ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಎಸ್‌ ಮೊದಲ ವಸ್ತು ಸಂಗ್ರಹಾಲಯ

Last Updated 19 ಫೆಬ್ರುವರಿ 2018, 6:54 IST
ಅಕ್ಷರ ಗಾತ್ರ

ಶಿವಮೊಗ್ಗ: ಜಾಗತೀಕರಣದ ಪ್ರಭಾವದಿಂದ ಗ್ರಾಮೀಣ ವಸ್ತುಗಳು ಹಾಗೂ ಜೀವನಶೈಲಿ ಮರೆಯಾಗುತ್ತಿವೆ. ಆ ಕಾರಣಕ್ಕಾಗಿ ಗ್ರಾಮೀಣ ವಸ್ತುಗಳನ್ನು ಪುನಃ ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು. ಮರೆತುಹೋದ ಗ್ರಾಮೀಣ ಸಂಪ್ರದಾಯ, ಜೀವನಶೈಲಿ, ಪರಿಕರಗಳನ್ನು ಮತ್ತೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಡುವಂತೆ ಮಾಡಬೇಕು ಎಂದು ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ಎನ್‌ಎಸ್‌ಎಸ್‌ ವಸ್ತು ಸಂಗ್ರಹಾಲಯವನ್ನು ತೆರೆಯಲಾಗಿದೆ.

ಈ ಎನ್‌ಎಸ್‌ಎಸ್‌ ವಸ್ತು ಸಂಗ್ರಹಾಲಯ ತೆರೆದಿರುವುದು ಯಾವುದೇ ಸರ್ಕಾರವೋ, ವಿಶ್ವವಿದ್ಯಾಲಯವೋ ಅಲ್ಲ. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರೇ ಸೇರಿ ಈ ಸಂಗ್ರಹಾಲಯ ತೆರೆದಿದ್ದಾರೆ. ಇಲ್ಲಿ ನಮ್ಮ ಪೂರ್ವಿಕರು ಉಪಯೋಗಿಸುತ್ತಿದ್ದ ಕಾಣಲು ಸಿಗದ ಪರಿಕರಗಳನ್ನು ಸಂಗ್ರಹಿಸಲಾಗಿದೆ. ಈ ಮೂಲಕ ಹಳೆಯ ವಸ್ತುಗಳಿಗೆ ಜೀವ ತುಂಬುವ ಕೆಲಸ ನಡೆಯುತ್ತಿದೆ.

ಇತ್ತೀಚೆಗೆ ಶಿವಮೊಗ್ಗ ತಾಲ್ಲೂಕು ಆಯನೂರಿನಿಂದ 20 ಕಿ.ಮೀ ದೂರದಲ್ಲಿರುವ ಆಡಿನಕೊಟ್ಟಿಗೆ ಎಂಬ ಹಳ್ಳಿಯಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನಿಂದ ನಡೆಸಿದ ಎನ್‌ಎಸ್‌ಎಸ್‌ ಶಿಬಿರ ಈ ವಸ್ತು ಸಂಗ್ರಹಾಲಯ ತೆರೆಯಲು ಸಹಕಾರಿಯಾಗಿದೆ. ಕೇವಲ 48 ಮನೆ, 240 ಜನಸಂಖ್ಯೆ ಇರುವ ಈ ಪುಟ್ಟ ಹಳ್ಳಿಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಇಂದಿಗೂ ಪ್ರಾಚೀನ ವಸ್ತುಗಳನ್ನು ಬಳಸುತ್ತಾ ಬದುಕು ಕಟ್ಟಿಕೊಂಡಿದ್ದಾರೆ.

‌ಇವರ ಜೀವನ ಪದ್ಧತಿಗೆ ಮಾರುಹೋದ ಶಿಬಿರಾರ್ಥಿಗಳು ಪ್ರತಿ ಮನೆಯಿಂದ ತಲಾ ಎರೆಡೆರಡು ಗ್ರಾಮೀಣ ಪರಿಕರಗಳನ್ನು ಸಂಗ್ರಹಿಸಿ ಅವುಗಳನ್ನು ತಮ್ಮ ಕಾಲೇಜಿನಲ್ಲಿ ಶೇಖರಿಸಿಟ್ಟಿದ್ದಾರೆ.

ಏನೇನು ಪರಿಕರಗಳು: ಕೃಷಿ ಹಾಗೂ ದಿನನಿತ್ಯ ಬಳಸುತ್ತಿದ್ದ ಗೃಹೋಪಯೋಗಿ ವಸ್ತುಗಳು ಇಲ್ಲಿವೆ. ವಿವಿಧ ಬಗೆಯ ಭೂಮಣ್ಣಿ ಬುಟ್ಟಿ, ಜರಡಿ, ಒಳಲೆ, ರಂಗೋಲಿ ಮರಗಿ, ಬೆತ್ತದ ಬುಟ್ಟಿ, ತಾಮ್ರದ ಚೊಂಬು, ಮೀನಿನ ಮಡಿಕೆ, ಚೆನ್ನಮಣೆ, ದೋಸೆ ಹಂಚು, ಮೊರ, ಮಂಗ ಓಡಿಸುವ ಯಂತ್ರ, ನಾಗಂದಿಗೆ ಕೈ, ಮೀನು ಬರ್ಚಿ, ಉಪ್ಪಿನ ಮರಗಿ, ತಿರಿಗೆ ಮಣೆ, ಲಾಟೀನು, ಮರದ ಚುಚ್ಕ, ತತ್ರಾಣಿ, ಕೂರಿಗೆ ಬಟ್ಟಲು, ಬಳುವಳಿ ಬುಟ್ಟಿ, ದಾರೆ ದೀಪದ ಗುಡ್ಡ, ಪೆಟ್ಟಿಗೆ ಮಣೆ, ಗುಂಬ, ಕೂಣಿ, ಲೊಡಗ, ನೇಗಿಲು, ಜಿಂಕೆ ಕೋಡು, ನೊಗ, ಮಡಿಕೆ, ರಂಜಣಿಗೆ ಹೀಗೆ 100ಕ್ಕೂ ಹೆಚ್ಚು ಪರಿಕರಗಳು ಮೈ ರೋಮಾಂಚನಗೊಳಿಸುತ್ತವೆ. ಇಲ್ಲಿರುವ ಪ್ರತಿಯೊಂದು ವಸ್ತುಗಳು ನಮ್ಮನ್ನು ಇತಿಹಾಸಕ್ಕೆ ಕರೆದೊಯ್ಯುತ್ತವೆ.

ಮೊದಲ ವಸ್ತು ಸಂಗ್ರಹಾಲಯ: ರಾಜ್ಯದಲ್ಲಿ ಗ್ರಾಮೀಣ ಪರಿಕರಗಳನ್ನು ಪರಿಚಯಿಸುವ ಹತ್ತಾರು ವಸ್ತು ಸಂಗ್ರ ಹಾಲಯಗಳಿದ್ದರೂ, ಎನ್‌ಎಸ್‌ಎಸ್‌ ವಸ್ತು ಸಂಗ್ರಹಾಲಯ ತೆರೆದಿರುವುದು ಇದೇ ಮೊದಲು.

ಭಿನ್ನವಾದ ಜ್ಞಾನಪರಂಪರೆಯನ್ನು ಮನದಟ್ಟು ಮಾಡುವ ಪ್ರಯತ್ನದ ಫಲ ಈ ಗ್ರಾಮೀಣ ವಸ್ತುಗಳ ಸಂಗ್ರಹವಾಗಿದೆ. ಈ ಎಲ್ಲಾ ವಸ್ತುಗಳನ್ನು ವಿದ್ಯಾರ್ಥಿಗಳು ನೋಡುವುದರಿಂದ  ಪ್ರಾಚೀನ ಪರಂಪರೆ, ಸಂಪ್ರದಾಯ, ಸಂಸ್ಕೃತಿ, ಹಳೆಯ ಕಾಲದ ಬಗ್ಗೆ ಮನದಟ್ಟಾಗುತ್ತದೆ. ಈ ವಸ್ತುಗಳ ಜತೆಗೆ ಇನ್ನಷ್ಟು ವಸ್ತುಗಳ ಸಂಗ್ರಹಣೆ ಮಾಡುವ ಬಯಕೆಯಿದೆ ಎನ್ನುತ್ತಾರೆ ಸಂಗ್ರಹಾಲಯದ ರೂವಾರಿಗಳಾದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮೋಹನ್‌ ಚಂದ್ರಗುತ್ತಿ ಹಾಗೂ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಚ್‌.ಪಿ.ಮಂಜುನಾಥ್‌.

* * 

ನಗರದ ಪ್ರದೇಶದ ವಿದ್ಯಾರ್ಥಿಗಳು ಈ ರೀತಿಯ ವಸ್ತುಗಳನ್ನು ನೋಡಲಿಕ್ಕೆ ಸಾಧ್ಯವಿಲ್ಲ. ಎನ್‌ಎಸ್‌ಎಸ್‌ ಕ್ಯಾಂಪ್‌ ಮೂಲಕ ಇದು ಸಾಧ್ಯವಾಗಿರುವುದು ಖುಷಿ ನೀಡಿದೆ.
ಸಿ.ರಾಕೇಶ್‌. ವಿದ್ಯಾರ್ಥಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT