ಗುರುವಾರ , ಡಿಸೆಂಬರ್ 12, 2019
26 °C
ವಿಂಧ್ಯಗಿರಿಗೆ ಮತ್ತೊಂದು ಮೆಟ್ಟಿಲು ಮಾರ್ಗ – ಉಚಿತ ಆಸ್ಪತ್ರೆ ಲೋಕಾರ್ಪಣೆ

ಗೊಮ್ಮಟನ ಸೊಬಗಿಗೆ ಮರುಳಾದ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೊಮ್ಮಟನ ಸೊಬಗಿಗೆ ಮರುಳಾದ ಮೋದಿ

ಶ್ರವಣಬೆಳಗೊಳ: ಮಹಾ ವಿರಾಗಿಯ ಬೀಡು ವಿಂಧ್ಯಗಿರಿಯನ್ನು ಏರಲು ನಿರ್ಮಿಸಲಾದ ಮೂರನೇ ಮೆಟ್ಟಿಲು ಮಾರ್ಗ (630 ಮೆಟ್ಟಿಲುಗಳ ಗುಚ್ಛ) ಹಾಗೂ 88ನೇ ಮಹಾಮಸ್ತಾಭಿಷೇಕದ ಸ್ಮರಣೆಗಾಗಿ ಇಲ್ಲಿಯೇ ಆರಂಭಿಸಲಾದ ಬಾಹುಬಲಿ ಸಾರ್ವಜನಿಕ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಲೋಕಾರ್ಪಣೆ ಮಾಡಿದರು.

ಅಭಿಷೇಕದಲ್ಲಿ ಮಿಂದ ಬಾಹುಬಲಿ ಮೂರ್ತಿಯ ದರ್ಶನವನ್ನು ಹೆಲಿಕಾಪ್ಟರ್‌ನಲ್ಲಿಯೇ ಪಡೆದು ಬಂದ ಅವರು, ‘ಆಕಾಶದಂತಹ ನಿರ್ಮಲ ದೇಹವನ್ನು, ಪರಿಶುದ್ಧ ಜಲದಂತಹ ಮುಖವನ್ನೂ ಹೊಂದಿದ ಗೊಮ್ಮಟೇಶ್ವರನಿಗೆ ಅನುದಿನವೂ ನಮಸ್ಕಾರ’ ಎಂಬರ್ಥದ ಶ್ಲೋಕವನ್ನು ಉದ್ಧರಿಸಿದರು.

‘ಮಸ್ತಕಾಭಿಷೇಕ್ಕೆ ಪಾತ್ರವಾದ ಬಾಹುಬಲಿಯ ಭವ್ಯ ಮೂರ್ತಿಯನ್ನು ಕಂಡು ಧನ್ಯತಾಭಾವ ಮೂಡಿದೆ’ ಎಂದು ಭಾವುಕವಾಗಿ ಹೇಳಿದರು.

ಸಮಾರಂಭ ನಡೆದಿದ್ದು ಚಾವುಂಡರಾಯ ಮುಖ್ಯ ಮಂಟಪದಲ್ಲಿ. ವೇದಿಕೆಯನ್ನು ಏರಿದವರೇ ಮೇಲೆ ಕುಳಿತಿದ್ದ ಮುನಿಗಳು ಹಾಗೂ ಮಾತಾಜಿಗಳ ಬಳಿಗೆ ತೆರಳಿದ ಪ್ರಧಾನಿ, ಎಲ್ಲರಿಗೂ ಕೈಮುಗಿದು ನಮಸ್ಕರಿಸಿದರು.

ಆಚಾರ್ಯ ವರ್ಧಮಾನ ಸಾಗರರು ಕೊಟ್ಟ ಜಪಮಾಲೆಯನ್ನು ಕೊರಳಲ್ಲಿ ಧರಿಸಿದ ಅವರು, ಮಾತಾಜಿಗಳು ಕೊಟ್ಟ ಪವಿತ್ರ ಸರವನ್ನು ಕೈಗೆ ಸುತ್ತಿಕೊಂಡರು. ಅವರು ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆಯೇ ‘ಮೋದಿ, ಮೋದಿ’ ಎಂಬ ಘೋಷಣೆಗಳು ಜೋರಾಗಿ ಮೊಳಗಿದವು.

‘ದೇಶದ ಮಠ–ಮಂದಿರಗಳಲ್ಲಿ ಧಾರ್ಮಿಕ ವಿಧಿಗಳೇ ಹೆಚ್ಚಾಗಿದ್ದು, ಅವುಗಳಿಂದ ಸಾಮಾಜಿಕ ಕಾರ್ಯಗಳು ನಡೆಯುವುದಿಲ್ಲ ಎನ್ನುವ ಅಭಿಪ್ರಾಯವಿದೆ. ಆದರೆ, ಇದು ತಪ್ಪು ಗ್ರಹಿಕೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅವುಗಳು ನೀಡಿದ ಕೊಡುಗೆ ತುಂಬಾ ದೊಡ್ಡದು. ಈಗ ಲೋಕಾರ್ಪಣೆ ಮಾಡಿದ ಆಸ್ಪತ್ರೆಯೇ ಈ ಮಾತಿಗೆ ಜ್ವಲಂತ ಸಾಕ್ಷಿ’ ಎಂದು ಅಭಿಮಾನದಿಂದ ಹೇಳಿದರು.

‘ಬಡವರ ಮನೆಯಲ್ಲಿ ಒಬ್ಬರು ಅನಾರೋಗ್ಯಕ್ಕೆ ತುತ್ತಾದರೆ, ಅದರಿಂದ ಎದುರಾಗುವ ಆರ್ಥಿಕ ಸಂಕಷ್ಟ ಆ ಕುಟುಂಬದ ಮುಂದಿನ ಮೂರು ಪೀಳಿಗೆಗಳ ಭವಿಷ್ಯವನ್ನು ನುಂಗುತ್ತದೆ. ಅವರ ಈ ಸಂಕಟವನ್ನು ದೂರ ಮಾಡುವ ಸಲುವಾಗಿಯೇ ಈ ಸಲದ ಬಜೆಟ್‌ನಲ್ಲಿ ‘ಆಯುಷ್ಮಾನ್‌ ಭಾರತ’ ಆರೋಗ್ಯ ಯೋಜನೆಯನ್ನು ಘೋಷಿಸಲಾಗಿದೆ. ಇದರಿಂದ ಪ್ರತಿ ಕುಟುಂಬಕ್ಕೆ ₹ 5 ಲಕ್ಷದವರೆಗಿನ ಚಿಕಿತ್ಸಾ ಸೌಲಭ್ಯ ಸಿಗಲಿದೆ’ ಎಂದು ವಿವರಿಸಿದರು.

‘ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ ಇಂತಹ ಕ್ರಾಂತಿಕಾರಿ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ಇದುವರೆಗೆ ಯಾರೂ ಯೋಚಿಸಿರಲಿಲ್ಲ’ ಎಂದು ಹೇಳಿದರು.

ಮೋದಿಗೆ ಚಾವುಂಡರಾಯನ ಹೋಲಿಕೆ

‘ಗೊಮ್ಮಟೇಶ್ವರನ ಮೂರ್ತಿಯನ್ನು ಕೆತ್ತಿಸಿದ ಚಾವುಂಡರಾಯನಂತೆಯೇ ನಮ್ಮ ಪ್ರಧಾನಿ ನರೇಂದ್ರ ಮೋದಿ’ ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಮಾನದಿಂದ ಹೋಲಿಕೆ ಮಾಡಿದರು. ‘ವಿಶ್ವಮಾನ್ಯ ನಾಯಕರಾದ ಮೋದಿಯವರು ಭಾರತದ ಆದರ್ಶ ಪುರುಷ’ ಎಂದು ಕೊಂಡಾಡಿದರು.

ರಜತ ಕಳಶ, ಬಾಹುಬಲಿ ಮೂರ್ತಿಯ ಪುಟ್ಟ ಪ್ರತಿಕೃತಿ, ಧರ್ಮಧ್ವಜ, ಏಲಕ್ಕಿ ಹಾರ ಹಾಗೂ ಕಲಾವಿದರು ಬಿಡಿಸಿದ್ದ ಮೋದಿ ಅವರದೇ ರೇಖಾಚಿತ್ರವನ್ನು ಅವರಿಗೆ ಕೊಡುಗೆಯಾಗಿ ನೀಡಲಾಯಿತು.

***

ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕವು ನಾನು ಪ್ರಧಾನಿಯಾಗಿರುವ ಸನ್ನಿವೇಶದಲ್ಲೇ ಬಂದಿರುವುದು ನನ್ನ ಸೌಭಾಗ್ಯ

–ನರೇಂದ್ರ ಮೋದಿ, ಪ್ರಧಾನಿ

ಪ್ರತಿಕ್ರಿಯಿಸಿ (+)