ಬುಧವಾರ, ಡಿಸೆಂಬರ್ 11, 2019
16 °C

ಫ್ಯಾಷನ್‌ ಮಾಂತ್ರಿಕನ ಜೀವನ ಯಾನ

Published:
Updated:
ಫ್ಯಾಷನ್‌ ಮಾಂತ್ರಿಕನ ಜೀವನ ಯಾನ

ನನ್ನ ತಂದೆ ಎನ್‌.ಸಿ. ಬಿದಪ್ಪ ವಾಯುಸೇನೆಯಲ್ಲಿದ್ದರು. ಅವರಿಗೆ ಎರಡು, ಮೂರು ವರ್ಷಗಳಿಗೊಮ್ಮೆ ವರ್ಗಾವಣೆಯಾಗುತ್ತಲೇ ಇತ್ತು. ಈ ಕಾರಣಕ್ಕೆ ಹೊಸ ಗೆಳೆಯರು, ಜನರನ್ನು ಭೇಟಿಯಾಗುವ ಅವಕಾಶ ನನಗೆ ದೊರಕುತ್ತಿತ್ತು. ಹೀಗಾಗಿ ನಾನು ಬಹಿರ್ಮುಖಿಯಾಗಿ ಬೆಳೆಯುತ್ತ ಹೋದೆ. ದೇಶ ಸುತ್ತುತ್ತಿದ್ದ ಕಾರಣ ಪ್ರಪಂಚ ಜ್ಞಾನವೂ ಹೆಚ್ಚಿತು.

ನನ್ನದು ಕೊಡಗು. ಆದರೆ ಹುಟ್ಟಿದ್ದು ಕೊಯಮತ್ತೂರಿನಲ್ಲಿ. ಬಾಲ್ಯದಿಂದಲೂ ನನ್ನ ಆಸಕ್ತಿ ಇದ್ದದ್ದು ಫ್ಯಾಷನ್‌ ಕ್ಷೇತ್ರದೆಡೆಗೆ. ಇದಕ್ಕೆ ಕಾರಣ ನನ್ನ ತಂದೆ, ತಾಯಿ. ಅವರು ತುಂಬಾ ಫ್ಯಾಷನೆಬಲ್‌. ಪಾರ್ಟಿ, ಮದುವೆಗೆ ತುಂಬಾ ಚೆನ್ನಾಗಿ ತಯಾರಾಗುತ್ತಿದ್ದರು. ಜೊತೆಗೆ ಸೇನಾ ಜೀವನಶೈಲಿ ನನ್ನ ಮೇಲೆ ಪರಿಣಾಮ ಬೀರಿತು. ಓದಿನಲ್ಲಿ ಚುರುಕಾಗಿದ್ದರೂ ಕ್ರೀಡೆ, ನೃತ್ಯ, ಸಂಗೀತ, ಫ್ಯಾಷನ್‌ ಬಗೆಗೇ ನನ್ನ ಒಲವಿತ್ತು.

ನಾನಾಗ ಆರನೇ ತರಗತಿಯಲ್ಲಿದ್ದೆ. ಆಗ ನಮ್ಮ ವಾಸಸ್ಥಾನ ಮೈಸೂರಾಯಿತು. ಮೈಸೂರು ನನ್ನಿಷ್ಟದ ಊರುಗಳಲ್ಲೊಂದು. ಅಲ್ಲಿಯ ಪರಿಸರ, ಸೌಂದರ್ಯ... ವಾವ್‌! ಈ ಸಾಂಸ್ಕೃತಿಕ ನಗರಿಗೆ ಮರುಳಾಗದವರು ಯಾರು? ನನ್ನ ಬಾಲ್ಯದ ಸಾಕಷ್ಟು ನೆನಪುಗಳ ನಂಟು ಅಲ್ಲಿದೆ. ರಜೆ ಬಂದರೆ ಗೆಳೆಯರೊಂದಿಗೆ ಸೈಕಲ್‌ ಏರಿ ಚಾಮುಂಡಿ ಬೆಟ್ಟ, ಅರಮನೆ, ನಂಜನಗೂಡಿಗೆ ಸುತ್ತಲು ಹೋಗುತ್ತಿದ್ದೆ. ಮನೆಯಲ್ಲಿ ಯಾವುದೇ ಕಟ್ಟುಪಾಡು ಇರಲಿಲ್ಲ. ಸ್ವತಂತ್ರವಾಗಿ ಬೆಳೆದೆ.

ಒಂದೇ ಕಡೆ ವಿದ್ಯಾಭ್ಯಾಸ ನಡೆಯಲಿ, ಊರೂರು ಸುತ್ತುವುದರಿಂದ ಶಿಕ್ಷಣಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಎಂಟನೇ ತರಗತಿಗೆ ಬೆಂಗಳೂರಿನ ಬಾಲ್ಡ್‌ವಿನ್‌ ಶಾಲೆಗೆ ಸೇರಿಸಿದರು. ಇಲ್ಲಿಯೇ ಸೆಟ್ಲ್‌ ಆಗುವ ಉದ್ದೇಶ ಪೋಷಕರದ್ದಾಗಿತ್ತು. ಬಾಲ್ಡ್‌ವಿನ್‌ ಶಾಲೆಯಲ್ಲಿ ಓದಿನ ಜೊತೆಗೆ ಇತರೆ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿದ್ದರು. ಮಕ್ಕಳ ಕಥೆಗಳ ಲೇಖಕಿ ಎನಿಡ್ ಬ್ಲೈಟನ್‌ ಅವರ ಪುಸ್ತಕಗಳನ್ನು ಹೆಚ್ಚು ಓದುತ್ತಿದ್ದೆ. ಅದರಲ್ಲಿ ಬರುವ ಬೋರ್ಡಿಂಗ್‌ ಮಕ್ಕಳ ಜೀವನ, ಪಿಕ್‌ನಿಕ್‌ ಕಥೆಗಳನ್ನು ನನ್ನ ಬದುಕಿಗೆ ಅನ್ವಯಿಸಿಕೊಂಡು ಕಥೆಯೊಳಗೆ ಕಳೆದು ಹೋಗುತ್ತಿದ್ದೆ.

ನಾನು ಪಿಯುಸಿಯಲ್ಲಿರುವಾಗ ನನ್ನೊಂದಿಗೆ ಸಮಯ ಕಳೆಯುವ ಉದ್ದೇಶದಿಂದ ಅಪ್ಪ ಬೆಂಗಳೂರಿಗೇ ಬಂದರು. ಸೇಂಟ್‌ ಜೋಸೆಫ್‌ನಲ್ಲಿ ಪಿಯುಸಿ ಮುಗಿಸಿದೆ. ಭವಿಷ್ಯದ ದೃಷ್ಟಿಯಿಂದ ಫ್ಯಾಷನ್‌ ಡಿಸೈನಿಂಗ್‌ ತರಬೇತಿ ಪಡೆಯಲು ನಿಶ್ಚಯಿಸಿದೆ. ಅಪ್ಪನ ಬಳಿ ನನ್ನ ಆಸೆ ಹೇಳಿದೆ. ಅವರು ‘ಅದರಿಂದ ಹಣ ಗಳಿಸಲು ಸಾಧ್ಯವಿಲ್ಲ. ಓದಿ ಬೇರೆ ಉದ್ಯೋಗಕ್ಕೆ ಸೇರು’ ಎಂದುಬಿಟ್ಟರು. ಆದರೆ ನಾನು ಹಟ ಬಿಡಲಿಲ್ಲ. ‘ನೀವು ಒಪ್ಪದಿದ್ದರೆ ಅಂಕಲ್‌ ಬಳಿ ಹಣ ಪಡೆದು ಹೋಗುತ್ತೇನೆ’ ಎಂದೆ. ವಿಧಿಯಿಲ್ಲದೆ ಅವರೂ ಒಪ್ಪಿದರು.

ಅಹಮದಾಬಾದ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಡಿಸೈನ್‌ಗೆ (ಎನ್‌ಐಡಿ) ಅರ್ಜಿ ಹಾಕಿದೆ. ಪ್ರವೇಶ ಪರೀಕ್ಷೆಯಲ್ಲಿ ಎರಡನೇ ರ‍್ಯಾಂಕ್‌ ಬಂತು. ಲೈಬ್ರರಿ ಗ್ರಾಫಿಕ್‌ ಡಿಸೈನ್‌, ಟೆಕ್ಸ್‌ಟೈಲ್ಸ್ ಡಿಸೈನ್‌ ವಿಷಯವನ್ನು ಆರಿಸಿಕೊಂಡೆ. ಕೋರ್ಸ್‌ ಮುಗಿದ ನಂತರ ನನ್ನ ಸ್ನೇಹಿತರೆಲ್ಲ ದೆಹಲಿ, ಮುಂಬೈ ಎಂದು ಹೋಗಿಬಿಟ್ಟರು. ನನ್ನ ಪೋಷಕರಿಗೆ ವಯಸ್ಸಾದ ಕಾರಣ ಅವರೊಂದಿಗೆ ಇರಲು ನಾನು ಬೆಂಗಳೂರಿಗೆ ಬಂದೆ.

ಜಾಹೀರಾತು ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದೆ. ಇದೇ ವೇಳೆ ಬಾಲ್ಡ್‌ವಿನ್‌ ಅಪಾರ್ಚುನಿಟಿ (ಬುದ್ಧಿಮಾಂದ್ಯ) ಶಾಲೆಯ ಮಕ್ಕಳಿಗೆ ಪಾಠ ಮಾಡುವ ಅವಕಾಶ ದೊರಕಿತು. ಪ್ರತಿ ಶುಕ್ರವಾರ ಎರಡು ಗಂಟೆ ಚಿತ್ರಕಲೆ ಕಲಿಸುತ್ತಿದ್ದೆ. ನಂತರ ನಾಲ್ಕು, ಆರು ಗಂಟೆ... ಹೀಗೆ ಸಮಯದ ಅವಧಿ ವಿಸ್ತರಿಸುತ್ತಲೇ ಹೋಯಿತು. ಕೊನೆಗೆ ಅಲ್ಲಿಯೇ ಕಾಯಂ ಶಿಕ್ಷಕ ಆಗುವ ಅವಕಾಶವೂ ದೊರಕಿತು. ಅಲ್ಲಿ ಪ್ರತಿ ಮಗುವಿನ ಮನಸ್ಸಿನ ಸ್ಥಿತಿ ಅರಿತು, ಅದಕ್ಕೆ ತಕ್ಕಂತೆ ಕಲಿಸಬೇಕಾಗುತ್ತದೆ. ತುಂಬಾ ಖುಷಿಯಿಂದ ಕೆಲಸ ಮಾಡುತ್ತಿದ್ದೆ. ನಾನು ಮೊದಲು ತುಂಬಾ ಕೋಪಿಷ್ಠನಾಗಿದ್ದೆ. ಆದರೆ ಆ ಮಕ್ಕಳಿಂದ ನನ್ನ ಸ್ವಭಾವದಲ್ಲಿ ಸಾಕಷ್ಟು ಬದಲಾವಣೆಯಾಯಿತು. ಸಮಾಧಾನ, ತಾಳ್ಮೆ ಕಲಿತುಕೊಂಡೆ.

ತಿಂಗಳ ಸಂಬಳ ₹400. ಆಗ ನನಗೆ 23 ವರ್ಷ. ಅಷ್ಟರಲ್ಲಿಯೇ ಜೀವನ ನಡೆಸುವುದು ಕಷ್ಟ ಆಗುತ್ತಿತ್ತು. ಈ ವೇಳೆ ನನ್ನ ಗೆಳತಿ ಕೆಲಸ ಮಾಡುತ್ತಿದ್ದ ಜಾಹೀರಾತು ಕಂಪನಿಯಲ್ಲಿ ಸಂದರ್ಶನಕ್ಕೆ ಹೋಗಿದ್ದೆ, ಆಯ್ಕೆಯೂ ಆದೆ. ನಂತರ ಶಿಕ್ಷಕನ ಕೆಲಸಕ್ಕೆ ರಾಜೀನಾಮೆ ನೀಡಿದೆ. ಆಗ ಪ್ರಾಂಶುಪಾಲರು ‘ದೇವರೇ ನಿನಗೆ ಈ ಕೆಲಸಕ್ಕೆ ಸೇರಿಸಿದ್ದಾರೆ. ಯಾಕೆ ಬಿಡುತ್ತೀಯಾ’ ಎಂದರು. ಅದಕ್ಕೆ ನಾನು ‘ಅದು ಹೌದು, ಆದರೆ ದೇವರು ನನ್ನ ಖರ್ಚನ್ನು ನೋಡಿಕೊಳ್ಳುವುದಿಲ್ಲವಲ್ಲಾ. ನಾನು ಸಂಪಾದಿಸುವುದು ಅಗತ್ಯ. ಪೋಷಕರ ದುಡ್ಡಿನಲ್ಲಿ ಬದುಕಲು ಇಷ್ಟವಾಗುತ್ತಿಲ್ಲ’ ಎಂದೆ. ಅದಕ್ಕೆ ಅವರು ‘ಸರಿ’ ಎಂದು ರಾಜೀನಾಮೆ ಸ್ವೀಕರಿಸಿದರು.

ಹೊಸ ಕೆಲಸಕ್ಕೆ ಸೇರಿದ ದಿನ ಆ ಏಜೆನ್ಸಿ ಹೊರಗೆ ಕುಳಿತಿದ್ದೆ. ಅಲ್ಲಿಯ ಕೆಲಸಗಾರರು ತಲೆಬಿಸಿ ಮಾಡಿಕೊಂಡು ಓಡಾಡುತ್ತಿದ್ದರು. ಆಗ ನನ್ನ ಗೆಳತಿ ಬಂದು, ‘ನಿನಗೆ ಕೆಟ್ಟ ಸುದ್ದಿಯೊಂದಿದೆ. ಕಂಪೆನಿ ಮುಚ್ಚಿತು. ಮಾಲೀಕರು ಅಮೆರಿಕಕ್ಕೆ ಹೋಗುತ್ತಿದ್ದಾರೆ’ ಎಂದಳು. ಇರುವ ಕೆಲಸವನ್ನೂ ಬಿಟ್ಟು ಈ ಕೆಲಸಕ್ಕೆ ಬಂದರೆ ಹೀಗಾಯಿತಲ್ಲ, ಮುಂದೇನು ಮಾಡುವುದಪ್ಪಾ ಎಂಬ ಯೋಚನೆ ಆಯಿತು. ಆಗ ಅವಳು ‘ನಾನು ಇಲ್ಲಿ ಮುಖ್ಯ ಮಾರಾಟ ವಿಭಾಗದಲ್ಲಿ ಇದ್ದೇನೆ. ನಿನ್ನಲ್ಲಿ ಸೃಜನಶೀಲತೆ ಇದೆ. ಜೊತೆಗೆ ತುಂಬಾ ಗ್ರಾಹಕರು ಇದ್ದಾರೆ. ನಾವಿಬ್ಬರೇ ಸೇರಿ ಯಾಕೆ ಈ ಕಂಪನಿ ನಡೆಸಬಾರದು’ ಎಂದಳು. ನಾನು ಒಪ್ಪಿದೆ. ಇಬ್ಬರ ಜನ್ಮರಾಶಿಯನ್ನು ಸೇರಿಸಿ ‘ಸ್ಕಾರ್ಪಿಯೊ, ಜೆಮಿನಿ ಅಸೋಸಿಯೇಟ್ಸ್‌’ ಎಂಬ ಹೆಸರಿನಲ್ಲಿ ಹೊಸ ಕಂಪನಿ ಪ್ರಾರಂಭಿಸಿದೆವು.

ಆಗಷ್ಟೇ ಬೆಂಗಳೂರಿನಲ್ಲಿ ಫ್ಯಾಷನ್‌ ಇವೆಂಟ್ಸ್‌ ಪ್ರಾರಂಭವಾಗುತ್ತಿತ್ತು. ಹೀಗಾಗಿ ಅವಕಾಶಗಳೂ ಚೆನ್ನಾಗಿದ್ದವು. ಕಂಪೆನಿ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಕಾರಣಾಂತರದಿಂದ ನಾನು ಅಲ್ಲಿಂದ ಹೊರಬಂದು ಸ್ವಂತ ಏಜೆನ್ಸಿ ಆರಂಭಿಸಿದೆ. ಅದರ ಹೆಸರು ‘ಡಿಸೈನ್‌ ಅಂಡ್‌ ಪ್ರಿಂಟ್‌ ಗ್ರೂಪ್‌’. ನಗರದಲ್ಲಿ ಮೊದಲ ಬೊಟಿಕ್‌ ಏಜೆನ್ಸಿ ಅದು.

ಖಾದಿ ಒಲವು

ಖಾದಿ ಬಗ್ಗೆ ನಮ್ಮಲ್ಲಿ ಒಲವು ಬೆಳೆಯಬೇಕು. ಕೈ ಮಗ್ಗದ ನೇಕಾರರು ಸಮೃದ್ಧವಾಗಿ ಬಾಳಬೇಕು. ನಮ್ಮ ದೇಸಿ ಫ್ಯಾಷನ್‌ ಚೆಲುವನ್ನು ಪ್ರಪಂಚಕ್ಕೇ ಪರಿಚಯ ಮಾಡಿಸಬೇಕು. ಇದೇ ಉದ್ದೇಶದಿಂದ ಐದು ವರ್ಷಗಳ ಹಿಂದೆ ರಾಜಸ್ಥಾನ ಸರ್ಕಾರಕ್ಕೆ ಖಾದಿ, ಕೈಮಗ್ಗವನ್ನು ಉಳಿಸುವ ಆಂದೋಲನ ಮಾಡುವಂತೆ ಕೇಳಿಕೊಂಡಿದ್ದೆವು. ಐದು ವರ್ಷಗಳಿಂದ ಅಲ್ಲಿ ‘ಹೆರಿಟೇಜ್‌ ವೀಕ್‌’ ಕಾರ್ಯಕ್ರಮ ನಡೆಸುತ್ತಿದ್ದೇವೆ. ಸದ್ಯ ನಾನು ತೆಲಂಗಾಣ, ಒಡಿಶಾ, ಪಂಜಾಬ್‌, ಹರಿಯಾಣ, ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಈ ಆಂದೋಲನಕ್ಕಾಗಿ ಕೆಲಸ ಮಾಡುತ್ತಿದ್ದೇನೆ.

ಪ್ರತಿಕ್ರಿಯಿಸಿ (+)