ಬುಧವಾರ, ಡಿಸೆಂಬರ್ 11, 2019
22 °C

ಯುಪಿಎಸ್‌ಸಿ ಪರೀಕ್ಷೆ: ಕನ್ನಡದಲ್ಲಿ ವಿಜ್ಞಾನದ 10 ಪುಸ್ತಕ ಪ್ರಕಟಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುಪಿಎಸ್‌ಸಿ ಪರೀಕ್ಷೆ: ಕನ್ನಡದಲ್ಲಿ ವಿಜ್ಞಾನದ 10 ಪುಸ್ತಕ ಪ್ರಕಟಣೆ

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಹಾಗೂ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆಗಳಿಗೆ ರಾಜ್ಯದ ವಿದ್ಯಾರ್ಥಿಗಳು ಪೂರ್ವತಯಾರಿ ನಡೆಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ವಿಜ್ಞಾನದ 10 ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸಲಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಹೇಳಿದರು.

ನಗರದಲ್ಲಿ ಭಾನುವಾರ ಭೂವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಅವರ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

‘ಕನ್ನಡ ಮಾಧ್ಯಮದಲ್ಲಿ ಕಲಿತವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರೀಕ್ಷಿತ  ಯಶಸ್ಸು ಗಳಿಸುತ್ತಿಲ್ಲ. ವಿಜ್ಞಾನದ ವಿಷಯಗಳಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಮಾಹಿತಿಯ ಕೊರತೆ ಇದೆ’ ಎಂದರು.

ವಿಮರ್ಶಕ ಪ್ರೊ.ಸಿ.ಎನ್‌.ರಾಮಚಂದ್ರನ್‌, ‘ಕನ್ನಡ ಸಾಹಿತ್ಯಕ್ಕೂ ಭೂಗರ್ಭ ವಿಜ್ಞಾನಕ್ಕೂ ಗಾಢ ನಂಟಿದೆ. ಕನ್ನಡ ನಾಟಕವು ಆಧುನಿಕತೆಗೆ ಹೊರಳಲು ಕಾರಣರಾದ ಟಿ.ಪಿ.ಕೈಲಾಸಂ ಭೂವಿಜ್ಞಾನಿ. ಕವಿ ನಿಸಾರ್‌ ಅಹಮದ್‌ ಸಹ ಭೂಗರ್ಭ ಶಾಸ್ತ್ರಜ್ಞರು’ ಎಂದು ಹೇಳಿದರು.

ಲೇಖಕರ ‘ಕೋಲಾರದ ಚಿನ್ನದ ಗಣಿಗಳು’ ಕೃತಿಯು ಅನೇಕ ಆಯಾಮಗಳನ್ನು ಒಳಗೊಂಡಿದೆ. ಗಣಿಯಲ್ಲಿ 1800ರಿಂದ 2001ರವರೆಗಿನ ರೋಚಕ ಚರಿತ್ರೆಯನ್ನು ತೆರೆದಿಡುತ್ತದೆ. ಐದಾರು ಪೀಳಿಗೆಯ ಕಾರ್ಮಿಕರು ಇಲ್ಲಿ ದುಡಿದಿದ್ದಾರೆ. ಅವರ ಶ್ರಮ ಹಾಗೂ ಬದುಕಿನ ನೋವುಗಳನ್ನೂ ಚಿತ್ರಿಸಲಾಗಿದೆ ಎಂದರು.

ಕಾರ್ಮಿಕರನ್ನು ಮತಾಂತರಗೊಳಿಸಲು ಕ್ರೈಸ್ತ ಮಿಷನರಿಗಳು, ಮೌಲ್ವಿಗಳು, ಬೌದ್ಧ, ಶೈವ, ವೈಷ್ಣವ ಗುರುಗಳು ಪ್ರಯತ್ನಿಸುವ ಲೇಖನವೂ ಇದೆ. ಧರ್ಮ ಪ್ರಚಾರದ ಹುಚ್ಚನ್ನು ಲೇಖಕರು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿಯನ್ನು ಭೂವಿಜ್ಞಾನಿ ಡಾ.ಎಚ್‌.ಎಸ್‌.ಎಂ.ಪ್ರಕಾಶ್‌ ಇಂಗ್ಲಿಷ್‌ಗೆ ಸಮರ್ಥವಾಗಿ ಅನುವಾದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪರಿಸರ ಮಾಲಿನ್ಯ ಮತ್ತು ವಿಜ್ಞಾನದ ಕುರಿತು ವೆಂಕಟಸ್ವಾಮಿ ರಚಿಸಿರುವ ಎಂಟು ಲೇಖನಗಳ ಸಂಗ್ರಹವೇ ‘ನಮ್ಮ ಭೂಮಿಯ ಹಾಡು ಪಾಡು’ ಕೃತಿ. ಮೌಂಟ್‌ ಎವರೆಸ್ಟ್‌ನಲ್ಲಿ ಉಂಟಾಗಿರುವ ಮಾಲಿನ್ಯ, ಗಣಿಗಾರಿಕೆ, ನದಿ ತಿರುವು ಯೋಜನೆಗಳಿಂದ ಉಂಟಾಗುವ ಸಮಸ್ಯೆಗಳ ಕುರಿತು ಕೃತಿಯಲ್ಲಿ ಮನಮುಟ್ಟುವಂತೆ ಚಿತ್ರಿಸಲಾಗಿದೆ ಎಂದು ವಿಜ್ಞಾನ ಲೇಖಕ ಡಾ.ಟಿ.ಆರ್‌.ಅನಂತರಾಮು ತಿಳಿಸಿದರು.

***

ಕೃತಿಗಳು

ಕೋಲಾರ ಗೋಲ್ಡ್‌ ಮೈನ್ಸ್‌

ಲೇಖಕ: ಡಾ.ಎಂ.ವೆಂಕಟಸ್ವಾಮಿ

ಅನುವಾದಕ: ಡಾ.ಎಚ್‌.ಎಸ್‌.ಎಂ.ಪ್ರಕಾಶ್‌

ಪುಟಗಳು: 178

ಬೆಲೆ: ₹500

ಪ್ರಕಾಶನ: ಜಿಯಾಲಾಜಿಕಲ್‌ ಸೊಸೈಟಿ ಆಫ್‌ ಇಂಡಿಯಾ

 

ನಮ್ಮ ಭೂಮಿಯ ಹಾಡು ಪಾಡು

ಲೇಖಕ: ಡಾ.ಎಂ.ವೆಂಕಟಸ್ವಾಮಿ

ಪುಟಗಳು: 200

ಬೆಲೆ: ₹200

ಪ್ರಕಾಶನ: ಸಾಹಿತ್ಯ ಸುಗ್ಗಿ

ಪ್ರತಿಕ್ರಿಯಿಸಿ (+)