ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಡೆಗಳನ್ನು ಹುಡುಕುತ್ತಿದ್ದಳು ನನ್ನಮ್ಮ

Last Updated 19 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನಮ್ಮಪ್ಪನಿಗೆ ನಾವು ಮೂವರೂ ಹೆಣ್ಣು ಮಕ್ಕಳೇ ಆದೆವೆಂದು ಕೊನೆಯವಳಾದ ನನ್ನನ್ನು ಗಂಡು ಮಗನಂತೆಯೇ ಬೆಳೆಸಿದರು. ವಾರಕ್ಕೊಮ್ಮೆ ಅಪ್ಪನೊಂದಿಗೆ ಹೋಗಿ ಬಾರ್ಬರ್ ಶಾಪಲ್ಲಿ ಕೂತ ಕೆಲ ನಿಮಿಷದಲ್ಲೇ, ಮೈಮೇಲೆ ಹೊದ್ದಿಸಿದ ಸಿಲ್ಕ್‌ಸಿಲ್ಕಿನಂಥ ಬೂದು ಬಣ್ಣದ ಬಟ್ಟೆಯ ಮೇಲೆ ನನ್ನ ಎರಡಿಂಚು ಉದ್ದದ ಲಕ್ಷಾಂತರ ಕೂದಲು ಸ್ಟಾಂಡಿಂಗ್ ಲೈನ್, ಸ್ಲೀಪಿಂಗ್ ಲೈನ್‍ಗಳಾಗಿ ಬಿದ್ದಿರುತ್ತಿದ್ದವು.

ಅಕ್ಕಂದಿರನ್ನು ಅಮ್ಮ ಬ್ಯೂಟಿ ಪಾರ್ಲರ್‌ಗೆ ಕರಕೊಂಡು ಹೋಗಿ ಯು ಕಟ್, ವಿ ಕಟ್, ಫ್ರಂಟ್ ಕಟ್ ಅಂತ ಮಾಡಿಸುವಾಗ ಅವರ ಕತ್ತರಿಸಿದ ಕೂದಲುಗಳು ಒಂದಕ್ಕೊಂದು ಅಂಟಿಕೊಂಡು ಮುದ್ದೆ ಮುದ್ದೆಯಾಗಿ ಸುರುಳಿ ಸುರುಳಿಯಾಗಿ ಬೀಳುತ್ತಿದ್ದವು. ಅದನ್ನೆಲ್ಲಾ ಪಾರ್ಲರಿನ ಹುಡುಗಿ ಗುಡಿಸಿ ಕವರ್‌ಗೆ ತುಂಬುವಾಗ ಅಮ್ಮ ಹೇಳುತ್ತಿದ್ದಳು, ‘ಇದನ್ನೆಲ್ಲಾ ಮಾರಿದ್ರೆ ದುಡ್ಡು ಬರುತ್ತೆ ಇವರಿಗೆ. ನಿನ್ನಂಗೆ ಕೂದಲು ಇಲ್ಲದೋರಿಗೆ ಚೌಲಿ, ವಿಗ್ಗು ಮಾಡೋಕೆ ಕಳಿಸ್ತಾರೆ.’

ನನ್ನ ಕತ್ತರಿಸಿದ ಕೂದಲು ಪುಡಿಪುಡಿಯಾಗಿ ಅಸಂಘಟಿತವಾಗಿ ಬಿದ್ದಿರುತ್ತಿದ್ದ ಘನಘೋರ ದೃಶ್ಯವನ್ನು ನಾನೆಂದೂ ಮರೆಯಲಾರೆ. ಉರಿವ ಬೆಂಕಿಗೆ ಮರಳು ಮರಳಾದ ಘಮಘಮಿಸುವ ತುಪ್ಪವನ್ನೇ ಸುರಿಯುತ್ತಿದ್ದ ಬಾರ್ಬರ್ ಶಾಪಿನಲ್ಲಿರುತ್ತಿದ್ದ ಇತರೆ ಗಂಡಸರು ‘ಏನೋ ಮರಿ, ಎಷ್ಟನೇ ಕ್ಲಾಸು’ ಅಂತಲೋ, ‘ಮಗಾನಾ ಸರ್, ಒಳ್ಳೇದಾಯ್ತು ಬಿಡಿ, ಮನೇಗೊಬ್ಬ ಬೇಕು’ ಅಂತಲೋ ಅನ್ನುತ್ತಿದ್ದರು. ‘ದೊಡ್ಡೋನಾದ್ಮೇಲೆ ಏನಾಗ್ತೀಯೋ ಮರಿ?’ ಅಂದು ನಾನು ‘ಟೀಚರ್’ ಅಂದ್ರೆ ಗಹಗಹಿಸಿ ನಗುತ್ತಿದ್ದರು. ಆಮೇಲಿಂದ ಎಚ್ಚರಿಕೆಯಿಂದ ನಮ್ಮಪ್ಪ ಹೇಳಿಕೊಟ್ಟಂತೆ ‘ಪೋಲೀಸ್ ಆಗ್ತೀನಿ’ ಅಂತಿದ್ದೆ.

ಸ್ಕೂಲಿನಲ್ಲಿ ಪ್ರೇಯರ್‌ಗೆ ನಿಲ್ಲಿಸುವಾಗ ತಲೆಗಳನ್ನು ಎಣಿಸುತ್ತಾ ಬರುವ ಪಿಟಿ ಮಿಸ್ಸು ಅನೇಕ ಸಲ ನನ್ನನ್ನು ಹುಡುಗರ ಸಾಲಿನಲ್ಲಿ ಎಳೆದು ನಿಲ್ಲಿಸಿ, ಆಮೇಲೆ ಅವರೇ ಮರೆಗುಳಿಯಂತೆ ತಲೆಚಚ್ಚಿಕೊಂಡು ಮತ್ತೆ ಹೆಣ್ಣುಮಕ್ಕಳ ಸಾಲಿನಲ್ಲಿ ನಿಲ್ಲಿಸುತ್ತಿದ್ದರು. ನಾನು ಎಷ್ಟೇ ಚಂದಕೆ ಸೊಂಟ ಕುಣಿಸಿದರೂ ನಂಗೆ ಎಲ್ಲ ಹುಡುಗಿಯರಂತೆ ಜಡೆ ಹೆಣೆದು ಚೌಲಿ ಹಾಕಿ ಕುಚ್ಚುಕಟ್ಟಿ ಕುಣಿಯಲು ಅವಕಾಶವೇ ಇರಲಿಲ್ಲ. ಅಮ್ಮ, ನನ್ನ ಕಣ್ಣೀರು ನೋಡಲಾರದೆ ನಮ್ಮಪ್ಪ ಶಾಲೆಗೆ ದೇಣಿಗೆ ಕೊಟ್ಟ ದಾಕ್ಷಿಣ್ಯದ ಮೇಲೆ ಮೇಷ್ಟರಿಗೆ ಹೆಣ್ಣುಹುಡುಗಿ ಪಾತ್ರವೇ ಮಾಡಿಸಲು ತಾಕೀತು ಮಾಡಿ ಬಂದಿದ್ದರು. ಅದೂ ಅಪ್ಪ ಸ್ಕೂಲ್ ಡೇ ದಿನ ಊರಿನಲ್ಲಿ ಇರುವುದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡೇ. ಕೊನೆಗೆ ನಾನೊಂದು ರಾಜಸ್ಥಾನಿ ನೃತ್ಯಕ್ಕೆ ಆಯ್ಕೆಯೂ ಆದೆ.

ಸ್ಕೂಲ್ ಡೇ ಬರುವ ಮೊದಲೇ ದಿನವೂ ಬೀಳಲೊಲ್ಲದ ಕನಸನ್ನು ಬೀಳಿಸಿಕೊಂಡು, ಕಿಕ್ಕಿರಿದು ನೆರೆದ ಜನರ ಹೃದ್ಘೋಷದ ಮಧ್ಯೆ ನಾನು ಅನೇಕ ಸಲ ಪ್ರದರ್ಶನವನ್ನೂ ಕೊಟ್ಟಾಗಿತ್ತು. ಕೊನೆಗೆ ವಾಸ್ತವದ ಪ್ರದರ್ಶನದ ದಿನ ಬಂದೇಬಿಟ್ಟಿತು. ಅಮ್ಮ ಬೆಳಗ್ಲಿಂದಲೂ ಮಿಣಿಮಿಣಿಗುಟ್ಟುವ ಗಾಗ್ರಾಚೋಲಿ ಹಾಕಿ, ತಲೆಯಲ್ಲಿ ಕೂದಲೇ ಕಾಣದಷ್ಟು ಪಿನ್ನುಗಳ ಚುಚ್ಚಿ, ಒಂದು ಸಾಲದೆಂದು ಎರಡು ಜಡೆಗೆ ಎರಡು ಚೌಲಿ, ತುದಿಯಲ್ಲಿ ನಕ್ಕಿ, ಚಿನ್ನಾರಿ ನಕ್ಷತ್ರಗಳ ಮೆತ್ತಿದ ಮೊಟ್ಟೆಗಾತ್ರದ ಮೂರು ಕರಿಗುಂಡುಗಳ ಕುಚ್ಚನ್ನು ಕಟ್ಟಿ ಭದ್ರಮಾಡಿದಳು.

ವಿಕಾರಗೊಂಡ ತಲೆಗೂದಲನ್ನು ಸ್ವಲ್ಪವಾದರೂ ನೋಡಬಲ್ಲಂತೆ ಮಾಡಲು ಚಿನ್ನದ ಬಣ್ಣದ ಟೇಪುಗಳನ್ನು ಮೂರು ಕಾಲಿನ ಹೆಣಿಗೆಯ ಸುತ್ತಲೂ ಶಾಮಿಯಾನದ ಬೊಂಬಿಗೆ ಬಟ್ಟೆ ಸುತ್ತುವಂತೆ ಸುತ್ತಿದಳು. ಅಂತೂ ಸಂಜೆ ನಾಲ್ಕರ ಹೊತ್ತಿಗೆ ಜಡೆ ಕೂರಿಸಿಯಾಗಿತ್ತು. ನಾವು ಮಕ್ಕಳನ್ನೆಲ್ಲಾ ಒಂದು ಕೋಣೆಯಲ್ಲಿ ಕೂಡಿಹಾಕಿದ್ದರು. ಅಮ್ಮ ಅಷ್ಟು ಮಕ್ಕಳ ಮಧ್ಯೆ ನುಸುಳಿಕೊಂಡು ಬಂದು ಜಡೆ ಹುಷಾರೆಂದು ನನಗೂ ಮತ್ತು ನನ್ನ ಜೊತೆಯಲ್ಲಿದ್ದ ಮಕ್ಕಳಿಗೆ ಮುಟ್ಟಕೂಡದೆಂದು ಉಗ್ರವಾಗೇ ಹೇಳಿ ಹೋದಳು.

ಅಲ್ಲಿ ವೇದಿಕೆಯಲ್ಲಿ ಭಾಷಣಕಾರರು ಕುಟ್ಟುತ್ತಿದ್ದರೆ ನಮ್ಮಮ್ಮ ನೂರು ತಲೆಗಳ ಆಚೆಯಿಂದಲೂ ನನ್ನ ತಲೆ ಮತ್ತು ಚೌಲಿಯ ನಡುವಿನ ಜಾಯಿಂಟನ್ನೇ ನೋಡುತ್ತಿದ್ದಳು. ಐದಾರು ಡಾನ್ಸು ಮುಗಿದ ಮೇಲೆ ನನ್ನ ಡಾನ್ಸು ಶುರುವಾಯಿತು.

‘ನಮ್ಮದು ರಾಜಸ್ಥಾನವೋ... ಓಓಓ, ಮರುಭೂಮಿಯ ನಾಡೋ..., ಓಓಓ...’ ಹಾಡು ಶುರುವಾಗುತ್ತಿದ್ದಂತೆ ಕುಣಿಯತೊಡಗಿದೆ. ಎಲ್ಲರೂ ನನ್ನನ್ನೇ ನೋಡುತ್ತಾ, ನಗುತ್ತಾ, ಚಪ್ಪಾಳೆ ತಟ್ಟುತ್ತಾ, ಪ್ರೋತ್ಸಾಹಿಸುತ್ತಿದ್ದ ರೀತಿಗೆ ಉಮೇದು ಹೆಚ್ಚಿ ಗಿರಗಿರಗಿರನೇ ತಿರುಗುತ್ತಿದ್ದೆ. ಅಮ್ಮನಿಗೆ ಅಷ್ಟರಲ್ಲಿ ಮಗಳ ಅಸಾಮಾನ್ಯ ನೃತ್ಯಕಲೆಯನ್ನು ನೋಡಿ ಮೂರ್ಛೆ ಹೋಗಿರಲಿಕ್ಕೂ ಸಾಕು. ಒಟ್ಟಿನಲ್ಲಿ ವೇದಿಕೆಯಿಂದ ಕೆಳಗೆ ಬರುವಾಗ ಎಲ್ಲರೂ ನನ್ನತ್ತಾ ನೋಡುತ್ತಿದ್ದರು. ಯಾರುಯಾರೋ ಕೈಹಿಡಿದು ಹತ್ತಿರ ಕರೆದವರಿಂದ ಬಿಂಕದಿಂದ ಕೊಸರಿಕೊಂಡು ಅಮ್ಮ ಇದ್ದಲ್ಲಿಗೆ ಓಡಿ ಹೋದೆ, ಅಮ್ಮ ಅಲ್ಲಿರಲಿಲ್ಲ. ಎಲ್ಲೆಂದು ನೋಡಿದೆ. ಅವಳು ಸ್ಟೇಜಿನ ಸುತ್ತಮುತ್ತ ಹಾರಿಕೊಂಡುಹೋಗಿ ಬಿದ್ದಿರಬಹುದಾದ ನನ್ನೆರೆಡು ಮುದ್ದಾದ ಸಾಲಂಕೃತ ಜಡೆಗಳನ್ನು ಹುಡುಕುತ್ತಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT