ಬುಧವಾರ, ಡಿಸೆಂಬರ್ 11, 2019
23 °C

ಹಿಂದುಳಿದ ವರ್ಗಗಳು: ಮೀನಿನ ಹೆಜ್ಜೆ ಹುಡುಕುವ ಕಷ್ಟ...

Published:
Updated:
ಹಿಂದುಳಿದ ವರ್ಗಗಳು: ಮೀನಿನ ಹೆಜ್ಜೆ ಹುಡುಕುವ ಕಷ್ಟ...

ಕರ್ನಾಟಕದ ಚುನಾವಣಾ ರಾಜಕಾರಣದಲ್ಲಿ ‘ಅತ್ಯಂತ ಹಿಂದುಳಿದ’ ವರ್ಗಗಳ ಒಲವು–ನಿಲುವುಗಳನ್ನು ಸ್ಪಷ್ಟವಾಗಿ ಗುರುತಿಸುವುದು ಕಷ್ಟದ ಕೆಲಸ. ಪ್ರಜಾಪ್ರಭುತ್ವದ ಪ್ರಯೋಗದಲ್ಲಿ ಈ ವರ್ಗಗಳ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ನಮ್ಮ ಆಳುವ ವರ್ಗ ಮನಗಾಣುವ ವೇಳೆಗೆ ಸ್ವಾತಂತ್ರ್ಯದ ಬೆಳ್ಳಿಹಬ್ಬದ ಆಚರಣೆಯೇ ಮುಗಿದಿತ್ತು. ಮೈಸೂರು ರಾಜ್ಯ ಏಳು ಮುಖ್ಯಮಂತ್ರಿಗಳನ್ನು ಕಂಡಿತ್ತು. ಆ ಏಳೂ ಮುಖ್ಯಮಂತ್ರಿಗಳು ಪ್ರಬಲ ಸಮುದಾಯಗಳಿಗೆ ಸೇರಿದವರಾಗಿದ್ದರು.

‘ಹಿಂದುಳಿದವರು’ ಎಂದು ಹೇಳುವಾಗ ಇಲ್ಲಿ ಒಂದು ಸ್ಪಷ್ಟೀಕರಣ ಅಗತ್ಯ. ಒ.ಬಿ.ಸಿ. ಎಂದೇ ಜನಜನಿತವಾದ ‘ಇತರೆ ಹಿಂದುಳಿದ ವರ್ಗ’ ಎನ್ನುವ ವರ್ಗೀಕರಣದ ವ್ಯಾಪ್ತಿಗೆ ರಾಜಕೀಯವಾಗಿ ಪ್ರಬಲ ಜಾತಿಗಳಾದ ಲಿಂಗಾಯತರು ಮತ್ತು ಒಕ್ಕಲಿಗರು ಕೂಡ ಸೇರಿದ್ದಾರೆ. ಆದರೆ ಈ ಎರಡೂ ಪ್ರಬಲ ಸಮುದಾಯಗಳನ್ನು ಬಿಟ್ಟು ಪ್ರವರ್ಗ–1 ಮತ್ತು ಪ್ರವರ್ಗ–2ರ ವ್ಯಾಪ್ತಿಗೆ ಬರುವ ಸುಮಾರು 200 ಜಾತಿಗಳ ರಾಜಕೀಯ ನಡೆ ಅರ್ಥಮಾಡಿಕೊಳ್ಳುವ ಪ್ರಯತ್ನ ಇಲ್ಲಿದೆ.

ದಲಿತ ಸಮುದಾಯಕ್ಕೆ ಮೀಸಲಾತಿ ಕಾರಣಕ್ಕೆ ಶಾಸನಸಭೆಗೆ ಪ್ರವೇಶ ಸಿಕ್ಕಿತ್ತು. ಆದರೆ ಹಿಂದುಳಿದ ವರ್ಗಗಳಿಗೆ ಅಂತಹುದೊಂದು ಅವಕಾಶ ಸುಲಭಸಾಧ್ಯ ಆಗಿರಲಿಲ್ಲ. ದೇವರಾಜ ಅರಸು 1972ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಅತ್ಯಂತ ಹಿಂದುಳಿದ ಸಣ್ಣಪುಟ್ಟ ಜಾತಿಗಳಿಗೂ ವಿಧಾನಸೌಧದ ಬಾಗಿಲು ತೆರೆದುಕೊಂಡಿತು. ದಲಿತ–ಹಿಂದುಳಿದ ವರ್ಗಗಳಲ್ಲಿ ನಾಯಕತ್ವ ಬೆಳೆಯಲು ಅರಸು ಆಡಳಿತ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಪೋಷಣೆ ದೊರೆಯಿತು. ಪರಿಣಾಮವಾಗಿ ಎಸ್‌. ಬಂಗಾರಪ್ಪ, ಎಂ. ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್‌, ಬಿ.ಎ. ಮೊಯಿದ್ದೀನ್‌, ಎಂ. ರಘುಪತಿ, ಎಚ್‌. ವಿಶ್ವನಾಥ್‌ರಂಥ ಅನೇಕರು ರಾಜಕೀಯದಲ್ಲಿ ನೆಲೆಯೂರಿದರು.

ಅರಸು ಅವರ ಮುಂಗಾಣ್ಕೆಯ ಫಲವಾಗಿ ಶಾಸನಸಭೆಯ ಸಾಮಾಜಿಕ ಸಂರಚನೆ ಬದಲಾಯಿತು. ಪ್ರಬಲ ಸಮುದಾಯಗಳ ಆಡುಂಬೊಲ ಆಗಿದ್ದ ಶಾಸನಸಭೆಯಲ್ಲಿ ದೇವಾಡಿಗದಂಥ (ಮೊಯಿಲಿ) ಅತಿಸಣ್ಣ ಜಾತಿಗೂ ಪ್ರಾತಿನಿಧ್ಯ ದೊರಕಿತು. ಹಿಂದುಳಿದ ವರ್ಗಗಳಿಗೆ ರಾಜಕೀಯ ಅಧಿಕಾರ ದೊರಕಿಸಿಕೊಟ್ಟ ಅರಸು ಆಡಳಿತ ಅವಧಿಯಲ್ಲೇ ಹಾವನೂರು ವರದಿಯೂ ಜಾರಿಗೆ ಬಂದಿತು. ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಿದ ಈ ಪ್ರಯೋಗವು, ಅಂಚಿಗೆ ಸರಿಸಿದ್ದ ಸಮುದಾಯಗಳ ಯುವ ಪೀಳಿಗೆಗೆ ಪ್ರಜಾಪ್ರಭುತ್ವದ ಹಲವು ಪ್ರಯೋಜನಗಳ ಬಾಗಿಲು ತೆರೆಯಿತು. ಅವರಲ್ಲಿ ರಾಜಕೀಯ ಎಚ್ಚರ ಮೂಡಲು ಕಾರಣವಾಯಿತು.

ಕರ್ನಾಟಕದಲ್ಲಿ ಭೂಮಾಲೀಕರೆಂದರೆ ಬಹುಮಟ್ಟಿಗೆ ಲಿಂಗಾಯತರು ಮತ್ತು ಒಕ್ಕಲಿಗರೇ. ರಾಜಕೀಯ ಅಧಿಕಾರವೂ ಅವರ ಕೈಯಲ್ಲಿಯೇ ಇತ್ತು. ಇಂತಹ ಪ್ರಬಲ ಜಾತಿಗಳ ಎದುರು ‘ಅದೃಶ್ಯ ಮತದಾರ’ರನ್ನು ಅರಸು ರಕ್ಷಾಕವಚ ಮಾಡಿಕೊಂಡರು. ಆದರೆ ತಮ್ಮ ರಾಜಕೀಯ ‘ಕ್ರಾಂತಿ’ಗೆ ಹಿಂದುಳಿದ ವರ್ಗಗಳ ಆಶೋತ್ತರಗಳನ್ನು ಸೇರಿಸಿಕೊಂಡು ರಚನಾತ್ಮಕ ದಿಕ್ಕು ತೋರಿಸಲು ಹಾಗೂ ಈ ಹೊಸ ರಾಜಕೀಯ ಶಕ್ತಿಯನ್ನು ಸಮರ್ಥವಾಗಿ ನಿಭಾಯಿಸಲು ಅವರಿಗೆ ಆಗಲಿಲ್ಲ. ಹಾಗಾಗಿಯೇ ಅವರ ಈ ಪ್ರಯೋಗವು ಹಿಂದುಳಿದ ವರ್ಗಗಳ ಆಲೋಚನಾ ಕ್ರಮದಲ್ಲಿ, ಅವರ ಸಾಮಾಜಿಕ–ಆರ್ಥಿಕ ಸ್ಥಿತಿಗತಿಯಲ್ಲಿ ಸಾಮೂಹಿಕ ನೆಲೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನೇನೂ ತರಲಿಲ್ಲ. ಅಲಕ್ಷಿತ ಸಮುದಾಯಗಳ ಕೆಲವರಿಗಷ್ಟೇ ಅವಕಾಶ ಸಿಕ್ಕಿತು. ಹಿಂದುಳಿದವರು ರಾಜಕೀಯ ಅಧಿಕಾರ ಪಡೆಯಬೇಕಾದರೆ ಅದಕ್ಕೆ ಸಂಘಟಿತರಾಗುವುದು ಅನಿವಾರ್ಯ ಎಂಬ ಸಂದೇಶವನ್ನು ಅರಸು ರಾಜಕಾರಣ ಸಾರಿತು. ಆದರೆ ಅದನ್ನು ಸಾಧ್ಯವಾಗಿಸುವ ಪ್ರಯತ್ನ ಅಲ್ಲಿಗೇ ನಿಂತಿತು. ಹಾಗಾಗಿ ಆ ಆಶಯ ಪೂರ್ಣಪ್ರಮಾಣದಲ್ಲಿ ಇವತ್ತಿಗೂ ನೆರವೇರಿಲ್ಲ.

ಹಿಂದುಳಿದವರಲ್ಲಿನ ಅತಿಸಣ್ಣ ಜಾತಿಗಳಿಗೂ ಶಾಸನಸಭೆಯ ಬಾಗಿಲು ಎಪ್ಪತ್ತರ ದಶಕದಲ್ಲೇ ತೆರೆದುಕೊಂಡರೂ ಆ ವರ್ಗದ ಒಬ್ಬರಿಗೆ ಮುಖ್ಯಮಂತ್ರಿ ಗಾದಿ ಸಿಗಬೇಕಾದರೆ 1990ರವರೆಗೂ ಕಾಯಬೇಕಾಯಿತು. ಕರ್ನಾಟಕ ಕಂಡ ಹಿಂದುಳಿದ ವರ್ಗದ ಮೊದಲ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ. ಆದರೆ ಅವರಿಗೆ ಅಧಿಕಾರದಲ್ಲಿ ಉಳಿಯಲು ಸಾಧ್ಯವಾದದ್ದು ಬರೀ 25 ತಿಂಗಳು. ಊಳಿಗಮಾನ್ಯ ಯಜಮಾನಿಕೆ ರಾಜಕಾರಣವು ಅಧಿಕಾರದಿಂದ ದೂರವಾದ ಅಸಹನೆಯನ್ನು ಭಿನ್ನಮತೀಯ ಚಟುವಟಿಕೆಗಳ ಮೂಲಕ ತೀರಿಸಿಕೊಂಡಿತು.

ವಿಪರ್ಯಾಸದ ಸಂಗತಿಯೆಂದರೆ ಅದಕ್ಕೆ ಬಳಕೆಯಾದದ್ದು ಮತ್ತೆ ಇದೇ ಹಿಂದುಳಿದ ವರ್ಗದಿಂದಲೇ ಬಂದ ಮೊಯಿಲಿ. ಬಂಗಾರಪ್ಪ ಅಧಿಕಾರ ಬಿಟ್ಟುಕೊಡಬೇಕಾದ ಸ್ಥಿತಿ ಎದುರಾಯಿತು. ಆ ಜಾಗಕ್ಕೆ ಮೊಯಿಲಿ ಬಂದರು. ನಿರೀಕ್ಷೆಯಂತೆ ಮತ್ತೆ ಅದೇ ಶಕ್ತಿಗಳು ಮೊಯಿಲಿ ವಿರುದ್ಧವೂ ಭಿನ್ನಮತ ಸ್ಫೋಟಗೊಳಿಸಿದವು. ಆದರೆ ಅಷ್ಟರಲ್ಲಾಗಲೇ ಕಾಂಗ್ರೆಸ್‌ ಆಡಳಿತದ ಮೂರು ವರ್ಷಗಳು ಮುಗಿದಿದ್ದವು. ಉಳಿದ ಅವಧಿಗೆ ಮುಳ್ಳಿನ ಮೇಲಿನ ಬಟ್ಟೆಯಂತೆ ಮೊಯಿಲಿ ಹೇಗೋ ಅಧಿಕಾರ ನೂಕಿದರು.

ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್‌ ಬೆಂಬಲವೂ ಅವರ ನೆರವಿಗೆ ಬಂತು. ‌ಇಲ್ಲಿ ಒಂದು ಅಂಶವನ್ನು ಉಲ್ಲೇಖಿಸುವುದು ಅಗತ್ಯ. ಹಿಂದುಳಿದ ಸಮುದಾಯದಿಂದ ಮುಖ್ಯಮಂತ್ರಿಗಳಾದ ಬಂಗಾರಪ್ಪ, ಮೊಯಿಲಿ, ಸಿದ್ದರಾಮಯ್ಯ ಈ ಮೂವರೂ ಕಾಂಗ್ರೆಸ್ಸಿಗರು. ಅತ್ಯಂತ ಕಡಿಮೆ ಸಂಖ್ಯಾಬಲದ ಅರಸು (ದೇವರಾಜ ಅರಸು) ಮತ್ತು ರಜಪೂತ (ಧರ್ಮಸಿಂಗ್‌) ಸಮುದಾಯಕ್ಕೆ ಅವಕಾಶ ಸಿಕ್ಕಿದ್ದು ಕೂಡ ಕಾಂಗ್ರೆಸ್‌ ಆಡಳಿತ ಅವಧಿಯಲ್ಲೇ.

ದಲಿತರು ಹಾಗೂ ಹಿಂದುಳಿದ ವರ್ಗಗಳ ಮನೋಧೋರಣೆ ಬಗ್ಗೆ ಇಲ್ಲಿ ಒಂದೆರಡು ಮಾತುಗಳನ್ನು ಹೇಳಬೇಕು. ಜಾತಿ ಪ್ರಜ್ಞೆ ಎಂಬುದು ದಲಿತರಲ್ಲಿಯೂ ಇದೆ, ಹಿಂದುಳಿದ ಜಾತಿಗಳ ಜನರಲ್ಲಿಯೂ ಇದೆ. ಆದರೆ ದಲಿತರಲ್ಲಿ ಇರುವಂತಹ ‘ಅಸ್ಮಿತೆ’ ಹಿಂದುಳಿದ ಜಾತಿಗಳಲ್ಲಿ ಕಾಣಿಸುವುದಿಲ್ಲ. ಈ ಜಾತಿಗಳು ಒಂದು ಏಕರೂಪಿ ಸಮೂಹವಾಗಿ ಗೋಚರಿಸುವುದಿಲ್ಲ. ವಿವಿಧ ಜಾತಿಗಳ ನಡುವೆ ಮೇಲು- ಕೀಳು ಎಂಬ ಶ್ರೇಣೀಕರಣ ಇದೆ. ಅನ್ಯಜಾತಿಗಳ ವಿಚಾರ ಬದಿಗಿರಲಿ, ಒಂದೇ ಜಾತಿಯ ಒಳಪಂಗಡಗಳ ನಡುವೆಯೇ ವೈವಾಹಿಕ ಸಂಬಂಧಗಳು ಸಹಜ ಎಂಬಂತೆ ನಡೆಯಲು ಆಸ್ಪದವಿಲ್ಲ.

ಹಿಂದುಳಿದ ಜಾತಿಗಳ ಜನರ ನಡುವೆ ಏಕರೂಪದ ಪೂಜಾ ಪದ್ಧತಿ, ಒಬ್ಬ ವ್ಯಕ್ತಿಯನ್ನು ತಮ್ಮ ಐಕಾನ್ ಎಂದು ಪರಿಗಣಿಸುವುದು... ಇವು ಯಾವುವೂ ಇಲ್ಲ. ದಲಿತ ಪ್ರಜ್ಞೆಯು ಹೋರಾಟದ ಹಾಗೂ ತಾತ್ವಿಕತೆಯ ರೂಪ ಪಡೆದಿರುವ ಮಾದರಿಯಲ್ಲಿ ‘ಶೂದ್ರ’ ಪ್ರಜ್ಞೆಯು ತಾತ್ವಿಕತೆಯ ರೂಪವನ್ನಾಗಲೀ, ಹೋರಾಟದ ಕಾರ್ಯಸೂಚಿಯನ್ನಾಗಲೀ ಪಡೆದುಕೊಂಡಿಲ್ಲ.

ಹಿಂದುಳಿದ ಜಾತಿಗಳನ್ನು ಏಕಸೂತ್ರದಲ್ಲಿ ಸಂಘಟಿಸುವ ನಾಯಕತ್ವದ ಕೊರತೆಯೂ ಇದಕ್ಕೊಂದು ಕಾರಣ ಆಗಿರಬಹುದು. ದಲಿತರು ಹಿಂದಿನಿಂದಲೂ ಸಾರ್ವಜನಿಕವಾಗಿ ಅನುಭವಿಸಿದ ಅವಮಾನಗಳನ್ನು, ಆಚರಣೆ–ಸಂಪ್ರದಾಯಗಳಲ್ಲಿ ಹೊರಗುಳಿಯುವಿಕೆಯ ಸಂಕಷ್ಟಗಳನ್ನು ಹಿಂದುಳಿದ ವರ್ಗದ ಜನ ಅನುಭವಿಸಿಲ್ಲ.

ನಾಯಕತ್ವ ಹುಟ್ಟಿಕೊಳ್ಳದೇ ಇರುವುದಕ್ಕೆ ಈ ಕಾರಣವೂ ಇದ್ದಿರಬಹುದು. ಮಿತಿಗಳ ನಡುವೆಯೇ ರೂಪುಗೊಂಡ ನಾಯಕರಲ್ಲಿ ಕೂಡ ಒಂದು ಧ್ಯೇಯಕ್ಕಾಗಿ ಹೋರಾಟ ನಡೆಸುವ ಛಲ ಹಾಗೂ ದೂರದೃಷ್ಟಿ ಕಾಣಲಿಲ್ಲ. ಬದಲಿಗೆ, ಅಧಿಕಾರಕ್ಕಾಗಿ ಘರ್ಷಣೆ ನಡೆಯಿತು. ಬಂಗಾರಪ್ಪ- ಮೊಯಿಲಿ ನಡುವಣ ಭಿನ್ನಮತ, ಜನಾರ್ದನ ಪೂಜಾರಿ- ಮೊಯಿಲಿ ನಡುವಿನ ಗುದ್ದಾಟ, ಕಾಗೋಡು ತಿಮ್ಮಪ್ಪ- ಬಂಗಾರಪ್ಪ ನಡುವಿನ ವೈಮನಸ್ಯ, ಎಚ್. ವಿಶ್ವನಾಥ್ ಮತ್ತು ಸಿದ್ದರಾಮಯ್ಯ ನಡುವೆ ಮೂಡಿದ ಬಿರುಕು... ಹೀಗೆ ವಿವಿಧ ಕಾಲಘಟ್ಟಗಳಲ್ಲಿ ಹಿಂದುಳಿದ ವರ್ಗಗಳ ನಾಯಕರು ಒಬ್ಬರ ವಿರುದ್ಧ ಇನ್ನೊಬ್ಬರು ಕತ್ತಿ ಮಸೆದಿದ್ದನ್ನು ಉಲ್ಲೇಖಿಸಬಹುದು. ಹಿಂದುಳಿದ ವರ್ಗಗಳ ಏಕತೆಗೆ ಹಿನ್ನಡೆ ಆಗಿದ್ದು ಇದರಿಂದಲೇ.

ಜೆ.ಎಚ್. ಪಟೇಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಎಚ್.ಡಿ. ದೇವೇಗೌಡ ದಾಳ ಉರುಳಿಸಿದಾಗ, ಎಂ.ಪಿ. ಪ್ರಕಾಶ್ ನೇತೃತ್ವದಲ್ಲಿ ಲಿಂಗಾಯತ ಶಾಸಕರು ಬೆಂಗಳೂರಿನಲ್ಲಿ ‘ಕಾವೇರಿ’ಯಿಂದ ‘ಅನುಗ್ರಹ’ದವರೆಗೆ ಶಕ್ತಿಪ್ರದರ್ಶನ ನಡೆಸಿದ್ದು ನೆನಪು. ಪಟೇಲ್‌ ಆಗ ‘ಕಾವೇರಿ’ಯಲ್ಲಿ ವಾಸವಿದ್ದರು. ಪಕ್ಕದಲ್ಲಿಯೇ ಇರುವ ‘ಅನುಗ್ರಹ’  ಆಗ ಸಚಿವರಾಗಿದ್ದ ಎಚ್‌.ಡಿ.ರೇವಣ್ಣ ನಿವಾಸವಾಗಿತ್ತು.

ದೇವೇಗೌಡರ ಕಾರ್ಯಸ್ಥಾನವೂ ಆಗಿತ್ತು. ಬಿ.ಎಸ್. ಯಡಿಯೂರಪ್ಪ ಅವರ ಕುರ್ಚಿಗೆ ಕಂಟಕ ಎದುರಾದಾಗ, ಲಿಂಗಾಯತ ಮಠಾಧೀಶರಿಂದಲೇ ಆಕ್ರೋಶ ವ್ಯಕ್ತವಾಯಿತು. ಡಿ.ವಿ. ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯಡಿಯೂರಪ್ಪ ಮುಂದಾದಾಗ, ಸದಾನಂದಗೌಡ ಅವರಿಗೆ ಒಕ್ಕಲಿಗ ಮುಖಂಡರಿಂದ ಪಕ್ಷಭೇದ ಮೀರಿ ಬೆಂಬಲ ದೊರೆಯಿತು. ಜೊತೆಯಲ್ಲೇ ಒಕ್ಕಲಿಗ ಮಠಾಧೀಶರೂ ನೈತಿಕ ಬೆಂಬಲ ನೀಡಿದರು. ಆದರೆ, ಹಿಂದುಳಿದ ಜಾತಿಗಳ ನಾಯಕರ ಅಧಿಕಾರಕ್ಕೆ ಕಂಟಕ ಎದುರಾದಾಗ ಅವರ ಬೆಂಬಲಕ್ಕೆ ಎಲ್ಲ ಹಿಂದುಳಿದ ಜಾತಿಗಳಿರಲಿ, ಅವರದೇ ಸಮುದಾಯದವರೂ ಗಟ್ಟಿಯಾಗಿ ನಿಲ್ಲಲಿಲ್ಲ. ಹಿಂದುಳಿದ ವರ್ಗಗಳಲ್ಲಿ ಏಕತೆ ಮತ್ತು ರಾಜಕೀಯ ಪ್ರಜ್ಞೆಯ ಕೊರತೆಯನ್ನು ಇದು ತೋರಿಸುತ್ತದೆ.

ಪ್ರಾದೇಶಿಕವಾಗಿ ಚದುರಿಹೋಗಿರುವುದು ಕೂಡ ಹಿಂದುಳಿದ ವರ್ಗದ ನೂರಾರು ಜಾತಿಗಳಿಗೆ ರಾಜಕೀಯ ಶಕ್ತಿ ಪಡೆಯಲು ಅಡ್ಡಿಯಾಗಿದೆ. ದಕ್ಷಿಣ ಕನ್ನಡ, ಶಿವಮೊಗ್ಗದಂತಹ ಕೆಲವು ಜಿಲ್ಲೆಗಳ ಕೆಲವೇ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗದ ನಿರ್ದಿಷ್ಟ ಜಾತಿಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಇರುವುದನ್ನು ಹೊರತುಪಡಿಸಿದರೆ, ಬೇರೆ ಕ್ಷೇತ್ರಗಳಲ್ಲಿ ಒಂದೇ ಜಾತಿಗೆ ಸೇರಿದವರ ಸಂಖ್ಯೆ ಕಡಿಮೆ. ಈ ‘ಕಡಿಮೆ ಸಂಖ್ಯೆ’ಯು ಟಿಕೆಟ್ ಗಿಟ್ಟಿಸುವ ಪ್ರವೇಶ ದ್ವಾರವನ್ನೇ ಬಂದ್‌ ಮಾಡಿದೆ. ಅಷ್ಟೇ ಅಲ್ಲ, ಯಾರನ್ನಾದರೂ ಸೋಲಿಸುವಲ್ಲಿಯೂ ನಿರ್ಣಾಯಕ ಪಾತ್ರ ವಹಿಸಲು ಆಗುತ್ತಿಲ್ಲ. ಈ ತೊಡಕುಗಳಿಂದಾಗಿಯೋ ಏನೋ ಪ್ರಬಲ ಸಮುದಾಯಗಳ ಜೊತೆ ಗುರುತಿಸಿಕೊಳ್ಳುವುದು ಹಿಂದುಳಿದ ಜಾತಿಗಳ ಜನರಲ್ಲಿ ಹಿಂದಿನಿಂದಲೂ ರೂಢಿಯಾಗಿದೆ. ಗ್ರಾಮೀಣ ಜೀವನಶೈಲಿ, ಪರಸ್ಪರ ಅವಲಂಬನೆ, ಹೊಂದಾಣಿಕೆಯ ಅನಿವಾರ್ಯ ಕೂಡ ಇದಕ್ಕೆ ಕಾರಣವಾಗಿರಬಹುದು.

ಸಮಾನ ನೆಲೆಯ ಸಮುದಾಯಗಳನ್ನು ಬೆಸೆಯುವ ‘ಸೋಷಿಯಲ್ ಎಂಜಿನಿಯರಿಂಗ್’ ಪರಿಕಲ್ಪನೆಯ ಭಾಗವಾಗಿ ‘ಅಹಿಂದ’ ಚಳವಳಿಯು 1997ರಲ್ಲಿ ಅರಸು ಹುಟ್ಟುಹಬ್ಬದಂದು ಕೋಲಾರದಲ್ಲಿ ಜನ್ಮ ತಳೆಯಿತು. ಸಿ.ಎಸ್‌. ದ್ವಾರಕಾನಾಥ್‌, ಮುನಿಸ್ವಾಮಿ, ಲಕ್ಷ್ಮೀಪತಿ ಕೋಲಾರ... ಇವರೆಲ್ಲ ಮುಂದೆ ನಿಂತು ಅದಕ್ಕೊಂದು ರೂಪ ಕೊಟ್ಟರು. ಶುರುವಿನಲ್ಲಿ ಬೆಂಬಲವಾಗಿ ಆರ್‌.ಎಲ್‌. ಜಾಲಪ್ಪ ನಿಂತಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರಾದರೂ ಆನಂತರ ಅದರ ಬಗ್ಗೆ ಅವರು ಹೆಚ್ಚಿನ ಆಸ್ಥೆ ವಹಿಸಿದಂತೆ ಕಾಣಲಿಲ್ಲ. ಆದರೆ ಜೆಡಿಎಸ್‌ನಲ್ಲಿ ತಮ್ಮ ಅಸ್ತಿತ್ವಕ್ಕೆ ಸವಾಲು ಎದುರಾದಾಗ ಸಿದ್ದರಾಮಯ್ಯ ‘ಅಹಿಂದ’ ಕಾರ್ಡ್‌ ಬಳಸಲಾರಂಭಿಸಿದರು.

ಆಗ ಅವರ ರಾಜಕೀಯ ಬದುಕು ಬೇರೊಂದು ಮಜಲು ಪಡೆಯಿತು. ಹಿಂದುಳಿದ ವರ್ಗಗಳ ನಾಯಕರಾಗಿ ಅವರು ಪ್ರಕಟಗೊಳ್ಳತೊಡಗಿದರು. ಅಹಿಂದ ಸಂಘಟನೆಗೂ ರಾಜಕೀಯ ‘ಶಕ್ತಿ’ ರೂಪ ಗೋಚರಿಸಿತು. ಕಾಂಗ್ರೆಸ್ಸಿನಲ್ಲಿ ಅವರಿಗೆ ಒಂದು ಗಟ್ಟಿಯಾದ ಸ್ಥಾನ ದೊರಕಿಸಿಕೊಡುವಲ್ಲಿಯೂ ಅದರ ಪಾತ್ರ ಇದೆ. ಆದರೆ ಅಲ್ಪಸಂಖ್ಯಾತರನ್ನು, ಹಿಂದುಳಿದವರನ್ನು ಮತ್ತು ದಲಿತರನ್ನು ಒಂದು ಸೂತ್ರದಡಿ ಬೆಸೆಯುವ ಕ್ರಿಯೆ ಬೇರುಮಟ್ಟಕ್ಕೆ ಇಳಿದಂತೇನೂ ಕಾಣಿಸುವುದಿಲ್ಲ. ಮೊದಲು ಒಂದು ಸಂಕೇತ ಸೃಷ್ಟಿಸುವುದು, ಆನಂತರ ಅದಕ್ಕೆ ಒಂದು ಅರ್ಥ ತುಂಬುವುದು, ಯಾರದೋ ಹಿತಾಸಕ್ತಿ ಕಾಯಲು ಅದು ಅಗತ್ಯ ಎಂದು ನಂಬಿಸುವಂಥ ಪ್ರಯತ್ನಗಳು ರಾಜಕಾರಣದ ಅಂದಂದಿನ ದರ್ದು ಪೂರೈಸುವ ತಂತ್ರವಾಗಿ ಬಳಕೆಯಾಗುತ್ತಿವೆಯೇ ವಿನಾ ಈ ನಡೆಗಳಲ್ಲಿ ಮುಂಗಾಣ್ಕೆಯಾಗಲೀ, ಅದನ್ನು ಸಾಧ್ಯವಾಗಿಸಲು ಬೇಕಾದ ಸ್ಪಷ್ಟ ಕಾರ್ಯಸೂಚಿಯಾಗಲೀ ಇಲ್ಲ.

ರಾಜ್ಯದಲ್ಲಿ ಪ್ರಬಲ ಸಮುದಾಯಗಳನ್ನು ವಿಚಲಿತಗೊಳಿಸುವ ಮಟ್ಟಿಗೆ ಹಿಂದುಳಿದ ವರ್ಗಗಳಿಂದ ರೂಪುಗೊಂಡ ನಾಯಕರು ಬಂಗಾರಪ್ಪ ಮತ್ತು ಸಿದ್ದರಾಮಯ್ಯ ಮಾತ್ರ. ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸಲು ಹಿಂದುಳಿದ ವರ್ಗದವರೊಬ್ಬರಿಗೆ ಅವಕಾಶ ಸಿಕ್ಕಿರುವುದು ಸಿದ್ದರಾಮಯ್ಯ ಅವರಿಗಷ್ಟೇ. ಜಾತಿ ಅಸ್ಮಿತೆಯ ಹುಡುಕಾಟದಲ್ಲೇ ತೊಳಲಾಡುತ್ತಿರುವ ಸಮುದಾಯಗಳಲ್ಲಿ ‘ವರ್ಗ ಪ್ರಜ್ಞೆ’ ಮೂಡಿಸುವಲ್ಲಿ ಅಹಿಂದ ರಾಜಕಾರಣವು ಎಷ್ಟರಮಟ್ಟಿಗೆ ಸಫಲವಾಗಿದೆ? ಮುಂಬರುವ  ಚುನಾವಣೆಯು ಈ ಪ್ರಶ್ನೆಯನ್ನು ಪರೀಕ್ಷೆಗೆ ಒಳಪಡಿಸಲಿದೆ.

ಜಾತಿಯನ್ನು ಹೇಳಿಕೊಳ್ಳಲು ಹಿಂಜರಿಯುತ್ತಿದ್ದ ಹಿಂದುಳಿದ ವರ್ಗಗಳ ಜನ ಈಗ ತಮ್ಮ ಹೆಸರಿನ ಜೊತೆ ಜಾತಿಯ ಗುರುತನ್ನೂ ಸ್ಪಷ್ಟವಾಗಿ ನಮೂದಿಸಿಕೊಳ್ಳಲು ಆರಂಭಿಸಿದ್ದಾರೆ. ಇದನ್ನು ಆ ಜಾತಿಗಳಲ್ಲಿ ಮೂಡುತ್ತಿರುವ ಅಧಿಕಾರಾಕಾಂಕ್ಷೆಯ ಸಂಕೇತ ಎಂದು ಬೇಕಾದರೂ ಭಾವಿಸಬಹುದು. ಒಂದು ಜಾತಿಯ ಒಬ್ಬ ವ್ಯಕ್ತಿಗೆ ಅಧಿಕಾರ ಅಥವಾ ರಾಜಕೀಯ ಅವಕಾಶ ಕಲ್ಪಿಸಿದ ಮಾತ್ರಕ್ಕೇ ಆ ಜಾತಿಯನ್ನು ಉದ್ಧರಿಸಿದಂತೆ ಆಗುವುದಿಲ್ಲ. ಆದರೆ, ಪ್ರಾತಿನಿಧ್ಯ ಕೊಡುವುದನ್ನೇ ಜಾತಿಗಳ ಸಬಲೀಕರಣ ಎಂಬಂತೆ ಬಿಂಬಿಸಿಕೊಂಡು, ನಂಬಿಸಿಕೊಂಡು ಬರಲಾಗುತ್ತಿದೆ. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ವ್ಯವಸ್ಥಿತವಾಗಿ ಅವರನ್ನು ಮೇಲ್ಮಟ್ಟಕ್ಕೆ ತರುವ ಕೆಲಸವನ್ನು ಮುಂದೂಡುತ್ತಾ ಈ ಸಮುದಾಯಗಳು ಅವಲಂಬನೆಯಲ್ಲೇ ಇರುವಂತೆ ನೋಡಿಕೊಳ್ಳುವ ಹುನ್ನಾರ ನಡೆದೇ ಇದೆ. ನೀತಿ–ನಿರ್ಣಯ ರೂಪಿಸುವ ಪ್ರಕ್ರಿಯೆಯಲ್ಲಿ ಎಷ್ಟೋ ಅಲಕ್ಷಿತ ಸಮುದಾಯಗಳಿಗೆ ಅವಕಾಶ ಸಿಕ್ಕಿಲ್ಲ.

ಹಿಂದುಳಿದ ಜಾತಿಗಳ ರಾಜಕೀಯ ಒಲವು-ನಿಲುವುಗಳ ಬಗ್ಗೆ ಸರಳೀಕೃತ ತೀರ್ಮಾನ ಕೊಡುವುದು ಆಗದ ಕೆಲಸ. ‌ಇಲ್ಲಿ ಒಂದು ಅಂಶವನ್ನು ಉಲ್ಲೇಖಿಸುವುದು ಅಗತ್ಯ. ಹಿಂದುಳಿದ ಸಮುದಾಯದಿಂದ ಮುಖ್ಯಮಂತ್ರಿಗಳಾದ ಬಂಗಾರಪ್ಪ, ಮೊಯಿಲಿ, ಸಿದ್ದರಾಮಯ್ಯ ಈ ಮೂವರೂ ಕಾಂಗ್ರೆಸ್ಸಿಗರು. ಅತ್ಯಂತ ಕಡಿಮೆ ಸಂಖ್ಯಾಬಲದ ಅರಸು (ದೇವರಾಜ ಅರಸು) ಮತ್ತು ರಜಪೂತ (ಧರ್ಮಸಿಂಗ್‌) ಸಮುದಾಯಕ್ಕೆ ಅವಕಾಶ ಸಿಕ್ಕಿದ್ದು ಕೂಡ ಕಾಂಗ್ರೆಸ್‌ ಆಡಳಿತದ ಅವಧಿಯಲ್ಲೇ. ಆದರೆ ದಲಿತ ಮತ್ತು ಅಲ್ಪಸಂಖ್ಯಾತರು ಬಹಳಷ್ಟು ಕಾಲ ಕಾಂಗ್ರೆಸ್ಸಿನ ಪಾರಂಪರಿಕ ಬೆಂಬಲಿಗರಾಗಿ ಇದ್ದಂತೆ ಹಿಂದುಳಿದ ವರ್ಗಗಳು ಆ ಪಕ್ಷಕ್ಕೆ ಪೂರ್ಣಕಾಲಿಕ ನಿಷ್ಠೆ ಪ್ರದರ್ಶಿಸಿದ್ದಾರೆ ಎಂದು ಹೇಳುವ ಹಾಗಿಲ್ಲ. ಅರಸು ಕಾಲದ ರಾಜಕೀಯ ಮಾತ್ರ ಇದಕ್ಕೆ ಸ್ವಲ್ಪಮಟ್ಟಿಗಾದರೂ ಅಪವಾದ ಎಂಬಂತೆ ನಮ್ಮ ಮುಂದಿದೆ. ಹಿಂದುಳಿದವರನ್ನು ಮತ್ತೊಮ್ಮೆ ಕಾಂಗ್ರೆಸ್ಸಿಗೆ ನಿಷ್ಠರನ್ನಾಗಿ ಮಾಡುವ ಸಿದ್ದರಾಮಯ್ಯ ಅವರ ಪ್ರಯತ್ನದ ಫಲಾಫಲಗಳನ್ನು 2018ರ ಚುನಾವಣಾ ಫಲಿತಾಂಶ ತಿಳಿಸಲಿದೆ.

ಹಿಂದುಳಿದ ವರ್ಗಗಳ ಬೆಂಬಲವನ್ನು ಒಂದು ನಿರ್ದಿಷ್ಟ ಪಕ್ಷಕ್ಕೆ ಸೀಮಿತಗೊಳಿಸುವುದು ಕಷ್ಟದ ಕೆಲಸ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಜೆಪಿಯ ಕಾಲಾಳುಗಳಲ್ಲಿ ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸಿದ್ದರಾಮಯ್ಯ ಅವರ ಕಾರಣದಿಂದ ಕುರುಬರು ಕಾಂಗ್ರೆಸ್ ಜೊತೆ ಹೆಚ್ಚಾಗಿ ಗುರುತಿಸಿಕೊಂಡಿರಬಹುದು. ಹಿಂದುಳಿದ ವರ್ಗಗಳು ಜೆಡಿಎಸ್‌ ಜೊತೆಗೂ ಇವೆ. ಸ್ಥಳೀಯ ಮಟ್ಟದಲ್ಲಿ ಕೆಲವೊಂದು ಅಂಶಗಳ ಕಾರಣಕ್ಕೆ ಈ ವರ್ಗಗಳ ಮತ ಅಂತರಗಂಗೆಯಂತೆ ಒಂದೆಡೆ ಹರಿಯುವ ಸಾಧ್ಯತೆ ಇದೆ. ಆದರೆ ಅದು ಆ ನಿರ್ದಿಷ್ಟ ಚುನಾವಣೆಗೆ, ಆ ಒಬ್ಬ ವ್ಯಕ್ತಿಗೆ ಮತ್ತು ಆ ಕ್ಷೇತ್ರದ ಕೆಲಸ–ಕಾರ್ಯಗಳಿಗೆ ಸೀಮಿತವಾಗಿರುತ್ತದೆ. ಇದು ಸಾರ್ವತ್ರಿಕ ರೂಪ ಪಡೆದೇ ಇಲ್ಲ. ಹಿಂದೆಲ್ಲ ಊರಿನ ಪ್ರಭಾವಿಯೊಬ್ಬನ ಮಾತಿಗೆ ಇಡೀ ಊರೇ ತಲೆಯಾಡಿಸುತ್ತಿತ್ತು. ಈಗ ಆ ಕೊಂಡಿ ಸಡಿಲಗೊಂಡಿದೆ. ಅಲ್ಲದೇ ಯುವ ಪೀಳಿಗೆಯ ಮನೋಭಾವವು ಸೂತ್ರಕ್ಕೆ ಸಿಗದ ಗಾಳಿಪಟದಂತಾಗಿದೆ.

ರಾಜಕೀಯ ಅಧಿಕಾರ ಪಡೆದ ಹಿಂದುಳಿದ ವರ್ಗಗಳಲ್ಲಿ ಕುರುಬ ಮತ್ತು ಈಡಿಗ ಸಮುದಾಯದವರೇ ಹೆಚ್ಚು. ಅಧಿಕಾರ ಪಡೆಯುವ ಸಾಮರ್ಥ್ಯವುಳ್ಳ ಇಂತಹ ಜಾತಿಗಳ ನಾಯಕರು ತಾವು ಹಿಂದುಳಿದ ವರ್ಗಗಳ ಎಲ್ಲ ಜಾತಿಗಳಿಗೆ ನಾಯಕತ್ವ ಕೊಡಬೇಕು ಎಂದು ಭಾವಿಸುತ್ತಿಲ್ಲ. ಸಾಮಾಜಿಕ ಶ್ರೇಣೀಕರಣದಲ್ಲಿ ತಮಗಿಂತ ಮೇಲಿರುವ ಜಾತಿಗಳ ವಿರುದ್ಧ ಜಗಳ ಕಾಯುವ ಉಮೇದಿನಲ್ಲಿ ಕೆಳಗಿನವರ ಬಗ್ಗೆ ಯೋಚಿಸುವುದನ್ನೇ ಮರೆತಿದ್ದಾರೆ. ಅಸಂಘಟಿತವಾಗಿರುವ ಈ ಸಮು ದಾಯಗಳು ಜಾತಿ ತರತಮಗಳನ್ನು ಬದಿಗೊತ್ತಿ ಒಗ್ಗೂಡು ವುದು ಸಾಧ್ಯವಾದರೆ ಮತ್ತು ಒಂದು ಸಮಾನ ಕಾರ್ಯಸೂಚಿ ಮುಂದಿಟ್ಟುಕೊಂಡು ರಾಜಕಾರಣನಡೆಸಲು ಅನುವಾದರೆ ಚುನಾವಣಾ ಫಲಿತಾಂಶಗಳು ಯಾವ ವಿಶ್ಲೇಷಣೆಗೂ ನಿಲುಕದಷ್ಟು ಬದಲಾಗಬಹುದು. ಆದರೆ ಈ ಸಮುದಾಯಗಳಲ್ಲಿ ಅಂತಹ ಒಳಎಚ್ಚರ ಇಲ್ಲಿಯವರೆಗೂ ಮೂಡಿಲ್ಲ.

ಪ್ರತಿಕ್ರಿಯಿಸಿ (+)