ಭಾನುವಾರ, ಡಿಸೆಂಬರ್ 8, 2019
25 °C

ಹನಮೇಗೌಡಗೆ ತಪ್ಪಿದ ಟಿಕೆಟ್: ಬೆಂಬಲಿಗರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನಮೇಗೌಡಗೆ ತಪ್ಪಿದ ಟಿಕೆಟ್: ಬೆಂಬಲಿಗರ ಪ್ರತಿಭಟನೆ

ಯಾದಗಿರಿ: ಜೆಡಿಎಸ್ ಅಭ್ಯರ್ಥಿಗಳ ಮೊದಲ ಹಂತದ ಆಯ್ಕೆಪಟ್ಟಿ ಪ್ರಕಟವಾಗಿದ್ದು, ಜಿಲ್ಲೆಯ ಯಾದಗಿರಿ–ಎ.ಸಿ.ಕಾಡ್ಲೂರ, ಗುರುಮಠಕಲ್–ನಾಗನಗೌಡ, ಸುರಪುರ–ರಾಜಾ ಕೃಷ್ಣಪ್ಪ ನಾಯಕ, ಶಹಾಪುರ–ಅಮೀನ್‌ರೆಡ್ಡಿ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ.

ಯಾದಗಿರಿ ಮತಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಹನಮೇಗೌಡ ಬೀರನಕಲ್‌ ಅವರಿಗೆ ಟಿಕೆಟ್‌ ಕೈತಪ್ಪಿದೆ. ಭಾನುವಾರ ಅವರ ಬೆಂಬಲಿಗರು ನಗರದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಟಿಕೆಟ್ ನೀಡುವಂತೆ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಗ್ರಹಿಸಿದ್ದಾರೆ.

‘ಯಾದಗಿರಿ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವ ಇರಲಿಲ್ಲ. ಹಲವು ವರ್ಷಗಳಿಂದ ಹಳ್ಳಿಹಳ್ಳಿ ತಿರುಗಿ ಪಕ್ಷ ಸಂಘಟಿಸಿದ್ದೇನೆ. ಇಲ್ಲಿನ ಎಪಿಎಂಸಿಯಲ್ಲಿ ಒಂದೂ ಜೆಡಿಎಸ್ ಸದಸ್ಯರಿರಲಿಲ್ಲ. ಈಗ ಜೆಡಿಎಸ್ ಪ್ರತಿನಿಧಿಸುವ ಮೂವರು ಸದಸ್ಯರು ಇದ್ದಾರೆ. ಅವರನ್ನು ಗೆಲ್ಲಿಸಲು ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ. ಎಪಿಎಂಸಿಯಲ್ಲಿ ಜೆಡಿಎಸ್‌ಗೂ ಸ್ಥಾನ ಸಿಗುವಂತೆ ಶ್ರಮಿಸಿದ್ದೇನೆ. ಟಿಕೆಟ್‌ ಪಡೆದವರು ಯಾದಗಿರಿ ಮತಕ್ಷೇತ್ರದಲ್ಲಿ ಏನು ಮಾಡಿದ್ದಾರೆ ಎಂಬುದನ್ನು ತೋರಿಸಲಿ’ ಎಂದು ಹನಮೇಗೌಡ ಸವಾಲು ಹಾಕಿದರು.

‘ಟಿಕೆಟ್‌ ಪಡೆದವರು ಪಕ್ಷ ಸಂಘಟನೆಗೆ ಎಲ್ಲೂ ಕಾಣಿಸಿಕೊಂಡಿಲ್ಲ. ಚುನಾವಣೆ ಸಮೀಪಿಸಿದಾಗಷ್ಟೇ ಒಂದೆರಡು ಸಮಾವೇಶ ಸಂಘಟಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಯಾದಗಿರಿ ನಗರದಲ್ಲೂ ಜೆಡಿಎಸ್‌ ಚಟುವಟಿಕೆ ಆರಂಭಿಸಿಲ್ಲ. ಅಲ್ಪಸಂಖ್ಯಾತ ಮತದಾರರ ಲೆಕ್ಕದ ಮೇಲೆ ಟಿಕೆಟ್‌ ನೀಡಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಾಸ್ತವ ಗೊತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇನ್ನೂ ಕಾಲವಕಾಶ ಇದೆ. ಟಿಕೆಟ್ ನೀಡಿದರೆ ಗೆದ್ದು ತೋರಿಸುತ್ತೇವೆ. ಟಿಕೆಟ್ ನಿರಾಕರಿಸಿದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ನಿಶ್ಚಿತ’ ಎಂದು ಹನುಮೇಗೌಡ ತಿಳಿಸಿದರು. ಹನುಮೇಗೌಡ ಅವರಿಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿ ಯಾದಗಿರಿ ವಿಧಾನಸಭಾ ಮತಕ್ಷೇತ್ರ ಅಭಿಮಾನಿಗಳ ಬಳಗದಿಂದ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.

ಅಯ್ಯಣ್ಣ ಕನ್ಯಾಕೊಳ್ಳೂರು, ಯಂಕಣ್ಣ ರಾಠೋಡ, ರಫಿಕ್‌ಸಾಬ್ ಉಳ್ಳೆಸೂಗೂರು, ಎಪಿಎಂಸಿ ಸದಸ್ಯ ಸಂತೋಷ ನಿರ್ಮಲಕರ್, ಅಯ್ಯಣ್ಣ ಹಾಲಗೇರಾ, ಹಣಮಂತ್ರಾಯಗೌಡ ತೇಕರಾಳ, ಚಾಂದ್ ಪಾಷ ಕುರಕುಂದಿ, ಮಲ್ಲಿಕಾರ್ಜುನ ಗೌಡ ಬಿರನಕಲ್, ಭೀಮಾಶಂಕರ ಇಬ್ರಾಹಿಂಪುರ, ಯಂಕಣ್ಣ ರಾಠೋಡ, ಸಾಬಣ್ಣ ದೊರೆ, ಮರೆಪ್ಪ ಮರಕಲ್, ರಾಮು ನಾಟೆಕಾರ, ಅಪ್ಪು ಕಾಮನೋರ್, ಸಿದ್ದಪ್ಪ, ಲಿಂಗಣ್ಣ ಕೊಂಡಾಪುರ, ಗುರುನಾಥ ಪೂಜಾರಿ, ಏಸುರಾಜ ಹುಲಕಲ್, ಬಾಲಪ್ಪ ವೆಂಕಟಪೂರ, ಮಲ್ಲಮ್ಮ ನಕ್ಕಲ್, ಯಂಕಮ್ಮ, ಸಾಬವ್ವ, ಸಿದ್ದಮ್ಮ, ತಾಯಮ್ಮ, ರೇಣಮ್ಮ, ಖಂಡಪ್ಪ ಶಹಾಪುರ, ರಾಮಣ್ಣ ಹೊಸಮನಿ, ನಾಗರಾಜ ಕೊಂಡಾಪೂರ, ಚಂದ್ರು ಹೆಡಗಿಮದ್ರಾ, ಸಂತೋಷ ಹೆಡಗಿಮದ್ರಾ, ಮಲ್ಲೇಶ ನಾಯಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಟಿಕೆಟ್‌ ಪಡೆದ ಅಭ್ಯರ್ಥಿಗಳು

ಯಾದಗಿರಿ–ಎ.ಸಿ.ಕಾಡ್ಲೂರ

ಗುರುಮಠಕಲ್–ನಾಗನಗೌಡ

ಸುರಪುರ– ರಾಜಾ ಕೃಷ್ಣಪ್ಪ ನಾಯಕ

ಶಹಾಪುರ–ಅಮೀನ್‌ರೆಡ್ಡಿ

* * 

ಜನರ ಒಡನಾಟ, ಪಕ್ಷ ಸಂಘಟನೆ ಇಲ್ಲದ ವ್ಯಕ್ತಿಗೆ ಯಾವ ಮಾನದಂಡದ ಮೇಲೆ ಟಿಕೆಟ್ ನೀಡಿದ್ದಾರೋ ಗೊತ್ತಿಲ್ಲ. ಹೀಗಾದರೆ ಜೆಡಿಎಸ್ ಗೆಲ್ಲುವುದು ಕಷ್ಟ ಹನಮೇಗೌಡ ಬೀರನಕಲ್ ಜೆಡಿಎಸ್ ಟಿಕೆಟ್ ಆಕಾಂಕ್ಷಿ

ಪ್ರತಿಕ್ರಿಯಿಸಿ (+)