ಬುಧವಾರ, ಡಿಸೆಂಬರ್ 11, 2019
16 °C
ಯುಬಿ ಸಿಟಿಯಲ್ಲಿ ದಾಂದಲೆ * ಆಸ್ಪತ್ರೆಗೂ ನುಗ್ಗಿ ಹೊಡೆದ ಆರೋಪಿಗಳು * ಕ್ರಮಕ್ಕೆ ಆಗ್ರಹಿಸಿ ಠಾಣೆ ಎದುರು ಪ್ರತಿಭಟನೆ

ಯುವಕನ ಮೇಲೆ ಶಾಸಕ ಹ್ಯಾರಿಸ್ ಪುತ್ರನ ದಬ್ಬಾಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುವಕನ ಮೇಲೆ ಶಾಸಕ ಹ್ಯಾರಿಸ್ ಪುತ್ರನ ದಬ್ಬಾಳಿಕೆ

ಬೆಂಗಳೂರು: ಊಟ ಮಾಡುತ್ತಿದ್ದ ವೇಳೆ ಕಾಲು ತಗುಲಿತು ಎಂಬ ಕಾರಣಕ್ಕೆ ಕಾಂಗ್ರೆಸ್ ಶಾಸಕ ಎನ್‌.ಎ.ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್‌ (24) ಮತ್ತು ಅವರ ಸ್ನೇಹಿತರು ಯುವಕನೊಬ್ಬನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ.

ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ (24) ಹಲ್ಲೆಗೆ ಒಳಗಾದವರು. ಯುಬಿ ಸಿಟಿಯ ‘ಫರ್ಜಿ ಕೆಫೆ’ಯಲ್ಲಿ ಶನಿವಾರ ರಾತ್ರಿ ಈ ಕೃತ್ಯ ನಡೆ

ದಿದ್ದು, ಆರೋಪಿಗಳು ವಿದ್ವತ್ ಮುಖಕ್ಕೆ ಗುದ್ದಿದ್ದಾರೆ. ಬಿಯರ್ ಬಾಟಲಿಯಿಂದಲೂ ಹೊಡೆದಿದ್ದಾರೆ. ತೀವ್ರ ಗಾಯಗೊಂಡಿರುವ ಅವರು, ಸದ್ಯ ಮಲ್ಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಂಗಪುರದಲ್ಲಿ ಎಂಬಿಎ ವ್ಯಾಸಂಗ ಮಾಡಿದ್ದ ವಿದ್ವತ್, ಆರು ತಿಂಗಳ ಹಿಂದೆ ನಗರಕ್ಕೆ ಮರಳಿದ್ದರು. ತಿಂಗಳ ಹಿಂದೆ ಬೈಕ್‌ನಿಂದ ಬಿದ್ದು ಅವರ ಕಾಲಿನ ಮೂಳೆ ಮುರಿದಿತ್ತು. ಹೀಗಾಗಿ, ಯೋಗಕ್ಷೇಮ ವಿಚಾರಿಸಿಕೊಂಡು ಹೋಗಲು ಶನಿವಾರ ಸಂಜೆ ಸ್ನೇಹಿತರೆಲ್ಲ ವಸಂತನಗರದಲ್ಲಿರುವ ಅವರ ಮನೆಗೆ ಹೋಗಿದ್ದರು.

ನಂತರ ರಾತ್ರಿ 10 ಗಂಟೆ ಸುಮಾರಿಗೆ ಎಲ್ಲರೂ ಊಟ ಮಾಡಲು ಫರ್ಜಿ ಕೆಫೆಗೆ ತೆರಳಿದ್ದರು. ಪಕ್ಕದ ಟೇಬಲ್‌ನಲ್ಲೇ ಮೊಹಮದ್, ತನ್ನ ಸ್ನೇಹಿತರ ಜತೆ ಕುಳಿತಿದ್ದರು. ಮೂಳೆ ಮುರಿದಿದ್ದರಿಂದ ಕುರ್ಚಿಯಲ್ಲಿ ಸರಿಯಾಗಿ ಕೂರಲು ಆಗದೆ, ವಿದ್ವತ್ ಕಾಲು ಚಾಚಿಕೊಂಡು ಕುಳಿತಿದ್ದರು.

ಆಗ ಮೊಹಮದ್‌ನ ಸ್ನೇಹಿತನೊಬ್ಬನಿಗೆ ಅವರ ಕಾಲು ತಗುಲಿತ್ತು. ಇದರಿಂದ ಕುಪಿತಗೊಂಡು ಜಗಳ ಪ್ರಾರಂಭಿಸಿದ್ದರು.

ಕಾಲು ಚಾಚಿಕೊಂಡು ಕುಳಿತಿದ್ದನ್ನು ಪ್ರಶ್ನಿಸಿದಾಗ, ‘ಮೂಳೆ ಮುರಿದಿದೆ. ಆ ಕಾರಣಕ್ಕೆ ಹೀಗೆ ಕುಳಿತಿದ್ದೇನೆ’ ಎಂದು ವಿದ್ವತ್ ಹೇಳಿದ್ದಾರೆ. ಅದಕ್ಕೆ ‘ಕಾಲು ಮುರಿದಿದ್ದರೆ ಮನೆಯಲ್ಲಿ ಇರುವುದನ್ನು ಬಿಟ್ಟು ಇಲ್ಲಿಗೆ ಏಕೆ ಬಂದೆ’ ಎಂದು ವಾಗ್ವಾದ ನಡೆಸಿದ್ದಾರೆ. ಎದುರು ಮಾತನಾಡಿದಾಗ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಗೆ ದೂರು ಕೊಟ್ಟಿರುವ ವಿದ್ವತ್ ಸ್ನೇಹಿತ ಪ್ರವೀಣ್ ವೆಂಕಟಾಚಲಯ್ಯ, ‘10 ರಿಂದ 15 ಮಂದಿ ಯುವಕರು ಒಟ್ಟಾಗಿ ಹಲ್ಲೆ ನಡೆಸಿದರು. ರಕ್ಷಣೆಗೆ ಮುಂದಾದ ನಮ್ಮನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಫರ್ಜಿ ಕೆಫೆಯ ನೌಕರರು ಸುಮ್ಮನೆ ನೋಡುತ್ತಾ ನಿಂತಿದ್ದರು. ರಕ್ತದ ಮಡುವಿನಲ್ಲಿ ನಿತ್ರಾಣನಾಗಿ ಬಿದ್ದಿದ್ದ ಗೆಳೆಯನನ್ನು ತಕ್ಷಣ ಮಲ್ಯ ಆಸ್ಪತ್ರೆಗೆ ಕರೆದೊಯ್ದೆವು. ಹಿಂಬಾಲಿಸಿಕೊಂಡು ಆಸ್ಪತ್ರೆಗೂ ಬಂದು ದಾಂದಲೆ ನಡೆಸಿದ ಆ ಗುಂಪು, ‘ದೂರು ಕೊಟ್ಟರೆ ಜೀವಂತವಾಗಿ ಉಳಿಸುವುದಿಲ್ಲ’ ಎಂದು ಬೆದರಿಕೆ ಹಾಕಿ ಹೋಯಿತು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಮೊಹಮದ್ ಹಾಗೂ ಸ್ನೇಹಿತರ ವಿರುದ್ಧ ಗಂಭೀರ ಸ್ವರೂಪದ ಹಲ್ಲೆ (ಐಪಿಸಿ 326), ಅಕ್ರಮ ಬಂಧನ (ಐಪಿಸಿ 341), ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವುದು (ಐಪಿಸಿ 504) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪಗಳಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ‌‘ವಿದ್ವತ್ ಪಾನಮತ್ತನಾಗಿ ನಮ್ಮೊಡನೆ ಜಗಳ ಮಾಡಿದ’ ಎಂದು ಆರೋಪಿಸಿ ಮೊಹಮದ್‌ನ ಸ್ನೇಹಿತ ಅರುಣ್ ಗೌಡ ಪ್ರತಿದೂರು ಕೊಟ್ಟಿದ್ದಾರೆ.

ಆರೋಪಿಗಳ ಬಂಧನಕ್ಕೆ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳು ರಚನೆಯಾಗಿದ್ದು, ಶನಿವಾರ ಸಂಜೆಯೇ ಮಂಜುನಾಥ್, ಅಭಿಷೇಕ್, ಬಾಲಕೃಷ್ಣ, ನಾಸಿ ಹಾಗೂ ಅರುಣ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

ಇನ್‌ಸ್ಪೆಕ್ಟರ್‌ ಜತೆ ವಾಗ್ವಾದ

‘ಮೊಹಮ್ಮದ್ ನಲಪಾಡ್‌ನನ್ನು ಬಂಧಿಸಬೇಕು. ಶಾಸಕ ಹ್ಯಾರಿಸ್‌ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿ ಕಬ್ಬನ್ ಪಾರ್ಕ್‌ ಠಾಣೆಯ ಎದುರು ಬೆಳಿಗ್ಗೆ ಪ್ರತಿಭಟನೆ ನಡೆಸಿದ್ದ ಆಮ್‌ ಆದ್ಮಿ ಪಕ್ಷ (ಎಎಪಿ) ಕಾರ್ಯಕರ್ತರು, ಸಂಜೆ ಶಾಸಕರ ಮನೆ ಎದುರು ಜಮಾಯಿಸಿ ಘೋಷಣೆಗಳನ್ನು ಕೂಗಿದರು.

‘ಪೊಲೀಸರು ಶಾಸಕರ ಸಹಾಯಕರಂತೆ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಹಲವು ಪ್ರಕರಣಗಳಲ್ಲಿ ಹ್ಯಾರಿಸ್‌ ಪರ ವಕಾಲತ್ತು ವಹಿಸಿದ್ದಾರೆ. ಇದರಿಂದಾಗಿಯೇ ಅವರ ಹಾಗೂ ಅವರ ಮಗನ ಗೂಂಡಾ ಕೃತ್ಯಗಳು ಹೆಚ್ಚಾಗುತ್ತಿವೆ’ ಎಂದು ದೂರಿದರು.

‘ಗೂಂಡಾ ಎಂಎಲ್‌ಎ ರಾಜೀನಾಮೆ ನೀಡಬೇಕು’ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅಶೋಕನಗರ ಠಾಣೆ ಇನ್‌ಸ್ಪೆಕ್ಟರ್‌, ‘ಆ ರೀತಿ ಕೂಗಬೇಡಿ’ ಎಂದರು. ಆಗ ಪ್ರತಿಭಟನಾಕಾರರು ಹಾಗೂ ಇನ್‌ಸ್ಪೆಕ್ಟರ್‌ ನಡುವೆ ಮಾತಿನ ಚಕಮಕಿ ನಡೆಯಿತು. ಮುಖಂಡರು ಪರಿಸ್ಥಿತಿ ತಿಳಿಗೊಳಿಸಿದರು.

ಕಾನೂನಿನ ಭಯವಿಲ್ಲ: ಅಶೋಕ

‘ಶಾಸಕರ ಮಗನೇ ಗೂಂಡಾಗಿರಿಯಲ್ಲಿ ತೊಡಗಿರುವುದು ಆತಂಕಕಾರಿ ಬೆಳವಣಿಗೆ. ತಮ್ಮ ಪಕ್ಷವೇ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ಅವರಿಗೆ ಕಾನೂನಿನ ಭಯವಿಲ್ಲದಂತಾಗಿದೆ. ಇನ್‌ಸ್ಪೆಕ್ಟರ್ ವಿಜಯ್‌ ಹಡಗಲಿ ಅವರನ್ನು ಹ್ಯಾರಿಸ್ ಅವರೇ ಕಬ್ಬನ್‌ಪಾರ್ಕ್‌ ಠಾಣೆಗೆ ವರ್ಗ ಮಾಡಿಸಿಕೊಂಡಿದ್ದರು. ಹೀಗಾಗಿಯೇ, ಅವರ ಮಕ್ಕಳು ಹಾಗೂ ಬೆಂಬಲಿಗರು ನಡೆಸುವ ದಾಂದಲೆ ನಡೆಸಿದರೂ ಎಫ್‌ಐಆರ್‌ ದಾಖಲಾಗುವುದಿಲ್ಲ’ ಎಂದು ಬಿಜೆಪಿ ಮುಖಂಡ ಆರ್.ಅಶೋಕ ಆರೋಪಿಸಿದರು.

ಕ್ಷಮೆಯಾಚಿಸುತ್ತೇನೆ: ಹ್ಯಾರಿಸ್

‘ಯಾರು ಮಾಡಿದರೂ ತಪ್ಪು ತಪ್ಪೇ. ಆದರೆ, ಘಟನೆ ಈಗ ಆಗಿ ಹೋಗಿದೆ. ಅದರ ಬಗ್ಗೆ ಮಾತನಾಡುವುದರಲ್ಲಿ ಪ್ರಯೋಜನವಿಲ್ಲ. ವಿದ್ವತ್‌ನ ತಂದೆ ನನ್ನ ಆಪ್ತ ಸ್ನೇಹಿತ. ಅವರಿಗೆ ಕರೆ ಮಾಡಿ ಕ್ಷಮೆಯಾಚಿಸಿದ್ದೇನೆ. ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ’ ಎಂದು ಹ್ಯಾರಿಸ್ ಹೇಳಿದರು.

‘ತಾನೂ ಜವಾಬ್ದಾರಿ ಸ್ಥಾನದಲ್ಲಿದ್ದೇನೆ ಎಂಬ ಅರಿವು ಮಗನಿಗೆ ಇರಬೇಕಿತ್ತು. ಬೆಳಿಗ್ಗೆಯೇ ಆತನಿಗೆ ಕರೆ ಮಾಡಿ ಬೈದಿದ್ದೇನೆ. ಆ ನಂತರ ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿಕೊಂಡಿದ್ದಾನೆ. ಮಗ ಮಾಡಿದ ತಪ್ಪಿಗೆ ನಾನು ತಪ್ಪಿತಸ್ಥನ ಸ್ಥಾನದಲ್ಲಿ ನಿಂತಿದ್ದೇನೆ. ಯಾವ ಮಕ್ಕಳೂ ತಮ್ಮ ಪೋಷಕರಿಗೆ ಇಂಥ ಸ್ಥಿತಿ ತರಬಾರದು’ ಎಂದರು.

ದಬ್ಬಾಳಿಕೆ ನಡೆದಿಲ್ಲ: ಆರೋಪಿಗಳು ಮಲ್ಯ ಆಸ್ಪತ್ರೆಯಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರನ ಜತೆಗೂ ದಬ್ಬಾಳಿಕೆ ನಡೆಸಿದರು ಎನ್ನಲಾಗಿತ್ತು.

ಇದಕ್ಕೆ ಸ್ಪಷ್ಟನೆ ನೀಡಿದ ರಾಘವೇಂದ್ರ ರಾಜ್‌ಕುಮಾರ್‌, ‘ನನ್ನ ಮಗ ಗುರು ಹಾಗೂ ವಿದ್ವತ್ ಬಾಲ್ಯ ಸ್ನೇಹಿತರು. ಮೂರು ದಿನಗಳ ಹಿಂದಷ್ಟೇ ಆತ ನಮ್ಮ ಮನೆಗೂ ಬಂದು ಹೋಗಿದ್ದ. ಸ್ನೇಹಿತನಿಗೆ ಏಟಾಗಿರುವ ವಿಚಾರ ತಿಳಿದು ಗುರು ರಾತ್ರಿ ಆಸ್ಪತ್ರೆಗೆ ತೆರಳಿದ್ದ. ಆದರೆ, ತನ್ನ ಮೇಲೆ ದಬ್ಬಾಳಿಕೆ ನಡೆದ ಬಗ್ಗೆ ಆತ ಏನೂ ಹೇಳಿಲ್ಲ’ ಎಂದರು.

ಘಟನೆ ಬಗ್ಗೆ ಪೊಲೀಸರು ಹೇಳಿದ್ದೇನು?

‘ಶನಿವಾರ ರಾತ್ರಿ ಮೊಹಮದ್ ಹಾಗೂ ಸ್ನೇಹಿತರು ಮೊದಲು ಫರ್ಜಿ ಕೆಫೆಗೆ ತೆರಳಿದ್ದರು. ಅದಾದ ಐದು ನಿಮಿಷಗಳ ನಂತರ ವಿದ್ವತ್ ಹಾಗೂ ಸ್ನೇಹಿತರು ಹೋಗಿದ್ದರು. ಅಲ್ಲಿನ ನೌಕರ ಮೊದಲು ವಿದ್ವತ್‌ನ ಟೇಬಲ್‌ಗೆ ತೆರಳಿ ಆರ್ಡರ್ ತೆಗೆದುಕೊಳ್ಳುತ್ತಿದ್ದ. ಇದರಿಂದ ಕೋಪಗೊಂಡ ಮೊಹಮದ್, ನೌಕರರ ಜತೆ ಗಲಾಟೆ ಪ್ರಾರಂಭಿಸಿದ್ದ’ ಎಂದು ಪೊಲೀಸರು ಹೇಳಿದ್ದಾರೆ.

‘ಸ್ವಲ್ಪ ಸಮಯದ ನಂತರ ಗಲಾಟೆ ತಣ್ಣಗಾಗಿತ್ತು. ಆದರೆ, ವಿದ್ವತ್ ತನ್ನನ್ನು ಗುರಾಯಿಸುತ್ತಿರುವುದಾಗಿ ಮೊಹಮದ್ ಸ್ನೇಹಿತ ಮತ್ತೆ ಜಗಳ ಶುರು ಮಾಡಿದ್ದ. ಕಾಲು ಚಾಚಿಕೊಂಡು ಕುಳಿತಿದ್ದ ವಿದ್ವತ್ ಅವರನ್ನು ನೋಡಿದ ಮೊಹಮದ್, ‘ಸರಿಯಾಗಿ ಕುಳಿತುಕೋ’ ಎಂದು ಏಕವಚನದಲ್ಲಿ ಹೇಳಿದ್ದರು. ಆಗ ವಾಗ್ವಾದ ಜೋರಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಯಿತು’ ಎಂದಿದ್ದಾರೆ.

ಕ್ರಮ ತೆಗೆದುಕೊಳ್ಳಲು ಗೊತ್ತಿದೆ: ಗೃಹ ಸಚಿವ

‘ಅಮಾಯಕ ವಿದ್ವತ್‌ ಮೇಲೆ ನಡೆದ ಹಲ್ಲೆ ಖಂಡನೀಯ. ಪೊಲೀಸರು ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ತಲೆಮರೆಸಿಕೊಂಡಿರುವ ಮಗ ಶರಣಾಗುವಂತೆ ಮಾಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಗೃಹಸಚಿವ ರಾಮಲಿಂಗಾರೆಡ್ಡಿ, ‘ಆರೋಪಿಗಳು ಯಾರೇ ಆಗಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಗೊತ್ತಿದೆ. ಈ ಹಿಂದೆಯೂ ಅನೇಕ ಪ್ರಕರಣಗಳಲ್ಲಿ, ಆರೋಪಿಗಳು ಎಷ್ಟೇ ಬಲಾಢ್ಯರಾಗಿದ್ದರೂ ಸರ್ಕಾರ ಯಾರನ್ನು ಶಿಕ್ಷಿಸದೆ ಬಿಟ್ಟ ಉದಾಹರಣೆಯಿಲ್ಲ. ಯಾರ ವಿರುದ್ಧ, ಹೇಗೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂಬ ಪಾಠವನ್ನು ನಿಮ್ಮಿಂದ ಕಲಿಯಬೇಕಾಗಿಲ್ಲ. ಕೇಂದ್ರದಲ್ಲಿ ನಿಮ್ಮ ಸರ್ಕಾರದ ಕಾರ್ಯವೈಖರಿಯನ್ನು ನೋಡಿಕೊಳ್ಳಿ’ ಎಂದು ತಿರುಗೇಟು ನೀಡಿದ್ದಾರೆ.

‘ದೆಹಲಿಯ ಆಪ್ ಸರ್ಕಾರದ ಎಷ್ಟು ಶಾಸಕರು, ಸಚಿವರ ಮೇಲೆ ಹಲ್ಲೆ, ಅತ್ಯಾಚಾರದಂತಹ ಎಷ್ಟು  ಪ್ರಕರಣಗಳಿವೆ ಎಂಬುದನ್ನು ಸ್ಮರಿಸಿಕೊಳ್ಳಿ’ ಎಂದು ಆಪ್‌ ಕಾರ್ಯಕರ್ತರನ್ನೂ ಕೆಣಕಿದ್ದಾರೆ.

‘ಹ್ಯಾರಿಸ್‌ಗೆ ಬೆಳಿಗ್ಗೆಯೇ ಕರೆ ಮಾಡಿ ಮಗನ ಪುಂಡಾಟಿಕೆ ಬಗ್ಗೆ ಮಾತನಾಡಿದ್ದೇನೆ. ಪದೇ ಪದೇ ದಾಂದಲೆ ಮಾಡುತ್ತಿರುವುದರಿಂದ ತಮಗೆ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ ಎಂಬುದನ್ನೂ ಹೇಳಿದ್ದೇನೆ’ ಎಂದರು.

ಮೊಹಮದ್ ನಲಪಾಡ್ ಉಚ್ಚಾಟನೆ

ಬೆಂಗಳೂರು ನಗರ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಮೊಹಮದ್ ನಲಪಾಡ್‌ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟನೆಗೊಳಿಸಲಾಗಿದೆ.

‘ಮೊಹಮದ್ ವಿರುದ್ಧ ಕಬ್ಬನ್‍ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕಾರಣಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಅವರನ್ನು ಮುಕ್ತಗೊಳಿಸಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ತಿಳಿಸಿದ್ದಾರೆ.

ಪ್ರಕರಣದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ತಪ್ಪು ಮಾಡಿದವರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ತಕ್ಷಣ ಕ್ರಮ ತೆಗೆದುಕೊಳ್ಳಬೇಕು’ ಎಂದು ನಗರ ಪೊಲೀಸ್ ಕಮಿಷನರ್‌ಗೆ ನಿರ್ದೇಶನ ನೀಡಿದ್ದಾರೆ.

ಹ್ಯಾರಿಸ್ ಮಕ್ಕಳ ದಾಂದಲೆಗಳು

2017 ಜೂನ್ 12: ಹಳೇ ಮದ್ರಾಸ್ ರಸ್ತೆಯಲ್ಲಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ಜಗಳ ತೆಗೆದಿದ್ದ ಮೊಹಮದ್, ಜೀವನ್ ಬೀಮಾ ನಗರದ ನಿವಾಸಿ ಪೀಟರ್ ಮೇಲೆ ಹಲ್ಲೆ ನಡೆಸಿದ್ದರು.

2016 ಏಪ್ರಿಲ್ 7: ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಕ್ಲಬ್‌ ಆವರಣದಲ್ಲಿ ಪಾರ್ಕಿಂಗ್‌ ವಿಚಾರವಾಗಿ ಜಗಳ ತೆಗೆದಿದ್ದ ಮೊಹಮದ್, ಭದ್ರತಾ ಸಿಬ್ಬಂದಿ ಸಪ್ನಕುಮಾರ್‌ದಾಸ್‌ (21) ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿರಲಿಲ್ಲ.

2016 ಆಗಸ್ಟ್‌ 10: ರಿಚ್ಮಂಡ್‌ ಟೌನ್‌ನ ಹಾಕಿ ಕ್ರೀಡಾಂಗಣ ಹತ್ತಿರದ ‘ಪ್ಲಾನ್‌– ಬಿ‘ ಪಬ್‌ಗೆ ಸ್ನೇಹಿತರ ಜತೆ ನುಗ್ಗಿದ್ದ ಶಾಸಕ ಹ್ಯಾರಿಸ್‌ರ ಕಿರಿಯ ಮಗ ಉಮರ್‌, ಕೆಲಸಗಾರನ ಮೇಲೆ ಹಲ್ಲೆ ನಡೆಸಿದ್ದ. ಈ ಬಗ್ಗೆ ಗಾಯಾಳು ಯುವಕ, ಅಶೋಕ ನಗರ ಠಾಣೆಗೆ ದೂರು ನೀಡಿದ್ದರು

ಇನ್‌ಸ್ಪೆಕ್ಟರ್ ಅಮಾನತು, ಎಸಿಪಿ ವರ್ಗ

ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಡಿ ಇನ್‌ಸ್ಪೆಕ್ಟರ್ ವಿಜಯ್ ಹಡಗಲಿ ಅವರನ್ನು ಅಮಾನತು ಮಾಡಿರುವ ಕಮಿಷನರ್, ಎಸಿಪಿ ಮಂಜುನಾಥ್ ಅವರನ್ನು ಕಮಿಷನರ್ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಗಲಾಟೆ ನಡೆದ ಕೂಡಲೇ ಸ್ಥಳಕ್ಕೆ ಹೋಗದ ಹಾಗೂ ಅಷ್ಟೊಂದು ಗಂಭೀರವಾಗಿ ಹಲ್ಲೆ ಮಾಡಿದ್ದರೂ ಆರೋಪಿಗಳ ವಿರುದ್ಧ ಕೊಲೆ ಯತ್ನ (307) ಪ್ರಕರಣ ದಾಖಲಿಸದ ಕಾರಣಕ್ಕೆ ಈ ಕ್ರಮ ಜರುಗಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಮುಂದಿನ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)