ಹ್ಯಾಟ್ರಿಕ್ ಜಯದ ಕನಸು ಭಗ್ನ

7
ಮಹಿಳೆಯರ ಟ್ವೆಂಟಿ–20 ಕ್ರಿಕೆಟ್‌: ದಕ್ಷಿಣ ಆಫ್ರಿಕಾಕ್ಕೆ ಮೊದಲ ಗೆಲುವು

ಹ್ಯಾಟ್ರಿಕ್ ಜಯದ ಕನಸು ಭಗ್ನ

Published:
Updated:
ಹ್ಯಾಟ್ರಿಕ್ ಜಯದ ಕನಸು ಭಗ್ನ

ಜೊಹಾನ್ಸ್‌ಬರ್ಗ್‌ (ಪಿಟಿಐ): ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡದ ಆಟಗಾರ್ತಿಯರು ಶಬ್ನಿಮ್‌ ಇಸ್ಮಾಯಿಲ್‌ (30ಕ್ಕೆ5) ಅವರ ಬೌಲಿಂಗ್‌ ದಾಳಿಗೆ ತರಗೆಲೆಗಳಂತೆ ಉದುರಿದರು.

ಮೂರನೇ ಟ್ವೆಂಟಿ–20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಭಾರತ 5 ವಿಕೆಟ್‌ಗಳಿಂದ ಸೋಲು ಅನುಭವಿದೆ. ಈ ಮೂಲಕ ಭಾರತ ತಂಡದ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನಗೊಂಡಿದೆ. ಮೊದಲ ಎರಡು ಪಂದ್ಯ ಗೆದ್ದಿದ್ದ ಹರ್ಮನ್‌ಪ್ರೀತ್ ಪಡೆ 2–1ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಭಾರತ ತಂಡ 17.5 ಓವರ್‌ಗಳಲ್ಲಿ 133 ರನ್‌ ದಾಖಲಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ  19 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ಸುಲಭ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲಿಯೇ ಲಿಜೆಲ್ಲೆ ಲೀ (5) ಅವರ ವಿಕೆಟ್ ಕಳೆದುಕೊಂಡಿತು. ಆದರೆ ನಂತರ ಆಡಿದ ಬ್ಯಾಟ್ಸ್‌ವುಮನ್‌ಗಳು ಎರಡಂಕಿಯ ಮೊತ್ತ ದಾಖಲಿಸುವ ಮೂಲಕ ತಂಡಕ್ಕೆ ಆಸರೆಯಾದರು. ನಾಲ್ಕನೇ ಕ್ರಮಾಂಕದಲ್ಲಿ ಆಡಿದ ಸುನೆ ಲುಸ್‌ (41, 34ಎ, 5ಬೌಂ) ಭಾರತದ ಬೌಲರ್‌ಗಳನ್ನು ಕಾಡಿದರು. ಚೊಲೆ ಟ್ರಿಟನ್‌ (34) ತಂಡವನ್ನು ಜಯದ ಹಾದಿಗೆ ಕೊಂಡೊಯ್ದರು.

ಭಾರತ ತಂಡದ ಬೌಲರ್‌ಗಳು ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ವಿಫಲರಾದರು. ಈ ನಡುವೆ ಪೂಜಾ ವಸ್ತ್ರಾಕರ್‌ (21ಕ್ಕೆ2) ಹಾಗೂ ಕರ್ನಾಟಕದ ರಾಜೇಶ್ವರಿ ಗಾಯಕವಾಡ್‌ (20ಕ್ಕೆ1) ಗಮನಸೆಳೆದರು.

ಹರ್ಮನ್‌ಪ್ರೀತ್ ಏಕಾಂಗಿ ಹೋರಾಟ: ಮೊದಲ ಎರಡು ಪಂದ್ಯಗಳಲ್ಲಿ ಸುಲಭ ಗೆಲುವು ದಾಖಲಿಸಿದ್ದ ಪ್ರವಾಸಿ ತಂಡ ಹ್ಯಾಟ್ರಿಕ್‌ ಜಯದ ವಿಶ್ವಾಸದೊಂದಿಗೆ ಕಣಕ್ಕಿಳಿಯಿತು. ಆದರೆ ಭಾರತ ಕೆಟ್ಟ ಆರಂಭ ಪಡೆಯಿತು. ಮಿಥಾಲಿ ರಾಜ್‌ ಖಾತೆ ತೆರೆಯದೇ ಮರಿಜನ್ನೆ ಕಪ್ ಅವರ ಬೌಲಿಂಗ್‌ನಲ್ಲಿ ಲಿಜೆಲ್ಲೆ ಲೀ ಅವರಿಗೆ ಕ್ಯಾಚ್ ನೀಡಿದರು.

ಎರಡನೇ ವಿಕೆಟ್ ಜೊತೆಯಾಟದಲ್ಲಿ ಸ್ಮೃತಿ ಮಂದಾನ (37) ಹಾಗೂ ಹರ್ಮನ್‌ಪ್ರೀತ್ ಕೌರ್ (48, 30ಎ, 6ಬೌಂ, 2ಸಿ) ಉತ್ತಮ ಇನಿಂಗ್ಸ್ ಕಟ್ಟುವ ಭರವಸೆ ಮೂಡಿಸಿದ್ದರು. ಆದರೆ ದಕ್ಷಿಣ ಆಫ್ರಿಕಾ ಬೌಲರ್‌ಗಳ ದಾಳಿಯನ್ನು ಅವರಿಗೆ ಎದುರಿಸಲು ಸಾಧ್ಯವಾಗಿಲ್ಲ. ಬೌಂಡರಿ ಹಾಗೂ ಸಿಕ್ಸರ್‌ಗಳ ಚಿತ್ತಾರ ಬಿಡಿಸಿದ ಹರ್ಮನ್‌ಪ್ರೀತ್ ಅವರನ್ನು ಶಬ್ನಿಮ್ ತಡೆದರು.

ನಂತರ ಕ್ರೀಸ್‌ಗೆ ಬಂದ ಜೆಮಿಮಾ ರಾಡ್ರಿಗಸ್‌ (6) ಹಾಗೂ ಕರ್ನಾಟಕದ ವೇದಾಕೃಷ್ಣಮೂರ್ತಿ (23) ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು.

ಭಾರತದ ಮೇಲಿನ ಕ್ರಮಾಂಕದ ಬ್ಯಾಟ್ಸ್‌ವುಮನ್‌ಗಳಿಗೆ ತಡೆಗೋಡೆಯಾದ ಆತಿಥೇಯ ತಂಡದ ಬೌಲರ್‌ ಶಬ್ನಿಮ್ ಕೇವಲ 30ರನ್‌ಗಳನ್ನು ನೀಡಿ ಐದು ವಿಕೆಟ್ ಕಬಳಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರು: ಭಾರತ: 17.5 ಓವರ್‌ಗಳಲ್ಲಿ 133 (ಸ್ಮೃತಿ ಮಂದಾನ 37, ಹರ್ಮನ್‌ಪ್ರೀತ್ ಕೌರ್‌ 48, ವೇದಾ ಕೃಷ್ಣಮೂರ್ತಿ 23; ಶಬ್ನಿಮ್ ಇಸ್ಮಾಯಿಲ್‌ 30ಕ್ಕೆ5).

ದಕ್ಷಿಣ ಆಫ್ರಿಕಾ: 19 ಓವರ್‌ಗಳಲ್ಲಿ 5 ವಿಕೆಟ್‌ಗೆ 134 (ಡೇನ್‌ ವಾನ್ ನೀಕರ್ಕ್‌ 26, ಸುನೆ ಲುಸ್‌ 41, ಚೊಲೆ ಟ್ರಿಟನ್‌ 34; ಪೂಜಾ ವಸ್ತ್ರಾಕರ್‌ 21ಕ್ಕೆ2, ರಾಜೇಶ್ವರಿ ಗಾಯಕವಾಡ್‌ 20ಕ್ಕೆ1, ಅನುಜಾ ಪಾಟೀಲ್‌ 44ಕ್ಕೆ1, ಪೂನಮ್ ಯಾದವ್‌ 19ಕ್ಕೆ1).

ಫಲಿತಾಂಶ: ದಕ್ಷಿಣ ಆಫ್ರಿಕಾ ಮಹಿಳೆಯರ ತಂಡಕ್ಕೆ 5 ವಿಕೆಟ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry