ಮಂಗಳವಾರ, ಡಿಸೆಂಬರ್ 10, 2019
20 °C

ಬಹುಕಾಲ ಕಾಡುವ ಪ್ರದರ್ಶನ

Published:
Updated:
ಬಹುಕಾಲ ಕಾಡುವ ಪ್ರದರ್ಶನ

ಹೊಸ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ರೂಪಿಸುವುದರಲ್ಲಿ ‘ಶಿವಪ್ರಿಯ’ ನಾಟ್ಯಸಂಸ್ಥೆಯ ಗುರು ಡಾ. ಸಂಜಯ್ ಶಾಂತಾರಾಂ ಸಿದ್ಧಹಸ್ತರು. ಇತ್ತೀಚೆಗೆ, ಸಂಸ್ಥೆಗೆ 28 ವರ್ಷವಾದ ಪ್ರಯುಕ್ತ ತಾರೆಗಳು ಅಭಿನಯಿಸಿದ ಪ್ರಸಿದ್ಧ ನೃತ್ಯಗಳ ಸರಮಾಲೆಯೊಂದನ್ನು ವಿಶೇಷ ಆಶಯವಾಗಿ ಹೊಂದಿದ್ದ ‘ನಕ್ಷತ್ರ’ ಕಾರ್ಯಕ್ರಮವಾಗಿ ಎಡಿಎ ರಂಗಮಂದಿರದ ವೇದಿಕೆಯ ಮೇಲೆ ತಂದದ್ದು ಅವರ ಪ್ರತಿಭೆಗೆ ದ್ಯೋತಕ.

ಚಲನಚಿತ್ರ ಕ್ಷೇತ್ರವು, ಶಾಸ್ತ್ರೀಯ ಸಂಗೀತ ಮತ್ತು ವಿವಿಧ ನೃತ್ಯಶೈಲಿಗಳ ನರ್ತನವನ್ನು ಸಾಕಷ್ಟು ಸಂದರ್ಭಗಳಲ್ಲಿ ಬಳಸಿಕೊಂಡಿದೆ. ಹಲವಾರು ಪ್ರಸಿದ್ಧ ತಾರೆಯರು ವಿವಿಧ ಶೈಲಿಗಳ ಶಾಸ್ತ್ರೀಯನೃತ್ಯವನ್ನು ಅನೇಕ ಖ್ಯಾತ ಚಿತ್ರಗಳಲ್ಲಿ ತೋರಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.

‘ನಕ್ಷತ್ರ’ದಲ್ಲಿ ಪ್ರತಿಭೆ ಮೆರೆದ ಅಭಿನೇತ್ರಿಯರ ನರ್ತನ ವೈಭವವನ್ನು ಅನಾವರಣಗೊಳಿಸಲಾಯಿತು.

ಮನೋಜ್ಞ ನೃತ್ಯಗಳ ಸುಂದರ ಅಭಿನಯ, ಸುಲಲಿತ ಆಕರ್ಷಕ ನರ್ತನ, ನೃತ್ಯ ಸಂಯೋಜನೆ, ಕಲಾತ್ಮಕ ರಂಗಸಜ್ಜಿಕೆ, ವಿಸ್ಮಯಲೋಕ ಸೃಷ್ಟಿಸಿದ ವರ್ಣರಂಜಿತ ಬೆಳಕು, ಮನತಣಿಸಿದ ಹಾಡುಗಳು,ಪ್ರೇಕ್ಷಕರ ಮನಸೂರೆಗೊಂಡಿತ್ತು.

ಕನ್ನಡದ ಮೇರುನಟ ಡಾ. ರಾಜ್‌ಕುಮಾರ ಅವರಿಗೆ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು.

ನವರಸಗಳನ್ನು ಪ್ರತಿನಿಧಿಸುವ ಗೀತೆಗಳನ್ನು ಕನ್ನಡ, ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಿಂದ ಆರಿಸಿಕೊಳ್ಳಲಾಗಿತ್ತು. ‘ಶ್ರಿವಪ್ರಿಯ’ ಸಂಸ್ಥೆಯ ಹೊಸ ಪ್ರಯೋಗವನ್ನು ಸಭಿಕರು ಮೆಚ್ಚಿಕೊಂಡರು.

ಪ್ರತಿಕ್ರಿಯಿಸಿ (+)