ಶುಕ್ರವಾರ, ಡಿಸೆಂಬರ್ 6, 2019
24 °C

ಮೊದಲ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಪೂರ್ಣ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

ಮೊದಲ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಪೂರ್ಣ

ರಾಮನಗರ: ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡವು ನಿರ್ಮಾಣಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಈ ಮಾದರಿಯ ಮೊದಲ ಕ್ಯಾಂಟೀನ್‌ ಇದಾಗಿದೆ.

ಕಟ್ಟಡ ನಿರ್ಮಾಣ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು, ಮುಂಭಾಗದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಭಾವಚಿತ್ರವುಳ್ಳ ಶಿಲೆಯನ್ನೂ ಪ್ರತಿಷ್ಠಾಪಿಸಲಾಗಿದೆ. ಕಟ್ಟಡದ ಒಳಗೆ ದೊಡ್ಡದಾದ ಸಭಾಂಗಣ ಇದ್ದು, ಅಲ್ಲಿ ಉಪಾಹಾರ, ಊಟದ ವಿತರಣೆಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಅದರ ಹಿಂಭಾಗದಲ್ಲಿ ಅಡುಗೆ ಕೋಣೆ ಇರಲಿದೆ.

ಊಟ ಸವಿಯಲು ಅನುಕೂಲವಾಗುವಂತೆ ಕಟ್ಟಡದ ಸುತ್ತ ಅಲ್ಲಲ್ಲಿ ಕಲ್ಲು ಬೆಂಚುಗಳನ್ನು ಹಾಕಲಾಗಿದೆ. ಜೊತೆಗೆ ಕೈತೊಳೆಯುವ ತೊಟ್ಟಿ ಸಹಿತ ಕ್ಯಾಂಟೀನ್‌ಗೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ನಿರ್ಮಿಸಲಾಗಿದೆ. ರಾಜ್ಯ ಸರ್ಕಾರವು ರಾಜ್ಯದಲ್ಲಿ ಒಟ್ಟು 247 ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಮುಂದಾಗಿದೆ. ನಗರ ಪ್ರದೇಶದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಒಂದರಂತೆ ಕ್ಯಾಂಟೀನ್ ನಿರ್ಮಿಸಲಾಗುತ್ತಿದೆ. ರಾಮನಗರದ ಜನಸಂಖ್ಯೆ 1.25 ಲಕ್ಷ ದಾಟಿರುವ ಕಾರಣ ಇಲ್ಲಿ ಎರಡು ಕ್ಯಾಂಟೀನ್‌ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ.

ಕಾರ್ಮಿಕ ವರ್ಗಕ್ಕೆ ಅನುಕೂಲ: ಬಡ ಜನರಿಗೆ ಕನಿಷ್ಠ ದರದಲ್ಲಿ ಉಪಾಹಾರ, ಊಟ ನೀಡಬೇಕು ಎನ್ನುವುದು ಈ ಕ್ಯಾಂಟೀನ್‌ಗಳ ನಿರ್ಮಾಣದ ಹಿಂದಿನ ಮುಖ್ಯ ಉದ್ದೇಶವಾಗಿದೆ. ಇಲ್ಲಿ ಬೆಳಿಗ್ಗೆ ಹೊತ್ತು ₹5ಕ್ಕೆ ಉಪಾಹಾರ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ₹10ಕ್ಕೆ ಊಟ ದೊರೆಯಲಿದೆ. ಮುಖ್ಯವಾಗಿ ನಿರ್ಗತಿಕರು, ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ಇದರಿಂದ ಹೆಚ್ಚು ಅನುಕೂಲ ಆಗಲಿದೆ. ಒಂದು ಹೊತ್ತಿಗೆ 500 ಮಂದಿಗೆ ಊಟ ಸಿಗಲಿದೆ.

ಜನಸಂದಣಿ ಹೆಚ್ಚಾದಲ್ಲಿ ಟೋಕನ್‌ ವಿತರಣೆ ಮೂಲಕ ಮೊದಲು ಬಂದವರಿಗೆ ಆದ್ಯತೆ ಸಿಗಲಿದೆ. ಈಗ ಕ್ಯಾಂಟೀನ್ ನಿರ್ಮಾಣವಾಗುತ್ತಿರುವ ಸ್ಥಳವು ಜನಸಂದಣಿಯಿಂದ ಕೂಡಿದ್ದು, ಹತ್ತಿರದಲ್ಲಿಯೇ ರೈಲು ನಿಲ್ದಾಣ, ನಗರಸಭೆಯ ಕಚೇರಿಯೂ ಇದೆ. ಗುಣಮಟ್ಟದ ಆಹಾರ ದೊರೆತಿದ್ದೇ ಆದಲ್ಲಿ ಖಂಡಿತ ಜನರಿಗೆ ಇಷ್ಟವಾಗಲಿದೆ ಎಂದು ಸ್ಥಳೀಯ ವರ್ತಕ ಜಾಫರ್ ಹೇಳುತ್ತಾರೆ.

ಕ್ಯಾಂಟೀನ್‌ ನಿರ್ವಹಣೆಗೆ ತಗುಲುವ ವೆಚ್ಚದಲ್ಲಿ ಶೇ 30ರಷ್ಟು ವೆಚ್ಚವನ್ನು ಕಾರ್ಮಿಕ ಇಲಾಖೆಯು ಭರಿಸಲಿದೆ. ಉಳಿದ ಶೇ 70ರಷ್ಟನ್ನು ನಗರಾಭಿವೃದ್ಧಿ ಇಲಾಖೆಯು ಸ್ಥಳೀಯ ಸಂಸ್ಥೆಗಳ ಮೂಲಕ ನೀಡಲಿದೆ.

ಸಮಿತಿ ರಚನೆ: ಜಿಲ್ಲೆಯಲ್ಲಿನ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ. ಜಿಲ್ಲಾ ರಕ್ಷಣಾಧಿಕಾರಿ, ಆಹಾರ ಮತ್ತು ನಾಗರಿಕ ಪೂರೈಕೆ ಉಪನಿರ್ದೇಶಕರು, ಜಿಲ್ಲಾ ಆರೋಗ್ಯಾಧಿಕಾರಿ, ನಗರ ಸ್ಥಳೀಯ ಸಂಸ್ಥೆಯ ಆಯುಕ್ತರು, ಕಾರ್ಮಿಕಾಧಿಕಾರಿ ಸೇರಿದಂತೆ ಒಟ್ಟು 10 ಸದಸ್ಯರನ್ನು ಈ ಸಮಿತಿಯು ಒಳಗೊಂಡಿದೆ. ಆಹಾರ ಪೂರೈಕೆ ಮತ್ತು ಅದರ ಗುಣಮಟ್ಟದ ಮೇಲ್ವಿಚಾರಣೆಯನ್ನು ಈ ಸಮಿತಿಯು ಮಾಡಲಿದೆ.

ಅಲ್ಲಲ್ಲಿ ಅಪಸ್ವರ

ಜಿಲ್ಲೆಯಲ್ಲಿ ಒಟ್ಟು 6 ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಪೌರಾಡಳಿತ ಇಲಾಖೆಯು ಉದ್ದೇಶಿಸಿದ್ದು, ಮೂರು ತಾಲ್ಲೂಕುಗಳಲ್ಲಿ ಸ್ಥಳ ಆಯ್ಕೆ ವಿವಾದದಲ್ಲಿದೆ. ರಾಮನಗರದಲ್ಲಿ ಇನ್ನೊಂದು ಕ್ಯಾಂಟೀನ್‌ ನಿರ್ಮಾಣಕ್ಕಾಗಿ ಹಳೆಯ ಬಸ್ ನಿಲ್ದಾಣ ಸಮೀಪ ಪಶು ವೈದ್ಯಕೀಯ ಇಲಾಖೆಯ ಸ್ಥಳವನ್ನು ಗುರುತಿಸಲಾಗಿತ್ತು, ಅದಕ್ಕೆ ರೈತ ಮುಖಂಡರಿಂದ ವಿರೋಧ ವ್ಯಕ್ತವಾಯಿತು.

ಮಾಗಡಿಯಲ್ಲಿ ಪುರಸಭೆಯ ಹಳೆಯ ಕಚೇರಿ ಬಳಿ ಸ್ಥಳ ಗುರುತಿಸಲಾಗಿದೆ. ಆದರೆ ಅಲ್ಲಿ ಕೆಂಪೇಗೌಡರ ಪ್ರತಿಮೆ ಇರುವ ಕಾರಣಕ್ಕೆ ಕೆಲವರು ವಿರೋಧಿಸುತ್ತಿದ್ದಾರೆ. ಚನ್ನಪಟ್ಟಣದ ಜೆ.ಸಿ. ರಸ್ತೆಯಲ್ಲಿ ರಕ್ತ ನಿಧಿ ಕೇಂದ್ರಕ್ಕೆಂದು ಮೀಸಲಿಟ್ಟ ಜಾಗದಲ್ಲಿ ಕ್ಯಾಂಟೀನ್‌ ನಿರ್ಮಾಣಕ್ಕೆ ಮುಂದಾಗಿದ್ದು, ಸ್ಥಳೀಯರು ಕಾಮಗಾರಿಗೆ ತಡೆ ಒಡ್ಡಿದ್ದಾರೆ. ಕನಕಪುರದಲ್ಲಿ ಹಾಲಿ ಸಣ್ಣ ನೀರಾವರಿ ಇಲಾಖೆ ಕಚೇರಿ ಜಾಗದಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಆದರೆ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ.

ಸದ್ಯದಲ್ಲಿಯೇ ಚುನಾವಣೆ ನೀತಿ ಸಂಹಿತೆಯು ಜಾರಿಯಾಗಲಿದೆ. ಅದರೊಳಗೆ ಪ್ರತಿ ತಾಲ್ಲೂಕು ಕೇಂದ್ರದಲ್ಲಿಯೂ ಕ್ಯಾಂಟೀನ್‌ ಆರಂಭಕ್ಕೆ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ಗಾಂಧಿ ಭಾಷಣ ಮಾಡಿದ ಮೈದಾನ?

ಪ್ರಸ್ತುತ ಕ್ಯಾಂಟೀನ್‌ ನಿರ್ಮಾಣ ಮಾಡಿರುವ ಮೈದಾನದಲ್ಲಿ ರಾಷ್ಟ್ರಪತಿ ಮಹಾತ್ಮಗಾಂಧಿ ಅವರು ಭಾಷಣ ಮಾಡಿದ್ದರು ಎಂದು ಹೇಳಲಾಗುತ್ತಿದೆ. 1928ರಲ್ಲಿ ಗಾಂಧೀಜಿ ಸ್ವದೇಶಿ ಚಳವಳಿ ಅಂಗವಾಗಿ ರಾಮನಗರಕ್ಕೆ ಭೇಟಿ ನೀಡಿದ್ದ ಸಂದರ್ಭ ಇಲ್ಲಿ ಮಾತನಾಡಿದರು ಎನ್ನಲಾಗಿದೆ. ‘ನಮ್ಮ ತಂದೆ ಸಿಪಾಯಿ ರಾಮರಾವ್‌ ಅವರು ಇದೇ ರಸ್ತೆ ಎದುರಿನ ಕಲ್ಲುಬೆಂಚುಗಳ ಮೇಲೆ ನಮ್ಮನ್ನು ಕೂರಿಸಿಕೊಂಡು ನಮಗೆ ಈ ಬಗ್ಗೆ ಹೇಳಿದ್ದರು. ಇದೇ ಮೈದಾನದಲ್ಲಿ ಅಂದು ಮಹಾತ್ಮರು ಭಾಷಣ ಮಾಡಿದ್ದಾಗಿ ಅವರು ತಿಳಿಸಿದ್ದರು. ಆದರೆ ಅದು ಕ್ಯಾಂಟೀನ್ ನಿರ್ಮಾಣವಾದ ಸ್ಥಳವೋ ಅಥವಾ ಇನ್ನೂ ಕೆಳಗೋ ಗೊತ್ತಿಲ್ಲ’ ಎಂದು ಹಿರಿಯರಾದ ಸಂಗೀತ ವಿದ್ಯಾನ್‌ ಶಿವಾಜಿ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಇಂದಿರಾ ಕ್ಯಾಂಟೀನ್ ಆರಂಭಿಸುತ್ತಿರುವುದು ಸಂತಸದ ವಿಚಾರ. ಆದರೆ ಬಡವರಿಗೆ ಕಡಿಮೆ ಕಾಸಿನಲ್ಲಿ ರುಚಿ, ಶುಚಿಯಾದ ಆಹಾರ ವಿತರಿಸಬೇಕಿದೆ

ರಮೇಶ್‌ಕುಮಾರ್

ಸ್ಥಳೀಯ ನಿವಾಸಿ

ಪ್ರತಿಕ್ರಿಯಿಸಿ (+)