ಬುಧವಾರ, ಡಿಸೆಂಬರ್ 11, 2019
22 °C

‘ದುಬಾರಿ’ಯಾದ ಈಜುಕೊಳ; ನಿರ್ವಹಣೆಗೆ ತಳಮಳ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

‘ದುಬಾರಿ’ಯಾದ ಈಜುಕೊಳ; ನಿರ್ವಹಣೆಗೆ ತಳಮಳ

ಚಿಕ್ಕಬಳ್ಳಾಪುರ: ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳ ಪುನರಾರಂಭಗೊಂಡು 10 ತಿಂಗಳು ಕಳೆದಿವೆ. ಈ ಅವಧಿಯಲ್ಲಿ ಮೊದಲೆರಡು ತಿಂಗಳು ಹೊರತುಪಡಿಸಿದಂತೆ ಈವರೆಗೆ ಈಜುವವರಿಲ್ಲದೆ ಕೊಳ ಭಣಗುಟ್ಟುತ್ತಿದೆ. ಹೀಗಾಗಿ ದಿನೇ ದಿನೇ ಅದರ ಆದಾಯಕ್ಕಿಂತ ಖರ್ಚು ಹೆಚ್ಚಾಗಿ ನಿರ್ವಹಣೆ ದುಬಾರಿಯಾಗುತ್ತಿದೆ.

2016ರ ಮಾರ್ಚ್‌ನಲ್ಲಿ ವಿದ್ಯಾರ್ಥಿಯೊಬ್ಬ ಕೊಳದಲ್ಲಿ ಈಜಾಡಲು ಹೋಗಿ ಮುಳುಗಿ ಮೃತಪಟ್ಟಿದ್ದ. ಆ ಘಟನೆಯ ಬಳಿಕ ಕೊಳ ಬಂದ್ ಮಾಡಲಾಗಿತ್ತು. ನಂತರ ಸುಮಾರು 10 ತಿಂಗಳು ಬೀಗ ಹಾಕಿದ್ದ ಈಜುಕೊಳವನ್ನು ಕಳೆದ ಏಪ್ರಿಲ್‌ನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನವೀಕರಣಗೊಳಿಸಿತ್ತು. ಖಾಸಗಿಯವರಿಗೆ ಗುತ್ತಿಗೆ ನೀಡದೆ ತಾನೇ ನಿರ್ವಹಿಸಲು

ಆರಂಭಿಸಿದೆ.

2011ರಲ್ಲಿ ಸುಮಾರು ₹ 1.80 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅಂತರರಾಷ್ಟ್ರೀಯ ಗುಣಮಟ್ಟ ಈ ಈಜುಕೋಳ 50 ಮೀಟರ್‌ ಉದ್ದ, 20 ಮೀಟರ್‌ ಅಗಲವಿದ್ದು, 8 ಲೈನ್‌ಗಳನ್ನು ಹೊಂದಿದೆ. ಎಲ್ಲ ವಯೋಮಾನದವರಿಗೂ ಪ್ರತಿ ಗಂಟೆಗೆ ₹ 25 ಶುಲ್ಕ ನಿಗದಿಪಡಿಸಲಾಗಿದೆ. ಇಷ್ಟಿದ್ದರೂ ಜನರು ಕೊಳಕ್ಕೆ ಬಂದು ಈಜಲು ಮುಂದಾಗುತ್ತಿಲ್ಲ ಎನ್ನುವ ಬೇಸರ ಕ್ರೀಡಾ ಇಲಾಖೆ ಅಧಿಕಾರಿಳದು.

ಏಪ್ರಿಲ್‌ನಲ್ಲಿ ಕೊಳ ಪುನರಾರಂಭಗೊಂಡಾಗ ಎರಡು ತಿಂಗಳ ಅವಧಿಯಲ್ಲಿ ಖರ್ಚು ಕಳೆದು ಸುಮಾರು ₹ 4 ಲಕ್ಷ ಆದಾಯ ಬಂದಿತ್ತು. ಆದರೆ ಸದ್ಯ ಈಜುಕೊಳಕ್ಕೆ ವಾರಾಂತ್ಯದಲ್ಲಿ ಐದೋ, ಹತ್ತೋ ಜನರು ಬಂದರೆ ಹೆಚ್ಚು ಎನ್ನುವಂತಾಗಿದೆ. ತಿಂಗಳು ಕಳೆದರೂ ಆದಾಯ ನಾಲ್ಕೈದು ಸಾವಿರ ದಾಟಿ ಏರುತ್ತಿಲ್ಲ. ಹೀಗಾಗಿ ಕೊಳದ ನಿರ್ವಹಣೆ ಮಾಡುವುದು ಬಿಳಿಯಾನೆ ಸಾಕಿದಂತಾಗುತ್ತಿದೆ ಎನ್ನುತ್ತಾರೆ ಕ್ರೀಡಾ ಇಲಾಖೆ ಅಧಿಕಾರಿಗಳು.

ಆರಂಭದಲ್ಲಿ ಕೊಳ ನಿರ್ವಹಣೆಗಾಗಿ ಗೌರವಧನದ ಆಧಾರದ ಮೇಲೆ 8 ಸಿಬ್ಬಂದಿ ನೇಮಕ ಮಾಡಿಕೊಂಡಿದ್ದ  ಇಲಾಖೆ ಸದ್ಯ ಆ ಪೈಕಿ ಇಬ್ಬರು ಸಿಬ್ಬಂದಿ ಮಾತ್ರ ಉಳಿಸಿಕೊಂಡಿದೆ. ಅವರ ಸಂಬಳ (₹ 20 ಸಾವಿರ), ವಿದ್ಯುತ್ ಬಿಲ್ ಸುಮಾರು ₹ 15 ಸಾವಿರ, ರಾಸಾಯನಿಕಗಳು ಮತ್ತು ಇತರೆ ಪರಿಕರಗಳಿಗಾಗಿ ₹ 15 ಸಾವಿರ ಹೀಗೆ ಪ್ರತಿ ತಿಂಗಳು ₹ 50 ಸಾವಿರಕ್ಕಿಂತ ಹೆಚ್ಚು ಖರ್ಚಾಗುತ್ತಿದೆ.

ಈಜುಕೊಳಕ್ಕೆ ಹೆಚ್ಚು ಜನರನ್ನು ಸೆಳೆಯುವ ಉದ್ದೇಶದಿಂದ ಕ್ರೀಡಾ ಇಲಾಖೆ ಕಳೆದ ಏಪ್ರಿಲ್‌ನಲ್ಲಿ ‘₹ 1 ಸಾವಿರ ನೀಡಿ ಒಂದು ವರ್ಷ ಈಜುಕೊಳ ಉಪಯೋಗಿಸಿ’ ಎಂಬ ಕೊಡುಗೆ ಘೋಷಿಸಿತ್ತು. ಅದಕ್ಕಾಗಿ ಮುಂದೆ ಬಂದು ಸದಸ್ಯತ್ವ ಪಡೆದವರು ಕೇವಲ 12 ಜನ.  ಇದು ಆನೆ ಹೊಟ್ಟೆಗೆ ಅರೆಕಾಸಿನ

ಮಜ್ಜಿಗೆಯಂತಾಯ್ತು.

ಕಳೆದ ಬೇಸಿಗೆಯಲ್ಲಿ ಕ್ರೀಡಾ ಇಲಾಖೆ ಈಜು ತರಬೇತಿ ಶಿಬಿರ ಏರ್ಪಡಿಸಿತ್ತು. ಅದರಲ್ಲಿ ಸುಮಾರು 200 ಮಕ್ಕಳು ಈಜು ತರಬೇತಿ ಪಡೆದಿದ್ದರು. ಆ ಬಳಿಕ ಆ ಪೈಕಿ ಯಾವ ಮಕ್ಕಳು ಈಜುಕೊಳದತ್ತ ತಲೆ ಹಾಕದೇ ಇರುವುದು ಅಧಿಕಾರಿಗಳಿಗೆ ಬೇಸರ ತಂದಿದೆ.

‘ಈಜುಕೊಳಕ್ಕೆ ಜನರನ್ನು ಸೆಳೆಯುವ ಉದ್ದೇಶದಿಂದ ನಿರಂತರ ಈಜು ತರಬೇತಿ ಶಿಬಿರ ನಡೆಸುವ ಉದ್ದೇಶವಿದೆ. ಆದರೆ ಪರಿಣಿತ ಈಜು ತರಬೇತುದಾರರು ಸಿಗುತ್ತಿಲ್ಲ. ಒಂದೊಮ್ಮೆ ನಾವು ತರಬೇತಿದಾರರನ್ನು ನಿಯೋಜಿಸಿಕೊಂಡರೆ ಕೊಳಕ್ಕೆ ನಿತ್ಯ ಕನಿಷ್ಠ 100 ಜನರಾದರೂ ಬರಬೇಕು. ಇಲ್ಲದೇ ಹೋದರೆ ತರಬೇತಿದಾರರಿಗೆ ಕೊಡಲು  ದುಡ್ಡಿಲ್ಲದಂತಾಗುತ್ತದೆ. ತರಬೇತಿ ಶಿಬಿರದ ಜತೆಗೆ ಈಜು ಸ್ಪರ್ಧೆ ಏರ್ಪಡಿಸುವ ಚಿಂತನೆ ಕೂಡ ಇದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ. ರುದ್ರಪ್ಪ ತಿಳಿಸಿದರು.

ಅಂಕಿಅಂಶಗಳು..

1.80 ಕೋಟಿ ಈಜುಕೊಳ ನಿರ್ಮಾಣ ವೆಚ್ಚ

50 ಸಾವಿರ ಕೊಳದ ತಿಂಗಳ ನಿರ್ವಹಣೆ ಖರ್ಚು

5 ಸಾವಿರ ವರ್ಷದಲ್ಲಿ 10 ತಿಂಗಳು ಬರುವ ತಲಾ ಆದಾಯ

ಪ್ರತಿಕ್ರಿಯಿಸಿ (+)