ಭಾನುವಾರ, ಡಿಸೆಂಬರ್ 8, 2019
25 °C

ಆರೋಪ ಸಾಬೀತದರೆ ರಾಜಕೀಯ ಸನ್ಯಾಸತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರೋಪ ಸಾಬೀತದರೆ ರಾಜಕೀಯ ಸನ್ಯಾಸತ್ವ

ಆನೇಕಲ್‌: ‘ಬಿಜೆಪಿ ನಾಯಕರು ಮಾಡಿರುವ ಆರೋಪ ಸಾಬೀತು ಮಾಡಿದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ’ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.

ತಾಲ್ಲೂಕಿನ ಚಂದಾಪುರದ ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷದಲ್ಲಿ ಆನೇಕಲ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಇದನ್ನು ಕಂಡು ಹತಾಶರಾಗಿ ಬಿಜೆಪಿಯವರು ಅಭಿವೃದ್ಧಿ ಹೊರತಾದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ರಾಜಕೀಯ ಪಕ್ಷಗಳಿಗೆ ಸಭೆ, ಸಮಾರಂಭಗಳನ್ನು ಮಾಡಲು ಸ್ವಾತಂತ್ರ್ಯವಿದೆ. ಬಿಜೆಪಿ ನಾಯಕರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಕೆ ಮಾಡಿದರು.

ರಾಜಕೀಯ ಸಭೆಗಳಲ್ಲಿ ಸುಳ್ಳು ಹೇಳುವುದು  ಸರಿಯಲ್ಲ. ಮಾಡಿದ ಆರೋಪಗಳಿಗೆ ಸಾಕ್ಷ್ಯವಿರಬೇಕು. ‘ಹೆಬ್ಬಗೋಡಿಯಲ್ಲಿ ನಡೆದ ಬಿಜೆಪಿಯ ನವಚೈತನ್ಯ ಸಭೆಯಲ್ಲಿ ನನ್ನ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಚಿವ ಎ.ನಾರಾಯಣಸ್ವಾಮಿ ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ’ ಎಂದರು.

ಅವರು ಮಾಡಿರುವ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾದುದು. ಸುಳ್ಳು ಹೇಳಿ ಜನರನ್ನು ವಂಚಿಸುವ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶೋಭಾ ಕರಂದ್ಲಾಜೆ ಅವರು ಇಂಧನ ಸಚಿವರಾಗಿದ್ದಾಗ ಆನೇಕಲ್‌ಗೆ ಯಾವುದೇ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ ಎಂದರು.

ಯಾವುದೇ ಆಧಾರಗಳಿದ್ದರೆ ದಾಖಲೆ ಸಮೇತ ನೀಡಿದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಸಾಬೀತು ಮಾಡದಿದ್ದಲ್ಲಿ ಅವರು ರಾಜಕೀಯ ಸನ್ಯಾಸತ್ವ ಸ್ವೀಕರಿಸಬೇಕು ಎಂದು ಸವಾಲು ಹಾಕಿದರು.

ಎ.ನಾರಾಯಣಸ್ವಾಮಿ ಅವರು ಆನೇಕಲ್‌ನಲ್ಲಿ ಶಾಸಕರಾಗಿ, ಸಚಿವರಾಗಿ 18 ವರ್ಷಗಳ ಕಾಲ ಇದ್ದರು. ಅವರ ಕಾಲದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿಯಾಗಿಲ್ಲ ಎಂದರು.

ಆನೇಕಲ್ ದೊಡ್ಡಕೆರೆಯಲ್ಲಿ ಗುಡ್ಡೆಗಳು, ಆನೇಕಲ್ ಕ್ರೀಡಾಂಗಣದ ವಿಚಾರದಲ್ಲಿ ಎ.ನಾರಾಯಣಸ್ವಾಮಿ ಕಾರ್ಯದಕ್ಷತೆಯನ್ನು ತೋರಿಸಿದ್ದಾರೆ ಎಂದು ಪರೋಕ್ಷವಾಗಿ ಟೀಕಿಸಿದರು.

ಯಾವ ಕೆಲಸಗಳನ್ನೂ ಪೂರ್ಣ ಮಾಡದೇ ಅರೆ ಬರೆ ಕೆಲಸ ಮಾಡಿ ತಮ್ಮ ಸಾಕ್ಷಿಯನ್ನು ಬಿಟ್ಟು ಹೋಗಿದ್ದಾರೆ.  ದೀರ್ಘಾವಧಿ ಶಾಸಕರಾಗಿದ್ದ ಅವರು ಕ್ಷೇತ್ರದ ಅಭಿವೃದ್ಧಿಯ ಬದಲು, ರಿಯಲ್‌ ಎಸ್ಟೇಟ್‌ಗೆ ಮೀಸಲಿಟ್ಟ ಹೆಗ್ಗಳಿಕೆ ನಾರಾಯಣಸ್ವಾಮಿ ಅವರಿಗೆ ಸಲ್ಲುತ್ತದೆ ಎಂದರು.

ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಮಾತನಾಡುತ್ತಾರೆ. ತಹಶೀಲ್ದಾರ್‌, ಸರ್ಕಲ್‌ ಇನ್‌ ಸ್ಪೆಕ್ಟರ್, ವಿವಿಧ ಅಧಿಕಾರಿಗಳಿಗೆ ವರ್ಗಾವಣೆಗೆ ದರ ನಿಗದಿ ಪಡಿಸಿದ್ದರು ಎಂಬ ಬಿಜೆಪಿ ಟೀಕೆ ಉತ್ತರ ನೀಡಿದ ಶಿವಣ್ಣ, ‘ಇದು ನಮ್ಮ ಅವಧಿಯಲ್ಲಿ ನಡೆದಿಲ್ಲ. ಅವರ ಅವಧಿಯಲ್ಲಿ ದರ ನಿಗದಿ ಮಾಡಿರಬಹುದು’ ಎಂದರು.

ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ದಾಖಲೆಗಳೊಂದಿಗೆ ಮಾತನಾಡಬೇಕು. ಆನೇಕಲ್‌ನಲ್ಲಿ ಕೊಲೆಗಳು ಹೆಚ್ಚಾಗಿವೆ; ಇದಕ್ಕೆ ಶಾಸಕರು ಕಾರಣ ಎಂದು ಸಮಾವೇಶದಲ್ಲಿ ಆರೋಪಿಸಿದ್ದಾರೆ. ನಾರಾಯಣಸ್ವಾಮಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ಹತ್ತಾರು ಕೊಲೆಗಳು ನಡೆದಿವೆ ಎಂದರು.

ಹಲವು ಕಾರಣಗಳಿಂದ ಕೊಲೆಗಳು ನಡೆದಿವೆ. ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ಕೊಲೆಗಳಿಗೆ ಶಾಸಕರೇ ಕಾರಣ ಎಂದು ವಿನಾಕಾರಣ ಆರೋಪ ಮಾಡುವುದು ಸಲ್ಲದು ಎಂದರು.

ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಸುಳ್ಳು ಹೇಳುವ ಮೂಲಕ ರಾಜಕೀಯ ಲಾಭಕ್ಕಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕ್ಷೇತ್ರದ ಪ್ರಬುದ್ಧ ಮತದಾರರು ಮುಂದಿನ ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡುವರು ಎಂದು ತಿಳಿಸಿದರು.

ಅಭಿವೃದ್ಧಿ ಪ್ರಾಧಿಕಾರದಲ್ಲಿ ₹450 ಕೋಟಿ ಟೆಂಡರ್‌ ಇಲ್ಲದೇ ಕಾಮಗಾರಿ ನಡೆದಿದೆ ಎಂದು ಆರೋಪಿಸಿದ್ದಾರೆ. ಆದರೆ ಯಾವುದೇ ದುರುಪಯೋಗವಾಗಿಲ್ಲ. ಈ ಬಗ್ಗೆ ಯಾವುದೇ ತನಿಖೆಯಾಗಲಿ ಎಂದು ಸವಾಲು ಹಾಕಿದರು.

ನಾರಾಯಣಸ್ವಾಮಿ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಅವರು ಶಾಸಕರಾದಾಗ ಆನೇಕಲ್‌ನ ಪುಟ್ಟ ಮನೆಯಲ್ಲಿದ್ದರು. ಪ್ರಸ್ತುತ ಈಗ ಎಲ್ಲಿದ್ದಾರೆ ಎಂಬುದು ಜನತೆಗೆ ಗೊತ್ತಿದೆ ಎಂದರು.

‘ಶಾಸಕರಾಗಿ ಚುನಾಯಿತರಾದ ನಂತರ ಕ್ಷೇತ್ರದ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೊಂದಿಗೆ ಜನರ ಮುಂದೆ ಹೋಗುತ್ತೇನೆ. ಅದೇ ನನಗೆ ಶ್ರೀರಕ್ಷೆ’ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಣ್ಣ, ಚಂದ್ರಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಬನಹಳ್ಳಿ ರಾಮಚಂದ್ರರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಶಂಕರರೆಡ್ಡಿ ಹಾಜರಿದ್ದರು.

ಆನೇಕಲ್ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಮೆಟ್ರೊ ರೈಲು ಸೇವೆಯನ್ನು ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೂ ವಿಸ್ತರಿಸಿದ್ದಾರೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.

ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ, ಬೊಮ್ಮಸಂದ್ರ, ಚಂದಾಪುರ, ಅತ್ತಿಬೆಲೆವರೆಗೆ ಮೆಟ್ರೊ ಸೇವೆ ದೊರೆತಿರುವುದು ತಾಲ್ಲೂಕಿನ ಜನತೆಗೆ ಅತ್ಯಂತ ಉಪಯುಕ್ತವಾಗಿದೆ. ಆನೇಕಲ್ ತಾಲ್ಲೂಕಿನ ಸಮಂದೂರಿನಲ್ಲಿ ಬೃಹತ್ ಪವರ್‌ಸ್ಟೇಷನ್‌ ಸ್ಥಾಪನೆಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರಿಂದ ವಿದ್ಯುತ್ ಸಮಸ್ಯೆ ಪರಿಹಾರವಾಗುತ್ತದೆ ಎಂದರು.

ಈ ಕೆಲಸಗಳಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿದ ಶ್ರಮದಿಂದ ಕೆಲಸವಾಗಿದೆ. ಆನೇಕಲ್‌ಗೆ ಕಾವೇರಿ ನೀರು, ಏತ ನೀರಾವರಿ, ಸುಸಜ್ಜಿತ ರಸ್ತೆಗಳು ಸೇರಿದಂತೆ ಶಾಶ್ವತ ಕೆಲಸಗಳನ್ನು ಮಾಡಿದ ತೃಪ್ತಿಯಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)