ಶುಕ್ರವಾರ, ಡಿಸೆಂಬರ್ 6, 2019
24 °C
ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೆ ವಾಕ್‌ ಪ್ರಹಾರ, ಸಿದ್ದರಾಮಯ್ಯರ ಹೆಸರು ಉಲ್ಲೇಖಿಸದೇ ಟೀಕೆ

ಕಮಿಷನ್‌ ತೊಲಗಿಸಿ, ಮಿಷನ್‌ ಗೆಲ್ಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಿಷನ್‌ ತೊಲಗಿಸಿ, ಮಿಷನ್‌ ಗೆಲ್ಲಿಸಿ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌– ಜೆಡಿಎಸ್‌ ಪ್ರಾಬಲ್ಯದ ಮೈಸೂರು ಭಾಗದಲ್ಲಿ ಚುನಾವಣಾ ಪ್ರಚಾರಕ್ಕೆ ಸೋಮವಾರ ನಾಂದಿಯಾಡಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್‌ ಸಮಾವೇಶವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಮೋದಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಮೋದಿ ಅವರ ಮಾತು ಬೆಂಗಳೂರಿನಲ್ಲಿ ನಡೆದ ಸಮಾವೇಶ ಭಾಷಣದ ಮುಂದುವರಿದ ಭಾಗದಂತಿತ್ತು. 45 ನಿಮಿಷ ರಾಜ್ಯ ಸರ್ಕಾರದ ವಿರುದ್ಧ ವಾಕ್‌ ಪ್ರಹಾರ ನಡೆಸಿದರು. ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುತ್ತಲೇ ಕಾಂಗ್ರೆಸ್‌ ಟೀಕಿಸುತ್ತಾ ಸಾಗಿದರು.

‘ಇದು ಕೇವಲ 10 ಪರ್ಸೆಂಟ್‌ ಅಲ್ಲ; ಅದಕ್ಕಿಂತ ಹೆಚ್ಚಿನ ಪರ್ಸೆಂಟ್‌ ಸರ್ಕಾರ. ಐಟಿ ದಾಳಿ ವೇಳೆ ಮುಖಂಡರೊಬ್ಬರ ಮನೆಯಲ್ಲಿ ವಶಪಡಿಸಿಕೊಂಡಿರುವ ಡೈರಿಯಲ್ಲಿರುವ ಮಾಹಿತಿಯೇ ಅದಕ್ಕೆ ಸಾಕ್ಷಿ. ಇಂಥವರಿಗೆ ಶಿಕ್ಷೆಯಾಗಬೇಕು. ಇದರಿಂದ ರಾಜ್ಯದ ಜನರಿಗೆ ಮುಕ್ತಿ ಸಿಗಬೇಕು’ ಎಂದು ರಾಜ್ಯ ಸರ್ಕಾರವನ್ನು ಕುಟುಕಿದರು.

‘ಕಾಮಗಾರಿಗಳಿಗೆ 10 ಪರ್ಸೆಂಟ್‌ ಕಮಿಷನ್‌ ಕೇಳುವ ಕಾಂಗ್ರೆಸ್‌ ಸರ್ಕಾರ ಬೇಕೇ? ಅಭಿವೃದ್ಧಿಗಾಗಿ ಮಿಷನ್‌ ಇಟ್ಟುಕೊಂಡಿರುವ ಬಿಜೆಪಿ ಸರ್ಕಾರ ಬೇಕೇ’ ಎಂದು ಜನರನ್ನು ಪ್ರಶ್ನಿಸಿದರು. ಕಮಿಷನ್‌ ಸರ್ಕಾರ ತೊಲಗಿಸಿ ಮಿಷನ್‌ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ’ ಎಂದು ಮನವಿ ಮಾಡಿದರು. ಈ ಬಾರಿ ಬಿಜೆಪಿ... ಈ ಬಾರಿ ಬಿಜೆಪಿ... ಎಂದು ಕನ್ನಡದಲ್ಲಿ ಐದು ಬಾರಿ ಹೇಳಿದರು.

ಜನರು ‘ಮೋದಿ ಮೋದಿ’ ಎಂದು ಘೋಷಣೆ ಕೂಗುತ್ತಲೇ ಪ್ರಧಾನಿ ಮಾತಿಗೆ ತಲೆದೂಗಿದರು. ಆದರೆ, ಎಲ್ಲಿಯೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಉಲ್ಲೇಖಿಸಲಿಲ್ಲ.

‘ಕೇಂದ್ರದ ನಾಯಕರಿಗೆ ಹಣ ಕಳಿಸಿ, ಅವರನ್ನು ಖುಷಿಯಾಗಿಡಲು ರಾಜ್ಯದ ಕಾಂಗ್ರೆಸ್‌ ಮುಖಂಡರು ಪ್ರಯತ್ನಿಸುತ್ತಿದ್ದಾರೆಯೇ ಹೊರತು ಕೆಲಸ ಮಾಡುತ್ತಿಲ್ಲ. ಕೇಂದ್ರ ನೀಡುತ್ತಿರುವ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ಇದ್ದಷ್ಟು ದಿನ ರಾಜ್ಯ ದಿವಾಳಿ ಆಗಲಿದೆ. ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗುವುದಿಲ್ಲ’ ಎಂದರು.

‘ಸ್ವಾತಂತ್ರ್ಯ ನಂತರ ಶೇ 70ರಿಂದ 80ರಷ್ಟು ಸಮಯ ಕಾಂಗ್ರೆಸ್‌ ಸರ್ಕಾರ ದೇಶ ಆಳಿದೆ. ಆದರೆ, ಸೌಲಭ್ಯ, ಅಭಿವೃದ್ಧಿ ಎಂದು ಈಗ ಮಾತನಾಡುತ್ತಿದ್ದಾರೆ. 60 ವರ್ಷಗಳಿಂದ ಇವರು ಏನು ಮಾಡಿದರು’ ಎಂದು ಕೇಳಿದರು.

‘ಕೇಂದ್ರದಲ್ಲಿ ಕಾಂಗ್ರೆಸ್‌ ಆಡಳಿತ ನಡೆಸಿದ ವೇಳೆ ಸುಮಾರು 1,500 ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ, ಅವುಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿಲ್ಲ. ಹೆಚ್ಚಿನವು ಕಾಗದದ ಮೇಲೆಯೇ ಉಳಿದುಕೊಂಡಿವೆ. ಸಂಸತ್ತಿನಲ್ಲಿ ಮಾತ್ರ ಘೋಷಣೆ ಮಾಡಿ ಜನರ ಕಣ್ಣಿಗೆ ದೂಳು ಎರಚಿದ್ದಾರೆ. ಯೋಜನೆಗಳನ್ನು ಜಾರಿಗೆ ತಂದಿದ್ದರೆ ನಾವು ಈಗ ಕೋಟ್ಯಂತರ ರೂಪಾಯಿ ಖರ್ಚು ಮಾಡಬೇಕಾಗುತ್ತಿರಲಿಲ್ಲ’ ಎಂದು ನುಡಿದರು.

‘ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಕನಸನ್ನು ಬಿಜೆಪಿ ಹೊಂದಿದೆ. ಆದರೆ, ಹೆದ್ದಾರಿಯಲ್ಲಿರುವ ಉಬ್ಬುಗಳಂತೆ ಕಾಂಗ್ರೆಸ್‌ ಸರ್ಕಾರ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ. ಅಭಿವೃದ್ಧಿಗೆ ಅವಕಾಶ ಮಾಡಿಕೊಡುತ್ತಿಲ್ಲ’ ಎಂದು ಹರಿಹಾಯ್ದರು.

‘ಸದ್ಭಾವನೆಯ ಸಂದೇಶ ನೀಡಿದ ಪುಣ್ಯ ಭೂಮಿ ಮೈಸೂರು. ಆದರೆ, ಇಲ್ಲಿಂದ ಬೆಂಗಳೂರಿಗೆ ಹೋದವರು ಎಲ್ಲವನ್ನು ಮರೆತು ರಾಜ್ಯವನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಸಮಾವೇಶದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರ ಗೈರು ಹಾಜರಿ ಎದ್ದು ಕಾಣುತಿತ್ತು.

ಮೋದಿಗೆ ಗಣಪತಿ ಬೆಳ್ಳಿ ವಿಗ್ರಹ

ಪ್ರಧಾನಿ ಮೋದಿ ಅವರಿಗೆ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ವಿಶೇಷ ಉಡುಗೊರೆಯಾಗಿ ಗಣಪತಿ ಬೆಳ್ಳಿ ವಿಗ್ರಹ ನೀಡಿ ಗೌರವಿಸಲಾಯಿತು.

ಚುನಾವಣಾ ಪ್ರಚಾರದ ವಿಘ್ನ ನಿವಾರಣೆಗಾಗಿ ಈ ಉಡುಗೊರೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 3 ಕೆ.ಜಿ. ತೂಕದ ಬೆಳ್ಳಿ ಗಣಪತಿ ಇದಾಗಿದೆ. ಮೈಸೂರು ಮಲ್ಲಿಗೆ ಹಾರ, ಮೈಸೂರು ಪೇಟ, ಕೇಸರಿ ಶಾಲು ತೊಡಿಸಲಾಯಿತು.

ಮಹದಾಯಿ ಪ್ರಸ್ತಾಪ ಇಲ್ಲ

ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಮಹದಾಯಿ ನದಿ ನೀರಿನ ಪ್ರಸ್ತಾಪ ಮಾಡದೆ ರೈತ ಸಂಘಟನೆಗಳಿಂದ ಟೀಕೆಗೆ ಗುರಿಯಾಗಿದ್ದ ಮೋದಿ ಇಲ್ಲಿಯೂ ಈ ಬಗ್ಗೆ ಮಾತನಾಡಲಿಲ್ಲ.

ಪುಟ್ಟಣ್ಣಯ್ಯ ಪ್ರೇರಣೆ

ಭಾನುವಾರ ರಾತ್ರಿ ನಿಧನರಾದ ರೈತ ಮುಖಂಡ, ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಅವರನ್ನು ಮೋದಿ ಸಮಾವೇಶದಲ್ಲಿ ನೆನಪಿಸಿಕೊಂಡರು. ‘ಅವರೊಬ್ಬ ಶ್ರೇಷ್ಠ ರೈತ ನಾಯಕ. ರೈತರಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ರೈತರಿಗೆ ಪ್ರೇರಣೆಯಾಗಿದ್ದಾರೆ’ ಎಂದು ಶ್ಲಾಘಿಸಿದರು.

ಅರಸರು, ಸ್ವಾಮೀಜಿ ಹೆಸರು...

ಮೈಸೂರಿನಲ್ಲೂ ಮೋದಿ ಕನ್ನಡದಲ್ಲಿ ಮಾತು ಆರಂಭಿಸಿದರು. ಚಾಮುಂಡೇಶ್ವರಿ ದೇವಿ, ಮೈಸೂರು ಸಂಸ್ಥಾನದ ಅರಸರು, ಸರ್‌ ಎಂ.ವಿಶ್ವೇಶ್ವರಯ್ಯ, ರಾಷ್ಟ್ರಕವಿ ಕುವೆಂಪು, ಸುತ್ತೂರು ಸ್ವಾಮೀಜಿ, ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿಯನ್ನು ನೆನಪಿಸಿಕೊಂಡರು.

ಮೈಸೂರಿನ ಪರಂಪರೆಯನ್ನು ಗುಣಗಾನ ಮಾಡಿದರು. ಮೈಸೂರು ರೇಷ್ಮೆ, ಮೈಸೂರು ಮಲ್ಲಿಗೆ, ಶ್ರೀಗಂಧ, ಮೈಸೂರು ಪಾಕ್‌, ದಸರಾ ಜಗತ್ಪ್ರಸಿದ್ಧ. ಹಾಗೆಯೇ ಇಲ್ಲಿನ ಜನರು ಕೂಡ ಜಗತ್ಪ್ರಸಿದ್ಧ ಎಂದು ಶ್ಲಾಘಿಸಿದರು.

***

ಭ್ರಷ್ಟಾಚಾರವೇ ಕಾಂಗ್ರೆಸ್‌ನ ಐದು ವರ್ಷಗಳ ಸಾಧನೆಯಾಗಿದೆ. ಲೋಕಾಯುಕ್ತ ಇದ್ದಿದ್ದರೆ ಕಾಂಗ್ರೆಸ್‌ನ ಹಲವು ಸಚಿವರು ಜೈಲಿನಲ್ಲಿ ಇರುತ್ತಿದ್ದರು

- ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

***

ಮೋದಿಗೆ ಮೈಸೂರಿನ ಮೇಲೆ ಅಪಾರ ಪ್ರೀತಿ. ಭೇಟಿ ನೀಡಿದಾಗಲೆಲ್ಲಾ ವಾಸ್ತವ್ಯ ಹೂಡುತ್ತಾರೆ. ಸಿದ್ದರಾಮಯ್ಯ ವಾರಕ್ಕೊಮ್ಮೆ ಬೀಗರ ಊಟಕ್ಕೆ ಇಲ್ಲಿಗೆ ಬರುತ್ತಾರೆ

- ಪ್ರತಾಪಸಿಂಹ, ಸಂಸದ

***

ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿ ಹಲ್ಲೆ ನಡೆಸುತ್ತಿದ್ದ ಕಾಂಗ್ರೆಸ್‌ನವರು ಈಗ ಜನಸಾಮಾನ್ಯರ ಮೇಲೂ ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿ ತೊಲಗಿಸಬೇಕು

- ಆರ್‌.ಅಶೋಕ, ಶಾಸಕ

***

ಜೈಲಿಗೆ ಹೋಗಿ ಬಂದವರನ್ನು ಕಾಂಗ್ರೆಸ್‌ ಪಕ್ಷ ತನ್ನತ್ತ ಸೆಳೆದುಕೊಳ್ಳುತ್ತಿದೆ. ಪಕ್ಷಕ್ಕೆ ಬಂದವರನ್ನು ಯಾವ ಸಾಬೂನು ಹಾಕಿ ಶುಭ್ರಗೊಳಿಸುತ್ತಿದ್ದಾರೆ?

- ಬಿ.ಶ್ರೀರಾಮುಲು, ಸಂಸದ

ಪ್ರತಿಕ್ರಿಯಿಸಿ (+)