ಮಂಗಳವಾರ, ಡಿಸೆಂಬರ್ 10, 2019
23 °C

ರೈತನ ಮಿತ್ರ ‘ಟ್ರೈಕೋಗ್ರಾಮಾ’

Published:
Updated:
ರೈತನ ಮಿತ್ರ ‘ಟ್ರೈಕೋಗ್ರಾಮಾ’

ಪ್ರತಿಯೊಂದು ಬೆಳೆಗೂ ಕೀಟಗಳ ಉಪಟಳ ಇದ್ದೇ ಇರುತ್ತದೆ. ಕೆಲವೊಂದು ಬೆಳೆಗಳ ಸಮಪಾಲು ಕೀಟಗಳ ಪಾಲಾಗುವುದೂ ಇದೆ. ಕೀಟನಾಶಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆ ಆಗುತ್ತಿರುವುದು ನಿಜ. ಆದರೆ, ಕೀಟಗಳ ಉಪಟಳ ತಡೆಯಲು ಔಷಧಗಳನ್ನು ಸಿಂಪಡಿಸುವುದು ಹಲವು ರೈತರಿಗೆ ಅನಿವಾರ್ಯವಾಗಿದೆ.

ಕೀಟನಾಶಕ ಬಳಸದೆ ಕೀಟ ತಡೆಯುವ ನಿಟ್ಟಿನಲ್ಲಿ ಹಲವಾರು ಸಣ್ಣ ಪುಟ್ಟ ಪ್ರಯತ್ನಗಳು ರೈತರ ವಲಯದಲ್ಲಿ ನಡೆದಿವೆ. ಆದರೆ ಅವು ಹೇಳಿಕೊಳ್ಳುವಂತಹ ಯಶಸ್ಸನ್ನು ಪಡೆದಿಲ್ಲ. ಕಬ್ಬು ಬೆಳೆಗಾರನ ಪಾಲಿಗಂತೂ ಕೀಟಗಳ ಹಾವಳಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವರ್ಷದಿಂದ ವರ್ಷಕ್ಕೆ ಇಳುವರಿ ಇಳಿಮುಖವಾಗುತ್ತಿದೆ. ಈ ಎಲ್ಲಾ ಸಮಸ್ಯೆಗೆ ಪರಿಹಾರವಾಗಿ ಹೊಸ ಉಪಾಯವೊಂದನ್ನು ರಾಮದುರ್ಗ ತಾಲ್ಲೂಕಿನ ಮುಕ್ಕಾಂಖಾನಪೇಠದ ಮಲ್ಲಿಕಾರ್ಜುನ ಗುರುಮಹಾಂತಪ್ಪ ಹಳ್ಯಾಳ್ ಕಂಡುಹಿಡಿದಿದ್ದಾರೆ. ಕಳೆದ ಎಂಟು ವರ್ಷಗಳಿಂದ ಇದರಿಂದ ಯಶಸ್ಸನ್ನು ಗಳಿಸಿದ್ದಾರೆ. ಒಂಚೂರು ಮಾಹಿತಿಯಿದ್ದರೆ ಪ್ರತಿಯೊಬ್ಬ ರೈತರೂ ಅಳವಡಿಸಿಕೊಳ್ಳಬಹುದಾದ ವಿಧಾನವಿದು.


ರಸ್ತೆಯಲ್ಲಿ ಮಣ್ಣು ಬಿದ್ದಿದೆ

ಏನಿದು ಪ್ರಯೋಗ?

ಮಲ್ಲಿಕಾರ್ಜುನರವರಿಗೆ ಆರು ಎಕರೆ ಇಪ್ಪತ್ತೇಳು ಗುಂಟೆ ಜಮೀನಿದೆ. ಪತ್ನಿ ಮಾಯಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಾನೇಶ್ವರಿ ಸ್ವಸಹಾಯ ಸಂಘದ ಸದಸ್ಯೆ. ಮಲ್ಲಿಕಾರ್ಜುನ ಅವರು ‘ಗುರುಕಲಾರಿ ಮಹಾಂತೇಶ ಪ್ರಗತಿಬಂಧು’ ತಂಡವನ್ನು ಸೇರಿಕೊಂಡು ಮೂರು ಎಕರೆಯಲ್ಲಿ ಕಬ್ಬು, ಮೂರು ಎಕರೆಯಲ್ಲಿ ಶೇಂಗಾ ಬೆಳೆದಿದ್ದಾರೆ. ಐವತ್ತೈದು ಮಾವಿನ ಗಿಡಗಳು, ಆರುನೂರು ಸಾಗುವಾನಿ ಗಿಡಗಳಲ್ಲದೆ, ಲಿಂಬೆ, ಸೀತಾಫಲ, ಹಲಸು, ದಾಳಿಂಬೆ, ಗೋಡಂಬಿ ಗಿಡಗಳನ್ನೂ ಬೆಳೆದಿದ್ದಾರೆ.

ಕಬ್ಬು ಇವರಿಗೆ ಅನ್ನ ನೀಡುವ ಪ್ರಮುಖ ಬೆಳೆ. ಕೀಟಗಳ ಹಾವಳಿಯಿಂದಾಗಿ ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗುತ್ತಿತ್ತು. ಈ ಸಮಸ್ಯೆಯನ್ನು ಹತ್ತಿರದಿಂದ ಕಂಡಿದ್ದ, ಇಲ್ಲಿನ ರೈತರಿಂದ ಸಕ್ಕರೆ ತಯಾರಿಗೆ ಕಬ್ಬು ಖರೀದಿಸುವ ‘ಪ್ಯಾರಿ ಶುಗರ್ ಕಂಪನಿ’ ಕೀಟ ಹತೋಟಿ ಮಾಡುವ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ಹೊಸ ವಿಧಾನದ ಬಗ್ಗೆ ತರಬೇತಿಯನ್ನು ನೀಡಿತು. ಅವರಿಂದ ತರಬೇತಿ ಪಡೆದು ಬಂದ ಮಲ್ಲಿಕಾರ್ಜುನ ‘ಟ್ರೈಕೋಗ್ರಾಮಾ ಪರತಂತ್ರ ಜೀವಿ’ಯನ್ನು ತಾವೇ ತಯಾರಿಸುವ ಮೂಲಕ ಯಶಸ್ಸನ್ನು ಕಂಡಿದ್ದಾರೆ.

ಟ್ರೈಕೋಗ್ರಾಮ ಎಂದರೇನು ?

ಇದು ಅತೀ ಸಣ್ಣ ಕೀಟವಾಗಿದ್ದು ಬೆಳೆಗಳಿಗೆ ಬಾಧಿಸುವ ಸುಮಾರು 200 ವಿಧದ ಕೀಟಗಳ ಮೊಟ್ಟೆಗಳನ್ನು ತಿಂದು ನಾಶಪಡಿಸುತ್ತದೆ. ಸಣ್ಣ ಗಾತ್ರದ ಸುಮಾರು 2000 ಮೊಟ್ಟೆಗಳಿರುವ ಕಾರ್ಡನ್ನು ಆರಂಭದಲ್ಲಿ ತಮಿಳುನಾಡಿನಿಂದ ಖರೀದಿಸಿ ತಂದರು. ಇದೀಗ ಮೊಟ್ಟೆಗಳನ್ನು ಇವರೇ ತಯಾರಿಸುತ್ತಿದ್ದಾರೆ. ಸಣ್ಣ ಗಾತ್ರದ ಮೊಟ್ಟೆಗಳು ಒಂದು ಕಾರ್ಡ್‌ಗೆ ಅಂಟಿಕೊಂಡಿರುತ್ತದೆ. ಒಂದು ಕಾರ್ಡ್‌ಗೆ ₹ 35 ಬೆಲೆಯಿದೆ. ಒಂದು ಎಕರೆಗೆ 4 ಕಾರ್ಡ್‌ಗಳು ಬೇಕು.

ಮೊಟ್ಟೆಗಳಿರುವ ಕಾರ್ಡ್‍ ತಂದು ಕಬ್ಬು ಅಥವಾ ಯಾವುದೇ ಬೆಳೆಯ ಎಲೆಗಳಲ್ಲಿ ಇಡಬೇಕು. ಇಪ್ಪತ್ತನಾಲ್ಕು ಗಂಟೆಯೊಳಗೆ ಮೊಟ್ಟೆಯೊಡೆದು ಅದರಿಂದ ಪತಂಗಗಳು ಹುಟ್ಟಿಕೊಳ್ಳುತ್ತವೆ. ಪತಂಗ 45 ದಿನಗಳವರೆಗೆ ಬದುಕುತ್ತದೆ. ರೈತರ ಕೃಷಿಯನ್ನು ಹಾಳುಗೆಡವುವ ಕೀಟಗಳು ಇವುಗಳ ಪ್ರಮುಖ ಆಹಾರ. ಗದ್ದೆಯಲ್ಲಿ ಇದ್ದ ಎಲ್ಲಾ ಕೀಟನಾಶಕ ಪತಂಗ, ಹುಳುಗಳ ಮೊಟ್ಟೆಯನ್ನು ಇವು ತಿಂದು ಬಿಡುತ್ತವೆ. ಹೀಗೆ ಸುಲಭವಾಗಿ ಕೀಟಗಳು ಕಣ್ಮರೆಯಾಗುತ್ತವೆ. ನಾಲ್ಕು ವಾರಕ್ಕೊಂದು ಬಾರಿಯಂತೆ ಕಾರ್ಡ್ ಕಟ್ಟುತ್ತಿರಬೇಕು.

ಮುನ್ನೆಚ್ಚರಿಕೆ

ಕಾರ್ಡ್ ಕಟ್ಟುವ ಒಂದು ವಾರಗಳ ಮುಂಚಿತವಾಗಿ ಹೊಲಕ್ಕೆ ಯಾವುದೇ ರೀತಿಯ ಕೀಟನಾಶಕವನ್ನು ಸಿಂಪಡಿಸಬಾರದು. ಒಮ್ಮೆ ಕಾರ್ಡ್ ಕಟ್ಟಲು ಆರಂಭಿಸಿದ ನಂತರ ಮತ್ತೆ ಯಾವುದೇ ರೀತಿಯ ಕೀಟನಾಶಕಗಳ ಅಗತ್ಯವಿಲ್ಲ. ಈ ವಿಧಾನವನ್ನು ಮುಂದುವರೆಸಿದರಾಯಿತು.

ಪ್ರಯೋಜನ: ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯತ್ನ. ಶ್ರಮ ಕಡಿಮೆ. ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ರಾಸಾಯನಿಕಯುಕ್ತ ಕೀಟನಾಶಕಗಳ ಬಳಕೆ ಕಡಿಮೆ ಆಗುವುದರಿಂದ ಬೇಸಾಯದ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ.

ಯಾವ ಬೆಳೆಗೆ ಸೂಕ್ತ?: ಕೀಟಗಳು ಎಲ್ಲಾ ಬೆಳೆಗಳನ್ನೂ ಕಾಡುತ್ತವೆ. ಆದ್ದರಿಂದ ಎಲ್ಲಾ ಬೆಳೆಗಳಿಗೂ ಸೂಕ್ತ. ಕಬ್ಬು, ಹತ್ತಿ, ಭತ್ತ, ಶೇಂಗಾ, ಟೊಮೆಟೊ, ಬದನೆ, ಮೆಣಸಿನಕಾಯಿ, ಗುಲಾಬಿ, ನಿಂಬೆ, ಜೋಳ ಮುಂತಾದ ಬೆಳೆಗಳನ್ನು ಕಾಡುವ ಸಸಿಗಳ ಕಾಂಡ, ಗಣಿಕೆ ಕಾಯಿ ಕೊರೆಯುವ, ಎಲೆ ಮಡಚುವ, ಕೊಳವೆ ಕಟ್ಟುವ, ಮೊಗ್ಗು ಮತ್ತು ಹೂವು ಕೊರೆಯುವ, ಎಲೆ ತಿನ್ನುವ ಕೀಟಗಳನ್ನು ಪತಂಗಗಳು ತಿಂದು ಮುಗಿಸುತ್ತವೆ.

ಮೊಟ್ಟೆ ಎಲ್ಲಿ ಲಭ್ಯ?: ಸಾಮಾನ್ಯವಾಗಿ ಎಲ್ಲಾ ಕೃಷಿ ಇಲಾಖೆಗಳಲ್ಲಿ ಮೊಟ್ಟೆ ಇರುವ ಕಾರ್ಡ್ ಸಿಗುತ್ತಿದೆ. ಅಂಚೆ ಮೂಲಕ ಊರಿಂದ ಊರಿಗೆ ಸಾಗಾಟ ಕೂಡ ಸುಲಭ. ಪ್ರತಿ ಜಿಲ್ಲೆಗೊಂದರಂತೆ ಪ್ರಯೋಗಾಲಯವನ್ನು ತೆರೆಯಲಾಗಿದೆ. ಮಲ್ಲಿಕಾರ್ಜುನರವರು ಸ್ವತಃ ಮೊಟ್ಟೆ ತಯಾರಿಸುತ್ತಿದ್ದು ಬೇಕಾದ ತರಬೇತಿ, ಮಾಹಿತಿ, ಮೊಟ್ಟೆಗಳನ್ನು ನೀಡಲು ಅವರು ಸಿದ್ಧರಿದ್ದಾರೆ.

ಮೊಟ್ಟೆ ತಯಾರಿ ಹೀಗೆ: ಮೊಟ್ಟೆಯನ್ನು ಸ್ವತಃ ತಯಾರಿಸಿಕೊಳ್ಳ ಬಹುದಾಗಿದೆ. ಆದರೆ ಒಂಚೂರು ಅನುಭವ ಇರಬೇಕು. ಇವರು 10 ಅಡಿ ವಿಸ್ತೀರ್ಣದ ಪ್ರತ್ಯೇಕ ರೂಮನ್ನು ಮಾಡಿಕೊಂಡಿದ್ದಾರೆ. ಒಂದು ತಟ್ಟೆಯಲ್ಲಿ ಧಾನ್ಯದ ನುಚ್ಚನ್ನು ಹಾಕಿ ಗಾಳಿ ಸುಳಿಯದಂತೆ ಮುಚ್ಚಿಡಬೇಕು. ಸ್ವಲ್ಪ ಸಮಯ ಬಿಟ್ಟ ನಂತರ ಅದರಲ್ಲಿ ಬಾಲವಿರುವ ಹುಳುಗಳು ಹುಟ್ಟಿಕೊಳ್ಳುತ್ತವೆ.

ಮೂರು ವಾರದೊಳಗೆ ಅವು ಪತಂಗವಾಗಿ ಬಿಡುತ್ತವೆ. ಪತಂಗ ಗಳನ್ನು ಅದರಿಂದ ತೆಗೆದು 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುವ ಒಂದು ಬಾಕ್ಸ್‌ನೊಳಗೆ ಒಂದು ದಿನ ಹಾಕಿಡಬೇಕು. ಅಲ್ಲಿ ಸಂತಾನಕ್ರಿಯೆ ನಡೆದು ಪತಂಗ ಮೊಟ್ಟೆ ಇಟ್ಟು ಅಲ್ಲೇ ಸಾಯುತ್ತದೆ. ಮೊಟ್ಟೆಯನ್ನು ಕಾರ್ಡ್‌ಗೆ ಅಂಟಿಸಬೇಕು. ಹೀಗೆ ತಯಾರಿಸಿದ ಮೊಟ್ಟೆಗಳನ್ನು ಒಂದು ತಿಂಗಳು ಫ್ರಿಜ್‍ನಲ್ಲಿ ಸಂಗ್ರಹಿಸಿಡಬಹುದಾಗಿದೆ.

ಮಲ್ಲಿಕಾರ್ಜುನ ಸ್ವತಃ ಕಾರ್ಡ್ ತಯಾರಿಸಿ ರಾಜ್ಯದ ರೈತರಿಗೆ ಅಂಚೆ ಮೂಲಕ ಕಳುಹಿಸಿಕೊಡುತ್ತಿದ್ದಾರೆ. ತಿಂಗಳಿಗೆ ಸುಮಾರು ಐದು ಸಾವಿರ ಕಾರ್ಡ್‌ಗಳನ್ನು ಇವರು ಮಾರಾಟ ಮಾಡುತ್ತಿದ್ದಾರೆ. ಬೇರೆ ಬೇರೆ ಕಡೆಗಳಿಗೆ ಹೋಗಿ ಉಚಿತವಾಗಿ ಮಾಹಿತಿಯನ್ನು ನೀಡುತ್ತಿದ್ದಾರೆ.

‘ಕಳೆದ ಎಂಟು ವರ್ಷಗಳಿಂದ ಜಮೀನಿಗೆ ಕೀಟನಾಶಕವನ್ನೇ ಬಳಸಿಲ್ಲ. ಟ್ರೈಕೋಗ್ರಾಮಾ ಬಳಕೆಯಿಂದಾಗಿ ಭೂಮಿಯ ಫಲವತ್ತತೆ ಹೆಚ್ಚಿದೆ. ಅಲ್ಲದೆ ಇಳುವರಿಯ ಪ್ರಮಾಣವು ಹೆಚ್ಚಾಗಿದೆ’ ಎನ್ನುವುದು ಮಲ್ಲಿಕಾರ್ಜುನರವರ ಅನುಭವದ ಮಾತು. ಬಗ್ಗೆ ತಾವು ಅವರಿಂದ ಹೆಚ್ಚಿನ ಮಾಹಿತಿ ಪಡೆಯಬಹುದು.

ಸಂಪರ್ಕಕ್ಕೆ: 9481658198.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು