ಮಂಗಳವಾರ, ಡಿಸೆಂಬರ್ 10, 2019
26 °C

ಕಾಡಿನ ಗಸ್ತು ಪ್ರಾಣಿಗಳು ಕ್ಯಾಮೆರಾದಲ್ಲಿ ‘ಟ್ರ್ಯಾಪ್‌’!

Published:
Updated:
ಕಾಡಿನ ಗಸ್ತು ಪ್ರಾಣಿಗಳು   ಕ್ಯಾಮೆರಾದಲ್ಲಿ ‘ಟ್ರ್ಯಾಪ್‌’!

‌ಐವತ್ತಕ್ಕೂ ಹೆಚ್ಚು ವಿವಿಧ ಜಾತಿಯ ಮಾಂಸಾಹಾರಿ ವನ್ಯ ಪ್ರಾಣಿಗಳು ನಮ್ಮ ದೇಶದಲ್ಲಿ ಕಂಡುಬರುತ್ತವೆ. ಕಾಡು ಬೆಕ್ಕು, ಕಾಡು ನಾಯಿ, ಕಿರುಬ, ಕರಡಿ, ನೀರುನಾಯಿ, ಪುನುಗಿನ ಬೆಕ್ಕು, ಮುಂಗುಸಿಗಳಂತಹ ಮರೆಮಾಯವಾಗುವ‍ ಸ್ವಭಾವದ ಮಾಂಸಾಹಾರಿ ಕಾಡುಪ್ರಾಣಿಗಳಿಗೆ ನಮ್ಮ ಕಾಡುಗಳೇ ಆಶ್ರಯ ಧಾಮವಾಗಿವೆ. ‍ವೈಲ್ಡ್ ಲೈಫ್ ಕನ್ಸರ್ವೇಶನ್ ಸೊಸೈಟಿ (ಡಬ್ಲೂ.ಸಿ.ಎಸ್.) ಭಾರತ‍ದಲ್ಲಿ ಹಾಕಿಕೊಂಡಿರುವ‍‍ ಕಾರ್ಯಕ್ರಮದ ಮೂಲಕ ಕಳೆದೆರಡು ದಶಕಗಳಿಂದ ಕ್ಯಾಮೆರಾ ಟ್ರ್ಯಾಪ್ ವಿಧಾನದಿಂದ ವಿವಿಧ ವನ್ಯಮೃಗಗಳ ಅಧ್ಯಯನವನ್ನು ನಡೆಸುತ್ತಿದೆ.

ಡಾ. ಉಲ್ಲಾಸ ಕಾರಂತ ಅವರಿಂದ ಹುಲಿ ಮತ್ತು ಚಿರತೆಗಳ ಕುರಿತು ಕ್ಯಾಮೆರಾ ಟ್ರ್ಯಾಪ್‌ ವಿಧಾನದ ಅಧ್ಯಯನ ತೊಂಬತ್ತರ ದಶಕದಲ್ಲಿ ಪ್ರಾರಂಭವಾಗಿತ್ತು. ಈ ವಿಧಾನದ ಅಧ್ಯಯನವು ನಿರಂತರವಾಗಿ ಸಾಗಿ ಈಗ ವಿಶ್ವದ ಅತಿದೊಡ್ಡ ಕ್ಯಾಮೆರಾ ಟ್ರ್ಯಾಪ್ ಚಿತ್ರಕೋಶವಾಗಿ ಬೆಳೆದು ನಿಂತಿದೆ. ಪಶ್ಚಿಮ ಘಟ್ಟದ ಅರಣ್ಯಗಳಲ್ಲಿ ಸಾಗಿದ ಈ ಅಗಾಧ ಪ್ರಯತ್ನದ ಫಲವಾಗಿ ಡಬ್ಲೂ.ಸಿ.ಎಸ್. ಬಳಿ ‌ಈಗ 900ಕ್ಕೂ ಹೆಚ್ಚು ಹುಲಿಗಳ ಪ್ರತ್ಯೇಕ ಚಿತ್ರಗಳು ಲಭ್ಯವಿವೆ.

‍ಈ ಅಧ್ಯಯನದ ಹಾದಿಯಲ್ಲಿ ಹಲವಾರು ರೋಮಾಂಚಕ ಹಾಗೂ ಅನಿರೀಕ್ಷಿತ ಅಂಶಗಳನ್ನು ಪತ್ತೆ ಹಚ್ಚಲಾಗಿದೆ.‍ ಕಪ್ಪು ಚಿರತೆಗಳು ಹೊಸ ಪ್ರಜಾತಿಗಳಲ್ಲ; ಬದಲಾಗಿ, ಸಾಮಾನ್ಯ ಚಿರತೆಗಳಲ್ಲಿಯೇ ಅಪರೂಪವಾಗಿ ಕಂಡುಬರುವ ಕರ್ವರ್ಣದಿಂದಾಗಿ (ಮೆಲನಿನ್ ಎಂಬ ವರ್ಣದ್ರವ್ಯ) ಚರ್ಮದ ಮೇಲ್ಹೊದಿಕೆಯು ಕಪ್ಪುಬಣ್ಣಕ್ಕೆ ತಿರುಗುವ ಮೂಲಕ ಉಂಟಾದ ಮಾರ್ಪಾಡು ಮಾತ್ರ. ಕಾಡುಗಳಲ್ಲಿ ಸ್ವಾಭಾವಿಕವಾಗಿ ‍‍‍ಕಂಡುಬರುವ ಈ ಕರಿ ಚಿರತೆಗಳು ಮೊದಲು ತಿಳಿದಷ್ಟು ವಿರಳವಲ್ಲ, ಬದಲಾಗಿ, ಪಶ್ಚಿಮಘಟ್ಟಗಳ ಒಟ್ಟು ಚಿರತೆಗಳ ಸಂಖ್ಯೆಯ ಶೇ ‌10ರಷ್ಟು ಇರಬಹುದೆಂದು ಅಂದಾಜಿಸಲಾಗಿದೆ. ‍‍ರಹಸ್ಯಶೀಲ ಹಾಗೂ ನಿಶಾಚರಿಯಾದ ಕಿಲುಬುಚುಕ್ಕೆ‍ ಬೆಕ್ಕು, ಹುಲಿ ಬೆಕ್ಕು ಮತ್ತು ಕಾಡು ಬೆಕ್ಕುಗಳು ಸಣ್ಣ ಬೆಕ್ಕುಗಳ ಗಣಕ್ಕೆ ಸೇರುತ್ತವೆ. ಕಿಲುಬುಚುಕ್ಕೆ ಬೆಕ್ಕು ವಿಶ್ವದ ಅತಿಚಿಕ್ಕ ಬೆಕ್ಕುಗಳಲ್ಲಿ ಒಂದಾಗಿದ್ದು, ಭಾರತ ಹಾಗೂ ಶ್ರೀಲಂಕಾ ದೇಶಗಳಲ್ಲಿ ಮಾತ್ರ ಕಂಡುಬರುತ್ತದೆ.

ಸುಮಾರು ‌12 ಉಪಜಾತಿಯ ಸಣ್ಣ ಬೆಕ್ಕುಗಳಿದ್ದು, ಇದರಲ್ಲಿ ಚಿರತೆ ಬೆಕ್ಕುಗಳನ್ನು ಸಾಮಾನ್ಯವಾಗಿ ಸಾಕುಬೆಕ್ಕು ಎಂದು ತಪ್ಪಾಗಿ ಗುರುತಿಸಲಾಗುತ್ತದೆ. ಕಾಡುಬೆಕ್ಕುಗಳು ಸಾಮಾನ್ಯವಾಗಿ ಕಂಡುಬಂದದ್ದು, ಇವುಗಳ ವಿಸ್ತರಣೆ ವ್ಯಾಪಕವಾಗಿದೆ. ಹಾಗಿದ್ದರೂ, ಈವರೆಗೆ ಭಾರತದಲ್ಲಿ ಅತಿಕಡಿಮೆ ಅಧ್ಯಯನ ನಡೆಸಲಾದ ಪ್ರಾಣಿಗಳಲ್ಲಿ ಇದೂ ಒಂದಾಗಿದೆ.

ನಮ್ಮ ಕ್ಯಾಮೆರಾ ಟ್ರ್ಯಾಪ್‌ಗಳು ಈವರೆಗೆ ಹಲವು ಬಗೆಯ ಕಬ್ಬೆಕ್ಕುಗಳನ್ನು ಸೆರೆಹಿಡಿದಿವೆ: 

ಕೆಲವನ್ನು ಹೆಸರಿಸುವು ದಾದರೆ ಕಂದು-ಬಣ್ಣದ ಕಬ್ಬೆಕ್ಕು (brown palm civet), ಮರ ಬೆಕ್ಕು (common palm civet) ಹಾಗೂ ಪುನುಗಿನ ಬೆಕ್ಕು‍ (small Indian civet). ತೋರಿಕೆಯಲ್ಲಿ ಬೆಕ್ಕನ್ನು ಹೋಲುವುದರಿಂದ ಕಬ್ಬೆಕ್ಕು ಎಂದು ತಪ್ಪಾಗಿ ಕರೆಯಲ್ಪಡುವ ಇವು, ಬೆಕ್ಕು ಮತ್ತು ಮುಂಗುಸಿಗಳಿಗೆ ಹೊರತಾದ ಜಾತಿಗೆ ಸೇರಿವೆ. ಒಂದೆಡೆ ಕಸ್ತೂರಿಗಾಗಿ, ಮತ್ತೊಂದೆಡೆ ಕಾಫಿ ಬೀಜದ ಸಂಸ್ಕರಣೆಗಾಗಿ ಇವುಗಳ ಅವ್ಯಾಹತ ಬೇಟೆ ನಡೆಯುತ್ತಿದೆ. ಭಾರತದಲ್ಲಿ ಏಳು ಜಾತಿಯ ಪುನುಗಿನ ಬೆಕ್ಕುಗಳು ಕಂಡುಬರುತ್ತವೆ. ಇವುಗಳಲ್ಲಿ ಕಂದು-ಬಣ್ಣದ ಕಬ್ಬೆಕ್ಕು ಹಾಗೂ ಕೇವಲ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡುಬರುವ ಪೌರಾಣಿಕ ಮಲಬಾರ್ ಕಬ್ಬೆಕ್ಕು (malabar civet) ಸೇರಿದೆ.

ಸರ್ವಭಕ್ಷಿಯಾದ ಕರಡಿಗಳು ಸಾಮಾನ್ಯವಾಗಿ ಗೆದ್ದಲು, ಹೂವು, ಹಣ್ಣು ಹಾಗೂ ಕೆಲವೊಮ್ಮೆ ಕಾಡುಮಾಂಸವನ್ನು ತಿನ್ನುತ್ತವೆ.

ಕಾಡುನಾಯಿ ಅಥವಾ ಧೋಲ್‌ಗಳು ಬಹುಶಃ ಕಾಡಿನಲ್ಲಿ ವಾಸಿಸುವ ನಾಯಿಗಳಲ್ಲಿ ಅತ್ಯಾಕರ್ಷಕ ಪ್ರಾಣಿಗಳೆಂದು ಹೇಳಬಹುದು. ಗುಂಪಿನಲ್ಲಿ ‍‍ವಾಸಿಸುವ ಇವು ತಮಗಿಂತ ಬಹುದೊಡ್ಡ ಗಾತ್ರದ ಪ್ರಾಣಿಗಳನ್ನು ಬೇಟೆಯಾಡಬಲ್ಲವು. ಸಾಮಾನ್ಯ ವಾಗಿ ಹಗಲು ವೇಳೆಯಲ್ಲಿ ಬೇಟೆಯಾಡುವ ಇವು ರಾತ್ರಿವೇಳೆಯಲ್ಲೂ ಚಟುವಟಿಕೆ ನಡೆಸುವುದು ತಿಳಿದುಬಂದಿದೆ.

ಸಣ್ಣನರಿಗಳು ಕಾಡಿನಲ್ಲಿ ವಿಸ್ತೃತವಾಗಿ ಕಂಡುಬರುತ್ತವೆ. ಇದರ ನಂತರ ವಿಸ್ತೃತವಾಗಿ ಹರಡಿರುವ ನಾಯಿ ಜಾತಿಯ ಕಾಡುಪ್ರಾಣಿ ಗಳೆಂದರೆ ಗುಳ್ಳೆನರಿಗಳು. ಮನುಷ್ಯರ ಪ್ರಾಬಲ್ಯ ವಿರುವ ಕೃಷಿಭೂಮಿಗಳು, ಹುಲ್ಲುಗಾವಲುಗಳು, ಕಂದರಗಳು, ಕುರುಚಲು ಕಾಡುಗಳು ಹಾಗೂ ಹಳ್ಳಿಗಳ ಸಮೀಪದಲ್ಲಿ ಗುಳ್ಳೆನರಿಗಳು ಕಂಡುಬರುತ್ತವೆ. ಇವು ಪ್ರಾಥಮಿಕವಾಗಿ ಕಾಡಿನೊಳಗೆ ವಾಸಿಸುವ ಪ್ರಾಣಿಗಳಲ್ಲ. ಪಶ್ಚಿಮಘಟ್ಟಗಳ ದಟ್ಟ ಅರಣ್ಯಗಳಲ್ಲಿ ಇವುಗಳ ಚಿತ್ರವನ್ನು ಸೆರೆ ಹಿಡಿಯುವುದು ಅಪರೂಪವೇ ಸರಿ.

ಪಶ್ಚಿಮ ಘಟ್ಟಗಳ ಕಾಡು ದಾರಿಗಳಲ್ಲಿ ತೀರಾ ಅಪರೂಪವಾಗಿ ಹಾಗೂ ಅನಿರೀಕ್ಷಿತವಾಗಿ ಚಿತ್ರಕ್ಕೆ ಸೆರೆಸಿಕ್ಕಿರುವ ಪ್ರಾಣಿಗಳಲ್ಲಿ ನೀರು ನಾಯಿಗಳು ಕೂಡ ಒಂದು. ಅವುಗಳ ವಿಸ್ತಾರವಾದ ವ್ಯಾಪ್ತಿಯ ಹೊರತಾಗಿಯೂ ಭಾರತದಲ್ಲಿರುವ ಮೂರು ಜಾತಿಯ ನೀರುನಾಯಿಗಳ ಚದರುವಿಕೆ ಹಾಗೂ ‍‍ಜೀವಾವರಣಗಳ ವೈಜ್ಞಾನಿಕ ಜ್ಞಾನವು ಅತಿ ಕ್ಷೀಣ.

2014ರಲ್ಲಿ ‘ಸೈನ್ಸ್’ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ರಿಪ್ಪಲ್ ಮತ್ತು ಇತರರ ವೈಜ್ಞಾನಿಕ ಲೇಖನದ ಪ್ರಕಾರ ಮಾಂಸಾಹಾರಿ ವನ್ಯಪ್ರಾಣಿಗಳು ತೀವ್ರ ತೊಂದರೆಯಲ್ಲಿ ಸಿಲುಕಿದ್ದು ಶೇ 75ಕ್ಕೂ ಹೆಚ್ಚು ಜಾತಿಯ ಪ್ರಾಣಿಗಳ ಸಂಖ್ಯೆಯಲ್ಲಿ ಪ್ರಬಲವಾಗಿ ಇಳಿಕೆಯಾಗಿದೆ, ಮತ್ತು ಶೇ 50ಕ್ಕೂ ಹೆಚ್ಚು ಪ್ರಾಣಿಗಳ ಆವಾಸಸ್ಥಾನವು ಗಣನೀಯವಾಗಿ ಕುಗ್ಗಿ ಹೋಗಿದೆ. 2010ರಲ್ಲಿ ಉಲ್ಲಾಸ ಕಾರಂತರ ಸಂಶೋಧನೆಯ ಪ್ರಕಾರ ಭಾರತದ ಮಾಂಸಾಹಾರಿ ಪ್ರಾಣಿಗಳು ಕಳೆದ ನೂರು ವರ್ಷಗಳಲ್ಲಿ ತಮ್ಮ ಐತಿಹಾಸಿಕ ವಲಯದಲ್ಲಿ ಶೇ‌ 14 ರಿಂದ ಶೇ 96ರಷ್ಟು ಭಾಗದಲ್ಲಿ ಸ್ಥಳೀಯವಾಗಿ ಅಳಿವುಗೊಂಡಿವೆ. ಮಾಂಸಾಹಾರಿ ಪ್ರಾಣಿಗಳ ಉಳಿವಿಕೆಗೆ ಭಾರತ ಹಾಗೂ ವಿಶ್ವದ ಹೊರನೋಟ ತೀರಾ ಕಳೆಗುಂದಿದ್ದು, ‍‍ತುರ್ತಾಗಿ ಈ ಬಗ್ಗೆ ಗಮನ ಹರಿಸಬೇಕಾಗಿದೆ.

ನಮ್ಮ ಕ್ಯಾಮೆರಾ ಟ್ರ್ಯಾಪ್ ಚಿತ್ರಗಳು ಅತ್ಯಮೂಲ್ಯವಾಗಿವೆ. ಏಕೆಂದರೆ, ಈ ಪ್ರಾಣಿಗಳ ಬಗೆಗಿನ ಸೂಕ್ಷ್ಮವಾದ ವಿವರಗಳನ್ನು ಇವು ಒದಗಿಸುವುದಲ್ಲದೆ, ಹೆಚ್ಚು ಕಾಣಸಿಗದ, ಅಪರೂಪದ, ಮೋಹಕಗೊಳಿಸುವ ಪ್ರಾಣಿಗಳ ಬಗ್ಗೆ ನಮಗಿರುವ ಅಲ್ಪಜ್ಞಾನದೆಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ.

ಈ ಪ್ರಾಣಿಗಳು ಹೇಗೆ ಬದುಕುತ್ತವೆ? ಅವುಗಳ ಆಹಾರ ವೇನು? ಅವುಗಳ ಚಟುವಟಿಕೆಯ ಮಾದರಿಯೇನು? ಅವುಗಳ ಸಾಂದ್ರತೆಯೇನು? ಅವುಗಳು ಹೇಗೆ ಚದರು ತ್ತವೆ‌? ಇತರೆ ಪ್ರಾಣಿಗಳ ಜೊತೆ ಅವುಗಳ ಒಡನಾಟ ಹೇಗೆ? ಅವುಗಳ ಬದುಕುಳಿವಿಕೆಗೆ ಇರುವ ಪ್ರಮುಖ ಬೆದರಿಕೆಗಳೇನು ಮತ್ತು ಅವುಗಳ ಹೊಂದಿಕೊಳ್ಳುವಿಕೆ ಹೇಗೆ? - ಇತ್ಯಾದಿ ಪ್ರಶ್ನೆಗಳಿಗೆ ಇನ್ನೂ ನಾವು ಉತ್ತರ ಕಂಡುಕೊಳ್ಳಬೇಕಾಗಿದೆ. ‍‍‍‍

ಪ್ರತಿಕ್ರಿಯಿಸಿ (+)