ಮತ್ತೆ ರಾಹುಲ್‌ ಭೇಟಿಗೆ ಎಡಗೈ ಬಣದ ನಾಯಕರ ತೀರ್ಮಾನ

6
ಪ್ರಮುಖರ ರಹಸ್ಯ ಸಭೆ: ಮುಖ್ಯಮಂತ್ರಿ ನಡೆಗೆ ಅಸಮಾಧಾನ

ಮತ್ತೆ ರಾಹುಲ್‌ ಭೇಟಿಗೆ ಎಡಗೈ ಬಣದ ನಾಯಕರ ತೀರ್ಮಾನ

Published:
Updated:

ಬೆಂಗಳೂರು: ಒಳ ಮೀಸಲಾತಿ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಪಟ್ಟು ಹಿಡಿದಿರುವ ಕಾಂಗ್ರೆಸ್‌ ಎಡಗೈ ಬಣದ ಮುಖಂಡರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮೇಲೆ ಒತ್ತಡ ಹೇರಲು ತೀರ್ಮಾನಿಸಿದ್ದಾರೆ.

ಸಂಸದ ಕೆ.ಎಚ್‌. ಮುನಿಯಪ್ಪ ನೇತೃತ್ವದಲ್ಲಿ ಶನಿವಾರ ರಾತ್ರಿ ನಡೆದ ಎಡಗೈ ಬಣದ ಪ್ರಮುಖರ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಸಚಿವರಾದ ಎಚ್‌. ಆಂಜನೇಯ, ಆರ್‌.ಬಿ. ತಿಮ್ಮಾಪೂರ, ನಿವೃತ್ತ ಕೆಲವು ಹಿರಿಯ ಅಧಿಕಾರಿಗಳು ಒಳಗೊಂಡಂತೆ ಸುಮಾರು 20 ಮಂದಿ ಸಭೆಯಲ್ಲಿದ್ದರು.

ಇದೇ 24ರಿಂದ ನಡೆಯಲಿರುವ ರಾಹುಲ್‌ ಗಾಂಧಿ ಎರಡನೇ ಹಂತದ ರಾಜ್ಯ ಪ್ರವಾಸ ಸಂದರ್ಭದಲ್ಲಿ ಒತ್ತಡ ಹೇರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ‘ಏನೇ ಆಗಲಿ, ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಒತ್ತಡ ಹೇರೋಣ’ ಎಂಬ ಮುಖಂಡರೊಬ್ಬರ ಸಲಹೆಗೆ ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ.

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಸಂಬಂಧಿಸಿದಂತೆ ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ಆಧರಿಸಿ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಈ ಹಿಂದೆ ಮುಖ್ಯಮಂತ್ರಿ ಹೇಳಿದ್ದರು. ಆದರೆ, ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವರದಿಯ ಪರಿಶೀಲನೆಗೆ ಸಚಿವ ಸಂಪುಟ ಉಪ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಇದು ಎಡಗೈ ಬಣದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ರಾಹುಲ್‌ ಗಾಂಧಿ ಕೈಗೊಂಡ ಮೊದಲ ಹಂತದ ಜನಾಶೀರ್ವಾದ ಯಾತ್ರೆ ಸಂದರ್ಭದಲ್ಲಿ ರಾಯಚೂರಿನಲ್ಲಿ ಒಳಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ದಲಿತ ಮುಖಂಡರ ಜತೆ ಮಾತುಕತೆ ನಡೆಸಿದ್ದರು. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದರು.

ಕಾಂಗ್ರೆಸ್ ಅಧ್ಯಕ್ಷರ ಸೂಚನೆ ಹೊರತಾಗಿಯೂ ಮುಖ್ಯಮಂತ್ರಿ ಯಾವುದೇ ತೀರ್ಮಾನ ಕೈಗೊಳ್ಳದ ಕಾರಣ ಮತ್ತೊಮ್ಮೆ ರಾಹುಲ್‌ ಭೇಟಿ ಮಾಡಿ ಅಹವಾಲು ಸಲ್ಲಿಸಲು ಎಡಗೈ ನಾಯಕರು ತೀರ್ಮಾನಿಸಿದ್ದಾರೆ.

ಎಡಗೈ ಬಣದ ಎಲ್ಲ ಸಚಿವರು, ಶಾಸಕರು, ಸಂಸದರು, ಜಿಲ್ಲಾ ಪಂಚಾಯ್ತಿ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ಬಗ್ಗೆ ಕೆಲವು ಹೋರಾಟಗಾರರು ಸಭೆಯಲ್ಲಿ ಸಲಹೆ ನೀಡಿದ್ದಾರೆ. ‘ಈ ರೀತಿ ಮಾಡುವುದು ಸರಿಯಲ್ಲ. ರಾಜೀನಾಮೆಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ’ ಎಂದು ಕೆಲವರು ವಾದಿಸಿದ್ದಾರೆ ಎನ್ನಲಾಗಿದೆ.

ಎಡಗೈ ಹಾಗೂ ಬಲಗೈ ಸಮುದಾಯದವರಿಗೆ ಮೀಸಲಾತಿಯಲ್ಲಿ ಸಮನಾಗಿ ಅಂದರೆ ಶೇ 5.5 ರಷ್ಟು ಮೀಸಲಾತಿ ಜಾರಿಗೊಳಿಸುವ ಬಗ್ಗೆ ಬಲಗೈ ಬಣದ ನಾಯಕರ ಜತೆ ಚರ್ಚಿಸಿ ಮನವೊಲಿಸುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆಯಾಯಿತು. ಪಕ್ಷದ ವರಿಷ್ಠರ ಮೂಲಕವೇ ಬಲಗೈ ಬಣದವರನ್ನು ಸಮಾನ ಮೀಸಲಾತಿ ಸೂತ್ರಕ್ಕೆ ಒಪ್ಪಿಸುವ ಬಗ್ಗೆ ತೀರ್ಮಾನಿಸಲಾಯಿತು ಎಂದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry