ಬುಧವಾರ, ಡಿಸೆಂಬರ್ 11, 2019
21 °C

ಉದ್ಯೋಗಕ್ಕೇ ನಮ್ಮ ಮತ– ಯುವಜನರ ಪ್ರತಿಜ್ಞೆ

Published:
Updated:
ಉದ್ಯೋಗಕ್ಕೇ ನಮ್ಮ ಮತ– ಯುವಜನರ ಪ್ರತಿಜ್ಞೆ

ಬೆಂಗಳೂರು: ‘ಜಾತಿ, ಧರ್ಮಗಳ ಆಮಿಷಕ್ಕೆ ಒಳಗಾಗದೆ, ಸುಭದ್ರ ಉದ್ಯೋಗದ ಖಾತ್ರಿ ನೀಡುವ ಮತ್ತು ಯುವಜನರ ಪ್ರಣಾಳಿಕೆ ಒಪ್ಪಿಕೊಳ್ಳುವ ಪಕ್ಷಕ್ಕೆ ನಮ್ಮ ಮತ’ ಎಂದು ಯುವಜನರು ಪ್ರತಿಜ್ಞೆ ಸ್ವೀಕರಿಸಿದರು.

‘ಉದ್ಯೋಗಕ್ಕಾಗಿ ಯುವಜನರು’ ಸಂಘಟನೆ ಇಲ್ಲಿ ಭಾನುವಾರ ಆಯೋಜಿಸಿದ್ದ ಉದ್ಯೋಗಾಕಾಂಕ್ಷಿಗಳ ಮತ್ತು ಗುತ್ತಿಗೆ ನೌಕರ ಪ್ರತಿನಿಧಿಗಳ ಸಮಾವೇಶದಲ್ಲಿ ಯುವಜನರ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.

ಕರ್ನಾಟಕ ಜನಶಕ್ತಿ ಸಂಘಟನೆ ಕಾರ್ಯಕಾರಿ ಸದಸ್ಯ ಡಾ. ವಾಸು ಮಾತನಾಡಿ, ‘ಯುವ ಪ್ರಣಾಳಿಕೆ ಒಪ್ಪಿಕೊಳ್ಳುವ, ಕಾಲಮಿತಿಯೊಳಗೆ ಉದ್ಯೋಗ ಸೃಷ್ಟಿಸುವ ನೀಲನಕ್ಷೆ ಮುಂದಿಡುವ ಪಕ್ಷವನ್ನು ಚುನಾವಣೆಯಲ್ಲಿ ಬೆಂಬಲಿಸಲು ಯುವ ಸಮುದಾಯ ನಿರ್ಧರಿಸಿದೆ. ಮೂರೂ ರಾಜಕೀಯ ಪಕ್ಷಗಳಿಗೆ ಒಂದು ತಿಂಗಳ ಗಡುವು ನೀಡಲಾಗಿದೆ. ಅಷ್ಟರಲ್ಲಿ ಪಕ್ಷಗಳು ನಿಲುವು ಪ್ರಕಟಿಸಬೇಕು. ನಮ್ಮ ಬೆಂಬಲ ಯಾರಿಗೆ ಎಂಬುದನ್ನು ಮಾರ್ಚ್‌ 25ರಂದು ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಯುವ ಯುವಜನರ ಮಹಾಅಧಿವೇಶನದಲ್ಲಿ ಬಹಿರಂಗಪಡಿಸಲಿದ್ದೇವೆ’ ಎಂದರು.

‘ಗುತ್ತಿಗೆ ಆಧಾರದ ನೌಕರಿ ಎಂಬ ಆಧುನಿಕ ಜೀತಪದ್ಧತಿ ದೇಶವನ್ನು ಆವರಿಸಿಕೊಳ್ಳುತ್ತಿದೆ. ಸಂಘಟನೆ ಸ್ಥಾಪಿಸುವುದು ನೌಕರರು ಹಾಗೂ ಉದ್ಯೋಗಿಗಳಿಗೆ ಸಂವಿಧಾನದತ್ತವಾಗಿ ಸಿಕ್ಕಿರುವ ಹಕ್ಕು. ಉದ್ಯೋಗದಾತರು ಬರೀ ₹2 ಬೆಲೆಯ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಬರೆಸಿಕೊಳ್ಳುವ ಮೂಲಕ ಈ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳುತ್ತಿದ್ದಾರೆ. ಮಹಾತ್ಮರ ತ್ಯಾಗ ಬಲಿದಾನದಿಂದ ಲಭಿಸಿದ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಅಪಮಾನ ಮಾಡಿದಂತಲ್ಲವೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ, ‘ರೈತರು ಮತ್ತು ಯುವಜನರಿಗೆ ವಿರುದ್ಧವಾದ ನೀತಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ರೂಪುಗೊಳ್ಳುತ್ತಿವೆ. ಆದರೆ, ಇವುಗಳನ್ನು ನಮ್ಮ ಸರ್ಕಾರಗಳು ಪ್ರಶ್ನಿಸದೆಯೇ ಒಪ್ಪಿಕೊಳ್ಳುತ್ತಿವೆ. ಈಗ ಯುವಜನರು ಸಿಡಿದೇಳುತ್ತಿದ್ದಾರೆ. ರಾಜ್ಯದಲ್ಲಿ ಆರಂಭವಾಗಿರುವ ಯುವಜನರ ಆಂದೋಲನವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುತ್ತೇವೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ‘ಯುವಜನರ ಪ್ರಣಾಳಿಕೆಯಲ್ಲಿರುವ ಯಾವುದೇ ವಿಷಯವನ್ನೂ ತೆಗೆದುಹಾಕುವಂತಿಲ್ಲ. ಇವುಗಳನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲು ಪ್ರಮುಖರೊಂದಿಗೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಯುವಜನರ ಪ್ರಣಾಳಿಕೆಗೆ ಪ್ರತಿಕ್ರಿಯಿಸುವಂತೆ ರಾಜ್ಯದ ಮೂರು ಪ್ರಮುಖ ಪಕ್ಷಗಳಿಗೂ ಆಹ್ವಾನ ನೀಡಲಾಗಿತ್ತು. ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದಿಂದ ಯಾರೂ ಬಂದಿಲ್ಲ. ಇದು ಖಂಡನೀಯ. ಈ ಎರಡು ಪಕ್ಷಗಳು ಒಂದು ವಾರದೊಳಗೆ ನಮ್ಮ ಪ್ರಣಾಳಿಕೆಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಬೇಕು’ ಎಂದು ಸಂಘಟನೆಯ ಸಂಚಾಲಕ ಮುತ್ತುರಾಜ್‌ ಗಡುವು ನೀಡಿದರು.

ಪ್ರತಿಕ್ರಿಯಿಸಿ (+)