4

ತುಟ್ಟಿಯಾಗದ ಬುಟ್ಟಿಯ ಬದುಕು

Published:
Updated:
ತುಟ್ಟಿಯಾಗದ ಬುಟ್ಟಿಯ ಬದುಕು

‘ನಾವು ಕೊರಚ ಜನಾಂಗದವ್ರು ಸರ. ಅನಾದಿ ಕಾಲದಿಂದ್ಲೂನೂವೆ ಬುಟ್ಟಿ ಹೆಣೀತಾ ಬದ್ಕಿನ್ ಬುತ್ತಿ ಕಟ್ಕಂಡ್ ಬಂದಾವು ರೀ’ ಎಂದು ಲಕ್ಷ್ಮಮ್ಮ ತಮ್ಮ ಬಗೆಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೆಬ್ಬಲಿಗೆರೆಯ ಲಕ್ಷ್ಮಮ್ಮ ಕುಲವೃತ್ತಿ ಬಿದಿರಿನ ಬುಟ್ಟಿ ಹೆಣೆಯುವುದು. ಬುಟ್ಟಿ ಮಾರಾಟ ಮಾಡಿ ನಾಲ್ಕು ಕಾಸ್ ಸಂಪಾದಿಸಿ ಹೊಟ್ಟೆ ಬಟ್ಟೆ ನೋಡಿಕೊಳ್ಳುವುದು ಬಿಟ್ಟರೆ ಅನ್ಯ ಪ್ರಪಂಚದ ವ್ಯವಹಾರಗಳತ್ತ ತಲೆ ಹಾಕಿದವರಲ್ಲ.

‘ಮನ್ಸ ಮಲಗಾದು ಬಿದಿರಿನ ತೊಟ್ಟಿಲದಾಗೆ. ಕೆಲಸ ಕಂಬಳಿ ಮಾಡಾಕೆ ಬಿದಿರಿನ ಬುಟ್ಟಿ ಬೇಕೇಬೇಕಾಗ್ತದ. ಕಡೀಕಿ ಮಸಣಕ್ಕ ಹೋಗೋದ್ ಕೂಡ ಬಿದಿರಿನ ಚಟ್ಟದಾಗೆ’ ಎಂದು ಬಿದಿರಿನ ಬದುಕಿನ ಆದ್ಯಂತದ ಬಗೆಗೆ ಹೇಳುವಾಗ ಬಿದಿರಿನಿಂದ ಏನೆಲ್ಲ ಮಾಡಬಹುದೆಂಬುದರ ಚಿತ್ರಣವನ್ನೂ ಮುಂದಿಡುತ್ತಾರೆ.

ನಿಸರ್ಗ ಧರ್ಮಾರ್ಥ ಕೊಡುವ ಬೆಟ್ಟದ ಬಿದಿರುಗಳ ತಂದು ಕತ್ತರಿಸಿ ಸೀಳಿ ಬುಟ್ಟಿ ಹೆಣೆದು ಮನೆ ಮನೆಗೆ ಹೊತ್ತು ಮಾರುವ ಸಾಂಪ್ರದಾಯಿಕ ಕಸುಬು ಕೈ ಹಿಡಿದಿತ್ತು.

ಆದರೆ ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆಯ ಬಿಗು ನೀತಿಯಿಂದಾಗಿ ಎರಗಿದ ಬರಸಿಡಿಲು ಅನೇಕ ಕೊರಚರನ್ನು ಗುಳೆ ಹೋಗುವಂತೆ ಮಾಡಿದೆ. ಬಿದಿರಿನ ಗಳಕ್ಕೆ ಕೈಯಿಡಲು ಸಾಧ್ಯವಿರಲಿಲ್ಲ. ಬಿದಿರು ಮುಟ್ಟಿದರೆ ಕೇಸು! ಬದುಕಿನ ಅವಿಭಾಜ್ಯ ಅಂಗವೇ ಕೈತಪ್ಪಿ ಹೋದಾಗ ಅನ್ಯ ವೃತ್ತಿಯ ಬಗೆಗೆ ಅರಿವೂ ಇರಲಿಲ್ಲ. ಜೊತೆಗೆ ಪ್ಲಾಸ್ಟಿಕ್ಕಿನ ಉಪಕರಣಗಳಿಂದ ಬಂದ ವ್ಯಾವಹಾರಿಕ ಆತಂಕ.ಸಾಗಿ ಬಂದ ಬದುಕಿಗೆ ಕಾಯಿದೆಯ ಕಟ್ಟುಪಾಡು ಅಡ್ಡಿಯಾಯಿತು.

ಮೊದಲು ಹಣ ಕೊಟ್ಟು ಬೇಡಿಕೆ ಸಲ್ಲಿಸದೆ ಬಿದಿರು ಕಡಿಯಲು ಅನುಮತಿ ಇರಲಿಲ್ಲ. ದುಡಿಮೆಯ ಹಣದಲ್ಲಿ ಉಳಿತಾಯವಿರಲಿಲ್ಲ. ಖಾಸಗಿ ವ್ಯಾಪಾರಿಗಳಿಂದ ಹಣ ಸಾಲ ತಂದರೆ ಹೆಣೆದ ಬುಟ್ಟಿಯ ದುಡ್ಡು ಬಡ್ಡಿಗೂ ಸಾಲುತ್ತಿರಲಿಲ್ಲ. ಈ ಪರಿಸ್ಥಿತಿಯಿಂದಾಗಿ ಯುವ ಪೀಳಿಗೆ ವಂಶದ ವೃತ್ತಿಯಿಂದ ಹಿಂದೆ ಸರಿದು ದೂರದ ಪಟ್ಟಣಕ್ಕೆ ಬೇರೆ ಉದ್ಯೋಗ ಅರಸುತ್ತ ಹೋಗತೊಡಗಿತು. ಇದರಿಂದ ಕೊರಚರಿಗಷ್ಟೇ ತೊಂದರೆಯಾದುದಲ್ಲ. ರೈತರಿಗೆ ಅಡಿಕೆ ಕೊಯ್ಲಿನ ಸಮಯದಲ್ಲಿ, ಹಾಗೆಯೇ ಜೋಳದ ಕೊಯ್ಲು ನಡೆಯುವಾಗ ಫೈಬರ್ ಬುಟ್ಟಿ ಸರಿ ಹೊಂದುತ್ತಿರಲಿಲ್ಲ. ಬಿದಿರಿನ ಬುಟ್ಟಿಯೇ ಬೇಕಾಗುತ್ತಿತ್ತು. ಆದರೆ ಅದು ಲಭಿಸುವುದೇ ಕಷ್ಟವಾಯಿತು.

ಇಂಥ ಸಮಯದಲ್ಲಿ ನಮ್ಮ ಪಾಲಿಗೆ ಹೊಸ ಬೆಳಕು ಮೂಡಿಸಿದ್ದು ಸ್ವಸಹಾಯ ಸಂಘದ ನೆರವು ಎಂದು ಹೇಳುತ್ತಾರೆ ಕೊರಚರ ಕುಲದ ಲಕ್ಷ್ಮಮ್ಮ. ಸಾಲ ಒದಗಿಸಿ ಹೀಗೆ ಮಾಡಿ ಎಂದು ತೋರಿಸಿದವರು ಸಂಘದವರು. ಏಕಾಂಗಿಯಾಗಿ ಹೊರಟು ತಮ್ಮ ಕುಲಕಸುಬಿನ ಪುನರುಜ್ಜೀವನ ಕೆಲಸದಲ್ಲಿ ಯಶಸ್ಸು ಪಡೆದರು. ತಮ್ಮ ಏಳಿಗೆಗೆ ಸಂಘಟನೆಯೊಂದೇ ಉಳಿದಿರುವ ದಾರಿ ಎಂದು ಅರಿತು ತನ್ನ ಕುಲದ ಎಂಬತ್ತು ಮಂದಿ ಮಹಿಳೆಯರನ್ನು ಒಗ್ಗೂಡಿಸಿ ಏಳು ಸ್ವಸಹಾಯ ಸಂಘಗಳನ್ನು ಕಟ್ಟಿ ಹಣ ಉಳಿತಾಯ ಮಾಡಿದರು. ಎಲ್ಲರೂ ಒಂದಾಗಿ ಸಂಘದಿಂದ ಸಾಲ ಪಡೆದರು. ಅರಣ್ಯ ಇಲಾಖೆಯ ಕಚೇರಿಯ ಮುಂದೆ ನಿಂತರು. ಅವರಿಂದ ಬಿದಿರನ್ನು ಹಣ ಕೊಟ್ಟು ಖರೀದಿ ಮಾಡಿ ತಂದರು.

ಸುಮಾರು ಮೂವತ್ತು ಅಡಿ ಉದ್ದದ ಗಳಕ್ಕೆ ತೊಂಬತ್ತು ರೂಪಾಯಿ ಬೆಲೆ. ಆರು ಗಳಗಳ ಒಂದು ಸೆಟ್‍ಗೆ ಐನೂರು ರೂಪಾಯಿ. ನಿಸರ್ಗ ತಾನಾಗಿ ಕೊಡುತ್ತಿದ್ದ ಸಂಪತ್ತು ಇಂದು ಸಿಗಬೇಕಾದರೆ ಅನಾದಿಯಿಂದಲೂ ಬಿದಿರಿನ ಕಾಯಕದಿಂದ ಬದುಕಿದವರಿಗೆ ಅದರ ಬೆಲೆ ಬಂಗಾರಕ್ಕಿಂತ ಹೆಚ್ಚೇ ಅನಿಸಿತು.

ಗಳವನ್ನು ತಂದರೆ ಸಾಕೆ? ಕತ್ತಿಯಿಂದ ಸೀಳಬೇಕು. ತೆಳ್ಳಗಿನ ಸೀಳುಗಳನ್ನು ನಾಜೂಕು ಮಾಡಿ ಕೊಡಬೇಕು. ಇದಕ್ಕೆ ಒಬ್ಬ ಸಹಾಯಕರು ಬೇಕು. ಅದರಿಂದ ಬುಟ್ಟಿಗಳನ್ನು ಹೆಣೆಯುವ ಕಾಯಕ ಇನ್ನೊಬ್ಬರದು. ಆರು ಗಳಗಳಿದ್ದರೆ ದೊಡ್ಡ ಗಾತ್ರ ಬುಟ್ಟಿಗಳಾದರೆ ಎಂಟು ಸಿದ್ಧವಾಗುತ್ತದೆ. ಮಧ್ಯಮವಾದರೆ ಹತ್ತರಿಂದ ಹದಿನೈದು. ತೀರ ಚಿಕ್ಕದು ನಲುವತ್ತು ಬುಟ್ಟಿಗಳನ್ನು ತಯಾರಿಸಬಹುದು. ಒಟ್ಟು ಎಂಟು ವಿಧದ ಉತ್ಪನ್ನಗಳು ತಯಾರಾಗುತ್ತವೆ. ಬೆಲೆಯೂ ಚಿಕ್ಕದಕ್ಕೆ ಐವತ್ತು ರೂಪಾಯಿ. ದೊಡ್ಡದಕ್ಕೆ ಇನ್ನೂರ ಐವತ್ತು. ಮಧ್ಯ ಗಾತ್ರವಾದರೆ ನೂರ ಐವತ್ತು.

‘ಐನೂರು ರೂಪಾಯಿಯ ಬಿದಿರು ಬಳಕೆಯಾದಾಗ ತರುವ ಹಣ ಅದರ ನಾಲ್ಕು ಪಟ್ಟು. ಹಾಗೆಯೇ ಇಬ್ಬರ ದುಡಿಮೆಯೂ ಇದರ ಹಿಂದೆ ಅಡಗಿದೆ. ಇಡೀ ದಿನ ಶ್ರಮಿಸಿದರೆ ದೊಡ್ಡ ಬುಟ್ಟಿ ಐದಕ್ಕಿಂತ ಹೆಚ್ಚು ಆಗಲ್ಲ’ ಎನ್ನುತ್ತಾಳೆ ಲಕ್ಷ್ಮಮ್ಮ. ಸಣ್ಣದಾದರೆ ಹದಿನೈದು ಮಾತ್ರ ಹೆಣೆಯಬಹುದು ಎಂಬುದು ಇವರ ಅಳಲು.

ಒಟ್ಟಾಗಿ ದುಡಿಯುವ ಎಂಬತ್ತು ಮಹಿಳೆಯರ ಉತ್ಪನ್ನಗಳೂ ಏಕಕಾಲದಲ್ಲಿ ಮಾರುಕಟ್ಟೆಗೆ ಬಂದಾಗ ವ್ಯಾಪಾರಿಗಳು ಅಲ್ಲಿಯೂ ಶೋಷಿಸದೆ ಬಿಡಲಿಲ್ಲ. ಬೇಡಿಕೆ ಕಡಿಮೆ ಎಂಬ ಕಾರಣವೊಡ್ಡಿ ಕಡಿಮೆ ದರಕ್ಕೆ ಕೊಳ್ಳಲು ಹಾತೊರೆದರು. ಸಂಘದ ಮಹಿಳೆಯರೆಲ್ಲ ಲಕ್ಷ್ಮಮ್ಮನ ಕಡೆಗೇ ಬೆರಳು ತೋರಿಸಿದರು. ‘ನಿಮ್ಮ ಮಾತು ಕೇಳಿ ಹಣ ಸಾಲ ಪಡೆದು ಬಿದಿರು ತಂದೆವು. ಈ ಬೆಲೆಗೆ ಮಾರಿದರೆ ಬಿದಿರಿಗೆ ಕೊಟ್ಟ ದುಡ್ಡೂ ಬರಲ್ಲ. ದುಡಿದವನ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ’ ಎಂದು ಬೇಸರಿಸಿಕೊಂಡರು. ಆಗ ಲಕ್ಷ್ಮಮ್ಮ ಹೆದರಲಿಲ್ಲ. ‘ಸುಮ್ಮನಿರಿ, ನಾನು ನೋಡಿಕೊಳ್ತೇನೆ’ ಎಂದರು. ಸ್ವಸಹಾಯ ಸಂಘದ ಮೂಲಕ ಪಡೆದ ವ್ಯಕ್ತಿತ್ವ ವಿಕಸನದ ತರಬೇತಿ ಇವರನ್ನು ದೃಢಗೊಳಿಸಿತ್ತು. ಎಲ್ಲರೂ ಹೆಣೆದ ಬುಟ್ಟಿಗಳನ್ನು ಲಾರಿಯಲ್ಲಿ ತುಂಬಿಕೊಂಡು ಶಿರಾ, ಮಧುಗಿರಿ ಮೊದಲಾದ ಕಡೆಗಳಿಗೆ ಹೋದರು.

ಅಲ್ಲಿ ಹೊಸ ಬೆಳಕು ಮೂಡಿತ್ತು. ಸರಕು ಕೊಳ್ಳಲು ವರ್ತಕರು ಮುಗಿಬಿದ್ದರು. ಎಷ್ಟಿದ್ದರೂ ತನ್ನಿ ಎಂಬ ಬೇಡಿಕೆಯೂ ಬಂತು. ಜೊತೆಗೆ ಉತ್ತಮ ಬೆಲೆಯೂ ಬಂತು. ಅದರೊಂದಿಗೆ ಅಡಿಕೆ ತೆಗೆಯುವ ದೋಟಿಗೂ ಬೇಡಿಕೆ ಸಿಕ್ಕಿತು. ದಿನದಲ್ಲಿ ಮೂವತ್ತು ಸಾವಿರ ರೂಪಾಯಿಗಳ ವ್ಯವಹಾರ ನಡೆಯಿತು. ಖರ್ಚು ಕಳೆದು ಕೈಗೆ ಬಂದ ಹಣ ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿಸಿತು. ದಿನಕ್ಕೆ ಸರಾಸರಿ ಐನೂರು ರೂಪಾಯಿ ಗಳಿಕೆ ಕಂಡದ್ದು ನಮ್ಮ ಜನ್ಮದಲ್ಲೇ ಮೊದಲ ಸಲ ಎಂದು ಮುಖದ ತುಂಬ ನಗು ತುಂಬಿಕೊಳ್ಳುತ್ತಾರೆ ಲಕ್ಷ್ಮಮ್ಮ.ವರ್ಷವಿಡೀ ದುಡಿಮೆಯ ಹಾದಿ ಸುಗಮವಾಗಿದೆ. ವಾರಕ್ಕೊಂದು ಸಲ ತಯಾರಿಕೆಯನ್ನು ಪೇಟೆಗೆ ಒಯಿದು ಮಾರಾಟ ಮಾಡುತ್ತಾರೆ. ಬಂದ ಹಣದಲ್ಲಿ ಸಾಲದ ಕಂತನ್ನು ಒಪ್ಪವಾಗಿ ಮರು ಪಾವತಿ ಮಾಡುತ್ತಾರೆ. ಖಾಸಗಿ ವ್ಯಕ್ತಿಗಳ ಸಾಲಕ್ಕೆ ಕೊಡುತ್ತಿದ್ದ ಬಡ್ಡಿಯನ್ನು ನೆನೆಸಿದರೆ ಸಂಘದ ಸಾಲದ ಬಡ್ಡಿ ತೀರ ಸರಳವಂತೆ. ಇದಲ್ಲದೆ ಹೋದರೆ ಪರಂಪರೆಯಿಂದ ಬುಟ್ಟಿ ಹೆಣೆಯುವುದರ ಹೊರತು ಬೇರೆ ಕೆಲಸವೇ ತಿಳಿದಿರದ ನಮಗೆ ಬದುಕಲು ದಾರಿಯೇ ಇರಲಿಲ್ಲ. ಈಗ ಗಳಿಸಿದ ಹಣದಲ್ಲಿ ಮನೆಯ ಅನುಕೂಲಗಳನ್ನೆಲ್ಲ ಮಾಡ್ಕೊಳ್ತಾ ಇದೀವಿ’ ಎಂದು ಹೊಸ ಬದುಕಿನ ಪರಿಯನ್ನು ಬಿಚ್ಚಿಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry