ಬುಧವಾರ, ಡಿಸೆಂಬರ್ 11, 2019
23 °C

‘ಖಳನಾಯಕಿ ಪಾತ್ರ ನನಗಿಷ್ಟ’

Published:
Updated:
‘ಖಳನಾಯಕಿ ಪಾತ್ರ ನನಗಿಷ್ಟ’

ಕಳೆದ ವರ್ಷ ‘ಪ್ರಿನ್ಸೆಸ್ ಸೌತ್‌’ (ದಕ್ಷಿಣ ಭಾರತದ ರಾಜಕುಮಾರಿ) ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಹುಡುಗಿ ವೇದಶ್ರೀ ರಾಜ್ ಸದ್ಯ ಸದ್ದಿಲ್ಲದೆ ಚಂದನವನದಲ್ಲಿ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ.

ಹೊಸಕೋಟೆ ಸಮೀಪದ ಹಳ್ಳಿಯೊಂದರಲ್ಲಿ ಹುಟ್ಟಿದ ವೇದಶ್ರೀ ರಾಜ್ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಪಿಯುಸಿ ನಂತರ ಒಂದೆರಡು ಫ್ಯಾಷನ್ ಷೋಗಳಲ್ಲಿ ಹೆಜ್ಜೆ ಹಾಕಿ ಸೈ ಎನಿಸಿಕೊಂಡರು. ಫ್ಯಾಷನ್ ಡಿಸೈನಿಂಗ್ ಕೋರ್ಸ್‌ ಮುಗಿಸಿದ ನಂತರ, ‘ಪ್ರಿನ್ಸ್‌ ಆ್ಯಂಡ್‌ ಪ್ರಿನ್ಸೆಸ್ ಆಫ್‌ ಸೌತ್ ಕರ್ನಾಟಕ’ ಫ್ಯಾಷನ್‌ ಷೋ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದರು. ಚಂದನವನಕ್ಕೆ ಹೆಜ್ಜೆ ಇಡಲು ಇದು ಚಿಮ್ಮುಹಲಗೆ ಆಯಿತು. ಅನೇಕ ಆಡಿಷನ್‌ಗಳಲ್ಲಿ ಭಾಗವಹಿಸಿ ನಟ ರಾಜ್ ರೆಡ್ಡಿಯವರೊಂದಿಗೆ ‘ಇನ್‌ಫೆಕ್ಷನ್’ ಚಿತ್ರದಲ್ಲಿ ಆವಕಾಶ ಗಿಟ್ಟಿಸಿಕೊಂಡರು. ‘ಕುರಿಬಾಂಡ್’ ಎಂಬ ಕಾಮಿಡಿ ಚಿತ್ರಕ್ಕೂ ನಾಯಕಿಯಾಗಿ ಅವಕಾಶ ಪಡೆದುಕೊಂಡಿದ್ದಲ್ಲದೇ, ಪ್ರಸ್ತುತ ತಮಿಳು ಚಿತ್ರವೊಂದಕ್ಕೂ ಸಹಿ ಹಾಕಿದ್ದಾರೆ.

ಇವರ ತಂದೆ ರೆಸ್ಟೋರೆಂಟ್‌ ನಡೆಸುತ್ತಾರೆ. ತಾಯಿ ಗೃಹಿಣಿ. ಸಹೋದರ ರಾಜ್ಯಮಟ್ಟದ ವಾಲಿಬಾಲ್ ಆಟಗಾರ. ‘ನಾನು ರೂಪದರ್ಶಿ ಹಾಗೂ ನಟಿಯಾಗಲು ಹೆತ್ತವರ ಪ್ರೋತ್ಸಾಹವೇ ಕಾರಣ. ಯೋಗ, ನ್ಯತ್ಯ, ಈಜು, ಓದು ಮತ್ತು ಸಂಗೀತ ನನ್ನ ನೆಚ್ಚಿನ ಹವ್ಯಾಸಗಳು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಪುನೀತ್ ರಾಜ್‍ಕುಮಾರ್ ಇವರ ನೆಚ್ಚಿನ ನಟ. ಅವರೊಡನೆ ನಟಿಸಬೇಕೆಂಬುದು ಇವರ ಜೀವಮಾನದ ಕನಸಂತೆ. ರಚಿತಾ ರಾಮ್ ಇಷ್ಟದ ನಟಿ. ಗ್ಲಾಮರ್ ಪಾತ್ರಗಳು ಇಷ್ಟ ಎನ್ನುತ್ತಾರೆ. ಬಿಕಿನಿ ಎಂದರೆ ಮೂಗು ಮುರಿಯುತ್ತಾರೆ. ಕನ್ನಡದಲ್ಲಿ ನಾಗವಲ್ಲಿ, ತೆಲುಗಿನಲ್ಲಿ ಆರುಂಧತಿಯಂಥ ಪಾತ್ರಗಳು ಇವರಿಗೆ ಕನಸಂತೆ.

ಉಟದ ವಿಷಯ ಮಾತನಾಡಿ ಎಂದರೆ, ‘ನಾನೇನು ತಿಂಡಿಪೋತಿಯಲ್ಲ. ಅಮ್ಮ ಮಾಡುವ ನಾಟಿ ಕೋಳಿ ಸಾರು ಮತ್ತು ಮುದ್ದೆ  ಇಷ್ಟ. ಹೊರಗಿನ ಊಟ ಅಷ್ಟಕಷ್ಟೆ’ ಎನ್ನುತ್ತಾರೆ.

ಮೊದಮೊದಲು ಕ್ಯಾಮರಾ ಎದುರಿಸಿದಾಗ ತುಂಬಾ ಹೆದರಿಕೊಂಡೆ ಎನ್ನುವ ಇವರು, ಮನೆಯಲ್ಲಿ ಒಬ್ಬರೆ ಕನ್ನಡಿ ಮುಂದೆ ನಿಂತು ನಟನೆ ಕಲಿತುಕೊಂಡವರು. ಚಿತ್ರರಂಗವಷ್ಟೇ ಅಲ್ಲ, ಅವಕಾಶ ಸಿಕ್ಕರೆ ಕಿರುತೆರೆಯಲ್ಲೂ ಖಳನಾಯಕಿಯ ಪಾತ್ರದಲ್ಲಿ ನಟಿಸುವ ಆಸೆ ಅವರದು.

ಫೇಸ್‌ಬುಕ್  facebook.com/vedashree.raj.3 

ಪ್ರತಿಕ್ರಿಯಿಸಿ (+)