ಶುಕ್ರವಾರ, ಡಿಸೆಂಬರ್ 6, 2019
24 °C

ಇದು ಉಣ್ಣೆ ಟೋಪಿಯ ಖದರು...

Published:
Updated:
ಇದು ಉಣ್ಣೆ ಟೋಪಿಯ ಖದರು...

ಬಿಸಿಲು, ಚಳಿಯಿಂದ ರಕ್ಷಿಸಿಕೊಳ್ಳಲು ಇರುವ ವಿವಿಧ ಬಗೆಯ ವಿನ್ಯಾಸ, ಗಾತ್ರದ ಟೋಪಿಗಳನ್ನು ನಾವು ನೋಡಿರುತ್ತೇವೆ. ಈಗಂತೂ ಮಾರುಕಟ್ಟೆಯಲ್ಲಿ ಎಲ್ಲಾ ಉತ್ಪನ್ನಗಳಿಗೂ ಲೆಕ್ಕವಿಲ್ಲದಷ್ಟು ಆಯ್ಕೆಗಳು.

ಈ ಬಾರಿ ಚಳಿಗಾಲವಂತೂ ಪೂರ್ತಿ ರಾಜ್ಯವನ್ನು ಆವರಿಸಿತ್ತು. ಜಾತ್ರೆ, ಸಂತೆಗಳಲ್ಲಿ, ಕೆಲವು ಬಸ್ಸು, ರೈಲುಗಳಲ್ಲಿಯೂ ಟೋಪಿಗಳ ಮಾರಾಟ ಜೋರಾಗಿಯೇ ನಡೆದಿತ್ತು.ಎಲ್ಲಿ ನೋಡಿದರೂ ಟೋಪಿ, ಸ್ವೆಟರ್‌ಗಳ ವ್ಯಾಪಾರ. ಆದರೆ, ಬಗೆ ಬಗೆ ಟೋಪಿಗಳನ್ನು ನೋಡಿದ್ದೆನಾದರೂ ಕುರಿಯ ಉಣ್ಣೆಯಿಂದ ಟೋಪಿ ತಯಾರಿಸುವುದನ್ನು ಇದುವರೆಗೂ ಕಂಡಿರಲಿಲ್ಲ. ಕಳೆದ ತಿಂಗಳು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿಗೆ ಪ್ರವಾಸಕ್ಕೆ ಹೋಗಿದ್ದೆ. ಅಲ್ಲಿ ಉಣ್ಣೆ ಟೋಪಿ ತಯಾರಿಸಿ ಮಾರಾಟ ಮಾಡುವ ಕಟಕೋಳದ ಮಲ್ಲಿಕಾರ್ಜುನ ಯಮನಪ್ಪ ಪೂಜಾರ್ ಸಿಕ್ಕರು.

ಪೂಜಾರ್ ಅವರಿಗೆ ಸುಮಾರು 70ರ ಹರೆಯ. 7ನೇ ತರಗತಿಯವರೆಗೆ ಓದಿದ್ದಾರೆ. ಉಣ್ಣೆಯ ಟೋಪಿ ತಯಾರಿ ಇವರ ಕುಲಕಸುಬು. ತಂದೆಯಿಂದಲೇ ಈ ಟೋಪಿ ತಯಾರಿಯ ಕುಶಲತೆಯನ್ನೂ ಕಲಿತುಕೊಂಡರಂತೆ. ಕಟಕೋಳದಲ್ಲಿ ಕುರಿ ಸಾಕುವ ಮಂದಿ ಹೇರಳವಾಗಿದ್ದಾರೆ. ಹೀಗಾಗಿ ಉಣ್ಣೆ ತರಿಸಿಕೊಳ್ಳಲೂ ಕಷ್ಟವಿರಲಿಲ್ಲ. ಸ್ಥಳೀಯ ಜನರಿಂದಲೇ ಉಣ್ಣೆಯನ್ನು ಪಡೆದು ಟೋಪಿ ವಿನ್ಯಾಸವನ್ನು ಮಾಡುತ್ತಾರೆ. ಒಂದು ಕೆ.ಜಿ ಉಣ್ಣೆಗೆ ನಲವತ್ತು ರೂಪಾಯಿ ಬೆಲೆಯಿದೆ. ಬಿಳಿ, ಕಂದು ಬಣ್ಣದ ಟೋಪಿಗಳನ್ನು ಮಾಡುತ್ತಾರೆ. ಈ ಬಣ್ಣದ ಕುರಿಯ ಉಣ್ಣೆಯನ್ನು ತರುತ್ತಾರೆ.

ತಂದ ಉಣ್ಣೆಯನ್ನು ಹಾಗೆಯೇ ನೇರವಾಗಿ ಟೋಪಿ ತಯಾರಿಕೆಗೆ ಬಳಸಲು ಸಾಧ್ಯವಿಲ್ಲವಲ್ಲ! ಅದರ ಸಿಕ್ಕುಗಳನ್ನು ಬಿಡಿಸುವ ಕೆಲಸವೂ ಇದೆ. ಇಪ್ಪತ್ತು ರೂಪಾಯಿ ನೀಡಿದರೆ ಇದನ್ನು ಶುಚಿ ಮಾಡುವ ಜನ ಸಿಗುತ್ತಾರೆ. ಈ ಕೆಲಸವೂ ಸಲೀಸಾಗಿರುವುದಿಲ್ಲ. ಅದಕ್ಕೂ ನೈಪುಣ್ಯ ಬೇಕು.

ಹೇಗೆ ಮಾಡುತ್ತಾರೆ?

ಮೊದಲು ಉಣ್ಣೆಯನ್ನು ಬಿಲ್ಲಿನಂತಹ ಮಾದರಿಯ ಸಾಧನದಿಂದ ಪರಸ್ಪರ ಜೋಡಿಸಿ ಕರವಸ್ತ್ರದ ಮಾದರಿಯಲ್ಲಿ ಜೋಡಿಸಿಕೊಳ್ಳುತ್ತಾರೆ. ಉಣ್ಣೆಯನ್ನು ಬಿಗು ಮಾಡಿದಷ್ಟೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಆದ್ದರಿಂದ ಅದು ಬಿಗುವಾಗುವಂತೆ ಸಾಬೂನಿನಿಂದ ತೊಳೆಯುತ್ತಾರೆ. ನಂತರ ಕೈಯಿಂದಲೇ ಬೇಕಾದ ಆಕಾರ, ಗಾತ್ರದ ಟೋಪಿ ಮಾಡುತ್ತಾರೆ. ಹೀಗೆ ಮಂಕಿ ಕ್ಯಾಪ್, ಗಾಂಧಿ ಟೊಪ್ಪಿಗೆ ಮಾದರಿಯ ಟೋಪಿಗಳು ತಯಾರಾಗುತ್ತವೆ. ಒಂದು ಟೋಪಿಯನ್ನು ಮಾಡಲು ಕನಿಷ್ಠ ಒಂದು ಗಂಟೆಯಾದರೂ ಬೇಕು. ಒಂದು ಕೆ.ಜಿ. ಉಣ್ಣೆಯಲ್ಲಿ ಸುಮಾರು ಹತ್ತು ಟೋಪಿಗಳನ್ನು ಮಾಡಬಹುದಂತೆ.

ಚಳಿಗಾಲದ ಮೂರು ತಿಂಗಳು ಟೋಪಿಗಳಿಗೆ ಭಾರೀ ಬೇಡಿಕೆ ಕುದುರುತ್ತದೆ. ಈ ಸಮಯದಲ್ಲಿ ಬೇರೆ ಬೇರೆ ಊರುಗಳಿಗೂ ಹೋಗಿ ಟೋಪಿಗಳನ್ನು ಮಾರಾಟ ಮಾಡಿ ಬರುತ್ತಾರೆ.

ಬಾದಾಮಿ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಮಹಾರಾಷ್ಟ್ರ ಮುಂತಾದ ಹತ್ತಾರು ಕಡೆಗಳಿಗೆ ಟೋಪಿಗಳನ್ನು ಮಾರಾಟ ಮಾಡಿದ್ದಾರೆ. ದೊಡ್ಡ ಟೋಪಿಗೆ ಐವತ್ತು ರೂಪಾಯಿ, ಗಾಂಧಿ ಟೋಪಿಗೆ 30 ರೂಪಾಯಿ ಬೆಲೆ.

ನಮ್ಮ ರಾಜ್ಯದಲ್ಲಿ ಉಣ್ಣೆ ಟೋಪಿಗಳನ್ನು ತಯಾರಿಸುವವರು ವಿರಳ. ಇಳಿವಯಸ್ಸಿನಲ್ಲಿಯೂ ಟೋಪಿ ಮಾಡುವ ಹವ್ಯಾಸವನ್ನು ಬಿಡದೇ ಮುಂದುವರೆಸಿದ್ದಾರೆ ಈ ಅಜ್ಜ. ಇವರ ಸಂಪರ್ಕಕ್ಕೆ: 8951503220.

ಪ್ರತಿಕ್ರಿಯಿಸಿ (+)