ಶುಕ್ರವಾರ, ಡಿಸೆಂಬರ್ 13, 2019
27 °C

ಆಸರೆಯ ಹಂಬಲವಿದೆ

ಅಭಿಲಾಷ ಬಿ.ಸಿ Updated:

ಅಕ್ಷರ ಗಾತ್ರ : | |

ಆಸರೆಯ ಹಂಬಲವಿದೆ

ಬದುಕಿನ ಇಳಿಸಂಜೆಯಲ್ಲಿ ಆಸರೆಯಾಗಬೇಕಿದ್ದ ಮಕ್ಕಳು ನಿರ್ಲಕ್ಷಿಸಿದಾಗ ಆಗುವ ನೋವಿನ ಮುಂದೆ 66 ವರ್ಷದ ದುಡಿಮೆಯ ಜೀವನ ನೀಡಿದ ನೋವು ತೃಣ ಸಮಾನ. ನನ್ನ ಹೆಸರು ಧನಮ್ಮ ಆದರೆ, ಹೆಸರಿನಲ್ಲಿರುವ ಸೌಭಾಗ್ಯ ಜೀವನದಲ್ಲಿಲ್ಲ. ಕಳೆದ 40 ವರ್ಷಗಳಿಂದ ಮಲ್ಲೇಶ್ವರದ ಗುಟ್ಟಳ್ಳಿ ಮುಖ್ಯರಸ್ತೆಯಲ್ಲಿನ ದತ್ತಾತ್ರೇಯ ದೇವಸ್ಥಾನದ ಪಾದಚಾರಿ ಮಾರ್ಗದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದೇನೆ.

ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯೂ ಆಯಿತು. ತಮಿಳುನಾಡಿನ ವೇಲೂರು ಗಂಡನಮನೆ. ಸಂಸಾರ ಏನೆಂದು ಅರಿಯುವ ಮೊದಲೇ ಮೂರು ಮಕ್ಕಳ ತಾಯಿಯಾಗಿದ್ದೆ. ಕುಡುಕ ಗಂಡನೊಂದಿಗೆ ವೇಲೂರಿನಲ್ಲಿ ಬದುಕಲಾರದೆ ಮತ್ತೆ ಬೆಂಗಳೂರಿಗೆ ಬಂದುಬಿಟ್ಟೆ. ತಂದೆ ತಾಯಿಯ ಜೀವನ ನಿರ್ವಹಣೆಗೆ ಸಹಕಾರಿಯಾಗಿದ್ದ ತರಕಾರಿ ವ್ಯಾಪಾರವನ್ನೇ ನೆಚ್ಚಿಕೊಂಡೆ. ನಾನು ಶಾಲೆಯ ಮೆಟ್ಟಿಲನ್ನೇ ಹತ್ತದವಳು. ಆ ಕೊರಗು ಇಂದಿಗೂ ಕಾಡುತ್ತಿದೆ. ಇದೇ ನೋವು ನನ್ನ ಮಕ್ಕಳಿಗೆ ಕಾಡದಿರಲೆಂದು ಕಷ್ಟದ ದಿನಗಳಲ್ಲೂ ಚೆನ್ನಾಗಿ ಓದಿಸಿದೆ. ಆದರೆ ಓದಿದ ಮಕ್ಕಳು ಮದುವೆಯ ನಂತರ ಅವರವರ ಜೀವನ ರೂಪಿಸಿಕೊಂಡರೆ ಹೊರತು ನನಗೆ ಆಸರೆಯಾಗಲಿಲ್ಲ. ಶಿಕ್ಷಣ ಅವರಿಗೆ ಮಾನವೀಯತೆ ಕಲಿಸಲಿಲ್ಲ. ಒಬ್ಬಳು ಮಗಳನ್ನು ತುಮಕೂರಿಗೆ ಮದುವೆ ಮಾಡಿ ಕೊಟ್ಟಿದ್ದೇನೆ.

ಸದ್ಯ ಬಾಂಧವ್ಯನಗರದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದೇನೆ. ಮನಸು ಸದಾ ಕುಟುಂಬದ ಆಸರೆಗಾಗಿ ಹಂಬಲಿಸುತ್ತದೆ. ಆದರೆ ಆ ನೋವನ್ನು ಮರೆಸಲು ಕೈತುಂಬಾ ಕೆಲಸವಿದೆ. ಮುಂಜಾನೆ 4 ಗಂಟೆಗೆ ನನ್ನ ದಿನಚರಿ ಆರಂಭವಾಗುತ್ತದೆ. ಬೆಳಿಗ್ಗೆ 5 ಗಂಟೆಗೆ ಕೆ.ಆರ್. ಮಾರುಕಟ್ಟೆಗೆ ಹೋಗಿ ಆ ದಿನಕ್ಕೆ ವ್ಯಾಪಾರವಾಗಬಹುದಷ್ಟು ತರಕಾರಿ ತರುತ್ತೇನೆ. ನಂತರ ಇಲ್ಲಿಯೇ ನನ್ನ ಠಿಕಾಣಿ. ಮಧ್ಯಾಹ್ನ 2 ಗಂಟೆಗೆ ಮನೆಗೆ ಹೋಗಿ, ಊಟ ಮುಗಿಸಿ 4 ಗಂಟೆಯ ಹೊತ್ತಿಗೆ ಅಂಗಡಿಗೆ ಬಂದರೆ ರಾತ್ರಿ 10.30ರವರೆಗೆ ವ್ಯಾಪಾರ ಮಾಡುತ್ತೇನೆ. ಪಾದಚಾರಿ ಮಾರ್ಗದಲ್ಲಿಯೇ ವ್ಯಾಪಾರ ಮಾಡುವುದರಿಂದ ಯಾರಿಗೂ ಬಾಡಿಗೆ ಕೊಡಬೇಕೆಂಬ ಚಿಂತೆ ಇಲ್ಲ. ನನ್ನ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಸಂಪಾದನೆಯಾಗುತ್ತದೆ. ಮಕ್ಕಳ ಮುಂದೆ ಕೈಚಾಚುವುದಕ್ಕಿಂತ ಸ್ವತಂತ್ರವಾಗಿ ಬದುಕುತ್ತಿದ್ದೇನೆ ಎಂಬ ನೆಮ್ಮದಿಯಂತೂ ಇದೆ.

ಈ ವಯಸ್ಸಿನಲ್ಲಿಯೂ ದುಡಿಯಬೇಕಲ್ಲ ಎಂದು ಕೆಲವೊಮ್ಮೆ ನೋವಾಗುತ್ತೆ. ಮರುಕ್ಷಣವೇ ಮನೆಯಲ್ಲಿ ಒಂಟಿಯಾಗಿ ಕುಳಿತು ಇಲ್ಲಸಲ್ಲದ ಆಲೋಚನೆಗಳಿಗೆ ಮನಸು ಹರಿಬಿಡುವುದಕ್ಕಿಂತ ವ್ಯಾಪಾರದಲ್ಲಿ ತೊಡಗಿಕೊಂಡರೆ ಮಾನಸಿಕ, ದೈಹಿಕ ಆರೋಗ್ಯಗಳೆರಡಕ್ಕೂ ಸಹಕಾರಿಯಾಗುತ್ತದೆ ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ. ದುಡಿಮೆ ನನಗೇನು ಕಷ್ಟವಲ್ಲ. ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳ ಜೊತೆಗೆ ಸಂತೋಷದಿಂದ ಕಾಲಕಳೆಯುವ ಬಯಕೆ ಇಂದಿಗೂ ಹಸಿರಾಗಿದೆ.

ಹಿಂದೆಲ್ಲಾ ಉತ್ತಮ ವ್ಯಾಪಾರವಾಗುತ್ತಿತ್ತು. ತರಕಾರಿ ವ್ಯಾಪಾರಿಗಳ ಸಂಖ್ಯೆ ಕಡಿಮೆ ಇತ್ತು. ಆದರೆ ಈಗ ಹಾಗಲ್ಲ. ಲಕ್ಷಾಧಿಪತಿಗಳು ರಸ್ತೆ ಬದಿಯಲ್ಲಿಯೇ ವ್ಯಾಪಾರ ಮಾಡುತ್ತಾರೆ. ನಮ್ಮಂಥವರೂ ಅದನ್ನೇ ನೆಚ್ಚಿಕೊಂಡಿದ್ದೇವೆ. ಮನೆಬಾಗಿಲಿಗೆ ನಿತ್ಯ ತಳ್ಳುಗಾಡಿಗಳು ಬರುತ್ತವೆ. ಶ್ರೀಮಂತರು ಮಾಲ್‌ ಸಂಸ್ಕೃತಿಯ ಮೊರೆ ಹೋಗಿದ್ದಾರೆ. ನಮ್ಮ ಬಳಿ ತರಕಾರಿ ಖರೀದಿಸುವವರ ಸಂಖ್ಯೆ ವಿರಳ. ಆದರೂ ವಿಧಿ ಇಲ್ಲ. ಬೇರೆ ದುಡಿಮೆಯೂ ನನಗೆ ಗೊತ್ತಿಲ್ಲ. ಇದನ್ನೇ ಮುಂದುವರೆಸಬೇಕಿದೆ.

ರಟ್ಟೆ ಗಟ್ಟಿ ಇರುವವರೆಗೂ ದುಡಿದು ತಿನ್ನುತ್ತೇನೆ. ದೇಹ ಗಟ್ಟಿಮುಟ್ಟಾಗಿ ಇರುವಾಗಲೇ ಸಾವು ಕರುಣಿಸು ಎಂದು ದೇವರನ್ನು ನಿತ್ಯ ಬೇಡಿಕೊಳ್ಳುತ್ತೇನೆ. ದುಡಿದು ತಿನ್ನುವಾಗಲೇ ತಿರುಗಿ ನೋಡದ ಮಕ್ಕಳು ಹಾಸಿಗೆ ಹಿಡಿದರೆ ನೋಡಿಕೊಳ್ಳುತ್ತಾರೆಯೆ?

ಪ್ರತಿಕ್ರಿಯಿಸಿ (+)