ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಿತಾಬ್ ಪತ್ತೆಗೆ ಸೇನಾ ಸಲಹೆಗಾರನ ನೆರವು!

ಎಸ್‌ಐಟಿಗೆ ಕಗ್ಗಂಟಾಗಿರುವ ಟೆಕಿ ಅಪಹರಣ ಪ್ರಕರಣ l 1.45 ಲಕ್ಷ ಸಿಡಿಆರ್ ಪರಿಶೀಲನೆ
Last Updated 18 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಫ್ಟ್‌ವೇರ್ ಉದ್ಯೋಗಿ ಅಜಿತಾಬ್ ಪತ್ತೆಗೆ ಎಸ್‌ಐಟಿ ಅಧಿಕಾರಿಗಳು ಭಾರತೀಯ ಸೇನೆ, ಸಿಬಿಐ ಹಾಗೂ ರಾಷ್ಟ್ರೀಯ ತನಿಖಾ ತಂಡದ ಸಲಹೆಗಾರ ಇಶಾನ್ ಸಿನ್ಹಾ ಅವರ ನೆರವು ಕೋರಿದ್ದಾರೆ.

ಸೈಬರ್ ತನಿಖೆಯಲ್ಲಿ ಪರಿಣತಿ ಹೊಂದಿರುವ ದೆಹಲಿಯ ಸಿನ್ಹಾ, ಈಗಾಗಲೇ ಶಂಕಿತರ ಇಂಟರ್ನೆಟ್ ಪ್ರೊಟೊಕಾಲ್ ಡಿಟೇಲ್ ರೆಕಾರ್ಡ್‌ (ಐಟಿಡಿಆರ್) ಹಾಗೂ ಮೊಬೈಲ್ ಕರೆ ವಿವರಗಳನ್ನು (ಸಿಡಿಆರ್‌) ತರಿಸಿಕೊಂಡು ವಿಶ್ಲೇಷಣೆ ಮಾಡುತ್ತಿದ್ದಾರೆ.

ಹಾಗೆಯೇ, ಎಸ್‌ಐಟಿಯು ದೆಹಲಿ ಪೊಲೀಸರ ಜತೆಗೂ ನಿರಂತರ ಸಂಪರ್ಕದಲ್ಲಿದೆ. ಇತ್ತೀಚೆಗೆ ದೆಹಲಿ ಕಮಿಷನರ್ ರಾಜೇಶ್ ಅವರನ್ನು ಭೇಟಿಯಾಗಿರುವ ಅಧಿಕಾರಿಗಳು, ಬೇರೆ ರಾಜ್ಯಗಳಲ್ಲಿ ಕಾರುಗಳನ್ನು ಕದ್ದು ದೆಹಲಿಯಲ್ಲಿ ಮಾರಾಟ ಮಾಡುತ್ತಿರುವ ಗ್ಯಾಂಗ್‌ಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

ವೈಟ್‌ಫೀಲ್ಡ್‌ನ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಅಜಿತಾಬ್, ತಮ್ಮ ಸಿಯಾಜ್ ಕಾರನ್ನು ಮಾರುತ್ತಿರುವುದಾಗಿ ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ಪ್ರಕಟಿಸಿದ್ದರು. 2017ರ ಡಿ.18ರಂದು ಅವರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಾನು ಕಾರು ಖರೀದಿಸುವುದಾಗಿ ಹೇಳಿದ್ದ. ಈ ವಿಚಾರವಾಗಿ ಅದೇ ದಿನ ಸಂಜೆ ಮಾತುಕತೆಗೆ ತೆರಳಿದ್ದ ಅಜಿತಾಬ್, ವಾಪಸ್ ಫ್ಲ್ಯಾಟ್‌ಗೆ ಮರಳಿರಲಿಲ್ಲ.

ಅವರ ತಂದೆ ಕೊಟ್ಟ ದೂರಿನ ಅನ್ವಯ ಅಪಹರಣ ಪ್ರಕರಣ ದಾಖಲಾಗಿತ್ತು. ಹೈಕೋರ್ಟ್ ಆದೇಶದಂತೆ ತನಿಖೆಗೆ ಎಸ್‌ಐಟಿ ಸಹ ರಚನೆಯಾಯಿತು. ಅಪಹರಣವಾಗಿ ಎರಡು ತಿಂಗಳಾದರೂ, ಪ್ರಕರಣದ ಬಗ್ಗೆ ಯಾವುದೇ ಸುಳಿವೂ ಇಲ್ಲ. ಎಸ್‌ಐಟಿ ಈವರೆಗೆ ನಡೆಸಿರುವ ತನಿಖೆಯ ಪೂರ್ಣ ವಿವರ ಇಲ್ಲಿದೆ.

1.45 ಲಕ್ಷ ಸಿಡಿಆರ್!: ‘ಒಎಲ್‌ಎಕ್ಸ್‌ನಲ್ಲಿ ಅಜಿತಾಬ್‌ ಅವರ ಜಾಹೀರಾತನ್ನು ನೋಡಿದ್ದ 252 ಮಂದಿಯ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದೇವೆ. ಅಷ್ಟೇ ಅಲ್ಲದೆ, ಎಂಟು ತಿಂಗಳ ಹಿಂದೆ ಅವರಿಂದ ಐ–20 ಕಾರು ಖರೀದಿಸಿದ್ದ ಮಾಧವ್ ಎಂಬುವರನ್ನೂ ವಿಚಾರಣೆ ನಡೆಸಿದ್ದೇವೆ. ಆದರೆ, ತನಿಖೆಗೆ ಪೂರಕವಾಗುವಂಥ ಮಾಹಿತಿ ಸಿಕ್ಕಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‌‘ಅಜಿತಾಬ್ ನಾಪತ್ತೆಯಾದ ದಿನ, ಶಂಕಿತ ಆರೋಪಿಯ ಸಿಮ್‌ ಕೋರಮಂಗಲದ ಮಲ್ಲಪ್ಪ ರೆಡ್ಡಿ ಲೇಔಟ್, ಸಿಲ್ಕ್‌ಬೋರ್ಡ್, ಬೇಗೂರು, ಜಯನಗರ, ವರ್ತೂರು, ಗುಂಜೂರು ಸುತ್ತಮುತ್ತಲ ಟವರ್‌ಗಳಿಂದ ಸಂಪರ್ಕ ಪಡೆದಿದೆ. ಅಜಿತಾಬ್ ಮೊಬೈಲ್ ಸ್ವಿಚ್ಡ್‌ ಆಫ್ ಆಗಿರುವುದೂ ಗುಂಜೂರು ಕೆರೆ ಸಮೀಪವೇ. ಈ ಅಂಶ ಗಮನಿಸಿದರೆ ಶಂಕಿತ ಆರೋಪಿ ಅಲ್ಲಿಂದಲೇ ಅವರನ್ನು ಅಪಹರಿಸಿರುವುದು ಸ್ಪಷ್ಟವಾಗುತ್ತದೆ. ಕೃತ್ಯದ ನಂತರ ಆರೋಪಿ ಹೆಬ್ಬಾಳದ ನಾಗಪ್ಪ ಲೇಔಟ್‌ನಲ್ಲಿ ಮೊಬೈಲ್ ಎಸೆದು ಪರಾರಿಯಾಗಿದ್ದಾನೆ.’

‘ಹೀಗಾಗಿ, ನಿರ್ದಿಷ್ಟ ಸಮಯದಲ್ಲಿ ಈ ಎಲ್ಲ ಪ್ರದೇಶಗಳ ಟವರ್‌ಗಳಿಂದ ಸಂಪರ್ಕ ಪಡೆದಿದ್ದ 1.45 ಲಕ್ಷ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಿದ್ದೇವೆ. ಅಷ್ಟೂ ಸಂಖ್ಯೆಗಳ ವಿಶ್ಲೇಷಣೆ ಮಾಡಿದಾಗ, 250 ಸಂಖ್ಯೆಗಳ ಮೇಲೆ ಅನುಮಾನ ವ್ಯಕ್ತವಾಯಿತು. ಒಬ್ಬೊಬ್ಬರನ್ನೇ ಠಾಣೆಗೆ ಕರೆಸಿ ವಿಚಾರಣೆ ಮಾಡುತ್ತಿದ್ದೇವೆ’ ಎಂದರು.

ಮೊಬೈಲ್ ಪತ್ತೆ: ಶಂಕಿತ ವ್ಯಕ್ತಿ ಬಳಸುತ್ತಿದ್ದ ಮೊಬೈಲ್‌ನ ಐಎಂಇಐ ಸಂಖ್ಯೆ ಆಧರಿಸಿ ತನಿಖೆ ಪ್ರಾರಂಭಿಸಿದಾಗ, ಅದನ್ನು ಹೆಬ್ಬಾಳದ ಜೆ.ಸಿ.ಲಕ್ಷ್ಮಣ್ ಎಂಬಾತ ಬಳಸುತ್ತಿರುವುದು ಗೊತ್ತಾಯಿತು.

ಆತನನ್ನು ಪತ್ತೆ ಮಾಡಲಾಗಿದ್ದು, ‘ಡಿ.19ರ ಬೆಳಗಿನ ಜಾವ ಇಟ್ಟಿಗೆ ಲೋಡ್ ಮಾಡಲು ನಾಗಪ್ಪ ಲೇಔಟ್‌ಗೆ ಹೋಗುತ್ತಿದ್ದೆ. ಆಗ ರಸ್ತೆ ಬದಿ ಮೊಬೈಲ್ ಸಿಕ್ಕಿತು. ಇದರಲ್ಲಿದ್ದ ಸಿಮ್ ಕಾರ್ಡನ್ನು ಅಲ್ಲೇ ಕಿತ್ತೆಸೆದು, ಬೇರೆ ಸಿಮ್ ಹಾಕಿಕೊಂಡು ಬಳಸುತ್ತಿದ್ದೆ’ ಎಂದು  ಹೇಳಿಕೆ ಕೊಟ್ಟಿದ್ದಾನೆ. ಆ ಮೊಬೈಲನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

ರಮೇಶ್ ಹೆಸರಿನಲ್ಲಿ ಮೊಬೈಲ್ ಖರೀದಿ

‘ಅದು ಮೈಕ್ರೋಮ್ಯಾಕ್ಸ್ ಕ್ಯೂ–402 ಮೊಬೈಲ್. ಅದರ ವಿವರಗಳನ್ನು ಮೈಕ್ರೋಮ್ಯಾಕ್ಸ್‌ ಕಂಪನಿಗೆ ಕಳುಹಿಸಿ, ಯಾವ ಅಂಗಡಿಯಿಂದ ಈ ಮೊಬೈಲ್ ಮಾರಾಟವಾಗಿದೆ ತಿಳಿಸುವಂತೆ ಕೋರಿದ್ದೆವು. ತ್ವರಿತವಾಗಿಯೇ ಮಾಹಿತಿ ಕೊಟ್ಟ ಕಂಪನಿ ನೌಕರರು, 2017ರ ನ.4ರಂದು ಕೋರಮಂಗಲದ ಮೊಬೈಲ್ ಪಾರ್ಕ್‌ ಎಂಬ ಅಂಗಡಿಯಲ್ಲಿ ರಮೇಶ್ ಎಂಬ ವ್ಯಕ್ತಿ ಮೊಬೈಲ್ ಖರೀದಿಸಿದ್ದಾರೆ’ ಎಂದರು.

‘ತಕ್ಷಣ ಆ ಅಂಗಡಿಗೆ ತೆರಳಿ ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದೆವು. ಆದರೆ, ಡಿವಿಆರ್‌ನಲ್ಲಿ ತಿಂಗಳ ದೃಶ್ಯಗಳು ಮಾತ್ರ ಸಂಗ್ರಹವಾಗಿದ್ದು, ಹಿಂದಿನ ಎಲ್ಲ ದಾಖಲೆಗಳೂ ಅಳಿಸಿ ಹೋಗಿದ್ದವು. ಹೀಗಾಗಿ, ದೃಶ್ಯಗಳನ್ನು ಮರಳಿ ಪಡೆಯಲು ಡಿವಿಆರ್ ಬಾಕ್ಸನ್ನು ವಿಕ್ಟೋರಿಯಾ ಲೇಔಟ್‌ನ ‘ಕಾಗ್ನಿಟೊ ಫೋರೆನ್ಸಿಕ್ ಫೌಂಡೇಷನ್‌’ಗೆ ಕಳುಹಿಸಿದ್ದೆವು. ಅಲ್ಲಿ ಸಾಧ್ಯವಾಗದಿದ್ದಾಗ, ಅಹಮದಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಈ ತಿಂಗಳ ಒಳಗಾಗಿ ದೃಶ್ಯಗಳು ಕೈಸೇರುವ ಸಾಧ್ಯತೆ ಇದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಆ ವ್ಯಕ್ತಿ ಮೊಬೈಲ್ ಖರೀದಿಸುವಾಗ ‘soulfullramesh@gmail.com' ಎಂಬ ಮೇಲ್ ವಿಳಾಸ ಕೊಟ್ಟು ಹೋಗಿದ್ದಾನೆ. ಐಪಿ ವಿಳಾಸದ ಆಧರಿಸಿ ಶಂಕಿತನ ಪತ್ತೆಗಾಗಿ ಹೊಸಕೋಟೆ ಹಾಗೂ ಕೋಲಾರದಲ್ಲೂ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಪ್ರಯೋಜನಕ್ಕೆ ಬಾರದ ರೇಖಾಚಿತ್ರ

‘ಶಂಕಿತನಿಗೆ ಸಿಮ್‌ ಮಾರಾಟ ಮಾಡಿದ್ದ ಶಿವಕುಮಾರ್ ಹಾಗೂ ಆ ಸಿಮ್‌ಗೆ ರೀಚಾರ್ಜ್ ಮಾಡಿದ್ದ ಕೋಲಾರದ ‘ವಿನಾಯಕ ಮೊಬೈಲ್ ಸ್ಟೋರ್‌’ನ ಆನಂದ್ ಎಂಬುವರನ್ನು 2017ರ ಡಿ.22ರಂದೇ ವಶಕ್ಕೆ ಪಡೆದು ವಿಚಾರಣೆ ನಡೆಸಿದೆವು. ಅವರಿಬ್ಬರೂ ನೀಡಿದ ಸುಳಿವು ಆಧರಿಸಿ ಶಂಕಿತನ ರೇಖಾಚಿತ್ರ ತಯಾರಿಸಿದೆವು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅಜಿತಾಬ್ ಮನೆಯಲ್ಲಿ ಕೆಲಸ ಮಾಡುವ ಮಹಿಳೆ ತಾರಾಮಿನ್ ಸಹ, ‘ಮನೆ ಬಳಿ ಯುವತಿಯೊಬ್ಬಳು ಮೊಬೈಲ್‌ನಲ್ಲಿ ಮಾತನಾಡುತ್ತ ನಿಂತಿದ್ದಳು. ಆಕೆಯ ಮೇಲೆ ಗುಮಾನಿ ಇದೆ’ ಎಂದು ಹೇಳಿದ್ದರು. ಹೀಗಾಗಿ, ಕಲಾವಿದರ ಮೂಲಕ ಆ ಯುವತಿಯ ರೇಖಾಚಿತ್ರವನ್ನೂ ತಯಾರಿಸಿದೆವು. ನಂತರ ಎರಡೂ ರೇಖಾಚಿತ್ರಗಳನ್ನು ರಾಜ್ಯದ ಎಲ್ಲ ಠಾಣೆಗಳಿಗೂ ಕಳುಹಿಸಿ, ಶಂಕಿತರ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದೇವೆ.’

ಡ್ರೋಣ್ ಬಳಕೆ: ‘ಅಜಿತಾಬ್ ಮೊಬೈಲ್ ಕೊನೆಯದಾಗಿ ಗುಂಜೂರು ಕೆರೆ ಸಮೀಪದ ಟವರ್‌ನಿಂದ ಸಂಪರ್ಕ ಪಡೆದಿತ್ತು. ಹೀಗಾಗಿ, ಆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ವರ್ತೂರು ಮುಖ್ಯರಸ್ತೆಯಲ್ಲಿರುವ ಎಲ್ಲ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನೂ ಪರಿಶೀಲಿಸಿದ್ದೇವೆ. ಅಷ್ಟೇ ಅಲ್ಲದೆ, ಆ ಪ್ರದೇಶದಲ್ಲಿ ಡ್ರೋಣ್ ಕ್ಯಾಮೆರಾ ಬಳಸಿ ಶೋಧ ನಡೆಸಿದರೂ ಅಜಿತಾಬ್‌ ಬಗ್ಗೆಯಾಗಲೀ, ಅವರ ಕಾರಿನ ಬಗ್ಗೆಯಾಗಲೀ ಸಣ್ಣ ಸುಳಿವೂ ಸಿಕ್ಕಿಲ್ಲ’ ಎಂದು ಹೇಳಿದ್ದಾರೆ.

‘ವಾಹನ ಖರೀದಿ ಮಾಡುವುದಾಗಿ ಕರೆಸಿಕೊಂಡು ಕಾರುಗಳನ್ನು ಕದ್ದೊಯ್ಯುವ ಹಳೇ ಆರೋಪಿಗಳಾದ ಮಧು ಅಲಿಯಾಸ್ ಮೇಕೆ, ಶ್ರೀನಿವಾಸ್, ಮಹೇಶ್ ಆಚಾರಿ, ವೇಣುಗೋಪಾಲ್ ಹಾಗೂ ಅವರ ಸಹಚರರ ಪತ್ತೆಗೆ ವಿಶೇಷ ತಂಡವನ್ನು ತಮಿಳುನಾಡಿಗೆ ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ದೆಹಲಿ ಆರ್‌ವಿಕೆಗೆ ಎಸ್‌ಐಟಿ

ಅಜಿತಾಬ್ ಅವರು ದೆಹಲಿಯ ರಾಜ್ ವಿದ್ಯಾ ಕೇಂದ್ರ (ಆರ್‌ವಿಕೆ) ಎಂಬ ಆಧ್ಯಾತ್ಮಿಕ ಸಂಘಟನೆ ಸದಸ್ಯರ ಜೊತೆ ಒಡನಾಟ ಇಟ್ಟುಕೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ. ವಿದೇಶಗಳಲ್ಲೂ ಈ ಸಂಘಟನೆಯ ಶಾಖೆಗಳಿವೆ. ಅದರ ಮುಖ್ಯಸ್ಥ ಪ್ರೇಮ್ ರಾವತ್ ಜತೆ ಅಜಿತಾಬ್ ನಿಕಟ ಸಂಪರ್ಕ ಹೊಂದಿದ್ದರು. ಹೀಗಾಗಿ, ದೆಹಲಿಗೆ ತೆರಳಿರುವ ಎಸ್‌ಐಟಿ ಅಧಿಕಾರಿಗಳು ಸಂಘಟನೆಯ ಮುಖ್ಯಸ್ಥ ಹಾಗೂ ಕಾರ್ಯಕರ್ತರನ್ನು ವಿಚಾರಣೆ  ನಡೆಸುತ್ತಿದ್ದಾರೆ.

ಡಿಎನ್‌ಎ ತಪಾಸಣೆ

ರಾಜ್ಯದಲ್ಲಿ ಹಾಗೂ ನೆರೆ ರಾಜ್ಯಗಳಲ್ಲಿ ವರದಿಯಾಗಿರುವ ಅಪರಿಚಿತ ವ್ಯಕ್ತಿಗಳ ಶವ ಪ‍ತ್ತೆ ಪ್ರಕರಣಗಳನ್ನು ಗಮನಿಸಲಾಗುತ್ತಿದೆ. ಆ ದೇಹಗಳನ್ನು ಡಿಎನ್‌ಎ ಪರೀಕ್ಷೆಗೆ ಹೋಲಿಕೆ ಮಾಡಿಸುವ ಸಲುವಾಗಿ, ಅಜಿತಾಬ್ ಅಣ್ಣ ಅರುಣಾಬ್ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದೇವೆ. ಬೆಂಗಳೂರಿನ ಖಾಸಗಿ ಪ್ರಯೋಗಾಲಯವೊಂದರಲ್ಲಿ ತಪಾಸಣೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT