ಗುರುವಾರ , ಮೇ 28, 2020
27 °C

ಗೊಮ್ಮಟನ ಸನ್ನಿಧಿಯಲ್ಲಿ ಕನ್ನಡ ಬಡಪಾಯಿ?

ರಘುನಾಥ ಚ ಹ Updated:

ಅಕ್ಷರ ಗಾತ್ರ : | |

ಗೊಮ್ಮಟನ ಸನ್ನಿಧಿಯಲ್ಲಿ ಕನ್ನಡ ಬಡಪಾಯಿ?

ಶ್ರವಣಬೆಳಗೊಳ: ಗೊಮ್ಮಟನ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಉತ್ತರ ಭಾರತದವರ ಎದುರು ಸ್ಥಳೀಯರು ಮೂಲೆಗುಂಪಾಗುತ್ತಿದ್ದಾರೆ ಹಾಗೂ ಹಿಂದಿಯ ಅಬ್ಬರದಲ್ಲಿ ಕನ್ನಡ ಕೊಂಚ ಹಿನ್ನೆಲೆಗೆ ಸಂದಿದೆ.

’ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಮಠದ ಆಪ್ತವಲಯಕ್ಕೆ ಸೇರಿದ ಎಸ್‌.ಎನ್‌. ಅಶೋಕ ಕುಮಾರ್ ಅವರು ಅಭಿಪ್ರಾಯಪಟ್ಟಿದ್ದು ಹೀಗೆ.

1967ರಿಂದಲೂ ಮಠ ಹಾಗೂ ಮಹಾಮಸ್ತಕಾಭಿಷೇಕದೊಂದಿಗೆ ಒಂದಲ್ಲಾ ಒಂದು ಬಗೆಯ ನಂಟುಳ್ಳ ಅವರು, ’ಗೊಮ್ಮಟವಾಣಿ’ ಪಾಕ್ಷಿಕದ ಸಂಪಾದಕರೂ ಹೌದು. ಪ್ರಸಕ್ತ ಉತ್ಸವವೂ ಸೇರಿದಂತೆ ಒಟ್ಟು 6 ಮಹಾಮಸ್ತಕಾಭಿಷೇಕಗಳನ್ನು ನೋಡಿರುವ ಅವರು ತಮ್ಮ ಅನುಭವಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡರು.

ಉತ್ತರ ಭಾರತದಿಂದ ಆಗಮಿಸುವ ಭಕ್ತರಿಗೆ ಸಂಸ್ಕೃತಿ ಹಾಗೂ ದೇಸಿ ಜ್ಞಾನ ಕಡಿಮೆ ಎಂದ ಅವರು, ಮಸ್ತಕಾಭಿಷೇಕದ ಬಹುತೇಕ ಪ್ರಕ್ರಿಯೆ ಹಿಂದಿಮಯವಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಗೊಮ್ಮಟೇಶನ ಕುರಿತು ಜನಪದ ಸಾಹಿತ್ಯ ಗಣನೀಯ ಪ್ರಮಾಣದಲ್ಲಿದೆ. ಶಾಸ್ತ್ರ ಸಾಹಿತ್ಯವೂ ದೊಡ್ಡ ಪ್ರಮಾಣದಲ್ಲಿದೆ. ಆದರೂ, ಸಿನಿಮಾ ಸಂಗೀತಕ್ಕೆ ಬಾಹುಬಲಿ ಸ್ತುತಿಯನ್ನು ಕಲಬೆರಕೆ ಮಾಡಿರುವ ಹಾಡುಗಳು ಅಭಿಷೇಕದ ಸಂದರ್ಭದಲ್ಲಿ ಪ್ರಮುಖ ಸ್ಥಾನ ಪಡೆಯುತ್ತಿರುವುದು ಸರಿಯಲ್ಲ ಎನ್ನುವ ಅನಿಸಿಕೆ ಅವರದು.

ಜಾತ್ರೆಯ ಪರಿಸರ: ಕಳೆದ ಎರಡು ಮೂರು ಮಹಾಮಸ್ತಕಾಭಿಷೇಕಗಳಲ್ಲಿ ಜನರ ಭಾಗವಹಿಸುವಿಕೆಯ ಸ್ವರೂಪ ಬದಲಾಗಿರುವುದನ್ನು ಅವರು  ಗುರ್ತಿಸುತ್ತಾರೆ. ಜನರ ಸಂಖ್ಯೆ ಹೆಚ್ಚುತ್ತಿದ್ದಂತೆ ಭಕ್ತಿಯ ಜೊತೆಗೆ ಸಂಭ್ರಮವೂ ಹೆಚ್ಚುತ್ತಿದೆ ಎನ್ನುವುದನ್ನೂ ಗಮನಿಸಿದ್ದಾರೆ.

1967ರ ನಂತರ ಉತ್ಸವದಿಂದ ಉತ್ಸವಕ್ಕೆ ಜನರ ಸಂಖ್ಯೆ ಹೆಚ್ಚಾಗುವುದರೊಂದಿಗೆ ಮಹಾಮಸ್ತಕಾಭಿಷೇಕ ಜಾತ್ರೆಯ ಸ್ವರೂಪ ಪಡೆಯಿತು. ಮಾಧ್ಯಮಗಳು ನೀಡುತ್ತಿರುವ ಪ್ರಚಾರವೂ ಇದಕ್ಕೆ ಕಾರಣವಾಗಿದೆ.  ಜೈನ ಸಮುದಾಯದವರ ಉತ್ಸವವಾಗಿದ್ದ ಈ ಆಚರಣೆಯಲ್ಲಿ ಬೇರೆ ಧರ್ಮದವರು ತುಂಬಾ ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಈಗ ಎಲ್ಲ ಧರ್ಮೀಯರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸುತ್ತಿದ್ದಾರೆ’ ಎಂದರು.

1981ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಮಸ್ತಕಾಭಿಷೇಕ ಉದ್ಘಾಟಿಸಿದ್ದರು. ನಂತರದ ಮೂರು ಅಭಿಷೇಕಗಳನ್ನು ರಾಷ್ಟ್ರಪತಿಗಳು ಉದ್ಘಾಟಿಸಿದ್ದರು. ಇವುಗಳೆಲ್ಲ ಅಭಿಷೇಕಕ್ಕೆ ರಾಷ್ಟ್ರೀಯ ಮಹತ್ವ ದೊರೆತಿರುವುದಕ್ಕೆ ಸಾಕ್ಷಿ ಎನ್ನುತ್ತಾರೆ.

ಹನ್ನೆರಡು ವರ್ಷಗಳ ಹಿಂದಿನ ಅಭಿಷೇಕದಲ್ಲಿ ಸಾರ್ವಜನಿಕರ ಊಟದ ವ್ಯವಸ್ಥೆಗೆ ಇದ್ದುದು ಕೇವಲ ಒಂದೇ ಒಂದು ಊಟದ ಮನೆ. ಈಗ ಒಟ್ಟು ಹನ್ನೆರಡು ಭೋಜನಾಲಯಗಳು ಕಾರ್ಯ ನಿರ್ವಹಿಸುತ್ತಿರುವುದನ್ನು, ಉತ್ಸವ ತಳೆದಿರುವ ಜಾತ್ರೆಯ ಸ್ವರೂಪಕ್ಕೆ ಉದಾಹರಣೆಯಾಗಿ ನೀಡುತ್ತಾರೆ.

ಗೊಮ್ಮಟನ ಹಾಡು ಕಲಬುರ್ಗಿಯಲ್ಲಿ… ಬಾಹುಬಲಿಗೆ ಸಂಬಂಧಿಸಿದ ಜನಪದ ಗೀತೆಗಳು ಶ್ರವಣಬೆಳಗೊಳದ ಬದಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಲಿತದಲ್ಲಿರುವುದು ಕಲಬುರ್ಗಿಯಲ್ಲಿ. ಇದಕ್ಕೆ ಕಾರಣವಿದೆ. ಕಲಬುರ್ಗಿ ಪರಿಸರದ ಮಾನ್ಯಖೇಟ ರಾಷ್ಟ್ರಕೂಟರ ಪ್ರಧಾನ ಕೇಂದ್ರಗಳಲ್ಲೊಂದಾಗಿ ಗುರ್ತಿಸಿಕೊಂಡಿದ್ದ ಹಾಗೂ ಜೈನರು ಹೆಚ್ಚಾಗಿರುವ ಊರು. ಅಲ್ಲಿನ ಜಿನಭಕ್ತರು, ಸಾರಿಗೆ ಸಂಪರ್ಕ ಕಷ್ಟವಾಗಿದ್ದ ದಿನಗಳಲ್ಲಿ ಎತ್ತಿನಗಾಡಿಯಲ್ಲಿ ಬೆಳಗೊಳಕ್ಕೆ ಬರುತ್ತಿದ್ದರು. ದಾರಿಯಲ್ಲಿ ಕಾಲಕ್ಷೇಪಕ್ಕಾಗಿ ಗೊಮ್ಮಟನನ್ನು ಹಾಡಿಹೊಗಳುವ ಹಾಡುಗಳನ್ನು ಹಾಡಿಕೊಳ್ಳುತ್ತಿದ್ದರು. ಆ ಗೀತೆಗಳು ತಲೆಮಾರುಗಳಿಂದ ತಲೆಮಾರಿಗೆ ಹರಿದುಬಂದಿವೆ ಎನ್ನುವುದು ಅಶೋಕ್‌ರ ಅನಿಸಿಕೆ.

ಆ ದಿನಗಳು… ಶ್ರವಣಬೆಳಗೊಳ ಅಶೋಕ್‌ ಕುಮಾರ್‌ ಅವರ ಹುಟ್ಟೂರು. 1967ರ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಇಲ್ಲಿನ ಅಂಚೆಕಚೇರಿಯಲ್ಲಿ ಅವರು ನೌಕರರಾಗಿದ್ದರು. ಬೆಂಗಳೂರು, ಮೈಸೂರು, ಶ್ರವಣಬೆಳಗೊಳದ ಮಾರ್ಗವಾಗಿ ಟೆಲಿಗ್ರಾಫ್‌ ಲೈನ್‌ ಆರಂಭವಾಗಿದ್ದು ಆಗಲೇ. ಮೊದಲ ಟೆಲಿಗ್ರಾಂ ಸ್ವೀಕರಿಸಿದ ನೆನಪನ್ನು ಹೇಳುವಾಗ ಅವರು ಈಗಲೂ ಪುಳಕ ಅನುಭವಿಸುತ್ತಾರೆ. 1967ರಲ್ಲಿ ಆ.ನೇ. ಉಪಾಧ್ಯರ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನೂ ಶ್ರವಣಬೆಳಗೊಳ ವಹಿಸಿಕೊಂಡಿತ್ತು.

1981ರ ಮಸ್ತಕಾಭಿಷೇಕದ ಸಂದರ್ಭದಲ್ಲಿ ಮಸ್ತಕಾಭಿಷೇಕದ ಮಾಧ್ಯಮ ಮಾಹಿತಿ ಕೇಂದ್ರದಲ್ಲಿ ತೊಡಗಿಕೊಂಡ ಅವರು, 1993 ಹಾಗೂ 2006ರಲ್ಲೂ ಮಾಧ್ಯಮ ಕೇಂದ್ರ ಹಾಗೂ ಮಠದ ನಡುವಣ ಕೊಂಡಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆಯಲ್ಲ ಮಸ್ತಕಾಭಿಷೇಕದ ಸಂದರ್ಭದಲ್ಲಿ ಊರಿನಲ್ಲಿ ನಡೆಯುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸ್ವರೂಪದಲ್ಲಿ ಆಗಿರುವ ಬದಲಾವಣೆಗಳಿಗೆ ಅವರು ಸಾಕ್ಷಿಯಾಗಿದ್ದಾರೆ. 19 67ರ ಸಮಯದಲ್ಲಿ ಬಿದಿರು ಚಾಪೆಗಳನ್ನು ಬಳಸಿ ವಸತಿ ವ್ಯವಸ್ಥೆ ಮಾಡಲಾಗುತ್ತಿತ್ತು. ಟೆಂಟ್‌ಗಳ ಬಳಕೆ 1981ರಲ್ಲಿ ಶುರುವಾಯಿತು. 1993ರಲ್ಲಿ ಈ ಟೆಂಟ್‌ಗಳು ಹೈಟೆಕ್‌ ಸ್ವರೂಪ ಪಡೆದರೆ, 2006ರಲ್ಲಿ ಟೆಂಟ್‌ ಜೊತೆಜೊತೆಗೇ ಶೌಚಾಲಯಗಳ ಅಳವಡಿಕೆಯೂ ಸಾಧ್ಯವಾಯಿತು. ಈ ವರ್ಷವಂತೂ ಮಂಚ–ಹಾಸಿಗೆಗಳುಳ್ಳ ಅತ್ಯಾಧುನಿಕ ಟೆಂಟ್‌ಗಳು ಬೆಳಗೊಳದಲ್ಲಿ ತಲೆಯೆತ್ತಿವೆ.

1953ರ ಮಸ್ತಕಾಭಿಷೇಕದ ಸಂದರ್ಭದಲ್ಲಿ ಅಶೋಕ್‌ ಪುಟ್ಟ ಬಾಲಕ. ಆಗ ಎತ್ತಿನಗಾಡಿಯಲ್ಲಿ ಬೀಸುವ ಕಲ್ಲಿನೊಂದಿಗೆ ಜನ ಆಗಮಿಸುತ್ತಿದ್ದರಂತೆ ಎನ್ನುವ ಅವರಿಗೆ, ಅಗಿನ ನೆನಪುಗಳು ಮಸುಕು ಮಸುಕಾಗಿವೆ.

ನೀರು ಹರಿದ ದಾರಿ

1953ರ ಮಸ್ತಕಾಭಿಷೇಕದ ಸಂದರ್ಭದಲ್ಲಿ ಊರಿನಲ್ಲಿನ ಕೆರೆ–ಬಾವಿಗಳೇ ನೀರಿನ ಅಗತ್ಯವನ್ನು ಪೂರೈಸುತ್ತಿದ್ದವು. 1967ರಲ್ಲಿ 3 ಕಿ.ಮೀ. ದೂರದ ಸಿಂಗಸಮುದ್ರದ ಬೆಕ್ಕದ ಕೆರೆಯಿಂದ ನೀರು ಪಡೆಯಲಾಯಿತು. 1981ರಲ್ಲಿ 10 ಕಿ.ಮೀ. ದೂರದ ಜನಿವಾರದ ಕೆರೆ ನೀರಿನ ಆಶ್ರಯವಾಯಿತು. 2006ರಿಂದ ಈಚೆಗೆ 22 ಕಿ.ಮೀ. ದೂರದ ಹೇಮಾವತಿಯಿಂದ ನೀರು ಪಡೆಯಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.