7

ಅಭಿನಯಕ್ಕೆ ಮೆರುಗು ನೀಡಿದ ಕಂಠಸಿರಿ

Published:
Updated:
ಅಭಿನಯಕ್ಕೆ ಮೆರುಗು ನೀಡಿದ ಕಂಠಸಿರಿ

ಸಾವಿತ್ರಿ, ಚಂದ್ರಮತಿ, ಕಯಾದು, ದ್ರೌಪದಿ, ಕುಂತಿ, ಗಾಂಧಾರಿ, ಸೀತೆ, ಮಂಡೋದರಿ ಪಾತ್ರಗಳಿಗೆ ಹೇಳಿಮಾಡಿಸಿದ ಶರೀರ ಹಾಗೂ ಶಾರೀರ ಹೆಸರಾಂತ ಕಲಾವಿದೆ ಪ್ರತಿಭಾ ನಾರಾಯಣ್ ಅವರದು. ಕಂಠಸಿರಿಯಂತೂ ಅಮೋಘ. ಸಾವಿರಾರು ಪ್ರೇಕ್ಷರಿದ್ದರೂ ಅವರ ಕಿವಿಯಲ್ಲೇ ಹಾಡಿದ ಅನುಭವ ನೀಡುವ ಎತ್ತರದ ಕಂಠ ಅವರದು.

ಕಳೆದ ನಾಲ್ಕು ದಶಕಗಳಲ್ಲಿ ಬೆಂಗಳೂರು ಹಾಗೂ ಸುತ್ತಲಿನ ನಾಲ್ಕಾರು ಜಿಲ್ಲೆಗಳ ಗ್ರಾಮ, ಪಟ್ಟಣಗಳ ಪೌರಾಣಿಕ ನಾಟಕಗಳ ಅವಿಭಾಜ್ಯ ಅಂಗವಾಗಿ ಬೆಳೆದು ಬಂದ ಪ್ರತಿಭಾ ನಾರಾಯಣ್, ಖ್ಯಾತ ಹಾರ್ನೊನಿಯಂ ಮಾಸ್ಟರ್ ಎಂ.ಬಿ.ಕೃಷ್ಣರಾವ್ ಹಾಗೂ ಗಾಯಕಿ ಸಾವಿತ್ರಮ್ಮ ದಂಪತಿಯ ಪುತ್ರಿಯಾಗಿ 1956ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.

ಕಲಾವಿದರ ಜೇನುಗೂಡಿನಂತಿದ್ದ ಕುಟುಂಬದಲ್ಲಿ ಜನಿಸಿದ ಪ್ರತಿಭಾರಿಗೆ ಶಾಲಾ ಶಿಕ್ಷಣದ ಜತೆ ಜತೆಯಲ್ಲೇ ಶಾಸ್ತ್ರೀಯ ಸಂಗೀತ, ರಂಗ ಸಂಗೀತ ಹಾಗೂ ಅಭಿನಯದ ಧೀಕ್ಷೆ ದೊರೆಯಿತು. ತಾತ ಆನೇಕಲ್ ತಿಮ್ಮರಾಯಪ್ಪ ಹಾಗೂ ಅಜ್ಜಿಯರಾದ ನಾಗಮ್ಮ, ರಮಾಬಾಯಿ, ಲಕ್ಷ್ಮಿಬಾಯಿ, ಸಕ್ಕೂಬಾಯಿ, ಕೃಷ್ಣಾಬಾಯಿ, ಮುನಿಯಮ್ಮ ಅವರು ಬಾಲ ಸರಸ್ವತಿ ಹಾಗೂ ಶೇಷಾದ್ರಿ ನಾಟಕ ಮಂಡಳಿ ಸ್ಥಾಪಿಸಿ 1930-40-50ರ ದಶಕದಲ್ಲಿ ರಾಜ್ಯದ ಹಲವೆಡೆ ನಿರಂತರವಾಗಿ ನಾಟಕ ಪ್ರದರ್ಶಿಸಿದ್ದರು. ಆಂಧ್ರಪ್ರದೇಶ, ತಮಿಳುನಾಡಿನಲ್ಲೂ ಹಲವಾರು ಪ್ರಯೋಗ ಮಾಡಿದ ಖ್ಯಾತಿ ಈ ನಾಟಕ ಮಂಡಳಿಗಳದು. ಮಹಿಳೆಯರೇ ನಾಟಕ ತಂಡ ಕಟ್ಟಿ ಯಶಸ್ವಿಯಾಗಿ ಮುನ್ನಡೆಸಿದ ಕನ್ನಡ ರಂಗಭೂಮಿಯ ಉಜ್ಚಲ ಪರಂಪರೆಯಲ್ಲಿ ಪ್ರತಿಭಾ ಅವರ ಅಜ್ಜಿಯರು ಸ್ಥಾಪಿಸಿದ್ದ ಬಾಲ ಸರಸ್ವತಿ ನಾಟಕ ಮಂಡಳಿಯೂ ಒಂದು.

ಇಂತಹ ಹಿನ್ನೆಲೆಯಲ್ಲಿ ಬೆಳೆದ ಪ್ರತಿಭಾ ಬಾಲಕಿಯಾಗಿದ್ದಾಗಲೇ 'ಕೃಷ್ಣಲೀಲಾ' ನಾಟಕದ ಬಾಲಕೃಷ್ಣನಾಗಿ ರಂಗಪ್ರವೇಶಿಸಿದರು. ಗುರುಮೂರ್ತಾಚಾರ್ ಹಾಗೂ ಶಂಕರಾಚಾರ್ ಅವರಿಂದ ಸಂಗೀತ ಹಾಗೂ ಅಭಿನಯದ ಪಾಠ ಹೇಳಿಸಿಕೊಂಡ ಪ್ರತಿಭಾ ನಾಟಕಗಳಲ್ಲಿ ನಟಿಸುವುದನ್ನೇ ವೃತ್ತಿಯಾಗಿಸಿಕೊಂಡರು. ಬೆಂಗಳೂರು, ಗ್ರಾಮಾಂತರ, ತುಮಕೂರು, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಬೇಡಿಕೆಯ ನಟಿ ಎನಿಸಿದ್ದರು. 45 ವರ್ಷಗಳಲ್ಲಿ ಅವರು ನೀಡಿದ ಪ್ರದರ್ಶನಗಳ ಸಂಖ್ಯೆ 12 ಸಾವಿರ ದಾಟುತ್ತದೆ.

ರಂಗದ ಮೇಲೆ ನಟಿಸುತ್ತಲೇ ಒಬ್ಬರಲ್ಲ, ಇಬ್ಬರು ಮಕ್ಕಳನ್ನು ಹೆತ್ತವರು ಪ್ರತಿಭಾ. ಫೆ.19, 1976ರಂದು ಆನೇಕಲ್‍ನಲ್ಲಿ ನಡೆದ 'ಕುರುಕ್ಷೇತ್ರ' ನಾಟಕದಲ್ಲಿ ಕೃಷ್ಣನಾಗಿ ತುಂಬು ಗರ್ಭಿಣಿ ಪ್ರತಿಭಾ ಅಭಿನಯಿಸುತ್ತಿದ್ದರು. ನಾಟಕದ ಮಧ್ಯೆ ಕಾಣಿಸಿಕೊಂಡ ಹೆರಿಗೆ ನೋವು ಮೊದಲ ಮಗುವಿನ ಜನ್ಮಕ್ಕೆ ಕಾರಣವಾಯಿತು. ಮತ್ತೊಮ್ಮೆ 'ವೀರ ಬ್ರಹ್ಮೇಂದ್ರ’ ನಾಟದಲ್ಲಿ ಪ್ರತಿಭಾರದು ಬ್ರಹ್ಮೇಂದ್ರನ ಪಾತ್ರ. ರಂಗದ ಮೇಲೆ ಮತ್ತೊಬ್ಬ ಪುತ್ರ ಜನಿಸಿದ. ಅವನಿಗೆ ವೀರ ಬ್ರಹ್ಮೇಂದ್ರ ಎಂದೇ ಹೆಸರಿಟ್ಟರು. ಬಿಡುವಿಲ್ಲದ ಪ್ರತಿಭಾ ಅವರ ರಂಗ ಕಾಯಕದಲ್ಲಿ ಸಂಪೂರ್ಣ ಸಹಕಾರ ನೀಡಿದವರು ಅವರ ಪತಿ ನಾರಾಯಣ್.

ಸೀತೆ, ಸಾವಿತ್ರಿಯರು ಮಾತ್ರವಲ್ಲ, ರಾಮ, ಅರ್ಜುನ, ಕರ್ಣನ ಪಾತ್ರಗಳಲ್ಲೂ ಔಚಿತ್ಯಪೂರ್ಣ ಅಭಿನಯ ನೀಡಿದ ಪ್ರತಿಭಾವಂತೆ ಪ್ರತಿಭಾ ಅವರು. ಅವರ ಆಂಜನೇಯನ ಪಾತ್ರವಂತೂ ಅತ್ಯಂತ ಜನಪ್ರಿಯ.

ನಟನೆಯ ಎಲ್ಲ ಆಯಾಮಗಳಲ್ಲೂ ಪಳಗಿದ ಪ್ರತಿಭಾ ವೃತ್ತಿ ಹಾಗೂ ಹವ್ಯಾಸಿ ನಟ ನಟಿಯರನ್ನೊಳಗೊಂಡ 'ಪ್ರತಿಭಾ ಕಲಾನಿಕೇತನ' ಎಂಬ ಸ್ವಂತ ರಂಗತಂಡವನ್ನು 1979ರಲ್ಲಿ ಸ್ಥಾಪಿಸಿದ್ದು ಈ ಕಲಾನಿಕೇತನದಿಂದಲೂ ಆಗಾಗ ನಾಟಕಗಳನ್ನು ಪ್ರದರ್ಶಿಸುತ್ತ ಬಂದಿದ್ದಾರೆ.

ಕರ್ನಾಟಕ ನಾಟಕ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಭಾರಿಗೆ ಇದೀಗ ಎಸ್.ಪಿ.ವರದರಾಜು ಪ್ರಶಸ್ತಿಯ ಗರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry