ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು: ಆತಂಕದಲ್ಲೇ ಮಳಿಗೆ ಹರಾಜು

Last Updated 19 ಫೆಬ್ರುವರಿ 2018, 9:10 IST
ಅಕ್ಷರ ಗಾತ್ರ

ಬೀರೂರು: ಹಲವು ಅಡ್ಡಿ, ಆತಂಕಗಳನ್ನು ನಿವಾರಿಸಿ ತನ್ನ ಸುಪರ್ದಿಯಲ್ಲಿರುವ ಮಳಿಗೆಗಳನ್ನು ಶನಿವಾರ ಬಹಿರಂಗ ಹರಾಜು ನಡೆಸಿದ ಪುರಸಭೆ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದೆ.

ವಿವಿಧ ಯೋಜನೆಯಡಿ ನಿರ್ಮಿಸಿರುವ ಮಳಿಗೆಗಳನ್ನು ಪುರಸಭೆ ಈಗಾಗಲೇ ಬಾಡಿಗೆಗೆ ನೀಡಿದ್ದರೂ, ಸಾರ್ವಜನಿಕರ ಒತ್ತಾಯದ ಮೇರೆಗೆ ಬಹಿರಂಗ ಹರಾಜು ನಡೆದಿದೆ. ಖಾಸಗಿ ಬಸ್ ನಿಲ್ದಾಣದ 26, ಶಿಶುವಿಹಾರ ರಸ್ತೆಯ 10 ಮತ್ತು ತರೀಕೆರೆ ರಸ್ತೆಯ 3 ಮಳಿಗೆಗಳನ್ನು ಪುರಸಭೆ ಆವರಣದಲ್ಲಿ ಹರಾಜು ನಡೆಸಲಾಯಿತು.

ತರೀಕೆರೆ ಉಪವಿಭಾಗಾಧಿಕಾರಿ ಬಿ.ಬಿ.ಸರೋಜಾ, ಜಿಲ್ಲಾ ಯೋಜನಾ ನಿರ್ದೇಶಕ ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ನಾಗರಾಜ್, ಅಧ್ಯಕ್ಷೆ ಸವಿತಾರಮೇಶ್ ಮತ್ತು ಸರ್ಕಲ್‌ ಇನ್‌ಸ್ಪೆಕ್ಟರ್‌ ಬಾಲಚಂದ್ರೇಗೌಡರ ಉಪ ಸ್ಥಿತಿಯಲ್ಲಿ ಹರಾಜು ಆರಂಭ ವಾಯಿತು.

ಪುರಸಭಾ ನಿಬಂಧನೆಗಳಿಗೆ ಒಳಪಟ್ಟು 12 ವರ್ಷಗಳ ಅವಧಿಗೆ, ಮೂರು ವರ್ಷಗಳಿಗೆ ಒಮ್ಮೆ ಶೇ 10 ಹೆಚ್ಚಳ ದರದಲ್ಲಿ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗುವುದು. ಅತಿಹೆಚ್ಚು ಬಿಡ್ ಮಾಡಿದವರು ಬಾಡಿಗೆದಾರರಾಗುತ್ತಾರೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ 130ಕ್ಕೂ ಹೆಚ್ಚು ಬಿಡ್‍ದಾರರಿಗೆ ತಿಳಿಸಲಾಯಿತು.

ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಹಲವರು ಎದ್ದುನಿಂತು, ‘ಪುರಸಭೆ ಇ- ಪ್ರೊಕ್ಯೂರ್‍ಮೆಂಟ್ ಮತ್ತು ಬಹಿರಂಗ ಹರಾಜು ಒಟ್ಟಿಗೆ ನಡೆಸುತ್ತಿದೆ, ಇದು ತಪ್ಪು, ಮೊದಲು ಇ- ಹರಾಜು ತೆರೆಯಿರಿ, ನಂತರ ಬಹಿರಂಗ ಹರಾಜು ನಡೆಸಿ’ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ‘ಇಲ್ಲಿ ಸ್ಥಳೀಯರು ಮಾತ್ರ ಪಾಲ್ಗೊಳ್ಳುವ ನಿಬಂಧನೆ ಇಲ್ಲ, ನಾವು ಬಹಿರಂಗ ಹರಾಜು ಮತ್ತು ಇ-ಪ್ರೊಕ್ಯೂರ್‍ಮೆಂಟ್ ಮೂಲಕ ಮಳಿಗೆ ಬಾಡಿಗೆ ಕೊಡುವುದಾಗಿ ಕರಪತ್ರಗಳ ಮೂಲಕ ಪ್ರಕಟಿಸಿದ್ದೇವೆ' ಎಂದು ಸಮಜಾಯಿಷಿ ನೀಡಿದರು.

  ‘ಸಂತೆಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸುವುದಾಗಿ ಪುರಸಭೆ ಹೇಳುತ್ತಿದೆ. ಆದರೆ ಅಲ್ಲಿ  ನಿರ್ಮಿಸಿದ ಮಳಿಗೆಗಳ ಹರಾಜು ನಡೆಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಸಂತೆ ಸ್ಥಳಾಂತರಗೊಂಡರೆ ಆ ರಸ್ತೆಯಲ್ಲಿ ಜನಸಂಚಾರವೂ ಇರುವುದಿಲ್ಲ, ಹೀಗೆ ಇರುವಾಗ ಸಾವಿರಾರು ರೂಪಾಯಿ ಬಾಡಿಗೆ ತೆತ್ತು ಅಂಗಡಿ ನಡೆಸುವವರ ಗತಿ ಏನು? ಪುರಸಭೆ ಈ ಕುರಿತು ಸ್ಪಷ್ಟೀಕರಣ ನೀಡಲಿ' ಎಂದು ಕೆಲವರು ಆಗ್ರಹಿಸಿದರು.

‘ನಾವು ಇಎಂಡಿ ಪಾವತಿಸಿ ಟೆಂಡ ರ್‌ಗೆ ಬಂದಿದ್ದೇವೆ, ಪುರಸಭೆ ಸಬೂಬು ಹೇಳದೆ ಪ್ರಕ್ರಿಯೆ ನಡೆಸಲಿ ಎನ್ನುವ ಕೂಗು ಕೇಳಿಬಂದರೆ, ಪರಿಶಿಷ್ಟರಿಗೆ ಮೀಸಲಿಟ್ಟ ಮಳಿಗೆಯನ್ನು ನಮ್ಮ ಗಮನಕ್ಕೆ ತಾರದೆ ಹಂಚಿಕೆ ಮಾಡಿದ್ದೀರಿ ಎನ್ನುವ ದೂರಿಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, ‘ಇದು ನಾನು ಮಾಡಿರುವ ಪ್ರಕ್ರಿಯೆಯಲ್ಲ, ಪುರಸಭೆಯ ಸದಸ್ಯ ಸಮಿತಿಯ ತೀರ್ಮಾನವಾಗಿದೆ, ಯಾರಿಗೂ ಅನ್ಯಾಯ ಮಾಡುವ ಉದ್ದೇಶ ನಮ್ಮದಲ್ಲ' ಎಂದರು.

ಪೊಲೀಸ್ ಮತ್ತು ಉಪವಿಭಾಗಾಧಿಕಾರಿ ಮಧ್ಯಸ್ಥಿಕೆಯಲ್ಲಿ ಪುರಸಭೆ ಸಿಬ್ಬಂದಿ ಇ-ಪ್ರೊಕ್ಯೂರ್‍ಮೆಂಟ್ ಬಹಿರಂಗವಾಗಿಲ್ಲ ಎಂದು ಕಂಪ್ಯೂಟ ರೀಕೃತ ದಾಖಲಾತಿ ಒದಗಿಸಿದ ಬಳಿಕ ಬಹಿರಂಗ ಹರಾಜು ಆರಂಭವಾಯಿತು.

ಖಾಸಗಿ ಬಸ್ ನಿಲ್ದಾಣದ 26ರ ಪೈಕಿ 25, ಭಾರತಿ ಶಿಶುವಿಹಾರ ರಸ್ತೆಯ 10 ಮಳಿಗೆಗಳು ಹರಾಜಾದವು. ತರೀಕೆರೆ ರಸ್ತೆಯ ಮಳಿಗೆಗಳಿಗೆ ಯಾರೂ ಮುಂಗಡ ಠೇವಣಿ ಪಾವತಿಸದ ಕಾರಣ ಮುಂದಿನ ದಿನಗಳಲ್ಲಿ ಮರು ಹರಾಜು ನಡೆಸಲು ತೀರ್ಮಾನಿಸಲಾಯಿತು.

ಪುರಸಭೆಯ ಮೂಲಗಳ ಪ್ರಕಾರ ಈಗ ಹರಾಜಾಗಿರುವ ಮಳಿಗೆಗಳಿಂದ ಈ ಮೊದಲು ತಿಂಗಳಿಗೆ  ₹ 70ರಿಂದ 80 ಸಾವಿರ ಬಾಡಿಗೆ ಸಂಗ್ರಹವಾಗುತ್ತಿತ್ತು, ಬಹಿರಂಗ ಹರಾಜು ಪ್ರಕ್ರಿಯೆಯಿಂದ ಈ ಮೊತ್ತ 10 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಹಲವು ಸದಸ್ಯರೇ ಹರಾಜು ಪ್ರಕ್ರಿಯೆಗೆ ಪರೋಕ್ಷ ಅಡ್ಡಿಪಡಿಸಿದರೂ, ಪುರಸಭೆ ಇಟ್ಟ ದಿಟ್ಟ ನಡೆಯಿಂದ ಆದಾಯ ಹೆಚ್ಚಲಿದ್ದು, ಜನೋಪಯೋಗಿ ಕೆಲಸಗಳಿಗೆ ಒಳಿತಾಗಲಿದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT