ಭಾನುವಾರ, ಡಿಸೆಂಬರ್ 8, 2019
25 °C
ದಾಸರಹಳ್ಳಿ ಕ್ಷೇತ್ರದ 3ನೇ ಕನ್ನಡ ಸಾಹಿತ್ಯ ಸಮ್ಮೇಳನ

‘ಮಾತನಾಡುವವರಿಂದಲೇ ಭಾಷೆ ಉಳಿವು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಾತನಾಡುವವರಿಂದಲೇ ಭಾಷೆ ಉಳಿವು’

ಬೆಂಗಳೂರು: ಭಾಷೆ ಜೀವಂತವಾಗಿ ಉಳಿಯುವುದು ಆ ಭಾಷೆಯನ್ನು ಮಾತನಾಡುವ ಜನರಿಂದಲೇ ಹೊರತು ಸಾಹಿತ್ಯದ ರಚನೆಯಿಂದಲ್ಲ ಎಂದು ದಾಸರಹಳ್ಳಿ ಕ್ಷೇತ್ರದ 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕಂನಾಡಿಗಾ ನಾರಾಯಣ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ದಾಸರಹಳ್ಳಿ ಘಟಕದ ವತಿಯಿಂದ ಮಲ್ಲಸಂದ್ರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಒಂದು ಭಾಷೆಯನ್ನು ಮಾತನಾಡುವ ಜನ ಕ್ಷೀಣಿಸಿದರೆ ಆ ಭಾಷೆ ಅವಸಾನದ ಕಡೆಗೆ ಸಾಗುತ್ತದೆ. ಇದಕ್ಕೆ ಸಂಸ್ಕೃತ ಭಾಷೆಯೇ ಉದಾಹರಣೆ. ಒಂದು ಕಾಲದಲ್ಲಿ ಸಂಸ್ಕೃತವನ್ನು ಜೀರ್ಣಿಸಿಕೊಂಡು ಉಳಿದ ಕನ್ನಡವು ಈಗ ಇಂಗ್ಲಿಷ್‌ ಭಾಷೆಯನ್ನು ಜೀರ್ಣಿಸಿಕೊಳ್ಳಬೇಕಿದೆ. ಒಂದು ತಲೆಮಾರಿನವರು ಭಾಷೆಯ ಕೊಂಡಿಕಳಚಿಕೊಂಡರೆ ಮತ್ತೆ ಅದನ್ನು ಕೂಡಿಸುವುದು ಕಷ್ಟ ಎಂದು ಅಭಿಪ್ರಾಯಪಟ್ಟರು.

ಅಂಗಡಿಗಳು ಹಾಗೂ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂಬ ನಿಯಮ ಇದ್ದರೂ ಅದು ಪಾಲನೆ ಆಗುತ್ತಿಲ್ಲ. ಕನ್ನಡಿಗರು ತಮ್ಮ ಸಹಿಯನ್ನು ಕನ್ನಡದಲ್ಲೇ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದರೂ ಉತ್ತಮ ಕಟ್ಟಡ, ಶೌಚಾಲಯಗಳಿಲ್ಲ. ಖಾಸಗಿ ಸಂಸ್ಥೆಗಳು ಉತ್ತಮ ಶಾಲೆಗಳನ್ನು ಸ್ಥಾಪಿಸಲು ಸಾಧ್ಯವಾಗುವುದಾದರೆ, ಸರ್ಕಾರಕ್ಕೆ ಏಕೆ ಸಾಧ್ಯವಿಲ್ಲ. ಇದು ಸರ್ಕಾರದ ಇಚ್ಛಾಶಕ್ತಿಯನ್ನು ತೋರಿಸುತ್ತದೆ ಎಂದು ದೂರಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ‘ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಜ್ಯದಲ್ಲಿ ಲಿಪಿ ಇಲ್ಲದ ಎಷ್ಟೋ ಭಾಷೆಗಳಿವೆ. ಕೊಂಕಣಿ, ಲಂಬಾಣಿ, ಕೊಡವ ಹಾಗೂ ತುಳು ಭಾಷೆಗಳಿಗೆ ಲಿಪಿ ಇಲ್ಲ’ ಎಂದರು.

ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಹಾಗೂ ಜೀವನ ಪದ್ಧತಿಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಶಾಸಕ ಎಸ್.ಮುನಿರಾಜು, ‘ನಗರ ಪ್ರದೇಶಗಳಲ್ಲದೆ ಗ್ರಾಮೀಣ ಭಾಗದಲ್ಲೂ ಇಂಗ್ಲಿಷ್‌ ವ್ಯಾಮೋಹ ಹೆಚ್ಚುತ್ತಿದೆ. ಇಂಗ್ಲಿಷ್‌ ಭಾಷೆ ಕಲಿತರೂ ಕನ್ನಡವನ್ನು ಮರೆಯಬಾರದು’ ಎಂದು ಅವರು ಹೇಳಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮಾಡಲಾಯಿತು. ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಮೆರವಣಿಗೆಯಲ್ಲಿ 300 ಅಡಿ ಉದ್ದದ ಕನ್ನಡ ಧ್ವಜವನ್ನು ಪ್ರದರ್ಶಿಸಲಾಯಿತು.

ಪ್ರತಿಕ್ರಿಯಿಸಿ (+)