ಬುಧವಾರ, ಡಿಸೆಂಬರ್ 11, 2019
16 °C

ಮತಧರ್ಮಗಳಿಂದ ಕರ್ತವ್ಯದೆಡೆ ಮುಖ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತಧರ್ಮಗಳಿಂದ ಕರ್ತವ್ಯದೆಡೆ ಮುಖ ಮಾಡಿ

ಮಂಗಳೂರು: ಪ್ರೀತಿ, ಪ್ರೇಮ, ಆರೋಗ್ಯ, ಖುಷಿ, ನೆಮ್ಮದಿ ಮನುಷ್ಯನ ಮೂಲಭೂತ ವಿಚಾರಗಳು. ಅವುಗಳನ್ನು ಪಡೆಯಬೇಕಾದರೆ ಮತಧರ್ಮಗಳ ವಿಚಾರಕ್ಕಿಂತ ಹೆಚ್ಚಾಗಿ ನಮ್ಮ ಕರ್ತವ್ಯಗಳತ್ತ ಮುಖ ಮಾಡಬೇಕು. ಅಂತರಂಗದ ಶೋಧನೆ ಮಾಡಿಕೊಳ್ಳಬೇಕು ಎಂದು ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಹೇಳಿದರು.

ಕರ್ಣಾಟಕ ಬ್ಯಾಂಕ್‌ನ ಸಂಸ್ಥಾಪಕರ ದಿನಾಚರಣೆ ಸಂದರ್ಭ ಭಾನುವಾರ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ‘ಲೈಫ್‌ ಆಡಿಟ್‌’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

ಭಾರತೀಯ ತತ್ವಶಾಸ್ತ್ರದ ಕೆಲವೇ ಸಾಲುಗಳನ್ನು ಅಲ್ಲಲ್ಲಿ ಉಲ್ಲೇಖಿಸುತ್ತ ಲಘು ದಾಟಿಯಲ್ಲಿ ತರ್ಕಬದ್ಧವಾಗಿ ಮಾತನಾಡಿದ ಅವರು, ‘ರಿಲಿಜನ್‌ಗಿಂತ ರೆಸ್ಪಾನ್ಸಿಬಿಲಿಟಿ ಮುಖ್ಯ’ ಎಂದು ಪ್ರತಿಪಾದಿಸಿದರು.

ಹುಳು, ಮಿಡತೆ, ಪ್ರಾಣಿ ಪಕ್ಷಗಳು ತಮ್ಮ ಬದುಕನ್ನು ಪರಿಪೂರ್ಣತೆಯಿಂದ ಬದುಕುತ್ತವೆ. ಆದರೆ ಮನುಷ್ಯರು ಮಾತ್ರ ಇರುವುದೆಲ್ಲವ ಬಿಟ್ಟು ಇರದುದನ್ನೇ ಚಿಂತಿಸುತ್ತಾ ಇರುತ್ತಾರೆ. ಭೂಮಿಯನ್ನೇ ಗೆದ್ದರೂ ಮತ್ತೊಂದು ಗ್ರಹವನ್ನು ಗೆಲ್ಲುವ ಚಿಂತೆಯಲ್ಲಿ ಮುಳುಗುತ್ತಾರೆ. ಆದರೆ ಯಶಸ್ಸು ಮತ್ತು ನೆಮ್ಮದಿಯನ್ನು ಪಡೆಯುವ ಆಶಯವಿದ್ದಾಗ ಅಂತರಂಗದ ಪರಿಶೀಲನೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದರು.

‘ಚಿಕ್ಕಂದಿನಲ್ಲಿ ತುಂಬ ಸಂತೋಷವಾಗಿದ್ದ ನಿಮ್ಮ ಸಂತೋಷ ವಯಸ್ಸಾದಂತೆ ಕಡಿಮೆಯಾಗುತ್ತಿದೆ ಎಂದರೆ ಏನೋ ಎಡವಟ್ಟು ಆಗಿದೆ ಎಂದೇ ಅರ್ಥ. ಸ್ಮಶಾನದಲ್ಲಿ ಮಲಗಿರುವಂತೆ ಪೇಲವ ಮುಖಗಳನ್ನು ಹೊತ್ತು ಸಾಗುವವರನ್ನು ನೋಡುತ್ತೇನೆ. ಬದುಕಿನಲ್ಲಿ ಎಲ್ಲರೂ ಪಾಸಾಗುತ್ತಾರೆ ಎಂದಾದ ಮೇಲೆ ಈ ಕ್ಷಣವನ್ನು ತುಂಬು ಮನಸ್ಸಿನಿಂದ ಅನುಭವಿಸುವುದನ್ನು ಕಲಿತುಬಿಡಬೇಕು.

ಚಿಕ್ಕಂದಿನಲ್ಲಿ ಸುತ್ತಲಿನವರು ನಿಮ್ಮ ಖುಷಿಗೆ ಭಂಗ ತರುತ್ತಿದ್ದರು. ಆದರೆ ದೊಡ್ಡವರಾದ ಮೇಲೆ ನಿಮ್ಮನ್ನು ಖುಷಿಯಾಗಿಡಲು ಬಾಹ್ಯ ವಿಚಾರಗಳು, ವ್ಯಕ್ತಿಗಳ ಅವಲಂಬನೆ ಮಾಡುತ್ತಿರುವುದು ಎಷ್ಟು ಸರಿ? ಅದಕ್ಕಾಗಿಯೇ ಅಂತರಂಗದ ಖುಷಿಯನ್ನು ಅನ್ವೇಷಿಸುವುದು ಎಂದರೆ ಈ ಕ್ಷಣವನ್ನು ಪ್ರಜ್ಞಾಪೂರ್ವಕವಾಗಿ ಅನುಭವಿಸುವುದೇ ಆಗಿದೆ’ ಎಂದರು.

‘300 ವರ್ಷಗಳ ಹಿಂದೆ ಭೂಮಿಮೇಲೆ ಪ್ರಬಲ ಆರ್ಥಿಕ ಶಕ್ತಿಯಾಗಿ ಭಾರತ ದೇಶ ಗುರುತಿಸಿಕೊಂಡಿತ್ತು. ಯಾಕೆಂದರೆ ಸಾಮಾಜಿಕ ವ್ಯವಸ್ಥೆಯಲ್ಲಿ ವೈಯಕ್ತಿಕ ಏಳ್ಗೆಗೆ ಆದ್ಯತೆ ನೀಡಲಾಗುತ್ತಿತ್ತು. ವೈಯಕ್ತಿಕವಾಗಿ ವಿಕಾಸ ಹೊಂದಿದ ವ್ಯಕ್ತಿಗಳೇ ಸೇರಿ ಈ ಸಮಾಜ ರೂಪುಗೊಳ್ಳುತ್ತದೆ ಅಲ್ಲವೇ. ಆದರೆ ಬಳಿಕ ನಾವು ಅಳವಡಿಸಿಕೊಂಡ ಶಿಕ್ಷಣ ವ್ಯವಸ್ಥೆ ಸಾಮೂಹಿಕವಾಗಿ ಉತ್ಪಾದನಾ ಶಿಕ್ಷಣಕ್ಕೆ ಒತ್ತು ಕೊಟ್ಟಿತು. ಪ್ರತಿ ವ್ಯಕ್ತಿಯೂ ವಿಭಿನ್ನ ಎಂದಮೇಲೆ ವೈಯಕ್ತಿಕವಾಗಿ ಆದ್ಯತೆ ಕೊಟ್ಟಾಗ ಅದ್ಭುತಗಳನ್ನು ಸಾಧಿಸುವುದು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.

ಚಿಕ್ಕಮಗಳೂರು ಲಯನ್ಸ್‌ ಕ್ಲಬ್‌ನ ಹರೀಶ್‌ ಎಚ್‌. ಆರ್‌., ಶೃಂಗೇರಿ ಮಠದ ಸಿಇಒ ಡಾ. ವಿ.ಆರ್‌. ಗೌರಿ ಶಂಕರ್‌, ಉಡುಪಿ ಭಾರತೀಯ ವಿಕಾಸ ಟ್ರಸ್ಟ್‌ನ ಮನೋಹರ್‌ ಕಟ್‌ಗೇರಿ ಅವರಿಗೆ ಬ್ಯಾಂಕ್‌ನ ಸಿಎಸ್‌ಆರ್‌ ನೆರವಿನ ಪತ್ರ ನೀಡಲಾಯಿತು.

ವಿದುಷಿ ರಂಜನಿ ಮತ್ತು ವಿದುಷಿ ಗಾಯತ್ರಿ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಯಲಿನ್‌ನಲ್ಲಿ ವಿದ್ವಾನ್‌ ಮೈಸೂರು ಎಚ್‌. ಎನ್‌. ಭಾಸ್ಕರ್‌, ಮೃದಂಗದಲ್ಲಿ ವಿದ್ವಾನ್‌ ಡೆಲ್ಲಿ ಸಾಯಿರಾಮ್‌, ಘಟಂನಲ್ಲಿ ವಿದ್ವಾನ್‌ ಜಿ. ಚಂದ್ರಶೇಖರ ಶರ್ಮ ಸಹಕರಿಸಿದರು.

ಮಾತಿನ ಚಟಾಕಿ

ಸದ್ಗುರು ಮಾತಿನ ನಡುವೆ ತಮಾಷೆಯ ಸಾಲುಗಳಲ್ಲಿ ಸಭಿಕರನ್ನು ಎಚ್ಚರಿಸುತ್ತಿದ್ದರು. ಕುಳಿತೇ ಮಾತನಾಡುತ್ತಿದ್ದ ಅವರು, ‘ಅರೆ ನೀವು ಮಂಗಳೂರಿನವರು ಭಾರಿ ಸೀರಿಯಸ್‌ ಕಾಣ್ತೀರಲ್ಲ’ ಎನ್ನುತ್ತ ಎದ್ದು ನಿಂತು ಮಾತಿಗಾರಂಭಿಸಿದರು. ದೈವೀ ಶಾಂತಿ, ದೈವೀ ಪ್ರೀತಿ, ದೈವಿಕ ಪ್ರಸನ್ನತೆ ಎನ್ನುತ್ತ ಎಲ್ಲವನ್ನೂ ದೇವರಿಗೆ ಆರೋಪಿಸಿ ಆಕಾಶ ನೋಡುವುದು ಈಗ ಮಾಮೂಲಾಗಿದೆ.

ಪ್ರೀತಿ ಶಾಂತಿ, ಖುಷಿ ನೆಮ್ಮದಿಗಳು ಮನುಷ್ಯನಿಗೆ ಸಂಬಂಧಿಸಿದ ವಿಷಯಗಳಲ್ಲವೇ. ಅವುಗಳನ್ನು ಆತನೇ ಕಂಡುಕೊಳ್ಳಬೇಕೇ ವಿನಃ ದೇವರು ಬಂದು ನೆರವಾಗುವುದಿಲ್ಲ. ‘ನಿನ್ನ ಕರ್ಮವನ್ನು ನೀನು ಮಾಡು’ ಎಂದು ಭಾರತೀಯ ಪರಂಪರೆ ಬಹುಕಾಲದ ಹಿಂದೆಯೇ ಹೇಳಿದ್ದನ್ನು ನೆನಪಿಸಿಕೊಳ್ಳಬೇಕು. ದೇವರಿಗಿಂತಲೂ ಮಾಡುವ ಕೆಲಸವೇ ಮುಖ್ಯ ಎಂದು ಸಾರಿದ ನಾಡು ಇದು ಎಂದರು. ಸೌಕರ್ಯಗಳೇ ಹೆಚ್ಚಾದರೆ ಫ್ರಿಲ್‌ಗಳನ್ನೇ ಹೊಲಿದು ಸ್ಕರ್ಟೇ ಮಾಯವಾದಂತೆ ನೆಮ್ಮದಿ ಮಾಯವಾಗುತ್ತದೆ ಎಂದಾಗ ಸಭಿಕರು ನಕ್ಕರು.

ರೆಸ್ಟೊರೆಂಟ್‌ಗಳಲ್ಲಿ ತಿನಿಸು, ವಾತಾವರಣ ಮುಖ್ಯ. ಹಾಗೆಯೇ ಮಾತುಕತೆಯೂ ಮುಖ್ಯ. ಸಂಸತ್ತಿಗಿಂತಲೂ ಹೆಚ್ಚು ಮಾತುಕತೆ ರೆಸ್ಟೋರೆಂಟ್‌ಗಳಲ್ಲಿ ನಡೆಯುತ್ತದೆ ಅಲ್ಲವೇ ಎಂದು ಪ್ರಶ್ನಿಸುತ್ತ ಜೀವನದಲ್ಲಿ ಇಷ್ಟರವರೆಗೆ ತಾವು ಯಾವುದೇ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕಿಂತ ತಡವಾಗಿ ಹೋಗಿಲ್ಲ ಎಂದಾಗ ಚಪ್ಪಾಳೆಯ ಸುರಿಮಳೆ.

* * 

ಅಂತರಂಗದ ವಿಕಾಸಕ್ಕೆ ಪೂರಕವಾಗಿ ಸೌಕರ್ಯಗಳನ್ನು ಮಾಡಿಕೊಳ್ಳಬೇಕೇ ಹೊರತು ಸೌಕರ್ಯಗಳಿಗೇ ಆದ್ಯತೆ ನೀಡುತ್ತಾ ಸಾಗುವುದರಿಂದ ನೆಮ್ಮದಿ ಸಾಧ್ಯವಿಲ್ಲ

ಸದ್ಗುರು ಜಗ್ಗಿ ವಾಸುದೇವ್‌

ಈಶಾ ಫೌಂಡೇಶನ್‌ ಸಂಸ್ಥಾಪಕ

ಪ್ರತಿಕ್ರಿಯಿಸಿ (+)