ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣಬೆಳಗೊಳ: ಬೆಟ್ಟದಿಂದ ಬೆಟ್ಟಕ್ಕೆ ಭಕ್ತಿಸೇತು

Last Updated 18 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಚಂದ್ರಗಿರಿ (ಶ್ರವಣಬೆಳಗೊಳ): ವಿಂಧ್ಯಗಿರಿಯ ಬೆಟ್ಟದ ಮೇಲೆ ಬಾಹುಬಲಿಯ ಮಹಾಮಸ್ತಕಾಭಿಷೇಕ ನಡೆಯುತ್ತಿದ್ದರೆ, ಅದರ ಸಂಭ್ರಮದ ಅಲೆಯೊಂದು ಚಂದ್ರಗಿರಿಯ ನೆತ್ತಿಯ ಮೇಲೆ ಅನುರಣಗೊಳ್ಳುತ್ತಿತ್ತು.

ಮಹಾಮಸ್ತಕಾಭಿಷೇಕದ ಎರಡನೇ ದಿನವಾದ ಭಾನುವಾರ ಮಧ್ಯಾಹ್ನದವರೆಗೆ, ಗೊಮ್ಮಟನ ಬೆಟ್ಟಕ್ಕಿಂತಲೂ ಚಂದ್ರಗಿರಿಯಲ್ಲೇ ಹೆಚ್ಚು ಸಂದಣಿ.

ಕಲ್ಲು, ಮರಳು, ಸಿಮೆಂಟ್‌ನಿಂದ ರೂಪುಗೊಂಡ ಸೇತುವೆಗಳೂ ಲೋಹದ ಸೇತುವೆಗಳೂ ಹಾಗೂ ಮರದ ಸಂಕಗಳೂ ಸಾಮಾನ್ಯ. ಆದರೆ, ಚಂದ್ರಗಿರಿ ಮತ್ತು ಇಂದ್ರಗಿರಿಯ ನಡುವೆ ರೂಪುಗೊಂಡಿದ್ದುದು ಭಕ್ತಿ–ಭಾವದ ಸೇತುವೆ.

ಜನಸಾಮಾನ್ಯರ ವೀಕ್ಷಣಾಸ್ಥಳ: ಚಿಕ್ಕಬೆಟ್ಟ ಎಂದು ಕರೆಸಿಕೊಳ್ಳುವ ಚಂದ್ರಗಿರಿಯ ಮೇಲೆ ನಿಂತು ನೋಡಿದರೆ, ಎದುರಿನ ಬೆಟ್ಟದಲ್ಲಿನ ಬಾಹುಬಲಿ ಮೂರ್ತಿ ಭುಜದವರೆಗೆ ಕಾಣಿಸುತ್ತಾನೆ. ಮಹಾಮಸ್ತಕಾಭಿಷೇಕಕ್ಕೆ ಪಾಸುಗಳಿದ್ದವರಿಗಷ್ಟೇ ಪ್ರವೇಶವಾದುದರಿಂದ, ಅಭಿಷೇಕವನ್ನು ಕಣ್ತುಂಬಿಕೊಳ್ಳ
ಬೇಕೆಂದು ಹಂಬಲಿಸಿದ ಜನಸಾಮಾನ್ಯರಿಗೆ ಚಂದ್ರಗಿರಿ ಆಸರೆಯಾಗಿತ್ತು.

ಬೆಳಗ್ಗೆ ಏಳರಿಂದಲೇ ಬೆಟ್ಟಕ್ಕೆ ಏರುವವರ ಸಾಲು ದೊಡ್ಡದಾಗಿತ್ತು. ಭಾನುವಾರ ರಜಾ ದಿನವಾದುದರಿಂದ, ರಾಜ್ಯದ ವಿವಿಧ ಭಾಗಗಳಿಂದ ಬಂದ ಕುತೂಹಲಿಗಳು ಚಂದ್ರಗಿರಿಯನ್ನು ಏರತೊಡಗಿದರು. ಬೆಂಗಳೂರಿನಿಂದ ಬಂದಿದ್ದ ಯುವಕರ ತಂಡವೊಂದು, ವಿಂಧ್ಯಗಿರಿಯ ಗೊಡವೆಗೆ ಹೋಗದೆ ರಾತ್ರಿ ಬಸ್ಸನ್ನು ಹಿಡಿಯಲು ನಿರ್ಧರಿಸಿತ್ತು.

ಹನ್ನೊಂದರ ವೇಳೆಗೆ ಜನಸಂದಣಿ ಹೆಚ್ಚಾಯಿತು. ಏರುವವರಿಗೂ ಇಳಿಯುವವರಿಗೂ ಕಿರಿದಾದ ಒಂದೇ ದಾರಿಯಿದ್ದುದರಿಂದ ಸರತಿ ಸಾಲು ನಿಧಾನವಾಗಿ ಸಾಗುತ್ತಿತ್ತು. ಹತ್ತುವವರಿಗೆ ಗೊಮ್ಮಟನ ಕಾಣುವ ತವಕವಾದರೆ, ಇಳಿಯುವವರಿಗೆ ಊಟದ ಚಿಂತೆ. ಜನರ ಒತ್ತಡ ಹೆಚ್ಚಾದುದರಿಂದ ಬೆಟ್ಟದ ಮೇಲಿದ್ದವರನ್ನು ಬೇಗಬೇಗನೆ ಕೆಳಗಿಳಿಯಲು ಭದ್ರತಾ ಸಿಬ್ಬಂದಿ ಒತ್ತಾಯಿಸುತ್ತಿದ್ದರು.

ಇತಿಹಾಸ ಸಮೃದ್ಧಿಯ ಬೆಟ್ಟ: ಶ್ರವಣಬೆಳಗೊಳದ ಇತಿಹಾಸದ ದೃಷ್ಟಿಯಿಂದ ಚಂದ್ರಗಿರಿಯ ಇತಿಹಾಸ ಬಹು ದೊಡ್ಡದು. ಶಾಂತಿನಾಥ ಬಸದಿ, ಚಂದ್ರನಾಥ ಬಸದಿ, ಚಾವುಂಡರಾಯ ಬಸದಿ, ಚಂದ್ರಗುಪ್ತ ಬಸದಿ ಸೇರಿದಂತೆ ಹಲವು ಜಿನಾಲಯಗಳೂ ಭದ್ರನಾಥ ಗುಹೆಯೂ ಇಲ್ಲಿದೆ. ರನ್ನ ಕವಿ ಹಾಗೂ ಚಾವುಂಡರಾಯನ ಹಸ್ತಾಕ್ಷರಗಳು ಇಲ್ಲಿವೆ. ಆದರೆ, ಬಾಹುಬಲಿಯನ್ನು ನೋಡಲು ಬಂದವರ ಕಣ್ಣು ಬಸದಿಗಳ ಬದಲು ಸಮೀಪದ ಬೆಟ್ಟದತ್ತಲೇ ನಾಟಿದ್ದವು.

ಮಸ್ತಕಾಭಿಷೇಕವನ್ನು ಕುಳಿತು ನೋಡುವವರಿಗಾಗಿ ಪುಟ್ಟ ಶಾಮಿಯಾನದ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲ ಬೇಗೆಯನ್ನು ತಣಿಸಲೆಂದು ದಾನಿಗಳು ನಿಂಬೆಹಣ್ಣಿನ ಪಾನಕದ ವ್ಯವಸ್ಥೆ ಮಾಡಿದ್ದರು. ಬಹುತೇಕರ ಕೈಗಳಲ್ಲಿ ಸಾಬೂನು ಕಂಪನಿಯೊಂದು ನೀಡಿದ ತನ್ನ ಉತ್ಪನ್ನಗಳ ಜಾಹೀರಾತನ್ನೊಳಗೊಂಡ ಕಾಗದದ ಬೀಸಣಿಕೆ.

ಭಕ್ತರ ಭಾವೋದ್ವೇಗ: ಬಸದಿಗಳ ಹರಕು ಮುರಕು ನೆರಳಿನಲ್ಲಿ ನಿಂತವರು ಮಸ್ತಕಾಭಿಷೇಕ ನೋಡಿ ಪುಳಕಗೊಳ್ಳುತ್ತಿದ್ದರು. ಪಾರ್ಶ್ವನಾಥ ಬಸದಿಯ ಎದುರು ನಿಂತು ನೋಡಿದರೆ ಗೊಮ್ಮಟನ ಭವ್ಯರೂಪು ಕಣ್ಣಿಗೆ ಕಟ್ಟುವಂತಿತ್ತು. ಹಾಲಿನ ಅಭಿಷೇಕ ಶುರುವಾದಾಗ ವಿಂಧ್ಯಗಿರಿಯಲ್ಲಿ ಭಕ್ತರ ಭಾವೋದ್ವೇಗದ ಜೈಕಾರ. ಇಂದ್ರಗಿರಿಯಲ್ಲಿ ನೆರೆದಿದ್ದ ಭಕ್ತರು, ದೂರದಿಂದಲೇ ಕೈಮುಗಿದು, ’ಭಗವಾನ್ ಬಾಹುಬಲಿಗೆ ಜೈ’ ಎಂದು ಕೂಗಿದರು. ಚಪ್ಪಾಳೆ ತಟ್ಟುತ್ತ ನಿಂತಲ್ಲೇ ನರ್ತಿಸತೊಡಗಿದರು.

ಗುಂಡ್ಲುಪೇಟೆಯಿಂದ ಬಂದವರೊಬ್ಬರಿಗೆ ಬೆಟ್ಟದಿಂದ ಬೇಗನಿಳಿದು ವಿಂಧ್ಯಗಿರಿಯ ಸಾಲನ್ನು ಸೇರಿಕೊಳ್ಳುವ ತವಕ. ಆದರೆ, ವಿಜಯಪುರದಿಂದ ಬಂದಿದ್ದ ಪಾರ್ಶ್ವನಾಥ ಎನ್ನುವ ಹಿರಿಯರಿಗೆ ದೊಡ್ಡ ಬೆಟ್ಟವನ್ನು ಹತ್ತುವ ಉತ್ಸಾಹ ಇರಲಿಲ್ಲ. ಮಾತಾಜಿಯೊಬ್ಬರ ಜೊತೆ ಬೆಳಗೊಳಕ್ಕೆ ಬಂದಿದ್ದ ಅವರಿಗೆ ಮಸ್ತಕಾಭಿಷೇಕದ ಸಮಯದಲ್ಲಿ ಬೆಟ್ಟವೇರುವ ಅನುಮತಿಪತ್ರ ದೊರೆತಿರಲಿಲ್ಲ. ಚಪ್ಪಲಿ ಕಳೆದುಕೊಂಡ ಬೇಸರದಲ್ಲಿದ್ದ ಅವರು, ದೊಡ್ಡ ಗೊಮ್ಮಟನಿಗೆ ಚಿಕ್ಕಬೆಟ್ಟದಿಂದಲೇ ನಮಸ್ಕರಿಸಲು ನಿರ್ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT