ಗುರುವಾರ , ಡಿಸೆಂಬರ್ 12, 2019
25 °C

ಎಲೆಯ ಬೇಟೆಯೆಡೆಗೆ ಜೀರ್ಜೆಂಬೆ ಹೆಜ್ಜೆ

Published:
Updated:
ಎಲೆಯ ಬೇಟೆಯೆಡೆಗೆ ಜೀರ್ಜೆಂಬೆ ಹೆಜ್ಜೆ

ಕಾಡು ಸುತ್ತುವ ಮಂದಿಯನ್ನು ಸೆಳೆಯುವ ಕೀಟಗಳಲ್ಲಿ ಜೀರ್ಜಿಂಬೆ ಅಥವಾ ಜ್ಯುವೆಲ್ ಬೀಟಲ್ ಸಹ ಒಂದು. ಅದರ ಲೋಹದ ಹೊಳಪಿನ ಮೈಬಣ್ಣಕ್ಕೆ ಮಾರುಹೋಗದವರಿಲ್ಲ. ಹಿಡಿದು, ಅಂಗೈಲಿ ಹೊರಳಿಸಿ, ‘ತಗೋ ಚಾಕೊಲೇಟ್’ ಎಂದು ಪಕ್ಕದ ಹುಡುಗನ ಜೇಬಿಗದನ್ನು ತೂರಿಸಿ, ಅದನ್ನವನು ಹೆಕ್ಕಿ, ಗಾಬರಿಯಿಂದ ಬಿಸಾಕುವ ತಮಾಷೆಯ ಪ್ರಸಂಗ ನೆನದವರ ಮನದಲ್ಲಿ ನಗು ಮೂಡಿಸದೇ ಇರದು.

ಬುಪ್ರೆಸ್ಟಿಡೇ (Buprestidae) ಎಂಬ ವೈಜ್ಞಾನಿಕ ಹೆಸರಿನ ಈ ಕೀಟವು ಹೆಚ್ಚಾಗಿ ಭಾರತ, ಥಾಯ್ಲೆಂಡ್‌, ಜಪಾನ್, ರಷ್ಯಾಗಳಲ್ಲಿ ಕಾಣಸಿಗುತ್ತದೆ. ಸುಮಾರು 15 ಸಾವಿರ ಉಪಪ್ರಭೇದಗಳಿವೆ. ಕಾಡು ಕಣಗಿಲೆಯ ರೆಂಬೆ ಮೇಲಿನ ಎಲೆಯನ್ನು ಹುಡುಕುತ್ತಾ ಹೆಜ್ಜೆ ಹಾಕುತ್ತಿರುವ ಈ ಜೀರ್ಜಿಂಬೆಯನ್ನು ಜೆ.ಪಿ.ನಗರದ ಬಳಿ ಸೆರೆಹಿಡಿದವರು ವಿದ್ಯಾರಣ್ಯಪುರದ ವರದರಾಜಸ್ವಾಮಿ ಬಡಾವಣೆಯ ಹವ್ಯಾಸಿ ಛಾಯಾಗ್ರಾಹಕ ವೆಂಕಟೇಶ ಜಿ.

ಯಲಹಂಕದ ಬೃಂದಾವನ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾಗಿರುವ ಈ ಎಂ.ಟೆಕ್ ಪಧವೀಧರರು, ಹತ್ತು ವರ್ಷಗಳಿಂದ ಕ್ಯಾಮೆರಾ ಮೋಹಿ. ಪ್ರಕೃತಿ, ವನ್ಯಜೀವಿ, ಮ್ಯಾಕ್ರೋ, ಮುಖಚಿತ್ರ, ಪ್ರವಾಸಿ, ಸ್ಟ್ರೀಟ್ ಫೋಟೋಗ್ರಫಿಯಲ್ಲಿ ಆಸಕ್ತರು. ಈ ಚಿತ್ರ ತೆಗೆಯಲು ಬಳಕೆಯಾದ ಕ್ಯಾಮೆರಾ ಕೆನಾನ್ 550 D ಮತ್ತು 70-300 ಎಂ.ಎಂ. ಸಿಗ್ಮಾ ಜೂಂ ಲೆನ್ಸ್. 238 ಎಂ.ಎಂ. ಫೋಕಲ್ ಲೆಂಗ್ತ್ ನಲ್ಲಿ, ಅಪರ್ಚರ್ F 11, ಷಟರ್ ವೇಗ 1/200 ಸೆಕೆಂಡ್, ಐ.ಎಸ್.ಒ 100, ಫ್ಲಾಷ್ ಹಾಗೂ ಟ್ರೈಪಾಡ್ ಬಳಕೆಯಾಗಿಲ್ಲ.

ಈ ಚಿತ್ರದೊಂದಿಗಿನ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನವನ್ನು ಹೀಗೆ ಮಾಡಬಹುದು.

* ಕ್ಯಾಮೆರಾದ ಹಿಡಿತಗಳೆಲ್ಲವೂ (ಕಂಟ್ರೋಲ್ಸ್) ಸಮರ್ಪಕವಾಗಿವೆ. ಇಂಥ ಸಂದರ್ಭಗಳಲ್ಲಿ ಮ್ಯಾಕ್ರೊ ಲೆನ್ಸ್‌ ಬಳಕೆ ಸಹಜ. ಚಿತ್ರ ತೆಗೆಯಬೇಕಾದ ವಸ್ತುವಿನ ಹತ್ತಿರಕ್ಕೆ ಲೆನ್ಸ್ ತೆಗೆದುಕೊಂಡು ಹೋಗಿದ್ದರೆ ಕೀಟ ಹೆದರಿ ಹಾರಿ ಹೋಗಿತ್ತು. ಹೀಗಾಗಿ ದೂರದಿಂದಲೇ ಜೂಂ ಲೆನ್ಸ್ ಬಳಸಿರುವುದು ಛಾಯಾಗ್ರಾಹಕರ ಸಯಯಪ್ರಜ್ಞೆ ಮತ್ತು ಪರಿಸರ ಪ್ರಜ್ಞೆಯನ್ನು ಸೂಚಿಸುತ್ತದೆ.

* ಕ್ಯಾಮೆರಾದ ಕೋನ (ಆ್ಯಂಗಲ್ ಆಫ್ ವ್ಯೂ) ಇಂಥ ಚಿತ್ರಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ವಸ್ತುವಿನ ರೂಪುರೇಷೆಗಳು, ಆಕಾರ ಮತ್ತು ಅಳತೆಗಳಲ್ಲಿ ವ್ಯತ್ಯಾಸವಾಗದೇ, ಕೀಟದ ಮುಖಭಾಗ, ಮೀಸೆಗಳು, ಮೊನಚಾದ ಕಟವಾಯಿ ಕಾಣಿಸುವಂತೆ ಕ್ಯಾಮೆರಾದ ಲೆನ್ಸ್‌ ಕೇಂದ್ರೀಕರಿಸಲಾಗಿದೆ.

* ವಸ್ತುವಿನ (ಆಬ್ಜೆಕ್ಟ್– ಕೀಟ), ಕಾಡುಕಣಗಿಲ ಗಿಡದ ದಂಟು ಮತ್ತು ಅದರ ಮುಂದಿನ ಎಲೆಯ ಭಾಗದ ಬಣ್ಣ, ಸಹಜವಾಗಿ ಜೀವಂತಿಕೆಯಿಂದ ಮೂಡಿದೆ. ಮುಖ್ಯ ವಸ್ತುಗಳ ವರ್ಣಛಾಯಾಂತರವೂ (ಟೋನಲ್ ಡಿಸ್ಟ್ರಿಬ್ಯೂಶನ್) ಸಹಜವಾಗಿದೆ. ಗಿಡ ಗಂಟಿಗಳಿಂದ ಕೂಡಿರಬಹುದಾದ ಮತ್ತು ಅಲ್ಲಲ್ಲಿ ಹಿಂದಿನಿಂದ ನುಸುಳಬಹುದಾಗಿದ್ದ ಬೆಳಕಿನ ಹರಕು ಹರಕು ಪ್ಯಾಚ್‌ಗಳು ಗೋಚರಿಸದಂತೆ ಎಚ್ಚರವಹಿಸಿ ಸೆರೆಹಿಡಿದಿರುವ ಮಂದ ಹಿನ್ನೆಲೆಯ (ಔಟ್ ಆಫ್ ಫೋಕಸ್) ತಿಳಿಹಸಿರು ಹರವು, ಚಿತ್ರದ ಸೌಂದರ್ಯವನ್ನು ಇಮ್ಮಡಿಸಿವೆ.

* ಮ್ಯಾಕ್ರೋ ಅಥವಾ ಪ್ರಕೃತಿ ಜೀವಿಗಳ ಸಂದರ್ಭಗಳಲ್ಲಿ, ವಿಷಯ ಜ್ಞಾನಕ್ಕೆ ಪೂರಕವಾದ ವಸ್ತು ನಿರೂಪಣೆ ಮತ್ತು ಪ್ರಖರತೆ ಮುಖ್ಯ. ಚಿತ್ರಣದ ಸೌಂದರ್ಯದ ಬಗ್ಗೆ ಅಷ್ಟಾಗಿ ಪ್ರಯತ್ನ ಮಾಡುವುದೂ ವಿರಳ. ಶಾಲೆಯ ಪಠ್ಯಪುಸ್ತಕಕ್ಕೆ ಬೇಕಾಗುವ ಹಾಗೆ. ಆದರೆ, ಛಾಯಾಗ್ರಹಣದ ಕಲಾತ್ಮಕ ಸಾಧ್ಯತೆಯ ಹೆಚ್ಚಳಕ್ಕೆ ಮನಸೋತ ಛಾಯಾಗ್ರಾಹಕರು ಅದರಲ್ಲೂ ಪಾಂಡಿತ್ಯವನ್ನು  ಅಭ್ಯಾಸದಿಂದ ಪಡೆಯುವುದು ಒಂದು ಬೋನಸ್ ಇದ್ದಂತೆ. ಇಂಥ ಚಿತ್ರಗಳು ದಾಖಲೆಯ (ಡಾಕ್ಯುಮೆಂಟೇಶನ್) ಮಿತಿಯನ್ನೂ ದಾಟಿಕೊಂಡು ನೋಡುಗನ ಕಣ್ಣು ಮತ್ತು ಮನಸ್ಸಿಗೆ ನಾಟುತ್ತವೆ.

ಪ್ರತಿಕ್ರಿಯಿಸಿ (+)