ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆನೋಪಿ’ ಪರಿಸರಕ್ಕೆ ಮಾರಕವಲ್ಲ

Last Updated 19 ಫೆಬ್ರುವರಿ 2018, 9:43 IST
ಅಕ್ಷರ ಗಾತ್ರ

ಕುವೇಶಿ (ಕಾರವಾರ): ಕೆನೋಪಿ ವಾಕ್ ಪರಿಸರಕ್ಕೆ ಮಾರಕವಲ್ಲ, ಇದು ರಾಜ್ಯದ ಪ್ರವಾಸೋದ್ಯಮಕ್ಕೆ ಪೂರಕ. ಇದರ ಬಗ್ಗೆ ಅಪಪ್ರಚಾರ ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು. ಜೊಯಿಡಾ ತಾಲ್ಲೂಕಿನ ಕುವೇಶಿಯಲ್ಲಿ ನಿರ್ಮಿಸಲಾಗಿರುವ ದೇಶದ ಮೊದಲ ‘ಕೆನೋಪಿ ವಾಕ್’ ಅನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಲೇಷ್ಯಾ ಮತ್ತು ಆಸ್ಟ್ರೇಲಿಯಾ ಹೊರತುಪಡಿಸಿದರೆ ನಮ್ಮ ದೇಶದಲ್ಲೇ ಈ ರೀತಿಯ ಆಕರ್ಷಣೆ ಇರುವುದು. ಈ ಮೂಲಕ ವಿಶ್ವ ಪ್ರವಾಸೋದ್ಯಮ ಭೂಪಟದಲ್ಲಿ ಈ ಸಣ್ಣ ಗ್ರಾಮ ಗುರುತಿಸಿಕೊಳ್ಳುತ್ತಿದೆ. ಇದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ’ ಎಂದರು.

240 ಮೀ ಉದ್ದದ ದಾರಿಯಲ್ಲಿ 10 ಕಡೆ ‘ಫ್ಲ್ಯಾಟ್‌ಫಾರ್ಮ್’ ಅಳವಡಿಸಲಾಗಿದೆ. ₹ 84 ಲಕ್ಷ ವೆಚ್ಚದಲ್ಲಿ ಒಂದೊಳ್ಳೆ ಕಾಮಗಾರಿಯನ್ನು ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಇಂಥ ಯೋಜನೆಗಳಲ್ಲಿ ನಾವು ಧನಾತ್ಮಕ ಅಂಶಗಳನ್ನು ನೋಡಬೇಕು. ಪ್ರವಾಸೋದ್ಯಮ ಬೆಳೆದರೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ತನ್ನಿಂತಾನೇ ಸೃಷ್ಟಿಯಾಗುತ್ತವೆ. ಕೆನೋಪಿ ವಾಕ್‌ನಿಂದ ಪ್ರವಾಸೋದ್ಯಮದ ಮೇಲೆ ಆಗುವ ಲಾಭ ಏನೆಂಬುದು ಇನ್ನು ಮೂರು ನಾಲ್ಕು ವರ್ಷಗಳಲ್ಲಿ ತಿಳಿಯಲಿದೆ, ಆದ್ದರಿಂದ ಇದರ ಬಗ್ಗೆ ಮತ್ತಷ್ಟು ಪ್ರಚಾರ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಯಾವುದೇ ತಾಲ್ಲೂಕಿನಲ್ಲೂ ಆಗದಷ್ಟು ಅಭಿವೃದ್ಧಿ ಕಾಮಗಾರಿಗಳು ಜೊಯಿಡಾ ತಾಲ್ಲೂಕಿನಲ್ಲಿ ಆಗುತ್ತಿವೆ. ಪ್ರವಾಸೋದ್ಯಮಕ್ಕೆ ಪೂರಕವಾದ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ. ಮೂರು ವರ್ಷಗಳ ಹಿಂದೆ ಇದ್ದ ಈ ತಾಲ್ಲೂಕಿನಲ್ಲಿ ಇದ್ದ ಪರಿಸ್ಥಿತಿಗೆ ಹೋಲಿಸಿದರೆ ಈಗ ಅಜಗಜಾಂತರ ವ್ಯತ್ಯಾಸವಿದೆ ಎಂದು ಅವರು ತಿಳಿಸಿದರು.

ಜೊಯಿಡಾ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನರ್ಮದಾ ಪಾಟ್ನೇಕರ, ಕಾಳಿ ಹುಲಿ ಸಂರಕ್ಷಿತ ವಲಯದ ನಿರ್ದೇಶಕ ಓ.ಪಾಲಯ್ಯ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾರಕೋಡ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಸದಾಶಿವ ತೋಟದ ಅವರೂ ಇದ್ದರು.

ನಿರ್ಮಿಸಿದವರಿಗೆ ಸನ್ಮಾನ: ಕೆನೋಪಿ ವಾಕ್ ಅನ್ನು ಮೈಸೂರಿನ ಔಟ್ ಬ್ಯಾಕ್ ಅಡ್ವೆಂಚರ್‌ನ ಅಲೀಂ ಮತ್ತು ಭರತ್ ನಿರ್ಮಿಸಿದ್ದಾರೆ, ಈ ಬಗ್ಗೆ ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡಿದ್ದರು. ಅವರನ್ನು ಸಚಿವ ದೇಶಪಾಂಡೆ ಸಮಾರಂಭದಲ್ಲಿ ಸನ್ಮಾಸಿದರು.

3 ತಾಸು ತಡ!
ಕೆನೋಪಿ ವಾಕ್ ಉದ್ಘಾಟನೆಯು ಮಧ್ಯಾಹ್ನ 3 ಗಂಟೆಗೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಣವಾಗಿತ್ತು. ಆದರೆ, ಸಚಿವ ಆರ್.ವಿ.ದೇಶಪಾಂಡೆ ಕುವೇಶಿಗೆ ಬಂದಾಗ ಸಂಜೆ 4.50 ಆಗಿತ್ತು. ನಂತರ ನಡಿಗೆ ಮುಗಿಸಿ ವೇದಿಕೆ ಬಳಿ ಬರುವಾಗ ಸಂಜೆ 5.50 ಆಗಿತ್ತು. ಅವರ ಸ್ವಾಗತಕ್ಕೆ ಕಾದುಕುಳಿತಿದ್ದ ಕ್ಯಾಸಲ್ ರಾಕ್ ಕನ್ನಡ ಶಾಲೆಯ ಮಕ್ಕಳು ಲೇಜಿಮ್ಸ್ ಪ್ರದರ್ಶನ ನೀಡಿ ಸುಸ್ತಾಗಿದ್ದರು, ಗ್ರಾಮಸ್ಥರು ಕಾರ್ಯಕ್ರಮ ಎಷ್ಟು ಹೊತ್ತಿಗೆ ಶುರುವಾಗುತ್ತದೋ ಎಂದು ಕಾತರದಿಂದ ಕಾಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT