ಭಾನುವಾರ, ಡಿಸೆಂಬರ್ 8, 2019
24 °C

ಹಂಪಿಗೆ ಮತ್ತೆ ಬಂದರು ಹೊಳೆಯ ಹಳೆ ನೆಂಟರು

Published:
Updated:
ಹಂಪಿಗೆ ಮತ್ತೆ ಬಂದರು ಹೊಳೆಯ ಹಳೆ ನೆಂಟರು

ಹುಮನಾಬಾದ್ ಭಾಗದ ಹಳ್ಳಿಗಳಲ್ಲಿ ಕ್ಷೇತ್ರಕಾರ್ಯ ಮಾಡುತ್ತಿದ್ದಾಗ ಹೊಸಪೇಟೆಯ ಫೋಟೊಗ್ರಾಫರ್ ಶಿವಶಂಕರ್ ಬಣಗಾರ್ ಫೋನಲ್ಲಿ ‘80 ವರ್ಷದ ನಂತರ ಗೊಲ್ಲರು ಹಂಪಿಯ ಹೊಳೆಪೂಜೆಗೆ ಬಂದಿದ್ದಾರೆ. ನಾಳೆಯೇ ಮರಳುತ್ತಿರುವ ಕಾರಣ ನೀನು ಬರಲೇಬೇಕು’ ಎಂದು ತಾಕೀತು ಮಾಡಿದರು. ಅವರ ಮಾತಲ್ಲಿ ನಾನೂ ನೋಡಬೇಕೆಂಬ ಪ್ರೀತಿಯ ಒತ್ತಾಸೆಯಿತ್ತು. ಹಾಗಾಗಿ ಆ ರಾತ್ರಿಯೇ ಹೊರಟು ಹಂಪಿಗೆ ಬಂದೆ.

ಬೆಳ್ಳಂಬೆಳಿಗ್ಗೆ ಇಡೀ ಹಂಪಿಯನ್ನು ಗೊಲ್ಲರೇ ಆವರಿಸಿಕೊಂಡಿದ್ದರು. ನೂರಾರು ಬಂಡಿ ಗಳು, ಮೆಲುಕು ಹಾಕುತ್ತ ಮಲಗಿದ್ದ ಎತ್ತುಗಳು, ಟ್ರ್ಯಾಕ್ಟರ್, ಟೆಂಪೊ, ಬೈಕುಗಳು ಒತ್ತರಿಸಿ ನಿಂತಿದ್ದವು. ಜನರು ಗಂಗೆಪೂಜೆಗೆ ತಡ ವಾದೀತೆಂದು ಅವಸರದಿ ಚಕ್ರತೀರ್ಥದ ಬಳಿ ಹೊಳೆಯಲ್ಲಿ ಮುಳುಗೇಳು ತ್ತಿದ್ದರು, ಮೈತೊಳೆದವರು ಪೂಜಾ ಸಾಮಗ್ರಿ ಜೋಡಿಸುವಲ್ಲಿ ಮಗ್ನರಾಗಿದ್ದರು. ಮುಂದೆ ನಡೆದರೆ ಒಂದಷ್ಟು ಜನರ ಗುಂಪಲ್ಲಿ ಹೊಳೆ ಪೂಜೆ ನಡೆಯುತ್ತಿತ್ತು. ದೇವರುಗಳನ್ನು ಒಂದೆಡೆ ಕೂರಿಸಲಾಗಿತ್ತು.

ದೈವಕ್ಕೆ ಗಾಳಿಬೀಸುವ ಬಿಳಿ ಚೌರಿ, ನೆರಳು ಮಾಡುವ ಛತ್ರಿ, ಬೆತ್ತ ಅಥವಾ ಗಣೆಗೆ ಬಟ್ಟೆಸುತ್ತಿ ಅಲಂಕಾರ ಮಾಡಿದ ಅಲಗು, ದೇವರ ಕುದುರೆ, ಹಿಡಿದ ದೆವ್ವ ಜಡ್ಡುಗಳನ್ನು ಬಿಡಿಸುವ ಛಾಟಿ, ಶಂಕು, ಜಾಗಟಿ ಎಲ್ಲವೂ ಪೂಜೆಯಲ್ಲಿ ಪಾಲುದಾರರಾಗಿದ್ದವು. ಕಂಬಳಿಯ ಕೆರೆಕಟ್ಟಿಕೊಂಡು(ಪರದೆ) ಹೊಳೆಬದಿಯಲ್ಲಿ ಒರತೆ ತೆಗೆದು, ಬಸಿಜಲದಲ್ಲಿ ದೇವರುಗಳ ಮೈತೊಳೆಸಿದರು. ದೊಡ್ಡದೇವರಾದ ಕಾಟೆಲಿಂಗನ ಪೂಜಾರಿ ನೀರಲ್ಲಿ ಮುಳುಗೆದ್ದ ಮೇಲೆ, ಸಣ್ಣದೇವರ ಪೂಜಾರಿಗಳನ್ನು ಹಿರಿಯರು ಒಳಗೊಂಡಂತೆ ಯಾರು ಯಾರನ್ನು ಆತ ಗಂಗೆಗೆ ಕರೆಯುತ್ತಾರೋ ಅವರೆಲ್ಲ ನೀರಲ್ಲಿ ಮೀಯತೊಡಗಿದರು.

***

ದಾವಣಗೆರೆ ಜಿಲ್ಲೆ ಜಗಲೂರು ತಾಲ್ಲೂಕಿನ ಅಣಬೂರು ಗೊಲ್ಲರಹಟ್ಟಿ 550 ಮನೆಗಳಿರುವ ಹಟ್ಟಿ. ಇಲ್ಲಿ ಸಣ್ಣೇರು, ಬಾಲ್ನೇರು, ಕಲ್ಡೇರು, ಸೋಮ್ನೇರು, ಕೆಂಗುರಿ, ಎಗಡಿನೋರು, ಮಾರನಾರ ಕುಲದ ಗೊಲ್ಲರು ನೆಲೆಸಿದ್ದಾರೆ. ಇಲ್ಲಿನ ದೊಡ್ಡದೇವರು.

ಕಾಟಪ್ಪ. ಸಣ್ಣದೇವರುಗಳಾದ ಸಿದ್ದಪ್ಪ, ಮಾರೆಮ್ಮ, ಮೈಲಾರಲಿಂಗ, ಬಸಣ್ಣ, ಬೋಸೇದೇವ್ರುಗಳನ್ನು ಆರಾಧಿಸುತ್ತಾರೆ. ಬೆಸಸಂಖ್ಯೆಯ ವರ್ಷಗಳಲ್ಲಿ ಎಲ್ಲ ಗೊಲ್ಲರಹಟ್ಟಿಯ ದೈವಗಳನ್ನು ಹೊಳೆಪೂಜೆ ಮಾಡಿ ಶುದ್ಧೀಕರಿಸುವುದು ಕ್ರಮ. ಇದರಂತೆ ಐದು ವರ್ಷಕ್ಕೊಮ್ಮೆ ಸಮೀಪದ ಕಲ್ಲೇದೇವರಪುರದ ಹಾಕನೂರು ಹೊಳೆಯಲ್ಲಿ ಗಂಗೆಪೂಜೆ ಮಾಡುತ್ತಿದ್ದರು.

ಹೀಗಿರುವಾಗ ಕಾಟಪ್ಪನ ಚರಿತ್ರೆಯಲ್ಲಿ 1933ರ ಸಂದರ್ಭಕ್ಕೆ ಹಂಪಿಯ ಹೊಳೆಪೂಜೆ ಮಾಡಿಕೊಂಡು ಬಂದ ಸಂಗತಿ ಸದಾ ಕಾಡುತ್ತಿತ್ತು. ಕಾಟಪ್ಪನೂ ತನ್ನನ್ನು ಹಂಪಿಹೊಳೆಗೆ ಕರೆದೊಯ್ಯುವ ಬಗ್ಗೆ ಹಲವು ಬಾರಿ ಸೂಚನೆ ಕೊಟ್ಟಿದ್ದ. ಇದು ಬಹುವೆಚ್ಚದಾಯಕವಾದ ಕಾರಣ, ನಮ್ಮಿಂದಾಗದು ಎನ್ನುವಂತೆ ದೈವದ ಆಸೆಯನ್ನು ಮುಂದೂಡುತ್ತಲೇ ಬಂದಿದ್ದರು. ಕೊನೆಗೂ ಕಾಲಕೂಡಿ ಬಂದಂತೆ ಹಟ್ಟಿಯ ದೈವದವರು ಹಂಪಿಗೆ ಹೋಗಬೇಕೆಂದು ನಿರ್ಧರಿಸಿದರು. ಇಡೀ ಹಟ್ಟಿಗೆ ಹಟ್ಟಿಯೇ ಈ ದಿನಕ್ಕಾಗಿ ಕಾತರಿಸಿ ಕಾಯತೊಡಗಿತು. ಕನಿಷ್ಠ ಎರಡು ತಿಂಗಳು ಈ ಪ್ರಯಾಣದ ತಯಾರಿ ನಡೆಯಿತು.

ಈ ಸುದ್ದಿ ಹಟ್ಟಿಯಿಂದ ಹಟ್ಟಿಗೆ ಹಬ್ಬಿತು. ಇಡೀ ಗೊಲ್ಲರ ಸಮುದಾಯ ಪುಳಕಿತವಾಯಿತು. ಹಳೆಯ ಬಂಡಿಯ ಚಕ್ರಗಳು ರಿಪೇರಿಯಾದವು, ಮೂಲೆ ಸೇರಿದ್ದ ಬಂಡಿಗಳಿಗೆ ಮರುಜೀವ ಬಂತು. ಗಾಡಿಗಳಿಗೆ ಬಣ್ಣದ ಹೊದಿಕೆಗಳು ಸಿದ್ಧಗೊಂಡವು. ಎತ್ತಿಗೆ ಜೂಲು ಕುಚ್ಚು, ಗೆಜ್ಜೆಸರಗಳನ್ನು ಜೋಡಿಸಲಾಯಿತು. ಮನೆಮಂದಿಗೆಲ್ಲ ಹೊಸ ಬಟ್ಟೆ ಕೊಳ್ಳಲಾಯಿತು. ಹಟ್ಟಿಯ ಪ್ರತಿಮನೆಯೂ ಈ ಸಿದ್ಧತೆಗಾಗಿ ನಲವತ್ತರಿಂದ ಐವತ್ತು ಸಾವಿರ ಖರ್ಚುಮಾಡಿದ ಬಗ್ಗೆ ಸೈಕಲ್ ವೀರೇಶ್ ವಿವರಿಸುತ್ತಾರೆ.

ಜಾತ್ರೆಯ ಮುನ್ನಾದಿನ ಜಾಂಡೇವು ಎತ್ತುವ ಮೂಲಕ ಪಯಣಕ್ಕೆ ಸಾಂಕೇತಿಕ ಚಾಲನೆ ಸಿಕ್ಕಿತು. ನೂರಾಹತ್ತು ಬಂಡಿಗಳು ಪಂಥಿಗಟ್ಟಿದವು, ಐದು ಟ್ರ್ಯಾಕ್ಟರ್, ಎರಡು ಲಾರಿ, ನೂರಾರು ಬೈಕುಗಳು ಸಜ್ಜಾದವು. ಮುಂದೆ ದೈವಗಳ ಹೊತ್ತವರು, ಹಿಂದೆ ಬಂಡಿಯ ಸಾಲು ಚಲಿಸುತ್ತಿದ್ದರೆ ದಾರಿಯುದ್ದಕ್ಕೂ ಜನರು ಬೆಕ್ಕಸಬೆರಗಾಗಿ ನೋಡತೊಡಗಿದರು. ಹಟ್ಟಿಯೆಂಬ ಹಟ್ಟಿಯೇ ರಸ್ತೆಯ ಮೇಲೆ ಸಾಗತೊಡಗಿತು. ಗಂಗೆ ಪೂಜೆಯ ಹೊತ್ತಿಗೆ ಸುಮಾರು ಎಂಟು ಸಾವಿರ ಜನ ಸಾಕ್ಷಿಯಾದರು.

ಹಂಪಿಯಿಂದ ಪಯಣ ಬೆಳಸಿ ತಮ್ಮೂರು ತಲುಪಿದಾಗ ಝಂಡಾ ಪೂಜೆ ಮಾಡಿ, ಹತ್ತು ವರ್ಷದ ಒಳಗಿನ ಮಕ್ಕಳು ಆರತಿ ಮಾಡಿ ದೇವರನ್ನು ಊರ ಒಳಗೆ ಕರೆ ತಂದರು. ಮೇಳ ಉರುಮೆ ಕರಡಿ ಮಜಲೊಂದಿಗೆ ದೈವ ಗುಡಿತುಂಬುತ್ತದೆ. ಭಕ್ತರು ನೂರೊಂದು ದೀಪಗಳನ್ನು ನೋಡಿ ಮನೆಗೆ ಮರಳುತ್ತಾರೆ. ಮರುದಿನ ಅನ್ನದಾಸೋಹ, ಎತ್ತುಗಳ ಮೆರವಣಿಗೆ ನಡೆಯುತ್ತದೆ. ಊರಿಗೆ ಊರು ತಮ್ಮ ದೈವಕ್ಕೆ ಹೊಸ ಶಕ್ತಿ ಸಂಚಲನವಾದಂತೆ ಕನಸುಗಳ ಕಟ್ಟುತ್ತಾರೆ.

***

ಈ ಹೊಳೆಪೂಜೆಯ ಮೂಲ ಹುಡುಕುತ್ತಾ ಹೋದರೆ ಕುತೂಹಲದ ಸಂಗತಿಗಳು ಗರಿಬಿಚ್ಚುತ್ತವೆ. ಜನರ ಮೌಖಿಕ ಇತಿಹಾಸದ ಪುಟಗಳು ಬಾಯ್ದೆರೆದು ಮಾತನಾಡುತ್ತವೆ. ವಿಜಯನಗರ ಪೂರ್ವದಲ್ಲಿ ಹಂಪಿ ಹೊಳೆ ಹರಿಯುವ ಈ ಭಾಗದಲ್ಲಿ ಪಶುಪಾಲಕ ಮತ್ತು ಅಲೆಮಾರಿಗಳು ನೆಲೆಗೊಂಡಿದ್ದರು. ಅಂತೆಯೇ ಈ ಭಾಗವು ವ್ಯಾಪಾರ ಮತ್ತು ವಾಣಿಜ್ಯದ ಕೇಂದ್ರವೂ ಆಗಿತ್ತು. ಹೀಗಾಗಿ ಹಂಪಿಗೆ ಹೊಂದಿಕೊಂಡ ಸುತ್ತಣ ಪ್ರದೇಶಗಳ ಪಶುಪಾಲಕ ಮತ್ತು ಅಲೆಮಾರಿ ಬುಡಕಟ್ಟುಗಳು ಈ ಪ್ರದೇಶಕ್ಕೆ ತಮ್ಮ ದೈವ ಮತ್ತು ದನಕರುಗಳೊಂದಿಗೆ ಸೇರುತ್ತಿದ್ದರು. ಹೀಗೆ ಅಲೆಮಾರಿತನ ಮತ್ತು ಪಶುಪಾಲನೆಯ ಕಾರಣಕ್ಕೆ ದೂರದೂರ ಪಯಣಿಸಿದ್ದ ಸಮುದಾಯಗಳು ಈ ಕೇಂದ್ರದಲ್ಲಿ ವರ್ಷಕ್ಕೋ ಎರಡುಮೂರು ವರ್ಷಕ್ಕೋ ಒಂದೆಡೆ ಕೂಡುತ್ತಿದ್ದರು. ಅಂತೆಯೇ ದನಕರುಗಳಿಗೆ ಮೇವು ನೀರನ್ನು ಒಳಗೊಂಡಂತೆ ತಮ್ಮೆಲ್ಲಾ ವಿನಿಮಯದ ಚಟುವಟಿಕೆಗಳನ್ನೂ ನಡೆಸುತ್ತಿದ್ದರು.

ಈ ಕಾರಣಕ್ಕಾಗಿ ಹಲವು ಸಮುದಾಯಗಳು ಒಂದೆಡೆ ಸೇರುವ ಬಿಂದು ಇದಾಗಿತ್ತು. ಇಂತಹ ಚಾರಿತ್ರಿಕ ಹಿನ್ನೆಲೆಯ ಕಾರಣ ಹಂಪಿ ಹೊಳೆಗೆ ಪಶುಪಾಲಕ ಮತ್ತು ಅಲೆಮಾರಿ ಸಮುದಾಯಗಳಾದ ಮ್ಯಾಸಬೇಡ, ಕುರುಬ, ಹೆಳವ, ಗೊಲ್ಲ, ದೊಂಬರ ಸಮುದಾಯಗಳು ಈ ಹಳೆಯ ನಂಟನ್ನು ನವೀಕರಿಸಿ ಹೊಸ ಚೈತನ್ಯ ಪಡೆಯಲು ಹೊಳೆಪೂಜೆಗೆ ಬರುತ್ತಾರೆ. ಸಮುದಾಯಗಳ ಈ ಸಂಬಂಧ ಹಂಪಿಯ ಹೊಳೆಯ ಜತೆಗಿನದೇ ಹೊರತು ವಿಜಯನಗರ ಸಾಮ್ರಾಜ್ಯದ್ದಲ್ಲ ಎಂದು ಸಂಶೋಧಕರಾದ ಡಾ.ಎ.ಎಸ್.ಪ್ರಭಾಕರ್ ಹೇಳುತ್ತಾರೆ.

ಕರ್ನಾಟಕದ ಪ್ರಾಚೀನ ಸಮುದಾಯಗಳಲ್ಲಿ ಒಂದಾದ ಗೊಲ್ಲರ ಸಮುದಾಯಕ್ಕೂ ಹಂಪಿಯ ಹೊಳೆಗೂ, ಆ ನಂತರದ ಸಾಮ್ರಾಜ್ಯಕ್ಕೂ ಒಂದು ನಂಟಿದೆ. ವಿಜಯನಗರದ ಅರಸು ಆಳ್ವಿಕೆ ಕಾಲಕ್ಕೆ ಸುತ್ತಮುತ್ತಣ ನೆಲೆಸಿದ್ದ ಗೊಲ್ಲರ ಕುರಿಮೇಕೆಗಳ ಉಪಟಳಕ್ಕೆ ಚಿತ್ತಮುತ್ತಿ, ಚಂದಮುತ್ತಿಯರನ್ನು ಗುಡ್ಡದ ಜೈಲಲ್ಲಿಡುವುದು, ದಿನಾಲು ಜೈಲಿಗೆ ಬುತ್ತಿ ತರುವ ಹೆಣ್ಣುಮಕ್ಕಳು ತಮ್ಮ ಅಪ್ಪಂದಿರನ್ನು ಜೈಲಿಂದ ಪಾರುಮಾಡಿದ ಕ್ಷೌರಿಕರಾದ ಗಾಳಿ-ಧೂಳಿಯರನ್ನು ಮದುವೆಯಾಗುವ ಸಂದರ್ಭವಿದೆ. ಅಂತೆಯೇ ಹರಿಹರನ ರಗಳೆಗಳಲ್ಲಿ ತುರುಗಾಯಿ ಗೋವಳರ ವರ್ಣನೆಯಿದೆ.

ಗೊಲ್ಲರ ಕುಲದೈವ ಎತ್ತಪ್ಪನಿಗೆ ಅಕ್ಕನಾಗಿ, ಜುಂಜಪ್ಪನಿಗೆ ತಂಗಿಯಾದ ಗೌರಸಂದ್ರದ ಮಾರಮ್ಮನು ಹಂಪಿಯ ಭಾಗದಲ್ಲಿ ಪೂಜೆಗೊಳಗಾಗುತ್ತಾಳೆ. ಗೊಲ್ಲರ ಎತ್ತಪ್ಪ ಹಂಪಿ ಮತ್ತು ಸಂಡೂರನ್ನು ಒಳಗೊಂಡ ‘ಹುಲಿದುರ್ಗ’ ಎನ್ನುವ ದಟ್ಟ ಹುಲ್ಲುಗಾವಲಿಗೆ ತನ್ನ ರಾಸುಗಳನ್ನು ತರುವುದು, ಇಲ್ಲಿನ ಬೇಡರ ಗುಡ್ಡದಬೋರಿಯ ಕೂಡಿಕೆ ಆಸೆ ಈಡೇರಿಸದೆ ಆಕೆಯ ಕೋಪಕ್ಕೆ ತುತ್ತಾಗಿ, ಅವಳದೇ ಸಂಚಿನ ಸಂಡೂರಿನ ದೊರೆ ಬೊಮ್ಮನ ವಿರುದ್ಧ ಹೋರಾಡಿ ಹತನಾಗುವುದು, ಜುಂಜಪ್ಪನ ಮಹಾಕಾವ್ಯದ ಗೋವಿನ ಹಾಡಿನ ಕಥನದಲ್ಲಿ ‘ತುಂಗಭದ್ರೆ’ಯ ಉಲ್ಲೇಖವಿರುವುದನ್ನು ಗಮನಿಸಬಹುದು.

ಇದೀಗ ಹಣಬೂರು ಗೊಲ್ಲರಹಟ್ಟಿಯ ದೈವಗಳು ಹಂಪಿ ಹೊಳೆಗೆ ಬಂದಿರುವುದರ ಹಿಂದೆ ಇಂತಹ ಮೌಖಿಕ ಚರಿತ್ರೆಯ ಬೇರುಗಳಿವೆ. ಸಮುದಾಯಗಳ ನಿಸರ್ಗ ಶಕ್ತಿ ಆರಾಧನೆಯಲ್ಲಿ ಗಂಗೆಪೂಜೆಗೆ ಬಹಳ ಪ್ರಾಮುಖ್ಯ ಇದೆ. ಇದೀಗ ಗಂಗೆ ಪಾತಾಳಕ್ಕೆ ಇಳಿಯುತ್ತಿರುವ ಈ ಹೊತ್ತಲ್ಲಿ ನದಿತಟದ ಒರತೆಯ ಬಸಿ ನೀರಲ್ಲಿ ದೈವಗಳ ಮೈತೊಳೆಸುವುದು ‘ನೀರಯಜ್ಞ’ದಂತೆಯೇ ಕಾಣುತ್ತಿದೆ.

ಪ್ರತಿಕ್ರಿಯಿಸಿ (+)