ದೇವೇಗೌಡರ ಮನಸ್ಥಿತಿ ಬಿಚ್ಚಿಡುವೆ: ಕಾಗೋಡು

7

ದೇವೇಗೌಡರ ಮನಸ್ಥಿತಿ ಬಿಚ್ಚಿಡುವೆ: ಕಾಗೋಡು

Published:
Updated:

ಸೊರಬ: ಚುನಾವಣೆಯಲ್ಲಿ ಸೋಲು- ಗೆಲುವು ಸಾಮಾನ್ಯ. ಚುನಾವಣೆಯೇ ರಾಜಕೀಯದ ಅಂತ್ಯವಲ್ಲ.  ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಬೇಕು. ಈ ಕಾರಣದಿಂದ ನೆಲೆಸಿದ ಭೂಮಿಗೆ ಹಕ್ಕು ನೀಡಲು ಸಾಧ್ಯವಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಸೊರಬ ಮತ್ತು ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಜನರ ಸೇವೆ ಮಾಡಲು ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬುದಿಲ್ಲ. ಸಾಮಾಜಿಕ ಹೋರಾಟ ನಡೆಸುವ ಮೂಲಕ ಸಾಮಾನ್ಯ ಜನರಿಗೆ ನ್ಯಾಯ ಕೊಡಿಸಬಹುದು. ಹಿಂದೆ ಭೂ ಸುಧಾರಣೆಗೆ ಹೋರಾಡಿದ್ದರ ಪ್ರತಿಫಲವಾಗಿ ಭೂಮಿಗೆ ಹಕ್ಕು ನೀಡಲು ಸಾಧ್ಯವಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ  ಒಬ್ಬ ಸಮಾಜವಾದಿ ಹೋರಾಟಗಾರ. ರಾಜ್ಯವನ್ನು ಅಭಿವೃದ್ಧಿಪಡಿಸುವ ಜತೆಗೆ ಸಾಮಾನ್ಯ ಜನರ ಬದುಕಿಗೆ ಆಧಾರವಾದ ಯೋಜನೆಗಳನ್ನು ಜಾರಿಗೆ ತಂದು ಸಾಮಾಜಿಕ ನ್ಯಾಯ ಕಲ್ಪಿಸಿದ್ದಾರೆ ಎಂದರು.

ರೈತರ ಸಾಲ ಮನ್ನಾ ಮಾಡಿ ಒತ್ತಡರಹಿತ ಬದುಕಿಗೆ ನೆಲೆ ಕಲ್ಪಿಸಿದ ಉದ್ಯೋಗದ ಹಕ್ಕು ನೀಡುವ ಜತೆಗೆ ಎಲ್ಲ ಸಮುದಾಯದ ಜನರಿಗೆ, ಮಹಿಳೆಯರಿಗೆ ಬದುಕುವ ಹಕ್ಕುನ್ನು ನೀಡುತ್ತಾ ಸಮಾಜವಾದಿ ಸಿದ್ಧಾಂತವನ್ನು ಗಟ್ಟಿಗೊಳಿಸಿಕೊಂಡ ಪಕ್ಷ ಕಾಂಗ್ರೆಸ್‌. ರುವ ಚುನಾವಣೆಯಲ್ಲಿಯೂ ಅಧಿಕಾರ ಹಿಡಿಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರದ ಸಮಗ್ರ ಯೋಜನೆಗಳನ್ನು ಜನರ ಮುಂದಿಟ್ಟು ಪಕ್ಷ ಸಂಘಟನೆ ಮಾಡಬೇಕು. ಜನರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಕೆಲಸ ಮಾಡುವ ನಾಯಕತ್ವ ಬೆಳೆಸಿಕೊಂಡಿದ್ದಲ್ಲಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ಸುಲಭ ಎಂದರು.

‘ರಾಜಕಾರಣದಲ್ಲಿ ಸಂಸ್ಕೃತಿ ಇರಬೇಕು. ಸಂಸ್ಕೃತಿಯನ್ನು ಮರೆತು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಕೀಳಾಗಿ ಮಾಡನಾಡುವುದನ್ನು ಖಂಡಿಸುತ್ತೇನೆ. ಸಂದರ್ಭ ಬಂದಲ್ಲಿ ದೇವೇಗೌಡರ ಮನಸ್ಥಿತಿಯನ್ನು ಬಿಚ್ಚಿಡಲು ಸಿದ್ಧ’ ಎಂದು ಕುಟುಕಿದರು.

ಬಗರ್‌ಹುಕುಂ ಹಕ್ಕುಪತ್ರ ಹಾಗೂ ಪಟ್ಟಣದ ಆಶ್ರಯ ನಿವೇಶನ ನೀಡಲು ಶಾಸಕರು ಸಭೆ ನಡೆಸುತ್ತಿಲ್ಲ. ಇದರಿಂದ ಸಾಮಾನ್ಯ ಜನರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಸಭೆಯಲ್ಲಿ ಸೇರಿದ ಜನರು ಸಚಿವರ ಗಮನಕ್ಕೆ ತಂದರು.

ಕಾಂಗ್ರೆಸ್ ಸರ್ಕಾರ ಭೂಮಿಯ ಹಕ್ಕು ನೀಡುತ್ತಿರುವುದನ್ನು ಪ್ರತಿಯೊಬ್ಬರೂ ಗೌರವಿಸಿ ಕೆಲಸ ನಿರ್ವಹಿಸಬೇಕು, ಶಾಸಕರಿಲ್ಲದೆಯೂ ಸಭೆ ನಡೆಸಿ ಹಕ್ಕು ಪತ್ರ ಹಾಗೂ ನಿವೇಶನ ನೀಡಬಹುದು. ಅಧಿಕಾರಿಗಳು ನಿರ್ಲಕ್ಷಿಸಿದಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಶಿವಾನಂದಪ್ಪ, ಜಿಲ್ಲಾಧ್ಯಕ್ಷ ತಿ.ನಾ.ಶ್ರೀನಿವಾಸ್, ಯೋಗೇಶ್ವರಿ ವಿಜಯ್, ರಾಜಪ್ಪ, ನಾಗಚೌಡಯ್ಯ, ಚಂದ್ರಭೂಪಾಲ್, ಮಂಜುನಾಥ್ ಕೆ.ಹಳೇಸೊರಬ, ಲಕ್ಷ್ಮಿಕಾಂತ್ ಚಿಮನೂರು, ಚೌಟಿ ಚಂದ್ರಶೇಖರ್ ಪಾಟೀಲ್, ಬಾಸೂರು ಚಂದ್ರೇಗೌಡ, ನಗರದ ಮಹಾದೇವಪ್ಪ, ಕಲ್ಲಪ್ಪ ಚಿತ್ರಟ್ಟೆಹಳ್ಳಿ, ಲೋಲಾಕ್ಷಮ್ಮ, ಸುಮಾ, ಕರುಣಾಕರ್, ಸುಜಾಯತ್ ವುಲ್ಲಾ, ಕೆರಿಯಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry