆಯುವ ಉತ್ತರಕ್ಕೆ ಹೆಚ್ಚು ಒತ್ತು ಕೊಡಿ. ವಿದ್ಯಾರ್ಥಿಯು ತನ್ನ ವಿಷಯಗ್ರಹಿಕೆಯನ್ನು ಸ್ಪಷ್ಟ ಪಡಿಸುವ ರೀತಿಯಲ್ಲಿ ಉತ್ತರದ ಮೊದಲ ನಾಲ್ಕಾರು ಸಾಲುಗಳಲ್ಲೇ ತೋರ್ಪಡಿಸುವಂತಿರಬೇಕು.

* ಓದಿರುವುದನ್ನು ಪುಸ್ತಕದಲ್ಲಿ ಕೊಟ್ಟಂತೆಯೇ ಅವೇ ಪದಗಳು, ಅವೇ ವಾಕ್ಯಗಳಲ್ಲಿ ಬರೆಯಬೇಕೆಂದಿಲ್ಲ. ಓದಿದ್ದನ್ನು ಅರ್ಥಮಾಡಿಕೊಂಡು ನಿಮ್ಮದೇ ಆದ ಪದ ಮತ್ತು ವಾಕ್ಯಗಳಲ್ಲಿ ಬರೆಯಿರಿ.

* ಸುಂದರವಾದ ಬರವಣಿಗೆಯಿರಲಿ.

* ಗೊತ್ತಿರುವ ಪ್ರಶ್ನೆಗೆ ಜಾಸ್ತಿ ಸಮಯ ಬಳಸಿಕೊಂಡು ಇನ್ನುಳಿದ ಪ್ರಶ್ನೆಗಳನ್ನು ವೇಗವಾಗಿ ಮುಗಿಸುವುದು ಉತ್ತಮ ಅಂಕಗಳಿಸಲು ಅಡ್ಡಿಯಾಗುತ್ತದೆ. ಸಮಯವನ್ನು ಸೂಕ್ತವಾಗಿ ಹಂಚಿಕೆ ಮಾಡಿಕೊಳ್ಳಿ.

* ಒಂದು ಪರೀಕ್ಷೆಯ ಪೇಪರ್ ಬರೆದ ನಂತರ ಅದರ ಫಲಿತಾಂಶದ ಬಗ್ಗೆ ಚಿಂತಿಸುವುದು ಬಿಟ್ಟು ಮುಂದಿನ ಪರೀಕ್ಷಾ ಪೇಪರ್‌ನ ಅಧ್ಯಯನದ ಬಗ್ಗೆ ಗಮನಹರಿಸಿ.

ಪರೀಕ್ಷೆಯೆಂದರೆ ಜೀವನ್ಮರಣಗಳ ಹೋರಾಟವಲ್ಲ. ಸೋಮಾರಿತನವನ್ನು, ಮುಂದೂಡುವ ಪ್ರವೃತ್ತಿಯನ್ನು ಬಿಟ್ಟು ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಪರೀಕ್ಷೆಗೆ ತಯಾರಿ ನಡೆಸಿ. ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ನಿಮ್ಮದಾಗುತ್ತದೆ. ಇಷ್ಟು ವರ್ಷಗಳಲ್ಲಿ ಅದೆಷ್ಟೋ ಘಟಕ ಪರೀಕ್ಷೆಗಳು, ತ್ರೈಮಾಸಿಕ ಪರೀಕ್ಷೆಗಳು, ಅರ್ಧವಾರ್ಷಿಕ ಪರೀಕ್ಷೆಗಳು, ವಾರ್ಷಿಕ ಪರೀಕ್ಷೆಗಳು, ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಬರೆದಿರುವ ನಿಮಗೆ ಉತ್ತಮ ಅನುಭವವಿರುತ್ತದೆ. ಅನವಶ್ಯಕ ಭಯ ತೊರೆದು ಆತ್ಮವಿಶ್ವಾಸದಿಂದ ಪರೀಕ್ಷೆಗೆ ತಯಾರಿ ನಡೆಸಿ. ನಿಮಗೆ ಶುಭವಾಗಲಿ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT