4
ಐ.ಟಿ ಅಧಿಕಾರಿಗಳ 107 ಪ್ರಶ್ನೆಗಳಿಗೆ ವಿವರಣೆ

ಮಗಳಿಗೆ ಸಾಲ ಕೊಟ್ಟಿರುವ ಡಿಕೆಶಿ!

Published:
Updated:

ಬೆಂಗಳೂರು: ಉದ್ಯಮ ಆರಂಭಿಸುವ ಉದ್ದೇಶಕ್ಕೆ ಮಗಳು ಐಶ್ವರ್ಯಾಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಾಲ ನೀಡಿದ್ದಾರೆ.

ಆದಾಯ ತೆರಿಗೆ(ಐ.ಟಿ) ಅಧಿಕಾರಿಗಳು ವಿಚಾರಣೆ ವೇಳೆ ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಈ ಉತ್ತರ ನೀಡಿದ್ದಾರೆ.

‘ಶಿಕ್ಷಣ ಮುಗಿಸಿರುವ ನನ್ನ ಮಗಳು ಐಶ್ವರ್ಯಾ ಸ್ವತಂತ್ರವಾಗಿ ಉದ್ಯಮ ಆರಂಭಿಸಿ ಬೆಳೆಯಬೇಕು ಎಂಬುದು ನನ್ನ ಆಸೆ. ಹೀಗಾಗಿ ಸಾಲ ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.

‘ನನ್ನ ಹಿತೈಷಿಗಳಿಂದಲೂ ಆಕೆ ಸಾಲ ಪಡೆದಿದ್ದಾಳೆ. ಕೆಫೆ ಕಾಫಿ ಡೇಯಿಂದಲೂ ಸಾಲ ಪಡೆದಿರಬಹುದು. ‘ಸೋಲ್‌ ಸ್ಪೇಸ್ ಅರೇನಾ’ದಲ್ಲಿ ಶೇ 50ರಷ್ಟು ಶೇರು ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದಾಳೆ. ಅದನ್ನು ಅಕೌಂಟ್ ಪುಸ್ತಕದಲ್ಲಿ ನಮೂದಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ನಾನು ಮೊದಲಿನಿಂದಲೂ ಕೃಷಿಕ. ಬಳಿಕ ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡುತ್ತಿದ್ದೇನೆ. ಗ್ರಾನೈಟ್ ಕ್ವಾರಿಗಳೂ ಇವೆ. ಇವುಗಳಿಂದ ಆದಾಯ ಬರುತ್ತಿದೆ. ಜಂಟಿ ಪಾಲುದಾರಿಕೆಯಲ್ಲಿ ಕೆಲವು ಯೋಜನೆಗಳು ಪ್ರಗತಿಯಲ್ಲಿವೆ. ಅವುಗಳು ಪೂರ್ಣಗೊಂಡ ಬಳಿಕ ದೊಡ್ಡ ಪ್ರಮಾಣದಲ್ಲಿ ಆದಾಯದ ಪಾಲು ಬರಲಿದೆ’ ಎಂದಿದ್ದಾರೆ.

‘ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಟ್ರಸ್ಟ್(ಎನ್‍ಇಎಫ್), ಅಪೋಲೋ ಎಜುಕೇಷನ್ ಟ್ರಸ್ಟ್, ಡಿಕೆಎಸ್ ಚಾರಿಟೆಬಲ್ ಟ್ರಸ್ಟ್ ಇದೆ. ಎನ್‍ಇಎಫ್ ಟ್ರಸ್ಟ್ ಅಡಿಯಲ್ಲಿ ಎಂಜಿನಿಯರಿಂಗ್ ಕಾಲೇಜು, ನರ್ಸಿಂಗ್ ಕಾಲೇಜು, ಎಂಬಿಎ ಕಾಲೇಜುಗಳೂ ಇವೆ. ನನ್ನ ಅಥವಾ ಕುಟುಂಬ ಸದಸ್ಯರ ಹೆಸರಿನಲ್ಲಿ ಯಾವುದೇ ಬ್ಯಾಂಕ್‌ನಲ್ಲಿ ಲಾಕರ್‍ ಇಲ್ಲ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

‘ಈಗಲ್‍ಟನ್ ರೆಸಾರ್ಟ್‍ನಲ್ಲಿ ನಾನು ತಂಗಿದ್ದ ಕೊಠಡಿಯಲ್ಲಿ ದೊರೆತಿರುವ ದಾಖಲೆಗಳು ನಮ್ಮ ಕುಟುಂಬಕ್ಕೆ ಖರೀದಿಸಬೇಕಿದ್ದ ಆಭರಣಕ್ಕೆ ಸಂಬಂಧಿಸಿದ್ದವಾಗಿವೆ. ನನ್ನ ಸ್ವಂತ ವ್ಯವಹಾರ ಮತ್ತು ಪಕ್ಷದ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಪತ್ರಗಳು ಇವೆ’ ಎಂದು ಹೇಳಿಕೊಂಡಿದ್ದಾರೆ.

‌‘ನನ್ನ ಪತ್ನಿಯ ಅಕ್ಕನ ಗಂಡ ಶಶಿಕುಮಾರ್ ಮತ್ತು ಅವರು ಮಗನಿಗೆ ಸ್ವಂತ ಉದ್ಯಮ ಆರಂಭಿಸಲು ತಿಳಿಸಿದ್ದೆ. ಹಣಕಾಸಿನ ನೆರವು ನೀಡುವಂತೆ ಸ್ನೇಹಿತ ಸಚಿನ್ ನಾರಾಯಣ್ ಅವರಿಗೆ ತಿಳಿಸಿದ್ದೆ. ಮೈಸೂರು ಮಹಾರಾಜ ಕುಟುಂಬದ ಆಸ್ತಿ ಖರೀದಿಸುವ ಉದ್ದೇಶಕ್ಕಾಗಿ ಈಗಿನಿಂದಲೇ ಬಾಡಿಗೆ ಒಪ್ಪಂದ ಮಾಡಿಕೊಂಡಿದ್ದಾರೆ’ ಎಂದರು.

ವಿಚಾರಣೆ ವೇಳೆ 107 ಪ್ರಶ್ನೆಗಳನ್ನು ಕೇಳಿರುವ ಅಧಿಕಾರಿಗಳು, ಉತ್ತರಗಳ ಸಹಿತ ದಾಖಲೆಗಳನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಹೆಬ್ಬಾಳ್ಕರ್ ಜೊತೆ ಹಣಕಾಸಿನ ವ್ಯವಹಾರ ಇಲ್ಲ

‘ಲಕ್ಷ್ಮೀ ಹೆಬ್ಬಾಳ್ಕರ್ ನಮ್ಮ ಪಕ್ಷದವರು. ಅವರೊಂದಿಗಾಗಲೀ, ಅವರ ಸಹೋದರ ಚೆನ್ನಾರಾಜ ಜೊತೆಗಾಗಲಿ ಹಣಕಾಸಿನ ವ್ಯವಹಾರ ಇಲ್ಲ’ ಎಂದು ಡಿ.ಕೆ. ಶಿವಕುಮಾರ್ ವಿಚಾರಣೆ ವೇಳೆ ಸ್ಪಷ್ಟಪಡಿಸಿದ್ದಾರೆ.

‘ನವದೆಹಲಿಯ ಕರ್ನಾಟಕ ಭವನದಲ್ಲಿ ಸಮನ್ವಯಾಧಿಕಾರಿಯಾಗಿರುವ ಅಂಜನೇಯಲು ಜೊತೆ ನಿರಂತರ ಸಂಪರ್ಕದಲ್ಲಿರುತ್ತೇನೆ. ಆದರೆ, ಹಣಕಾಸು ವ್ಯವಹಾರ ನಡೆಸಿರುವ ಬಗ್ಗೆ ನನಗೆ ನೆನಪಿಲ್ಲ’ ಎಂದಿದ್ದಾರೆ.

‘ಸ್ನೇಹಿತ ಸಚಿನ್ ನಾರಾಯಣ ಜೊತೆ ಎಂಟತ್ತು ವರ್ಷದಿಂದ ವ್ಯವಹಾರ ನಡೆಸುತ್ತಿದ್ದೇನೆ.  ಚೆಕ್ ಮೂಲಕ ವಹಿವಾಟು ನಡೆಸಲಾಗಿದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry