ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಬದಲಾದಾಗ ಕೂದಲೂ ಹಾರುತ್ತದೆ

Last Updated 18 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

* ಸಚ್ಮಿ

ಕೈಲಿ ಮೊಬೈಲ್ ಹಿಡಿದು ಕತ್ತು ಸ್ವಲ್ಪ ವಾಲಿಸಿ, ಹೆಗಲಿಗೆ ಕೂದಲು ಇಳಿ ಬಿಟ್ಟು ಕಿರುನಗೆಯೊಂದನ್ನು ಮೂಡಿಸಿ ನಾಲ್ಕೈದು ಸೆಲ್ಫಿ ಕ್ಲಿಕ್ಕಿಸಿದರೆ ಸಮಾಧಾನ. ಅದೆಷ್ಟು ಸೆಲ್ಫಿ ತೆಗೆದುಕೊಳ್ತೀರಾ ಎಂದು ಯಾರಾದರೂ ಕೇಳಿದರೆ ಉತ್ತರ ಬರೀ ನಗು ಅಷ್ಟೇ. ಒಮ್ಮೆ ಕೂದಲನ್ನು ಎಡಕ್ಕೆ, ಮತ್ತೊಮ್ಮೆ ಬಲಕ್ಕೆ, ಸ್ವಲ್ಪ ಕೂದಲನ್ನು ಮುಖಕ್ಕೆ ಇಳಿ ಬಿಟ್ಟು ಹೀಗೆ ನಾನಾ ರೀತಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿ ಖುಷಿ ಪಡುವ ಗಮ್ಮತ್ತು ಬೇರೆಯೇ ಇರುತ್ತದೆ. ಇನ್ನು ರೇಷಿಮೆಯಂಥ ಕೂದಲು ಹಾರುವಾಗ ಸೆಲ್ಫಿ ಕ್ಲಿಕ್ಕಿಸಿದರೆ ಅದು ಪರ್ಫೆಕ್ಟ್. ಈ ರೀತಿಯ ಫೋಟೊಗಳಿಗೆ ಮೆರುಗು ನೀಡುವುದೇ ನಮ್ಮ ಕೂದಲು.

ಇಂಥಾ ಫೋಟೋಗಳನ್ನು ನೋಡಿದಾಗ ಆ ಕೂದಲನ್ನು ಒಪ್ಪವಾಗಿ ಬಾಚಿ ಜಡೆ ಹಾಕಬಾರದಾ ಅಂತಾರೆ ಅಮ್ಮ. ಇಲ್ಲಿ ಯಾರೂ ಜಡೆ ಹಾಕಲ್ಲಮ್ಮಾ ಎಂದು ನಾನೂ ರಾಗ ಎಳೆಯುತ್ತೇನೆ,  ಹೌದಲ್ಲ, ವರ್ಷಗಳ ಹಿಂದೆ ನಾನು ಬೆಂಗಳೂರಿಗೆ ಬಂದಾಗ ಉದ್ದ ಕೂದಲಿತ್ತು, ಅದನ್ನು ಒಪ್ಪವಾಗಿ ಹೆಣೆದು ಜಡೆ ಹಾಕುತ್ತಿದ್ದೆ. ಕ್ರಮೇಣ ಜಡೆ ಹಾಕುವುದನ್ನು ನಿಲ್ಲಿಸಿದೆ. ಇದಕ್ಕೆ ಕಾರಣವೂ ಉಂಟು.

ಬೆಂಗಳೂರಿಗೆ ಬಂದಾಗ ಈ ರೀತಿ ಹಳ್ಳಿಯವರ ಥರಾ ಇರಬೇಡ. ಸ್ವಲ್ಪ ಬದಲಾಗಬೇಕು ಅಂತ ಗೆಳತಿಯೊಬ್ಬಳು ಹೇಳಿದಾಗ ನನಗೂ ಸರಿ ಅನಿಸಿತ್ತು. ಬದಲಾವಣೆಯ ಗಾಳಿ ಮೊದಲು ಬೀಸಿದ್ದೇ ಕೂದಲಿಗೆ. ಅಲ್ಲಿವರೆಗೆ ಜಡೆ ಹಾಕುತ್ತಿದ್ದ ನಾನು ಕೇಶ ವಿನ್ಯಾಸ ಬದಲಿಸಿದೆ. ಉದ್ದ ಜಡೆ ಸ್ಟೈಪ್ ಕಟ್ ಆಯ್ತು, ಹೊಸ ಕೇಶ ವಿನ್ಯಾಸ ನನ್ನಲ್ಲಿ ಆತ್ಮ ವಿಶ್ವಾಸವನ್ನೂ ಹುಟ್ಟು ಹಾಕಿತ್ತು. ಇದು ನಿಮಗೆ ಚೆನ್ನಾಗಿ ಒಪ್ಪುತ್ತದೆ ಎಂದು ಗೆಳತಿಯರು ಹೇಳಿದಾಗ ಖುಷಿ. ಕ್ರಮೇಣ ಇಲ್ಲಿನ ನೀರಿಗೆ ಕೂದಲು ಉದುರಲು ಶುರುವಾದರೂ ಅಮ್ಮ ಮನೆಯಿಂದ ಕಳಿಸಿದ್ದ ತೆಂಗಿನಎಣ್ಣೆ ನನ್ನ ಕೂದಲನ್ನು ಕಾಪಾಡಿತ್ತು.

ಕೂದಲು ಬೆಳೆಯುತ್ತಿದ್ದಂತೆ ಇನ್ನೊಂದು ಸ್ಟೈಲ್ ಪರೀಕ್ಷಿಸುವ ಹಂಬಲ. ಲೇಯರ್ ಕಟ್ ಎಂಬ ಹೊಸ ಕೇಶ ವಿನ್ಯಾಸಕ್ಕಾಗಿ ಮತ್ತೆ ಕೂದಲಿಗೆ ಕತ್ತರಿ ಬಿತ್ತು. ಮೊದಲಿನ ಸ್ಟೈಲ್‌ಗಿಂತ ಇದು ಒಪ್ಪುತ್ತದೆ ಎಂದಾಗ ಮತ್ತಷ್ಟು ಖುಷಿ. ಆದರೆ ಮನೆಯಲ್ಲಿ ಅದ್ಯಾಕೆ ಆ ಕೂದಲನ್ನು ಹಾಳು ಮಾಡುತ್ತೀ ಎಂದು ಅಮ್ಮ ಗೊಣಗುತ್ತಲೇ ಇದ್ದರು.

ಬಾಲ್ಯದಲ್ಲಿ ಕೂದಲಿಗೆ ಎಣ್ಣೆ ಹಚ್ಚಿ, ಚೆಂದವಾಗಿ ಬಾಚಿ, ಹೆಣೆದು ದುಂಡು ಮಲ್ಲಿಗೆಯ ದಂಡೆ ಮುಡಿಸುತ್ತಿದ್ದರು ಅಮ್ಮ. ನಮ್ಮ ಕುಟುಂಬದಲ್ಲಿ ಎಲ್ಲರಿಗೂ ಉದ್ದ ಕೂದಲು. ನಮ್ಮ ಅಮ್ಮನ ಅಮ್ಮನಿಗೆ ಅಂದರೆ ನನ್ನ ಅಜ್ಜಿಗೂ ಉದ್ದ ಕೂದಲಿತ್ತಂತೆ. ಅಮ್ಮ ಹೇಳುತ್ತಿರುತ್ತಾರೆ; ‘ಅಜ್ಜಿಯದ್ದೇ ಲಕ್ಷಣ ನಿನಗೆ. ಅಮ್ಮನ ಕೂದಲೂ ಹೀಗೆಯೇ ಇತ್ತು, ರೇಷಿಮೆಯಂತೆ ಮೃದು’ ಎಂದು ನೇವರಿಸುವಾಗ ನಮ್ಮಮ್ಮನಿಗೆ ನನ್ನ ಕೂದಲು ಎಂದರೆ ಅವರಮ್ಮನ ನೆನಪಿನ ತಂತು. ಹಾಗಾಗಿ ಕೂದಲಿನ ಮೇಲಿನ ನನ್ನ ಪ್ರಯೋಗಗಳು ಅಮ್ಮನಿಗೆ ಹಿಡಿಸುತ್ತಿರಲಿಲ್ಲ. ಇನ್ನು ಮುಂದೆ ಕೂದಲು ಕಟ್ ಮಾಡಬೇಡ ಎಂದು ಹೇಳಿದರೆ ನಾನು ಹೂಂ ಅನ್ನುತ್ತಿದ್ದೆ ಅಷ್ಟೇ.

ಮಾಯಾನಗರಿಯಲ್ಲಿ ಬದುಕು ಬದಲಾಗುತ್ತಿದ್ದಂತೆ ಜಡೆಯ ಬದಲು ಫ್ರೀ ಹೇರ್ ಸ್ಟೈಲ್‌ಗೆ ಒಗ್ಗಿ ಹೋದೆ. ಒಪ್ಪವಾಗಿ ಬಾಚಿ ಹೆಣೆದು ಜಡೆ ಹಾಕುವುದಕ್ಕಿಂತ ಹೇರ್ ಬ್ಯಾಂಡ್ ಬಳಸಿ ಪೋನಿ ಹಾಕುವುದು, ಇಲ್ಲವೇ ಕ್ಲಿಪ್ ಹಾಕಿ ಕೂದಲು ಇಳಿ ಬಿಡುವುದು ಆರಾಮ ಎನಿಸಿ ಬಿಟ್ಟಿತ್ತು. ಹಾರುವ ಕೂದಲು ಇಷ್ಟವಾಗಿದ್ದರೂ ಬಸ್ಸಿನಲ್ಲಿ ಓಡಾಡುವಾಗ ಇವು ಕಿರಿಕಿರಿ ಅನಿಸಿ ಬಿಡುತ್ತದೆ. ಅಂದಹಾಗೆ ಈ ಕೂದಲಿನ ವಿನ್ಯಾಸಕ್ಕೂ ಇದೆ ಪ್ರೀತಿಯ ಟಚ್. ಫ್ರೀ ಹೇರ್ಸ್ ತುಂಬಾ ಚೆನ್ನಾಗಿ ಕಾಣುತ್ತದೆ ಎಂದು ‘ಅವನು’ ಹೇಳಿದಾಗ ಮುಂಗುರಳ ಹಿಂದೆ ಸರಿಸಿ ನಾಚಿಕೊಂಡ ಆ ಕ್ಷಣ ನೆನಪಿಗೆ ಬರುತ್ತದೆ. ಆ ಮಧುರ ಕ್ಷಣಗಳಿಗೆ ಸಾಕ್ಷಿಯಾಗಿದ್ದು ಇದೇ ರೇಷಿಮೆ ಕೂದಲು. ಕನ್ನಡಿ ಮುಂದೆ ನಿಂತು ಕೂದಲು ಬಾಚುವಾಗ ಎಲ್ಲವೂ ನೆನಪು ಬರುತ್ತದೆ. ತುಟಿಯಲ್ಲಿ ತುಂಟ ಕಿರುನಗೆಯೂ.

ಹಾಂ... ಜಡೆ ವಿಷಯ ಹೇಳುತ್ತಿದ್ದೆ ಅಲ್ವಾ. ಸ್ನಾನ ಮಾಡಿದ ಕೂಡಲೇ ಒದ್ದೆ ಕೂದಲು ಬಾಚಬೇಡ ಅಂತಾರೆ ಅಮ್ಮ. ನಾನೂ ಅದನ್ನು ಪಾಲಿಸುತ್ತೇನೆ. ಅರೇ, ಕೂದಲು ಇನ್ನು ಒದ್ದೆಯಾಗಿಯೇ ಇದೆ. ಬೆರಳುಗಳಲ್ಲಿ ಸಿಕ್ಕು ಬಿಡಿಸಿ, ಸ್ವಲ್ಪ ಕೂದಲನ್ನು ಮುಂದೆ ಸರಿಸಿ ಒಂದು ಸೆಲ್ಫಿ ಕ್ಲಿಕ್ಕಿಸಿದೆ. #wethairs #crazylook ಎಂಬೆಲ್ಲಾ ಹ್ಯಾಶ್ ಟ್ಯಾಗ್ ಗಳೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಫೋಟೊ ಅಪ್ಲೋಡ್ ಮಾಡಬೇಕು. ಕೂದಲು ಒಣಗಿದ ನಂತರ ಮತ್ತೊಂದು ಸೆಲ್ಫಿ ಕ್ಲಿಕ್ಕಿಸಬೇಕಿದೆ, ಅದೇ ಓಪನ್ ಹೇರ್ ಸೆಲ್ಫೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT