ಭಾನುವಾರ, ಡಿಸೆಂಬರ್ 8, 2019
25 °C
₹ 606 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಚಿವ ನಿತಿನ್ ಗಡ್ಕರಿ

ಹೆದ್ದಾರಿ ನಿರ್ಮಾಣ: ರಾಜ್ಯಕ್ಕೆ ₹ 2 ಲಕ್ಷ ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆದ್ದಾರಿ ನಿರ್ಮಾಣ: ರಾಜ್ಯಕ್ಕೆ ₹ 2 ಲಕ್ಷ ಕೋಟಿ

ಕಳಸವಳ್ಳಿ (ಶಿವಮೊಗ್ಗ ಜಿಲ್ಲೆ): ನಾಲ್ಕು ವರ್ಷಗಳ ಅವಧಿಯಲ್ಲಿ ಕರ್ನಾಟಕದ ಹೆದ್ದಾರಿಗಳ ಅಭಿವೃದ್ಧಿಗೆ ₹ 2 ಲಕ್ಷ ಕೋಟಿ ಅನುದಾನಕ್ಕೆ ಮಂಜೂರಾತಿ ನೀಡಲಾಗಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮಾಹಿತಿ ನೀಡಿದರು.

ಇಲ್ಲಿನ ಶರಾವತಿ ಹಿನ್ನೀರ ತಟದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ₹606 ಕೋಟಿ ವೆಚ್ಚದ ಕಳಸವಳ್ಳಿ–ಹೊಳೆಬಾಗಿಲು ಸೇತುವೆ, ₹5,800 ಕೋಟಿ ವೆಚ್ಚದ ತುಮಕೂರು–ಶಿವಮೊಗ್ಗ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ  2.16 ಮೀಟರ್ ಉದ್ದ,16 ಮೀಟರ್ ಅಗಲದ ಈ ತೂಗು ಸೇತುವೆ ದೇಶದಲ್ಲೇ ವಿಶಿಷ್ಟವಾದ ಕಾಮಗಾರಿ. ಸೇತುವೆ ನಿರ್ಮಾಣದ ಪರಿಣಾಮ ಸಾಗರ–ಕೊಲ್ಲೂರು ಸಂಪರ್ಕಿಸುವ ಈ ಮಾರ್ಗವನ್ನೂ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಲಾಗಿದೆ. ಶೀಘ್ರ ಹೆದ್ದಾರಿ ಸಂಖ್ಯೆಯನ್ನೂ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಅಭಿವೃದ್ಧಿ ವಿಷಯದಲ್ಲಿ ಪಕ್ಷ ರಾಜಕಾರಣ ಮಾಡುವುದಿಲ್ಲ. ರಸ್ತೆ ನಿರ್ಮಾಣ, ನೀರಾವರಿ ಸೇರಿ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಈ ರಾಜ್ಯದ ಮುಖ್ಯಮಂತ್ರಿ, ಸಚಿವರು ಬಂದರೆ ಅಗತ್ಯ ನೆರವು ನೀಡಲಾಗುವುದು ಎಂದರು.

ದೇಶದಲ್ಲಿ ಪ್ರತಿ ದಿನ 28 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿಗೆ ಇನ್ನಷ್ಟು ವೇಗ ನೀಡಿ ಕನಿಷ್ಠ 40 ಕಿ.ಮೀ ಪೂರ್ಣಗೊಳಿಸುವ ಗುರಿ ಇದೆ. ಬೆಂಗಳೂರು-ಚೆನ್ನೈ, ಮೈಸೂರು–ಬೆಂಗಳೂರು ಎಕ್ಸ್‌ಪ್ರೆಸ್ ರಸ್ತೆಗಳ ಆಧುನೀಕರಣಕ್ಕೆ ಚಾಲನೆ ನೀಡಲಾಗಿದೆ. 200 ವರ್ಷ ಬಾಳಿಕೆ ಬರುವ ಕಾಂಕ್ರೀಟ್ ರಸ್ತೆ ನಿರ್ಮಾಣದ ಗುರಿ ಹೊಂದಲಾಗಿದೆ ಎಂದರು.

₹7 ಸಾವಿರ ಕೋಟಿ ವೆಚ್ಚದಲ್ಲಿ ದೆಹಲಿ ಹೊರವರ್ತುಲ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ನದಿಗಳ ಜೋಡಣೆಗೆ ಆದ್ಯತೆ ನೀಡಲಾಗಿದೆ. ಗೋದಾವರಿ ನದಿಯ 3 ಸಾವಿರ ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಅದರಲ್ಲಿ 300 ಟಿಎಂಸಿ ಉಳಿಸಿದರೂ, ದಕ್ಷಿಣ ಭಾರತದ ಬಹುತೇಕ ಭಾಗಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದು ಎಂದು ವಿಶ್ಲೇಷಿಸಿದರು.

ಪ್ರತಿಕ್ರಿಯಿಸಿ (+)