ಮಂಗಳವಾರ, ಡಿಸೆಂಬರ್ 10, 2019
24 °C
ಸಿರಿವಂತಿಕೆ ತ್ಯಜಿಸಿ ಸನ್ಯಾಸದತ್ತ ಮುಖ ಮಾಡಿ ದೀಕ್ಷೆ ಸ್ವೀಕರಿಸಿದ ತಾಯಿ–ಮಕ್ಕಳು

‘ಮೋಹನ ಮುರಲಿ’ಗೆ ಓಗೊಟ್ಟ ಕುಟುಂಬ

ಕೆ.ಎಸ್.ಸುನಿಲ್ Updated:

ಅಕ್ಷರ ಗಾತ್ರ : | |

‘ಮೋಹನ ಮುರಲಿ’ಗೆ ಓಗೊಟ್ಟ ಕುಟುಂಬ

ಶ್ರವಣಬೆಳಗೊಳ: ‘ಯಾವ ಮೋಹನ ಮುರಲಿ ಕರೆಯಿತು’ ಎನ್ನುವ ಗೋಪಾಲಕೃಷ್ಣ ಅಡಿಗರ ಗೀತೆಯನ್ನು ಅಕ್ಷರ ಅಕ್ಷರ ಅನುಭವಿಸಲು ಇಲ್ಲಿನ ‘ತ್ಯಾಗಿ ನಗರ’ಕ್ಕೆ ಭೇಟಿಕೊಡಬೇಕು. ಬದುಕಿನ ಎಲ್ಲ ಮೋಹಗಳಿಗೆ ಬೆನ್ನುಹಾಕಿ, ಆತ್ಮಕಲ್ಯಾಣವನ್ನೇ ಲಕ್ಷ್ಯವಾಗಿಸಿಕೊಂಡ ಯುವ ಸನ್ಯಾಸಿ, ಸಾಧ್ವಿಯರು ಮಹಾಮಸ್ತಕಾಭಿಷೇಕಕ್ಕೆ ಆಗಮಿಸುವ ಜನಸಾಮಾನ್ಯರ ಕುತೂಹಲದ ಕೇಂದ್ರವಾಗಿದ್ದಾರೆ.

ಕೋಟ್ಯಂತರ ರೂಪಾಯಿ ಮೊತ್ತದ ಆಸ್ತಿ ಹೊಂದಿದ  ಶ್ರೀಮಂತ ಕುಟುಂಬದ ಕಥೆ ಕೇಳಿ. ಸಿರಿವಂತಿಕೆಯ ಬದುಕು ತೊರೆದ ಕುಟುಂಬದ ಸದಸ್ಯರು ಸನ್ಯಾಸದತ್ತ ಮುಖ ಮಾಡಿದ್ದಾರೆ. ಸುನಿಲ್‌ ಜೈನ್‌  (50) ಹಾಗೂ ಹರ್ಷಾ ಜೈನ್‌ (41) ದಂಪತಿಯ ಪುತ್ರಿ ಹರ್ಷಿತಾ ಜೈನ್‌ ಅವರಿಗೀಗ ಹನ್ನೆರಡರ ಪ್ರಾಯ. ಖುಷಿಯಿಂದ ಕಾಲೇಜು ಮೆಟ್ಟಿಲು ಹತ್ತಬೇಕಿದ್ದ ಹರ್ಷಿತಾ ದೀಕ್ಷೆ ತೆಗೆದುಕೊಂಡಿದ್ದಾರೆ. ಕಿರಿವಯಸ್ಸಿನ ಈ ಮಾತಾಜಿಯ ತಾಯಿ ಹಾಗೂ ಸಹೋದರ ಜಿನೇಶ್‌ (17) ಕೂಡ ದೀಕ್ಷಾಧಾರಿಗಳು. ಉಳಿದಿರುವುದು ಸುನಿಲ್‌ ಅವರು ಮಾತ್ರ.

ರಾಜಸ್ಥಾನದ ಬಿಲವಾಡ ಜಿಲ್ಲೆಯ ಕುಟುಂಬದ ತಾಯಿ–ಮಕ್ಕಳು ಜೈನಧರ್ಮದ ವಿಧಿ–ವಿಧಾನದ ಪ್ರಕಾರ ಸನ್ಯಾಸ ದೀಕ್ಷೆ ಸ್ವೀಕರಿಸಿ ಆತ್ಮಕಲ್ಯಾಣ, ಧರ್ಮ ಜಾಗೃತಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮುಂದಿನ ತಿಂಗಳು ಈ ಕುಟುಂಬದ ಉಳಿದಿರುವ ಸದಸ್ಯ ಸುನಿಲ್‌ ಅವರು ಕೂಡ ಸಹ ಸನ್ಯಾಸ ಸ್ವೀಕರಿಸಲು ನಿರ್ಧರಿಸಿದ್ದಾರೆ. ಅಲ್ಲಿಗೆ ಇಡೀ ಕುಟುಂಬ ಆತ್ಮಕಲ್ಯಾಣ ಎನ್ನುವ ಮೋಹನ ಮುರಲಿಗೆ ಓಗೊಟ್ಟಂತಾಗುತ್ತದೆ.

‘ಬದುಕಿನಲ್ಲಿ ವಿದ್ಯೆ, ಶ್ರೀಮಂತಿಕೆ ಸೇರಿದಂತೆ ಯಾವುದಕ್ಕೂ ಕೊರತೆ ಇರಲಿಲ್ಲ. ಆದರೆ ಕನಸುಗಳು ಕಾಡಬೇಕಿದ್ದ ತಾರುಣ್ಯದಲ್ಲಿ, ಏನೋ ಕೊರತೆ ಕಾಡತೊಡಗಿತು. ಅದು ನೆಮ್ಮದಿಯ ಹಂಬಲ. ಲೌಕಿಕ ಬಂಧನದಿಂದ ಮುಕ್ತವಾಗಲು, ಮಹಾವೀರರ ಪ್ರೇರಣೆಯಿಂದ ಸನ್ಯಾಸ ದೀಕ್ಷೆ ಪಡೆಯಬೇಕೆಂಬ ನಿರ್ಧಾರ ಕೈಗೊಂಡೆ. ದೀಕ್ಷೆ ಎಂದರೆ ಸ್ವ ಕಲ್ಯಾಣ, ಆತ್ಮ ಪರಿಶುದ್ಧ ಮಾಡಿಕೊಳ್ಳುವುದು’. ತ್ಯಾಗಿ ನಗರದಲ್ಲಿ ಮಾತಿಗೆ ಸಿಕ್ಕ ಹರ್ಷಾ ಜೈನ್ ನಿರ್ಲಿಪ್ತ ಧ್ವನಿಯಲ್ಲಿ ತಮ್ಮ ಪೂರ್ವಾಶ್ರಮವನ್ನು ನೆನಪಿಸಿಕೊಂಡರು.

ಕಿರಿಯ ವಯಸ್ಸಿನಲ್ಲಿಯೇ ಸನ್ಯಾಸತ್ವ ಪಡೆಯಲು ಕಾರಣವೇನು ಎಂದು ಹರ್ಷಿತಾ ಅವರನ್ನು ಕೇಳಿದಾಗ ದೊರೆತ ಉತ್ತರವೂ ಭಿನ್ನವಾಗಿರಲಿಲ್ಲ. ‘ಅಪ್ಪ–ಅಮ್ಮ ಬಾಲ್ಯದಿಂದಲೇ ಧರ್ಮದ ಬಗ್ಗೆ ಹೇಳುತ್ತಿದ್ದರು. ಆಚಾರ್ಯರ ಪ್ರವಚನಗಳು ನನ್ನ ಮೇಲೆ ಪ್ರಭಾವ ಬೀರಿದ್ದವು. ಸಾತ್ವಿಕ ಆಹಾರದ ಹೊರತು ಬೇರೇನನ್ನೂ ಸೇವಿಸುತ್ತಿರಲಿಲ್ಲ. ನನ್ನ ವಯಸ್ಸಿನ ಸ್ನೇಹಿತರನ್ನು ನೋಡಿದಾಗ ಅವರಂತೆಯೇ ವಿಲಾಸಿ ಜೀವನ ನಡೆಸಬೇಕು ಎಂಬ ಭಾವನೆ ಮೂಡಲಿಲ್ಲ’ ಎಂದರು.

‘ಆಚಾರ್ಯರ ಪ್ರವಚನ ಕೇಳುವುದು ಮತ್ತು ಅವರ ಮಾರ್ಗದರ್ಶನದಲ್ಲಿ ಸಾಗುವುದು’ – ತಮ್ಮ ಮುಂದಿನ ಬದುಕಿನ ಭಾಗವಾಗಬೇಕು ಎಂಬುದು ಹರ್ಷಿತಾ ಅವರ ಸ್ಪಷ್ಟ ಮಾತಿದು.

ಪಕ್ಕದಲ್ಲಿಯೇ ಕುಳಿತು ಸಹೋದರಿಯ ಮಾತನ್ನು ಕೇಳುತ್ತಿದ್ದ  ಜಿನೇಶ್‌ ಜೈನ್‌ರನ್ನು ಮಾತಿಗೆಳೆದಾಗ – ‘ನನ್ನ ತಾಯಿಯ ನಿರ್ಧಾರ ನನಗೂ ಸರಿ ಎನಿಸಿತು. ಯಾರ ಒತ್ತಡವೂ ಇರಲಿಲ್ಲ. ಸ್ವಯಂ ಪ್ರೇರಣೆಯಿಂದ ಸನ್ಯಾಸತ್ವ ಸ್ವೀಕರಿಸಿದೆ. ಮುಂದಿನ ತಿಂಗಳು ನನ್ನ ತಂದೆ ತಮ್ಮೆಲ್ಲ ಆಸ್ತಿಯನ್ನು ದೊಡ್ಡಪ್ಪನಿಗೆ ದಾನ ಮಾಡಿ, ಸನ್ಯಾಸತ್ವ ಸ್ವೀಕರಿಸುತ್ತಾರೆ’ ಎಂದರು.

ಇಂದ್ರಿಯನಿಗ್ರಹ, ಅಪರಿಗ್ರಹ, ಕೇಶಲೋಚನ, ಬರಿಗಾಲಿನಿಂದ ನಡೆಯುವುದು, ನಿತ್ಯ ಬಿಸಿನೀರು ಸೇವನೆ ಮುಂತಾದ ವ್ರತಗಳನ್ನು ಪಾಲಿಸಬೇಕು. ಚಾತುರ್ಮಾಸ ಆಚರಣೆ, ಪಂಚಕಲ್ಯಾಣ, ಕಲ್ಪದ್ರುಮ, ಮಹಾಮಸ್ತಕಾಭಿಷೇಕಗಳಲ್ಲಿ ಪಾಲ್ಗೊಳ್ಳಬೇಕು. ನಿರಪೇಕ್ಷೆ ಭಾವನೆಯಿಂದ ಧರ್ಮಪ್ರಬೋಧನೆ ಮಾಡಬೇಕು. ಜೈನಮುನಿಗಳ ಈ ದಿನಚರಿಗೆ ಜಿನೇಶ್‌ ಒಗ್ಗಿಕೊಂಡಿದ್ದಾರೆ.

‘ಆಚಾರ್ಯ  ವೈರಾಗ್ಯ ನಂದಿಜಾ ಮಹಾರಾಜ್‌ ಅವರು ದೀಕ್ಷೆ ಪಡೆಯಲು ನಮಗೆ ಪ್ರೇರಣೆ. ಮೊದಲಿನಿಂದಲೂ ಅವರ ಪ್ರವಚನಗಳಿಂದ ಮನ ಸೋತಿದ್ದೆವು. ಅವರ ಧರ್ಮಾಚರಣೆ, ಕಠಿಣ ವ್ರತ, ಸರಳತೆ ಇಷ್ಟವಾಯಿತು. ಶ್ರೀಮಂತಿಕೆಯ ಜೀವನ ಕ್ಷಣಿಕ ಎನ್ನಿಸಿತು. ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ವೈಭೋಗ ಬೇಕಾಗಿಲ್ಲ, ತ್ಯಾಗ ಜೀವನವೇ ನಮಗೆ ಶ್ರೇಷ್ಠ.  ಮುಕ್ತಿ ಮಾರ್ಗದತ್ತ ಮನಸ್ಸು ಮಿಡಿಯುತ್ತಿದೆ’ ಎಂದು ಹರ್ಷಾ ಜೈನ್ ಮಕ್ಕಳ ಮಾತಿಗೆ ದನಿಗೂಡಿಸಿದರು.

ದೀಕ್ಷೆ ಸ್ವೀಕಾರ ಹೇಗಿರುತ್ತದೆ?

ದೀಕ್ಷೆ ಸ್ವೀಕರಿಸುವವರ ಮನೆತನದವರು ತಮ್ಮಲ್ಲಿರುವ ಆಭರಣ, ನಗದು ಇತ್ಯಾದಿಗಳನ್ನು ದಾನ ಮಾಡಬೇಕು. ಇದು ಲೌಕಿಕ ಬದುಕನ್ನು ತ್ಯಜಿಸುತ್ತಿರುವುದರ ಸೂಚನೆ. ನಂತರ ಮಂತ್ರಘೋಷಗಳ ನಡುವೆ ಪುರುಷರಿಗೆ 'ಕೇಶಮುಂಡನ' ನಡೆಯುತ್ತದೆ.  ಕೇಶಮುಂಡನದ ಬಳಿಕ ದೀಕ್ಷಿತರನ್ನು ವಧು ಅಥವಾ ವರನ ದಿರಿಸಿನಲ್ಲಿ ಅಲಂಕರಿಸಲಾಗುತ್ತದೆ. ಇದು  ಕೊನೆಯ ಬಾರಿಗೆ ಇವರಿಗೆ  ವರ್ಣಮಯ ಲೌಕಿಕ ಪೋಷಾಕಿನಲ್ಲಿ ಕಾಣಿಸಿಕೊಳ್ಳುವ ಅವಕಾಶ. ಇದರ ನಂತರ ಇವುಗಳನ್ನು ಕಳಚಿಟ್ಟು ಜೀವನಪರ್ಯಂತ  ದಿಗಂಬರಧಾರಿಗಳಾಗಿರಬೇಕು.

ದೀಕ್ಷೆ ಸ್ವೀಕಾರದ ನಂತರ ಸನ್ಯಾಸಿ ಅಥವಾ ಸಾಧ್ವಿಗಳು ತಮ್ಮ ಗುರುಗಳ ಆಜ್ಞಾನುಸಾರ ನಡೆದುಕೊಳ್ಳಬೇಕು. ಅವರ ಉಪದೇಶಗಳನ್ನು ಆಲಿಸುತ್ತ, ಜೈನ ತೀರ್ಥಂಕರರ ಬೋಧನೆ ಹಾಗೂ ಜೈನಪುರಾಣಗಳನ್ನು ಅಭ್ಯಸಿಸಬೇಕು.

ವಾಹನ ಬಳಸುವಂತಿಲ್ಲ; ಬರಿಗಾಲಿನಲ್ಲಿ ನಡೆಯಬೇಕು. ಹಿಡಿ ತುತ್ತು ಭಿಕ್ಷೆ ಸ್ವೀಕರಿಸಿ ಸೇವಿಸಬೇಕು. ತಮ್ಮದೆಂದು ಯಾವ ವಸ್ತುವನ್ನೂ ಇಟ್ಟುಕೊಳ್ಳುವಂತಿಲ್ಲ. ಇದಕ್ಕೆ ಅಪರಿಗ್ರಹವೆಂದು ಹೆಸರು. ಮಳೆಗಾಲದಲ್ಲಿ ನಾಲ್ಕು ತಿಂಗಳು ಎಲ್ಲೂ ಹೋಗದೆ  ಧ್ಯಾನದ ಮೂಲಕ ಚಾತುರ್ಮಾಸ ವ್ರತ ನಡೆಸಬೇಕು.

ಪ್ರತಿಕ್ರಿಯಿಸಿ (+)