ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರಿಗೊಂದು ಚೆಂದದ ಉದ್ಯಾನ

Last Updated 19 ಫೆಬ್ರುವರಿ 2018, 9:21 IST
ಅಕ್ಷರ ಗಾತ್ರ

ದಾವಣಗೆರೆ: ಚಿಣ್ಣರ ಸವಾರಿಗೆ ಸಿದ್ಧವಾಗಿ ನಿಂತಿರುವ ಚುಕು ಬುಕು ರೈಲು, ಮನದಣಿಯೆ ಜಾರಲು ರಂಗುರಂಗಿನ ಜಾರುಬಂಡೆ, ಕಣ್ಣಿಗೆ, ಮನಸ್ಸಿಗೆ ಮುದ ನೀಡುವ ಸಂಗೀತ ಕಚೇರಿ, ಆರೋಗ್ಯ ಕಾಳಜಿಗೆ ಪುಟಾಣಿ ಜಿಮ್‌. ಒಟ್ಟಾರೆ, ಮಕ್ಕಳಿಗೆ ಭರಪೂರ ಮನರಂಜನೆ.

ನಗರದ ನಿಜಲಿಂಗಪ್ಪ ಲೇಔಟ್‌ನಲ್ಲಿ ನಿರ್ಮಾಣವಾಗುತ್ತಿರುವ ‘ಮಾತೃಛಾಯ ಚಿಣ್ಣರ ಉದ್ಯಾನ’ದ ವಿಶೇಷತೆಗಳು ಇವು. ಸುಮಾರು ₹ 2.90 ಕೋಟಿ ವೆಚ್ಚದಲ್ಲಿ ಮಕ್ಕಳ ಉದ್ಯಾನ ರೂಪುಗೊಳ್ಳುತ್ತಿದ್ದು, ಮಾರ್ಚ್‌ನಲ್ಲಿ ಪುಟಾಣಿಗಳಿಗೆ ತೆರೆದುಕೊಳ್ಳಲಿದೆ.

ಪ್ಲೇ ವಿತ್ ಲರ್ನಿಂಗ್‌: ಮಕ್ಕಳು ಆಡುತ್ತಲೇ ಕಲಿಯಲು ಪೂರಕ ವಾತಾವರಣವನ್ನು ಇಲ್ಲಿ ಕಲ್ಪಿಸಲಾಗಿದೆ. ಜತೆಗೆ ಸಾಹಸಮಯ ಚಟುವಟಿಕೆಗಳಿಗೆ ಸಹಕಾರಿಯಾಗುವ ಆಟಿಕೆಗಳೂ ಇಲ್ಲಿ ಲಭ್ಯ ಎನ್ನುತ್ತಾರೆ ಪಾಲಿಕೆ ಸದಸ್ಯರಾದ ಶಿವನಹಳ್ಳಿ ರಮೇಶ್‌.

ರೈಲು ಪ್ರಯಾಣ ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಕಾರಣಕ್ಕೆ ಮಿನಿ ರೈಲಿನ ವ್ಯವಸ್ಥೆ ಮಾಡಲಾಗಿದೆ. ಸುರಕ್ಷತೆ ಹಾಗೂ ಮನರಂಜನೆಯ ದೃಷ್ಟಿಯಿಂದ ಒಡಿಶಾದಿಂದ ಸುಸಜ್ಜಿತ ಬೋಗಿಗಳನ್ನು ತರಿಸಿಕೊಳ್ಳಲಾಗಿದೆ. 30 ಜನರಿಗೆ ಆಸನದ ವ್ಯವಸ್ಥೆ ಇದೆ. 300 ಮೀಟರ್‌ ಹಳಿ ನಿರ್ಮಿಸಲಾಗಿದೆ ಎಂದರು.

ಸಂಗೀತ ಕಾರಂಜಿ: ಉದ್ಯಾನದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಸಂಗೀತ ಕಾರಂಜಿ. ಒತ್ತಡದ ಬದುಕಿನಲ್ಲಿ ಮನಸ್ಸಿಗೆ ನೆಮ್ಮದಿ ಹಾಗೂ ಮಕ್ಕಳ ಜತೆ ಪೋಷಕರು ಹೆಚ್ಚು ಸಮಯ ಕಳೆಯಲಿ ಎಂಬ ಉದ್ದೇಶದಿಂದ ಸಂಗೀತ ಕಾರಂಜಿ ನಿರ್ಮಿಸಲಾಗಿದೆ.

ಮೈಸೂರಿನ ಕೆಆರ್‌ಎಸ್‌ ಉದ್ಯಾನದ ವಿನ್ಯಾಸಕರಲ್ಲೊಬ್ಬರಾದ ಶ್ರೀಧರ್ ಕಾರಂಜಿ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಮುರುಘಾ ಮಠದ ಮಾದರಿಯಂತೆ ಕಾರಂಜಿ ನಿರ್ಮಿಸಿದ್ದು, ಕಣ್ಣಿಗೂ ಹಾಗೂ ಮನಸ್ಸಿಗೂ ಅದು ಮುದ ನೀಡಲಿದೆ ಎಂದರು.‌

ಪರಿಸರ ಕಾಳಜಿ

ಎರಡೂಕಾಲು ಎಕರೆ ಉದ್ಯಾನದಲ್ಲಿ ಹಿಂದಿದ್ದ ಯಾವ ಮರಗಳನ್ನೂ ಕಡಿದಿಲ್ಲ. ಸಣ್ಣ ಜಾಗವನ್ನೂ ಸದ್ಬಳಕೆ ಮಾಡಿಕೊಳ್ಳಲಾಗಿದೆ. ಕುರ್ಚಿಗಳ ಬದಲಿಗೆ ಉದ್ಯಾನದ ಸುತ್ತಲೂ ಕಲ್ಲಿನ ಆಸನಗಳನ್ನು ಹಾಕಲಾಗಿದ್ದು, ಆರಾಮವಾಗಿ ಕುಳಿತು ಸೌಂದರ್ಯ ಸವಿಯಬಹುದು.

40 ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ. ಇದರಿಂದ ಆರ್ಥಿಕ ಹೊರೆ ಕಡಿಮೆ ಆಗುವುದರ ಜತೆಗೆ, ವಿದ್ಯುತ್ ಸ್ವಾವಲಂಬನೆ ಸಾಧಿಸಬಹುದು. ಮಕ್ಕಳಿಗೆ ಆರೋಗ್ಯದ ಬಗ್ಗೆ ಆಸಕ್ತಿ ಬೆಳೆಸಲು ಮಿನಿ ಜಿಮ್‌ ಮಾಡಲಾಗಿದೆ. ಉದ್ಯಾನದ ನಿರ್ವಹಣೆ ದುಬಾರಿ ಹೀಗಾಗಿ ಖಾಸಗಿ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಗಿದೆ. ಜತೆಗೆ ಪಾಲಿಕೆಗೆ ಪ್ರತಿ ತಿಂಗಳೂ ₹ 20 ಸಾವಿರ ವರಮಾನ

ಬರಲಿದೆ. ಜನಸಾಮಾನ್ಯರಿಗೆ ಹೊರೆಯಾಗದಂತೆ ಟಿಕೆಟ್‌ ದರ ನಿಗದಿಗೆ ಸೂಚಿಸಲಾಗಿದ್ದು, ಮಕ್ಕಳಿಗೆ ತಲಾ ₹ 10, ವಯಸ್ಕರಿಗೆ ₹ 20 ನಿಗದಿಯಾಗಲಿದೆ ಎಂದು ಶಿವನಹಳ್ಳಿ ರಮೇಶ್‌ ತಿಳಿಸಿದರು.

ಶೌಚಾಲಯ ವ್ಯವಸ್ಥೆ, ಮಿನಿ ಹೋಟೆಲ್‌ ಸೌಲಭ್ಯವೂ ಉಂಟು. ಉದ್ಯಾನದ ಮುಂಭಾಗದ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇಡೀ
ಕುಟುಂಬ ಸಂತೋಷದಿಂದ ಕಾಲಕಳೆಯುವ ವ್ಯವಸ್ಥೆಯಿದ್ದು, ಮಾರ್ಚ್‌ ಮೊದಲ ವಾರದಲ್ಲಿ ಲೋಕಾರ್ಪಣೆಯಾಗಲಿದೆ ಎಂದರು.

‘ಮಾದರಿ ಮಕ್ಕಳ ಉದ್ಯಾನ’

‘ವಾರ್ಡ್‌ ವ್ಯಾಪ್ತಿಯಲ್ಲಿ ಉದ್ಯಾನಗಳಿದ್ದರೂ ಮಕ್ಕಳಿಗೆ ಪ್ರತ್ಯೇಕ ಪಾರ್ಕ್‌ ಎಂಬ ಕೊರಗಿತ್ತು. ಹಾಗಾಗಿ, ಜಿಲ್ಲೆಯಲ್ಲೇ ಮಾದರಿ ಮಕ್ಕಳ ಉದ್ಯಾನ ನಿರ್ಮಿಸಲು ತೀರ್ಮಾನಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಬಳಿ ಚರ್ಚಿಸಿದಾಗ ಒಪ್ಪಿಗೆ ಸಿಕ್ಕಿತು.

ಮಕ್ಕಳ ಉದ್ಯಾನ ಕಾರ್ಯರೂಪಕ್ಕೆ ಬಂದ ಕುರಿತು ‘ಪ್ರಜಾವಾಣಿ’ ಜತೆ ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್‌ ಮಾತನಾಡಿದರು.

ಪಾಲಿಕೆಯಿಂದ ವಿಶೇಷ ಅನುದಾನ ಯೋಜನೆಯಡಿ ₹ 2.42 ಕೋಟಿ ಹಾಗೂ ತೋಟಗಾರಿಕೆ ಇಲಾಖೆಯಿಂದ ₹ 48 ಲಕ್ಷ ಅನುದಾನ ದೊರೆಯಿತು. ಮನರಂಜನೆ, ಕಲಿಕೆಯೊಂದಿಗೆ ಆಟ, ಪರಿಸರ ಕಾಳಜಿಯ ಉದ್ದೇಶಗಳೊಂದಿಗೆ ಬೆಂಗಳೂರಿನ ಶ್ರೀಧರ್ ಹಾಗೂ ವ್ಯಾಸ್‌ ಅವರ ನೇತೃತ್ವದ ತಜ್ಞರ ತಂಡ ಉದ್ಯಾನ ನಿರ್ಮಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT