ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಂಟರಗಾಳಿಯಿಂದ ಅದೃಷ್ಟ ಬದಲಾಯಿತು’

Last Updated 19 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ದರ್ಶನ್‌ ಅಭಿನಯದ ‘ಸುಂಟರಗಾಳಿ’ ಸಿನಿಮಾದ ಚರ್ಚೆ ನಡೆಯುತ್ತಿತ್ತು. ನಿರ್ದೇಶಕ ಸಾಧುಕೋಕಿಲ, ಸಹ ನಿರ್ದೇಶಕರಾದ ರಂಗನಾಥ್ ಮತ್ತು ಸೂರಿ ಅವರು ಚಿತ್ರಕತೆ, ನಾಯಕ ದರ್ಶನ್‌ ಅವರ ಇಂಟ್ರಡಕ್ಷನ್‌ ಹೇಗೆ ಮಾಡಬೇಕು ಎಂದು ಮಾತುಕತೆಯಲ್ಲಿ ತೊಡಗಿದ್ದರು. ನಾನು ಚಿತ್ರರಂಗದಲ್ಲಿ ಆಗ ತಾನೇ ಅಂಬೆಗಾಲಿಡುತ್ತಿರುವ ಕೂಸು. ನಾನೂ ಅಲ್ಲೇ ಕುಳಿತಿದ್ದೆ. ನನ್ನ ತಲೆಯಲ್ಲಿ ಏನೋ ಐಡಿಯಾ ಹೊಳೆಯಿತು. ಅದನ್ನೇ ವಿವರಿಸಿ ಹೇಳಿದೆ. ಆ ದೃಶ್ಯ ಓಕೆ ಆಯಿತು. ಆ ಒಂದು ದೃಶ್ಯದಿಂದ ನನ್ನ ಅದೃಷ್ಟವೇ ಬದಲಾಯಿತು. ಕನ್ನಡ ಚಿತ್ರರಂಗದಲ್ಲಿ ನಾನು ಸಂಭಾಷಣಾಕಾರನಾಗಿ, ಕತೆಗಾರನಾಗಿ ಗುರುತಿಸಿಕೊಳ್ಳುವಂತಾಯಿತು.

ಕತೆಗಾರ, ಸಂಭಾಷಣಾಕಾರ ಹಾಗೂ ಸಹನಿರ್ದೇಶಕನಾಗಿ ಕೆಲಸ ಆರಂಭಿಸಿದೆ. ದುನಿಯಾ ಸೂರಿ ಹಾಗೂ ಸಹನಿರ್ದೇಶಕ ರಂಗನಾಥ್ ಅವರು ನನ್ನ ಸ್ನೇಹಿತರು. ಅವರೇ ನನ್ನ ಗುರುಗಳು. ದುನಿಯಾ ಸೂರಿಯವರ ಪ್ರತಿ ಸಿನಿಮಾಗಳಲ್ಲೂ ಕತೆ, ಚಿತ್ರಕತೆ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ.  ಸೂರಿಯವರು ಮೊದಲ ಬಾರಿಗೆ ಶಿವರಾಜ್‌ಕುಮಾರ್‌ ಅಭಿನಯದ ‘ಕಡ್ಡಿಪುಡಿ’ ಸಿನಿಮಾಕ್ಕೆ ಸಂಭಾಷಣೆ ಬರೆಯುವ ಅವಕಾಶ ನೀಡಿದರು. ಸಂಭಾಷಣೆ ಎಲ್ಲರಿಗೂ ಇಷ್ಟವಾಯಿತು. ಅದಾದ ಬಳಿಕ ಅವಕಾಶಗಳು ಒಂದಾದ ಮೇಲೊಂದರಂತೆ ಹುಡುಕಿಕೊಂಡು ಬಂತು. ಈಚೆಗೆ ಬಿಡುಗಡೆಯಾದ ಸಂತು ನಿರ್ದೇಶನದ ‘ಕಾಲೇಜ್ ಕುಮಾರ’, ಬಿಡುಗಡೆಗೆ ಸಿದ್ದವಾಗಿರೋ ‘ಟಗರು’, ಚೆನ್ನ ನಿರ್ದೇಶನದ ‘ಭರಣಿ’, ಶೇಖರ್ ನಿರ್ದೇಶನದ ‘ಮರಳಿ ಯತ್ನವ ಮಾಡು’ ಚಿತ್ರಗಳಿಗೆ ಸಂಭಾಷಣೆ ನನ್ನದೇ.

ನನಗೆ ಚಿಕ್ಕವಯಸ್ಸಿನಿಂದಲೂ ಓದುವ ಹುಚ್ಚು ಇತ್ತು. ಕತೆ, ಕವನಗಳನ್ನು ಇಷ್ಟಪಟ್ಟು ಓದುತ್ತಿದ್ದೆ. ನನ್ನ ತಂದೆ  ಕೋಲಾರದಲ್ಲಿ ಪೊಲೀಸ್‌  ಇಲಾಖೆಯಲ್ಲಿ ಕೆಲಸ ಮಾಡ್ತಿದ್ರು. ಅವರಿಗೆ ಸಿನಿಮಾ ಅಂದ್ರೆ ಸ್ವಲ್ಪವೂ ಇಷ್ಟ ಇರಲಿಲ್ಲ. ಶಿಸ್ತಿನಿಂದ ಮಕ್ಕಳನ್ನು ಬೆಳೆಸುತ್ತಿದ್ದರು. ಆದರೆ ನನಗೆ ಪಠ್ಯದ ಓದು ಅಂದ್ರೆ ತಲೆಗೆ ಸ್ವಲ್ಪನೂ ಹತ್ತುತ್ತಿರಲಿಲ್ಲ. ಗಣಿತ, ಮಗ್ಗೀ ಪುಸ್ತಕ ನೋಡಿದ್ರೇನೆ ಜ್ವರ ಬರೋದು. ಆದ್ರೆ ಕನ್ನಡ ವಿಷಯ ಬರಿಯೋದು, ಓದೋದು ಅಂದ್ರೆ ಪಾಯಸ ಕುಡಿದ ಹಾಗೇ. ಸಮಾಜ, ಚರಿತ್ರೆ ಬಗ್ಗೇನು ಆಸಕ್ತಿ ಇತ್ತು.

ಚಂದಮಾಮ, ಬಾಲಮಿತ್ರ ಅಂತ ಕತೆ ಪುಸ್ತಕಗಳೇ ನನ್ನನ್ನು ಕತೆಗಾರನಾಗಿಸಿದ್ದು. ಅದನ್ನೇ ಓದ್ಕೊಂಡೇ ನಾನು ಬೆಳೆದೆ. ಅಪ್ಪ ಪೊಲೀಸ್‌ ಇಲಾಖೆ ಇದ್ದಿದ್ದರಿಂದ ಬೇರೆ ಬೇರೆ ಕಡೆ ವರ್ಗಾವಣೆ ಆಗುತ್ತಲೇ ಇತ್ತು. ಆಗೆಲ್ಲಾ ಹತ್ತಿರ ಯಾವ ಸಿನಿಮಾ ಟಾಕೀಸ್‌ ಇದೆ ಎಂದು ಹುಡುಕುತ್ತಿದ್ದೆ. ಹೊಸ ಸಿನಿಮಾ ಅಂದ್ರೆ ನನಗೆ ಹಬ್ಬ. ಕೆಲವೊಂದು ಸಿನಿಮಾ ಕತೆಗಳನ್ನು ಗೋಡೆಗೆ ಅಂಟಿಸಿದ್ದ ಪೋಸ್ಟರ್‌ ನೋಡಿಯೇ ಕತೆ ಹೇಳುತ್ತಿದ್ದೆ. ನನ್ನ ಸ್ನೇಹಿತರು ನನ್ನ ಕತೆ ಕೇಳಿ, ಬಳಿಕ ಸಿನಿಮಾ ನೋಡಿಕೊಂಡು ಬಂದು ’ನಿನ್‌ ಯಾವಾಗ ಸಿನಿಮಾ ನೋಡಿದ್ದೆ’ ಅನ್ನೋರು. ಟಿ.ವಿಯಲ್ಲೂ ಅಷ್ಟೇ. ವಾರಕ್ಕೊಂದು ಪ್ರಸಾರವಾಗುವ ಸಿನಿಮಾಗಳನ್ನು ಕಾದು ನೋಡುತ್ತಿದ್ದೆ. ಈಗ ಆ ಸಿನಿಮಾ ಕಲೆನೇ ಕೈ ಹಿಡಿದಿದೆ ಅನ್ನೋದೇ ನೆಮ್ಮದಿ.

ಕಾಲೇಜು ಓದುತ್ತಿದ್ದಾಗಲೇ ಸಿನಿಮಾ ಕ್ಷೇತ್ರದಲ್ಲೇ ದುಡಿಯಬೇಕು ಎಂದು ನಿರ್ಧರಿಸಿದ್ದೆ. ಆದರೆ ಯಾರೂ ಗಾಡ್‌ಫಾದರ್‌ಗಳಿಲ್ಲ. ಆ ಕ್ಷೇತ್ರದ ಪರಿಚಯವೂ ಇಲ್ಲ. ಮೊದಲು ಆರ್ಟಿಸ್ಟ್ ಆಗಿ ಸೇರ್ಕೋಳೋಣ ಎಂದು ಬೆಂಗಳೂರಿಗೆ ಬಂದೆ. ನಾನಾಗೇ ಕೆಲವು ಸಿನಿಮಾ ಸೆಟ್‌, ನಿರ್ದೇಶಕರ ಬಳಿ ಹೋಗಿ ಪರಿಚಯ ಮಾಡಿಕೊಳ್ಳುತ್ತಿದ್ದೆ. ಆದರೆ ಅವಕಾಶ ಸಿಗಲೇ ಇಲ್ಲ. ಹೀಗೆ ಒಂದು ಬಾರಿ ಸೆಟ್‌ವೊಂದರಲ್ಲಿ ಪರಿಚಯ ಆದವರು ರಂಗನಾಥ್. ಇವರು ಸಾಧು ಕೋಕಿಲರವರ ಶಿಷ್ಯ. ರಂಗನಾಥ್‌ ಶಿಷ್ಯ ನಾನು. ಬಳಿಕ ಸೂರಿ, ಯೋಗರಾಜ್ ಭಟ್, ದುನಿಯ ವಿಜಯ್ ಪರಿಚಯವಾದರು. ಅವಕಾಶಗಳೂ ಸಿಕ್ಕಿತು.

ನಾನು ಬರೆದ ‘ಬಾಲ್‌ ಪೆನ್‌’ ಹೆಸರಿನ ಮಕ್ಕಳ ಕತೆ ಸಿನಿಮಾ ಆಗಿದೆ. ಅದನ್ನು ಭಾವನಾ ಬೆಳೆಗೆರೆ ನಿರ್ಮಾಣ ಮಾಡಿದರು. ಈಗ ಗೆಳೆಯ ಕಾಂತರಾಜ್ ಜೊತೆಗೂಡಿ ಬರೆದ ಕತೆ ‘ಪಂಚತಂತ್ರ’ವನ್ನು ಯೋಗರಾಜ್ ಭಟ್ ಸಿನಿಮಾ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT