ನೀರು ಹಾಯಿಸಲು ಅವಕಾಶ ಮಾಡಿಕೊಡಿ

7

ನೀರು ಹಾಯಿಸಲು ಅವಕಾಶ ಮಾಡಿಕೊಡಿ

Published:
Updated:

ದಾವಣಗೆರೆ: ‘ಅಡಿಕೆ ತೋಟ ಒಣಗಿದರೆ ಜೀವನ ಕಷ್ಟವಾಗುತ್ತದೆ. ಸ್ವಲ್ಪ ದಿನ ನೀರು ಹಾಯಿಸಿಕೊಂಡು ತೋಟಗಳ ಜೀವ ಉಳಿಸಿಕೊಳ್ಳುತ್ತೇವೆ. ಅಧಿಕಾರಿಗಳು ವಶಪಡಿಸಿಕೊಂಡಿರುವ ಪಂಪ್‌ಸೆಟ್‌ಗಳನ್ನು ವಾಪಸು ಕೊಡಿಸಿ’ ಎಂದು ಮಾಯಕೊಂಡ, ಅಣಬೇರು, ಹೆದ್ನೆ, ಹುಚ್ಚವ್ವನಹಳ್ಳಿ, ಬಸಾಪುರ, ಹಿಂಡಸಘಟ್ಟ ಹಾಗೂ ಒಂಟಿಹಾಳ್‌ ಗ್ರಾಮಗಳ ನೂರಾರು ರೈತರು ಬಿಜೆಪಿ ಮುಖಂಡ ಎಸ್‌.ಎ.ರವೀಂದ್ರನಾಥ ಅವರಲ್ಲಿ ಒಕ್ಕೊರಲಿನಿಂದ ಮನವಿ ಮಾಡಿದರು.

ಶಿರಮನಗೊಂಡನ ಹಳ್ಳಿಯಲ್ಲಿನ ರವೀಂದ್ರನಾಥ ಅವರ ಮನೆ ಎದುರು ಭಾನುವಾರ ಬೆಳಿಗ್ಗೆಯೇ ಜಮಾಯಿಸಿದ ರೈತರು, ‘ನಾಲೆಯ ಮೇಲ್ಬಾಗದಲ್ಲಿ ದೊಡ್ಡವರು ಅಕ್ರಮ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡು ತೋಟಗಳಿಗೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಅಂಥವರ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ನಾವು ಬಡವರು. ನಮ್ಮ ಪಂಪ್‌ಸೆಟ್‌ ವಶಪಡಿಸಿಕೊಳ್ಳುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ಭದ್ರಾ ನಾಲೆಯ ಮೇಲ್ಭಾಗದಲ್ಲಿ ಜನಪ್ರತಿನಿಧಿಗಳ ಅಡಿಕೆ ತೋಟಗಳಿವೆ. ಅವರು ಬೆಸ್ಕಾಂ ಹಾಗೂ ನೀರಾವರಿ ಅಧಿಕಾರಿಗಳಿಗೆ ಲಂಚಕೊಟ್ಟು ಹಗಲು, ರಾತ್ರಿ ತೋಟಕ್ಕೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ’ ಎಂದು ಹುಚ್ಚವ್ವನಹಳ್ಳಿ ಗ್ರಾಮದ ರೈತರೊಬ್ಬರು ದೂರಿದರು.

‘ದೊಡ್ಡವರನ್ನು ಬಿಟ್ಟು ನಮ್ಮ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತೇವೆ ಎಂದು ಅಧಿಕಾರಿಗಳು ಬೆದರಿಸುತ್ತಿದ್ದಾರೆ. ಮೊದಲು ನಾಲೆಯ ಮೇಲ್ಬಾಗದಲ್ಲಿ ಅಕ್ರಮವಾಗಿ ಅಳವಡಿಸಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಬೇಕು’ ಎಂದು ರವೀಂದ್ರನಾಥ ಬಳಿ ರೈತರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌.ಎ. ರವೀಂದ್ರನಾಥ, ‘ನಾಲೆಯುದ್ದಕ್ಕೂ ಅಳವಡಿಸಿಕೊಂಡಿರುವ ಅಕ್ರಮ ಪಂಪ್‌ಸೆಟ್‌ಗಳನ್ನು ವಶಪಡಿಸಿಕೊಂಡು, ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಎಲ್ಲರೂ ಅದನ್ನು ಪಾಲಿಸಬೇಕು’ ಎಂದರು.

‘ನೀವು ತೋಟ ಉಳಿಸಿಕೊಳ್ಳಲು ಹೋರಾಡುತ್ತಿದ್ದೀರಿ. ನಾಲೆಯ ಕೊನೆಭಾಗದ ಕಕ್ಕರಗೊಳ್ಳ, ಆವರಗೊಳ್ಳ, ಕೊಡಿಹಳ್ಳಿ, ಕೊಂಡಜ್ಜಿ, ಗಂಗನರಸಿ, ಕಡ್ಲೆಬಾಳು, ಚಿತ್ತಾನಳ್ಳಿ, ಅರಸಾಪುರ, ದೊಡ್ಡಬಾತಿ, ಹಳೆಬಾತಿ, ಓಬ್ಬಜಿಹಳ್ಳಿ, ದೊಡ್ಡಬಾತಿ, ಹಳೇಬಾತಿ, ಕುಂದವಾಡ, ಕೈದಾಳೆ, ಕುಕ್ಕುವಾಡ, ಕೊಳೇನಹಳ್ಳಿ ಗ್ರಾಮಗಳಲ್ಲಿನ ಸುಮಾರು 40 ಸಾವಿರ ಹೆಕ್ಟೇರ್‌ ಪ್ರದೇಶದ ಜಮೀನುಗಳಿಗೆ ಇದುವರೆಗೂ ನೀರು ಹರಿದಿಲ್ಲ. ಅವರು ಕೂಡ ಬದುಕಬೇಕು. ಜಿಲ್ಲಾಡಳಿತದ ಆದೇಶದ ವಿರುದ್ಧ ಯಾರು ನಡೆದುಕೊಳ್ಳಬಾರದು’ ಎಂದು ಕಿವಿಮಾತು ಹೇಳಿದರು.

ಕೊನೆಭಾಗದ ಜಮೀನುಗಳಿಗೆ ನೀರು ತಲುಪಬೇಕಾದರೆ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲೇ ಬೇಕು ಎಂದು ಬಿಜೆಪಿ ಮುಖಂಡ ಕಡ್ಲೆಬಾಳು ಧನಂಜಯ ಒತ್ತಾಯಿಸಿದರು.

ಮುಖಂಡರಾದ ಡಾ.ಎ.ಎಚ್‌.ಶಿವಯೋಗಿಸ್ವಾಮಿ, ಬಸವರಾಜ ನಾಯ್ಕ, ಬಿ.ಎಸ್‌.ಜಗದೀಶ್, ನಟರಾಜ್‌ ನಿರ್ಥಡಿ, ಶಾಮನೂರು ಲಿಂಗರಾಜ್‌, ಕಲ್ಪನಹಳ್ಳಿ ಶಿವರಾಜ, ಕಕ್ಕರಗೊಳ್ಳ ಕಲ್ಲಿಂಗಪ್ಪ, ಉಮೇಶ್‌ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry