ಶುಕ್ರವಾರ, ಡಿಸೆಂಬರ್ 13, 2019
27 °C

ಮಕ್ಕಳಲ್ಲಿ ಉತ್ಸಾಹ ತುಂಬಿದ ತಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳಲ್ಲಿ ಉತ್ಸಾಹ ತುಂಬಿದ ತಾಣ

ಬೆಳಗಾವಿ: ಬೇಸಿಗೆಯ ದಿನಗಳು ಸಮೀಪಿಸುತ್ತಿದ್ದಂತೆಯೇ ನಗರದ ಉದ್ಯಾನಗಳು ಗಿಜಿಗುಡುತ್ತಿವೆ.  ಬಿಸಿಲಿನ ತಾಪದಲ್ಲಿ ವಿಶ್ರಾಂತಿ ಜತೆಗೆ ಆಟದ ಮೂಲಕ ಸಮಯ ಕಳೆಯಲು ಮಕ್ಕಳು ಉದ್ಯಾನದತ್ತ ಧಾವಿಸುತ್ತಿದ್ದಾರೆ.

ಶಹಾಪುರದ ಮಹಾತ್ಮ ಗಾಂಧಿ ಹಾಗೂ ಛತ್ರಪತಿ ಶಿವಾಜಿ ಉದ್ಯಾನಗಳ ಮಧ್ಯದ ಮಕ್ಕಳ ಉದ್ಯಾನ ಈಗ ಸದಾ ಲವಲವಿಕೆಯಿಂದ ಇರುವುದು ಗೋಚರಿಸುತ್ತಿದೆ. ಅಳುವ ಮಕ್ಕಳನ್ನು ಕರೆದುಕೊಂಡು ಬರುವ ಪಾಲಕರಿಗೂ ಇದು ಸಮಾಧಾನ ನೀಡುವ ತಾಣವಾಗಿದೆ.

ಸುಮಾರು ಒಂದು ಎಕರೆ ವ್ಯಾಪ್ತಿ ಹೊಂದಿರುವ ಈ ಮಕ್ಕಳ ಉದ್ಯಾನ ಹಸಿರು ಹುಲ್ಲಿನಿಂದ ಆವೃತ್ತವಾಗಿದೆ. ಅದರಲ್ಲಿ ತೂಗುವ ಜೋಕಾಲಿಗಳು, ಜಾರುಗುಂಡೆ, ತಿರುಗುವ ಯಂತ್ರಗಳು ಮಕ್ಕಳನ್ನು ಖುಷಿಪಡಿಸುತ್ತಿವೆ. ಶಹಾಪುರ, ವಡಗಾವಿ, ಹಳೇಬೆಳಗಾವಿ ಮುಂತಾದ ಭಾಗಗಳ ಜನರು ನಿತ್ಯ ಸಂಜೆ ಇಲ್ಲಿಗೆ ಮಕ್ಕಳ ಜತೆಗೆ ಬರುತ್ತಾರೆ.

ಮಕ್ಕಳ ಆಟಕ್ಕೆಂದೇ ರೋಟರಿ ಸಂಸ್ಥೆಯಿಂದ ಸಿದ್ಧಪಡಿಸಲಾದ ಈ ಆಟಿಕೆಗಳನ್ನು ಹೊಂದಿರುವ ಅಲಂಕೃತ ಉದ್ಯಾನವನ್ನು ಈಗ ಮಹಾನಗರ ಪಾಲಿಕೆ ಸ್ವಾಧೀನಕ್ಕೆ ಪಡೆದು ನಿರ್ವಹಿಸುತ್ತಿದೆ.

ನೆರಳು ಹಾಗೂ ಹಸಿರು ಪರಿಸರಲ್ಲಿ ಮಕ್ಕಳಿಗಾಗಿ ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನೂ ಇಲ್ಲಿ ಆಯೋಜಿಸಲಾಗುತ್ತದೆ.ನಿತ್ಯ ಸಂಜೆ 4ರಿಂದ 8ರವರೆಗೆ ಈ ಭಾಗದ ಮನರಂಜನೆಯ ತಾಣವಾಗಿ ಗಮನಸೆಳೆದಿದೆ. ಮೆದುವಾದ ಹುಲ್ಲಿನ ಹಸಿರು ನೆಲ, ಗಿಡಮರಗಳ ಹಿತವಾದ ನೆರಳು, ವಿಶ್ರಾಂತಿಗೆ ಆಸನಗಳ ವ್ಯವಸ್ಥೆ ಇರುವುದರಿಂದ ಹಿರಿಯ ನಾಗರಿಕರು ಮಕ್ಕಳ ಆಟವನ್ನು ನೋಡಿ ಖುಷಿಪಡುತ್ತಿದ್ದಾರೆ ಎಂದು ಪಾಲಿಕೆಯ ಸದಸ್ಯೆ ಮೇದಾ ಹಳದನಕರ ಹೇಳಿದರು.

ಸಂಜೆ ಸಮಯದಲ್ಲಿ ಮಕ್ಕಳ ಆಟಕ್ಕೆಂದು ಮಹಾನಗರ ಪಾಲಿಕೆಯು ಉಚಿತ ಪ್ರವೇಶದ ಮೂಲಕ ಅವಕಾಶ ಕಲ್ಪಿಸಿದೆ. ಆದರೆ ಇಡೀ ದಿನ ಮಕ್ಕಳು ಇಲ್ಲಿ ಆಟದ ಮೂಲಕ ಸಮಯ ಕಳೆಯುತ್ತಾರೆ ಎಂದು ಅವರು ಹೇಳಿದರು.

ಮಕ್ಕಳ ಉದ್ಯಾನವನ್ನು ಇಡೀ ದಿನ ತೆರೆದರೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುತ್ತದೆ. ಮುಖ್ಯ ಗೇಟ್‌ ತೆರೆಯದಿರುವುದರಿಂದ ಮಕ್ಕಳು ಗೇಟ್‌ ಮೇಲಿಂದ ಜಿಗಿದು ಒಳ ನುಗ್ಗುತ್ತಾರೆ. ಇದರಿಂದ ಮಕ್ಕಳಿಗೆ ಪೆಟ್ಟು ಆದೀತು ಎಂಬ ಭಯ ಆಗುತ್ತದೆ ಇಲ್ಲಿನ ಸ್ಥಳೀಯ ನಿವಾಸಿ ದೀಪಾಲಿ ದೇಶಪಾಂಡೆ ಹೇಳಿದರು.

ಉದ್ಯಾನದಲ್ಲಿ ಸ್ವಚ್ಛತೆ, ನೆರಳು ಎಲ್ಲವೂ ಚೆನ್ನಾಗಿದೆ. ಆದರೆ ಒಳ ಪ್ರವೇಶಕ್ಕೆ ಸಂಜೆ ಸಮಯದಲ್ಲಿ ಮಾತ್ರ ಅವಕಾಶ ಇದೆ. ಈ ಸಮಯವನ್ನು ವಿಸ್ತರಿಸಬೇಕು ಎನ್ನುವುದು ಸ್ಥಳೀಯರಾದ ಸುಮಿತ್ರಾ ಪಾಟೀಲ ಅನಿಸಿಕೆ.

ಆರ್.ಎಲ್.ಚಿಕ್ಕಮಠ

ಪ್ರತಿಕ್ರಿಯಿಸಿ (+)