ಬುಧವಾರ, ಡಿಸೆಂಬರ್ 11, 2019
23 °C

ರಾಶಿಗಟ್ಟಲೇ ಕಾಂಡೋಮ್‌ ಪ್ಯಾಕೆಟ್‌ಗಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಶಿಗಟ್ಟಲೇ ಕಾಂಡೋಮ್‌ ಪ್ಯಾಕೆಟ್‌ಗಳು ಪತ್ತೆ

ಅಣ್ಣಿಗೇರಿ: ಸರ್ಕಾರಿ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ವಿತರಿಸಬೇಕಾಗುವ ಆಶಾ ಕಾಂಡೋಮ್ ಪ್ಯಾಕೆಟ್‌ಗಳು ಇಲ್ಲಿನ ಕೊಂಡಿಕೊಪ್ಪ ಹಾಗೂ ಕೋಳಿವಾಡ ರಸ್ತೆಯ ಮಧ್ಯ ಹಾಗೂ ಗಟಾರಗಳಲ್ಲಿ ರಾಶಿಗಟ್ಟಲೇ ಸುರಿಯಲಾಗಿದೆ.

ಪಟ್ಟಣದ ರೈಲ್ವೆ ಗೇಟ್ ಪಕ್ಕದ ಕೊಂಡಿಕೊಪ್ಪ ರಸ್ತೆಯಲ್ಲಿ ಕಾಂಡೋಮ್‌ ತುಂಬಿದ 3 ಬಾಕ್ಸ್‌ಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೋಳಿವಾಡ ರಸ್ತೆಯ ಪಕ್ಕದ ಗಟಾರದಲ್ಲಿ ಬಿಸಾಡಲಾಗಿದೆ.

ಕಾಂಡೋಮ್‌ ಪ್ಯಾಕೆಟ್‌ಗಳನ್ನು ಕೇಂದ್ರ ಸರ್ಕಾರದಿಂದ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿತರಿಸಲಾಗುತ್ತದೆ. ಕೊಂಡಿಕೊಪ್ಪ ರಸ್ತೆಯಲ್ಲಿ ಪತ್ತೆಯಾದ ಪ್ಯಾಕೆಟ್‌ಗಳು 2019ರ ಮಾರ್ಚ್‌ವರೆಗೆ ಹಾಗೂ ಕೋಳಿವಾಡ ರಸ್ತೆಯಲ್ಲಿ ಚೆಲ್ಲಿದ ಪ್ಯಾಕೆಟ್‌ಗಳು 2020ರ ಮಾರ್ಚ್‌ವರೆಗೆ ಮುಕ್ತಾಯದ ಅವಧಿ ಇದೆ.

ಗಟಾರ ಮತ್ತು ರಸ್ತೆಯಲ್ಲಿ ಬಿಸಾಡಲಾದ ಕಾಂಡೋಮ್‌ಗಳು ಯಾವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ್ದು, ಯಾರು ಬಿಸಾಡಿ ಹೋಗಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲಿ ಉದ್ಭವಿಸಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕರು ಸ್ಥಳಕ್ಕೆ ಬಂದು ಅವುಗಳನ್ನು ಒಂದೆಡೆ ಸೇರಿಸಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ನಂತರ ಅವು ಸ್ಥಳೀಯ ಸರ್ಕಾರಿ ಆಸ್ಪತೆಗೆ ಸಂಭಂದಿಸಿದ್ದಲ್ಲ ಎಂದು ಆಸ್ಪತ್ರೆಯವರು ಸ್ಪಷ್ಟಪಡಿಸಿದ್ದಾರೆ.

‘ಕಾಂಡೋಮ್‌ ಪ್ಯಾಕೆಟ್‌ಗಳ ಮೇಲೆ ಮುದ್ರಿತವಾಗಿರುವ ಬ್ಯಾಚ್ ನಂಬರ್‌ ಆಧಾರದ ಮೇಲೆ ಅವುಗಳು ಯಾವ ಆಸ್ಪತ್ರೆಗೆ ಸೇರಿದ್ದವು ಎಂಬುದನ್ನು ಪತ್ತೆ ಮಾಡಲಾಗುವುದು’ ಎಂದು ಸ್ಥಳೀಯ ವೈದ್ಯಾಧಿಕಾರಿ ಡಾ.ಅಶೋಕ ಅಗರವಾಲ ತಿಳಿಸಿದರು.

ಸಾರ್ವಜನಿಕರಿಗೆ ವಿತರಿಸಬೇಕಿದ್ದ ಕಾಂಡೋಮ್‌ ಪ್ಯಾಕೆಟ್‌ಗಳನ್ನು ರಸ್ತೆಯಲ್ಲಿ ಬೇಕಾಬಿಟ್ಟಿ ಬಿಸಾಡಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)