ಬುಧವಾರ, ಡಿಸೆಂಬರ್ 11, 2019
17 °C

ಕಾಂಗ್ರೆಸ್‌ ಕೋಟೆಯಲ್ಲಿ ‘ಕೈ’ನದ್ದೇ ದರ್ಬಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಕೋಟೆಯಲ್ಲಿ ‘ಕೈ’ನದ್ದೇ ದರ್ಬಾರು

ಹಿರಿಯೂರು: ಇದುವರೆಗೆ ನಡೆದ 14 ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದನ್ನು ನೋಡಿದರೆ, ಹಿರಿಯೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು ಎಂಬುದು ಗೊತ್ತಾಗುತ್ತದೆ.

1952ರಿಂದ ಸಾಮಾನ್ಯ ಕ್ಷೇತ್ರವಾಗಿದ್ದ ಹಿರಿಯೂರು, 1967ರಿಂದ 2008ರವರೆಗೆ ಮೀಸಲು ಕ್ಷೇತ್ರವಾಗಿತ್ತು. ಐದು ಬಾರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ನ ಹಿರಿಯ ಧುರೀಣರಾಗಿದ್ದ ಕೆ.ಎಚ್‌.ರಂಗನಾಥ್‌ ಅವರು ಮೀಸಲು ಕ್ಷೇತ್ರದ ಮೇಲೆ ತಮಗಿದ್ದ ಹಿಡಿತವನ್ನು ಸಾಬೀತು ಪಡಿಸಿದ್ದರು. ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಹಾಗೂ ಇನ್ನೆರಡು ಬಾರಿ ಜನತಾದಳದಿಂದ ಶಾಸಕರಾಗಿದ್ದ ಡಿ. ಮಂಜುನಾಥ್‌ ಅವರು ಅತಿ ಹೆಚ್ಚು ಬಾರಿ ಆಯ್ಕೆಯಾದವರ ಪೈಕಿ ಎರಡನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಕಾಂಗ್ರೆಸ್‌ನ ವಿ.ಮಸಿಯಪ್ಪ ಹಾಗೂ ಡಿ.ಸುಧಾಕರ್‌ (ಒಮ್ಮೆ ಪಕ್ಷೇತರರಾಗಿ) ತಲಾ ಎರಡು ಬಾರಿ ಆಯ್ಕೆಯಾಗಿದ್ದಾರೆ.

1952ರಲ್ಲಿ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ.ಮಸಿಯಪ್ಪ ಅವರು ಪಕ್ಷೇತರ ಅಭ್ಯರ್ಥಿ ಕೆ.ಕೆಂಚಪ್ಪ ಅವರ ವಿರುದ್ಧ ಗೆಲ್ಲುವ ಮೂಲಕ ಕ್ಷೇತ್ರದ ಮೊದಲ ಶಾಸಕರಾದರು. ಆದರೆ, 1957ರಲ್ಲಿ ಪಿ.ಎಸ್‌.ಪಿಯಿಂದ ಸ್ಪರ್ಧಿಸಿದ್ದ ಕೆ.ಕೆಂಚಪ್ಪ ಅವರ ವಿರುದ್ಧ ಮಸಿಯಪ್ಪ ಅವರು ಕೇವಲ 251 ಮತಗಳ ಅಂತರದಲ್ಲಿ ಸೋಲುತ್ತಾರೆ. 1962ರಲ್ಲಿ ಮಸಿಯಪ್ಪ ಅವರು ಪಿಎಸ್‌ಪಿಯ ಪಿ.ಟಿ. ಈಶ್ವರಪ್ಪ ಅವರನ್ನು ಸೋಲಿಸುವ ಮೂಲಕ ಮತ್ತೆ ಶಾಸಕರಾದರು.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಬಳಿಕ 1967ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಡಿ.ಮಂಜುನಾಥ್ ಗೆಲ್ಲುತ್ತಾರೆ. 1972ರಿಂದ ಕಾಂಗ್ರೆಸ್‌ನ ಕೆ.ಎಚ್. ರಂಗನಾಥ್ ಅವರ ಆಧಿಪತ್ಯ ಆರಂಭವಾಯಿತು. ರಂಗನಾಥ್‌ ಅವರು ಮೊದಲ ಬಾರಿಗೇ ಎನ್‌.ಸಿ.ಒ ಅಭ್ಯರ್ಥಿ ಟಿ.ರಂಗಪ್ಪ ಅವರನ್ನು 27,321 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 1978 ಹಾಗೂ 1983ರಲ್ಲೂ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಸಾಧಿಸಿದರು.

ಬಳಿಕ ರಂಗನಾಥ್‌ ಅವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಗೊಂಡರು. 1985ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್‌.ರಾಮಯ್ಯ ಅವರು ಆಯ್ಕೆಯಾದರು. ರಾಜ್ಯ ರಾಜಕಾರಣಕ್ಕೆ ಪುನಃ ವಾಪಸ್ಸಾದ ರಂಗನಾಥ್‌ ಅವರು 1989ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಡಿ. ಮಂಜುನಾಥ್ ವಿರುದ್ಧ ಗೆಲುವು ಸಾಧಿಸಿದರು. ಆದರೆ, 1994ರಲ್ಲಿ ಜೆಡಿಎಸ್‌ನ ಡಿ.ಮಂಜುನಾಥ್‌ ಅವರು ರಂಗನಾಥ್‌ ಅವರನ್ನು ಮಣಿಸಿ ಹಲವು ವರ್ಷಗಳ ಬಳಿಕ ಮತ್ತೆ ಶಾಸಕರಾದರು. ಆದರೆ, 1999ರಲ್ಲಿ ನಡೆದ ಚುನಾವಣೆಯಲ್ಲಿ ರಂಗನಾಥ್‌ ಅವರು ತಮ್ಮ ಎದುರಾಳಿ ಮಂಜುನಾಥ್‌ ಅವರನ್ನು ಸೋಲಿಸುವ ಮೂಲಕ ಐದನೇ ಬಾರಿಗೆ ವಿಧಾನಸೌಧದ ಮೆಟ್ಟಿಲನ್ನೇರುತ್ತಾರೆ. 2004ರಲ್ಲಿ ಡಿ.ಮಂಜುನಾಥ್‌ ಅವರು ಕಾಂಗ್ರೆಸ್‌ನ ಜಿ.ಎಸ್.ಮಂಜುನಾಥ್ ವಿರುದ್ಧ ಗೆಲ್ಲುವ ಮೂಲಕ ಮೂರನೇ ಬಾರಿಗೆ ಶಾಸಕರಾದರು.

2008ರಲ್ಲಿ ಹಿರಿಯೂರು ಸಾಮಾನ್ಯ ಕ್ಷೇತ್ರವಾದಾಗ ಪಕ್ಷೇತರ ಅಭ್ಯರ್ಥಿಯಾಗಿದ್ದ ಡಿ.ಸುಧಾಕರ್ ಅವರು ಬಿಜೆಪಿಯ ಎನ್.ಆರ್. ಲಕ್ಷ್ಮೀಕಾಂತ್ ವಿರುದ್ಧ 16,158 ಮತಗಳ ಅಂತರದಿಂದ ಗೆಲುವು ಸಾಧಿಸಿದರು. 2013ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಡಿ. ಸುಧಾಕರ್ ಅವರು ಜೆಡಿಎಸ್‌ನ ಎ.ಕೃಷ್ಣಪ್ಪ ಅವರನ್ನು 1,205 ಮತಗಳಿಂದ ಸೋಲಿಸಿದ್ದರು. ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎನಿಸಿಕೊಂಡಿರುವ ಹಿರಿಯೂರಿನಲ್ಲಿ ಹ್ಯಾಟ್ರಿಕ್ ಗೆಲುವು ಪಡೆಯಬೇಕು ಎಂಬ ಹಂಬಲದಿಂದ ಶಾಸಕ ಡಿ.ಸುಧಾಕರ್ ಈ ಬಾರಿಯ ಚುನಾವಣೆಗೆ ಸಜ್ಜಾಗುತ್ತಿದ್ದಾರೆ.

ಸಚಿವ ಸ್ಥಾನ ನೀಡಿದ ಕ್ಷೇತ್ರ: 1967ರಿಂದ 2008ರವರೆಗೆ ಹಿರಿಯೂರಿನಿಂದ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿರುವುದು ಒಂದು ವಿಶೇಷವಾಗಿದೆ. ಕೆ.ಎಚ್. ರಂಗನಾಥ್, ಡಿ.ಮಂಜುನಾಥ್ ಹಾಗೂ ಡಿ.ಸುಧಾಕರ್ ಅವರು ಉತ್ತಮ ಖಾತೆಗಳನ್ನು ಹೊಂದಿದ್ದರು.

ಗೊಂದಲದ ಗೂಡು: 2004ರಲ್ಲಿ ಕಾಂಗ್ರೆಸ್‌ನಿಂದ ಹಾಗೂ 2008ರಲ್ಲಿ ಪಕ್ಷೇತರರಾಗಿ ಗಣನೀಯ ಮತ ಪಡೆದಿದ್ದ ಜಿ.ಎಸ್. ಮಂಜುನಾಥ್ ಅವರು ಈಗ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರು. 2008ರ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ್ದ ಡಿ.ಸುಧಾಕರ್ ಪರವಾಗಿ ಅವರು ಪ್ರಚಾರ ನಡೆಸಬೇಕಾಗಿದೆ.

2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಅಲ್ಪಮತಗಳ ಅಂತರದಿಂದ ಸೋಲು ಕಂಡಿದ್ದ ಎ.ಕೃಷ್ಣಪ್ಪ ಅವರ ಮಗಳು ಪೂರ್ಣಿಮಾ ಅಥವಾ ಅಳಿಯ ಡಿ.ಟಿ. ಶ್ರೀನಿವಾಸ್ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಜೆಡಿಎಸ್ ಅಭ್ಯರ್ಥಿಯಾಗಲಿರುವ ಡಿ.ಯಶೋಧರ್ ಅವರು ಹಿಂದಿನ ಚುನಾವಣೆಯ ಜತೆಗಾರ.

ಈ ಕ್ಷೇತ್ರದ ವಿಶೇಷ ಎಂದರೆ ಪಕ್ಷ ನಿಷ್ಠೆ ಮುಖ್ಯವಾಗಿಲ್ಲ. ಇದು ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ನಗರಸಭೆಯ ಜನಪ್ರತಿನಿಧಿಗಳು ಇದಕ್ಕೆ ಹೊರತಾಗಿಲ್ಲ. ಈ ಬಾರಿಯ ಚುನಾವಣೆ ಪಕ್ಷ ಆಧಾರಿತವೋ, ವ್ಯಕ್ತಿ ಆಧಾರಿತವೋ, ಅಭಿವೃದ್ಧಿ ಆಧಾರಿತವೋ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

‘ಪ್ರಜಾತಂತ್ರ ಹಬ್ಬ’ದ ಹೆಜ್ಜೆ ಗುರುತು...

1952:

ವಿ.ಮಸಿಯಪ್ಪ (ಕಾಂಗ್ರೆಸ್) ಪಡೆದ ಮತ: 23,841

ಕೆ.ಕೆಂಚಪ್ಪ (ಪಕ್ಷೇತರ) ಪಡೆದ ಮತ: 15,018

ಗೆಲುವಿನ ಅಂತರ 8,823

1957:

ಕೆ.ಕೆಂಚಪ್ಪ (ಪಿ.ಎಸ್‌.ಪಿ) ಪಡೆದ ಮತ: 21,249

ವಿ.ಮಸಿಯಪ್ಪ (ಕಾಂಗ್ರೆಸ್) ಪಡೆದ ಮತ:  20,998

ಗೆಲುವಿನ ಅಂತರ: 251

1962:

ವಿ.ಮಸಿಯಪ್ಪ (ಕಾಂಗ್ರೆಸ್) ಪಡೆದ ಮತ: 29,018

ಪಿ.ಟಿ. ಈಶ್ವರಪ್ಪ (ಪಿ.ಎಸ್‌.ಪಿ) ಪಡೆದ ಮತ: 11,155

ಗೆಲುವಿನ ಅಂತರ: 16,863

1967 (ಎಸ್‌.ಸಿ):

ಡಿ. ಮಂಜುನಾಥ್ (ಕಾಂಗ್ರೆಸ್)  ಪಡೆದ ಮತ: 17,034

‌ಯಲ್ಲಾಭೋವಿ (ಪಕ್ಷೇತರ) ಪಡೆದ ಮತ: 14,882

ಅಂತರ: 2,152

1972 (ಎಸ್‌.ಸಿ):

ಕೆ.ಎಚ್. ರಂಗನಾಥ್ (ಕಾಂಗ್ರೆಸ್) ಪಡೆದ ಮತ: 33,314

ಟಿ.ರಂಗಪ್ಪ (ಎನ್‌.ಸಿ.ಒ) ಪಡೆದ ಮತ: 5,993

ಅಂತರ: 27,321

1978 (ಎಸ್‌.ಸಿ):

ಕೆ.ಎಚ್. ರಂಗನಾಥ್ (ಕಾಂಗ್ರೆಸ್) ಪಡೆದ ಮತ: 40,938

ಡಿ.ಮಂಜುನಾಥ್ (ಜೆಎಸ್‌ಪಿ) ಪಡೆದ ಮತ: 16,730

ಅಂತರ: 24,208

1983 (ಎಸ್‌.ಸಿ):

ಕೆ.ಎಚ್. ರಂಗನಾಥ್ (ಕಾಂಗ್ರೆಸ್) ಪಡೆದ ಮತ: 31,667

ಟಿ.ತಿಪ್ಪಣ್ಣ (ಜೆಎಸ್‌ಪಿ) ಪಡೆದ ಮತ: 27,069

ಅಂತರ: 4,598

1985 (ಎಸ್‌.ಸಿ):

ಆರ್.ರಾಮಯ್ಯ (ಕಾಂಗ್ರೆಸ್) ಪಡೆದ ಮತ: 32,542

ಟಿ.ತಿಪ್ಪಣ್ಣ (ಜೆ.ಎಸ್‌.ಪಿ) ಪಡೆದ ಮತ: 26,468

ಗೆಲುವಿನ ಅಂತರ: 6,074

1989 (ಎಸ್‌.ಸಿ): ಕೆ.ಎಚ್.ರಂಗನಾಥ್ (ಕಾಂಗ್ರೆಸ್) ಗೆಲುವು. ಪಡೆದ ಮತಗಳು 33,717

ಬಿ.ಬಸಪ್ಪ (ಜೆಡಿ) ಪಡೆದ ಮತ: 21,429

ಅಂತರ: 12,288

1994 (ಎಸ್‌.ಸಿ):

ಡಿ.ಮಂಜುನಾಥ್ (ಜೆಡಿ) ಪಡೆದ ಮತ: 43,911

ಕೆ.ಎಚ್.ರಂಗನಾಥ್ (ಕಾಂಗ್ರೆಸ್) ಪಡೆದ ಮತ: 24,302

ಗೆಲುವಿನ ಅಂತರ: 19,609

1999 (ಎಸ್‌.ಸಿ):

ಕೆ.ಎಚ್. ರಂಗನಾಥ್ (ಕಾಂಗ್ರೆಸ್) ಪಡೆದ ಮತ: 45,415

ಡಿ.ಮಂಜುನಾಥ್ (ಜೆಡಿಎಸ್) ಪಡೆದ ಮತ: 35,755

‌ಅಂತರ: 9,660

2004 (ಎಸ್‌.ಸಿ):

ಡಿ.ಮಂಜುನಾಥ್ (ಜೆಡಿಎಸ್ ) ಪಡೆದ ಮತ: 43,749

ಜಿ.ಎಸ್.ಮಂಜುನಾಥ್ (ಕಾಂಗ್ರೆಸ್) ಪಡೆದ ಮತ: 31,310

ಗೆಲುವಿನ ಅಂತರ: 12,439

2008:

ಡಿ.ಸುಧಾಕರ್ (ಪಕ್ಷೇತರ) ಪಡೆದ ಮತ: 43,078

ಎನ್.ಆರ್. ಲಕ್ಷ್ಮೀಕಾಂತ್ (ಬಿಜೆಪಿ) ಪಡೆದ ಮತ: 26,920

ಗೆಲುವಿನ ಅಂತರ: 16,158

2013:

ಡಿ.ಸುಧಾಕರ್ (ಕಾಂಗ್ರೆಸ್) ಗೆಲುವು. ಪಡೆದ ಮತ: 71,661

ಎ.ಕೃಷ್ಣಪ್ಪ (ಜೆಡಿಎಸ್) ಪಡೆದ ಮತ: 70,456

ಗೆಲುವಿನ ಅಂತರ: 1205

ಪ್ರತಿಕ್ರಿಯಿಸಿ (+)