ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ ನಮಸ್ಕಾರದ ಮಹಿಮೆ!

Last Updated 19 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಸಸ್ಯಲೋಕ, ಪ್ರಾಣಿ ಪ್ರಪಂಚ ಹಾಗೂ ಮಾನವನ ದೈನಂದಿನ ಚಟುವಟಿಕೆ ಆರಂಭವಾಗುವುದೇ ಸೂರ್ಯೋದಯದ ವೇಳೆ. ಆದ್ದರಿಂದ ಭಾಸ್ಕರನಿಗೆ ನಮಿಸುತ್ತಾ ಸೂರ್ಯದೇವನ ಮಂತ್ರಗಳನ್ನು ಹೇಳುತ್ತಾ ಸೂರ್ಯ ನಮಸ್ಕಾರ ಮಾಡುವುದು ನಮ್ಮ ಕರ್ತವ್ಯ.

ಜ್ಞಾನಿಗಳು ‘ಆರೋಗ್ಯಂ ಭಾಸ್ಕರಾದಿಚ್ಛೇತ್’ ಎಂದಿರುತ್ತಾರೆ. ಸೂರ್ಯದೇವನ ಅನುಗ್ರಹವಿದ್ದರೆ ಆರೋಗ್ಯ ಭಾಗ್ಯ ಲಭಿಸುತ್ತದೆ. ದೇಹಕ್ಕೆ ಲವಲವಿಕೆ ಒದಗಿ ಬರುತ್ತದೆ.ಸೂರ್ಯ ನಮಸ್ಕಾರ ಎಂದರೆ ಆಸನ ಮತ್ತು ಪ್ರಾಣಾಯಾಮಗಳ ಮಿಶ್ರಣ. ದೇಹದ ಜಡತ್ವ ಹೋಗಿ, ಮೃದುತ್ವ ಲಘುತ್ವ ಬರಲು ಸೂರ್ಯ ನಮಸ್ಕಾರ ಸಹಕಾರಿಯಾಗಿದೆ. ಯೋಗ ಸಾಧಕರು ಬ್ರಾಹ್ಮೀ ಮುಹೂರ್ತದಲ್ಲಿಯೇ ಎದ್ದು ಮಲಮೂತ್ರ ವಿಸರ್ಜನೆ, ಮುಖಮಾರ್ಜನ, ಸರ್ವಾಂಗ ಸ್ನಾನ ತೀರಿಸಿ, ಸೂರ್ಯೋದಯಕ್ಕೆ ಸರಿಯಾಗಿ ಮಂತ್ರ ಸಹಿತ ಸೂರ್ಯ ನಮಸ್ಕಾರಕ್ಕೆ ಸಿದ್ಧರಾದರೆ ಒಳಿತು.

ಸೂರ್ಯ ನಮಸ್ಕಾರವನ್ನು ಉಸಿರಿನ ಗತಿಯೊಂದಿಗೆ ನಿಧಾನವಾಗಿ ಅಭ್ಯಾಸ ಮಾಡಬೇಕು. ಸೂರ್ಯ ನಮಸ್ಕಾರ ಅಭ್ಯಾಸ ಮಾಡುವಾಗ ಯಾವುದೇ ಸ್ಥಿತಿಯಲ್ಲಿ ಹೆಚ್ಚು ಅವಧಿ ಇರಬಯಸಿದರೆ, ಆಗ ಉಸಿರಾಟವನ್ನು ತಡೆಹಿಡಿಯದೆ ಸಹಜವಾಗಿ ಉಸಿರಾಡುತ್ತಿರಬೇಕು. ಗುರುಮುಖೇನವೇ ಶಿಸ್ತುಬದ್ಧವಾಗಿ ಕಲಿಯಬೇಕು. ಆರಂಭದಲ್ಲಿ ಕೆಲವು ಸೂರ್ಯ ನಮಸ್ಕಾರಗಳನ್ನು ಮಾಡಿದರೆ ಸಾಕು. ಅನಂತರ 12 ವಿಧವಾಗಿ ಸೂರ್ಯನ ದ್ವಾದಶಮಂತ್ರ ಸಹಿತ ನಮಸ್ಕಾರಗಳನ್ನು ಮಾಡಬೇಕು.

ಸೂರ್ಯನಾರಾಯಣನಿಗೆ ನಮಸ್ಕರಿಸುವ ಮಂತ್ರ:

ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ

ತತ್ ತ್ವಂ ಪೂಷನ್, ಅಪಾವೃಣು ಸತ್ಯ ಧರ್ಮಾಯ ದೃಷ್ಟಯೇ

ಮಂತ್ರದ ಅರ್ಥ ಹೀಗಿದೆ; ‘ಮುಚ್ಚಳವು ಪಾತ್ರೆಯನ್ನು ಹೇಗೆ ಮುಚ್ಚುತ್ತದೇಯೋ ನಿನ್ನ ಸ್ವರ್ಣಮಯ ಬಿಂಬವು ಸತ್ಯದ ದ್ವಾರವನ್ನು ಮುಚ್ಚಿದೆ. ಓ ಸೂರ್ಯದೇವನೆ, ದಯವಿಟ್ಟು ಅದನ್ನು ಸರಿಸಿ, ಸತ್ಯಧರ್ಮ (ಜ್ಞಾನ)ಗಳ ಪ್ರಾಪ್ತಿಗಾಗಿ ನನ್ನನ್ನು ನಡೆಸು’.

ಸೂರ್ಯ ನಮಸ್ಕಾರದಲ್ಲಿ ಮುಖ್ಯವಾಗಿ ಎರಡು ಪ್ರಕಾರಗಳಿವೆ. ಇದನ್ನು 12 ಹಂತಗಳಲ್ಲಿ (ಶಶಾಂಕಾಸನ ಸಹಿತ) ಮತ್ತು 10 ಹಂತಗಳಲ್ಲಿ (ಶಶಾಂಕಾಸನ ರಹಿತ) ಮಾಡಬಹುದು.

ಸೂರ್ಯನಮಸ್ಕಾರದ ಶ್ಲೋಕಗಳು

ಓಂ ಹ್ರಾಂ ಮಿತ್ರಾಯ ನಮಃ, ಓಂ ಹ್ರೀಂ ರವಯೇ ನಮಃ, ಓಂ ಹ್ರೂಂ ಸೂರ್ಯಾಯ ನಮಃ, ಓಂ ಹ್ರೈಂ ಭಾನವೇ ನಮಃ, ಓಂ ಹ್ರೌಂ ಖಗಾಯ ನಮಃ, ಓಂ ಹ್ರಃ ಪೂಷ್ಣೇ ನಮಃ, ಓಂ ಹ್ರಾಂ ಹಿರಣ್ಯಗರ್ಭಾಯ ನಮಃ, ಓಂ ಹ್ರೀಂ ಮರೀಚಯೇ ನಮಃ, ಓಂ ಹ್ರೂಂ ಆದಿತ್ಯಾಯ ನಮಃ, ಓಂ ಹ್ರೈಂ ಸವಿತ್ರೇ ನಮಃ, ಓಂ ಹ್ರೌಂ ಅರ್ಕಾಯ ನಮಃ, ಓಂ ಹ್ರಃ ಭಾಸ್ಕರಾಯ ನಮಃ.

ಸೂರ್ಯ ನಮಸ್ಕಾರಗಳನ್ನು ಸಾಮೂಹಿಕವಾಗಿ ಅಭ್ಯಾಸ ಮಾಡುವುದರಿಂದ ಆನಂದ, ಉತ್ಸಾಹ ಹೆಚ್ಚು ಒದಗಿ ಬರುತ್ತದೆ. ಸೂರ್ಯ ನಮಸ್ಕಾರ ಅಭ್ಯಾಸ ಮಾಡಲು ಸ್ವಚ್ಛವಾದ ಗಾಳಿ, ಬೆಳಕು ಇರಬೇಕು ಮತ್ತು ಶಾಂತ ಸ್ಥಳದಲ್ಲಿ ಜಮಖಾನ ಹಾಸಿ ಅಭ್ಯಾಸ ಮಾಡಬೇಕು. ಸೂರ್ಯ ನಮಸ್ಕಾರವನ್ನು ಯಾವಾಗಲೂ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಮುಖಮಾಡಿ ಮಾಡಲಾಗುವುದು. ಸೂರ್ಯ ನಮಸ್ಕಾರ ಅಭ್ಯಾಸ ಆದ ಮೇಲೆ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬೇಕು.

ಸೂರ್ಯ ನಮಸ್ಕಾರದ ಭಂಗಿಯಲ್ಲಿ ನಮಸ್ಕಾರ ಮುದ್ರೆ, ಅರ್ಧಚಕ್ರಾಸನ (ಊರ್ಧ್ವಾಸನ), ಉತ್ತಾನಾಸನ, ಏಕಪಾದ ಪ್ರಸರಣಾಸನ, ಚತುರಂಗ ದಂಡಾಸನ (ದ್ವಿಪಾದ ಪ್ರಸರಣಾಸನ), ಶಶಾಂಕಾಸನ, ಸಾಷ್ಟಾಂಗ ನಮನ (ಅಷ್ಟಾಂಗ ನಮಸ್ಕಾರ), ಊರ್ಧ್ವ ಮುಖ ಶ್ವಾನಾಸನ, ಅಧೋಮುಖ ಶ್ವಾನಾಸನಗಳನ್ನು ಒಳಗೊಂಡಿದೆ. ಸೂರ್ಯ ನಮಸ್ಕಾರದ ಮೂಲ ಉದ್ದೇಶ ಒಂದೇ ಆದರೂ ಆನೇಕ ರೂಪಾಂತರಗಳು, ಪರಿವರ್ತನೆಗಳು ವಿವಿಧ ಉಪಾಸಕರಿಂದ ಬೆಳಕಿಗೆ ಬಂದಿವೆ.

ಸೂರ್ಯ ನಮಸ್ಕಾರದ ಪ್ರಯೋಜನಗಳು ದೈಹಿಕ ನಿಲುವು ಮತ್ತು ಚಲನಾ ವ್ಯವಸ್ಥೆ ಸುಗಮವಾಗುತ್ತದೆ ಹೃದಯ ಕ್ರಿಯೆ ಮತ್ತು ರಕ್ತ ಚಲನೆ ಸುಸೂತ್ರವಾಗುವುದು ಜೀರ್ಣಕ್ರಿಯೆ ಆರೋಗ್ಯಕರವಾಗುವುದು ಸೂರ್ಯ ನಮಸ್ಕಾರ ಒಂದು ವ್ರತ. ಇದನ್ನು ಮಾಡುವುದರಿಂದ ಶ್ವಾಸಕೋಶ ಬಲಿಷ್ಠಗೊಳ್ಳುತ್ತದೆ ವಿಸರ್ಜನಾ ವ್ಯವಸ್ಥೆ ಕ್ರಮಬದ್ಧವಾಗುವುದು ನರವ್ಯೂಹ ಮತ್ತು ಮಿದುಳು ಚುರುಕಾಗುವುದು. ಜನನಾಂಗಗಳು ಆರೋಗ್ಯಕರ ಬೆಳವಣಿಗೆಯಾಗಿ ವೀರ್ಯ/ಅಂಡಾಣುಗಳು ಕ್ರಮವಾಗಿ ಉತ್ಪತ್ತಿಯಾಗುವುದು ಜ್ಞಾನೇಂದ್ರಿಯಗಳು ಚುರುಕುಗೊಳ್ಳುವುವು, ಕ್ರಿಯಾಶೀಲವಾಗುವುವು. ಶರೀರ ಮೃದುತ್ವ, ಲಘುತ್ವ ಉಂಟಾಗಿ ಮಾನಸಿಕ ಜಡತ್ವ ಮಾಯವಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT